ಇರಾನ್ ದೇಶದಲ್ಲಿ ಸರ್ಕಾರ ವಿರೋಧಿ ಪ್ರತಿಭಟನೆಗಳು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಅಲ್ಲಿರುವ ಭಾರತೀಯ ನಾಗರಿಕರಿಗೆ ಭಾರತೀಯ ರಾಯಭಾರ ಕಚೇರಿಯು ಸೋಮವಾರ ಮಹತ್ವದ ಎಚ್ಚರಿಕೆಯನ್ನ ನೀಡಿದೆ. ಇರಾನ್‌ನಲ್ಲಿ ಪರಿಸ್ಥಿತಿಯು ದಿನದಿಂದ ದಿನಕ್ಕೆ ಬದಲಾಗುತ್ತಿದ್ದು, ಅನಿಶ್ಚಿತತೆ ಮನೆಮಾಡಿದೆ. ಈ ಹಿನ್ನೆಲೆಯಲ್ಲಿ ಅಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳು, ಪ್ರವಾಸಿಗರು, ಯಾತ್ರಿಕರು ಮತ್ತು ಉದ್ಯಮಿಗಳು ಕೂಡಲೇ ಲಭ್ಯವಿರುವ ವಿಮಾನ ಅಥವಾ ಇತರ ಸಾರಿಗೆ ವ್ಯವಸ್ಥೆಗಳ ಮೂಲಕ ದೇಶವನ್ನು ಬಿಟ್ಟು ಹೊರಬರಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಈಗ ನೀಡಿರುವ ಎಚ್ಚರಿಕೆಯು ಹೊಸದೇನಲ್ಲ. ಈ ಹಿಂದೆ ಜನವರಿ 5, 2026 ಮತ್ತು ಜನವರಿ 14, 2026 ರಂದು ಹೊರಡಿಸಲಾಗಿದ್ದ ಎಚ್ಚರಿಕೆಗಳ ಮುಂದುವರಿದ ಭಾಗ ಇದಾಗಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ. ಇರಾನ್‌ನಲ್ಲಿ ಪರಿಸ್ಥಿತಿ ತಿಳಿಯಾಗುವ ಲಕ್ಷಣಗಳು ಕಾಣದ ಕಾರಣ, ಭಾರತೀಯರು ತಮ್ಮ ಸುರಕ್ಷತೆಯ ದೃಷ್ಟಿಯಿಂದ ತುರ್ತಾಗಿ ಅಲ್ಲಿಂದ ಹೊರಡುವುದು ಸೂಕ್ತ ಎಂದು ರಾಯಭಾರ ಕಚೇರಿ ತನ್ನ ಎಕ್ಸ್ (X) ಖಾತೆಯಲ್ಲಿ ಪೋಸ್ಟ್ ಮಾಡಿದೆ.
ಇರಾನ್‌ನಲ್ಲಿರುವ ಭಾರತೀಯರು ತಮ್ಮ ಪಾಸ್‌ಪೋರ್ಟ್, ವೀಸಾ ಮತ್ತು ಗುರುತಿನ ಚೀಟಿಗಳಂತಹ ಪ್ರಮುಖ ದಾಖಲೆಗಳನ್ನು ಸದಾ ಕೈಗೆಟುಕುವಂತೆ ಇಟ್ಟುಕೊಳ್ಳಬೇಕು ಎಂದು ತಿಳಿಸಲಾಗಿದೆ. ತುರ್ತು ಸಂದರ್ಭದಲ್ಲಿ ಸಂಪರ್ಕಿಸಲು ರಾಯಭಾರ ಕಚೇರಿಯ ಸಹಾಯವಾಣಿ ಸಂಖ್ಯೆಗಳನ್ನು ನೀಡಲಾಗಿದೆ. ಭಾರತೀಯ ಮೂಲದ ವ್ಯಕ್ತಿಗಳು ಪ್ರತಿಭಟನೆ ಅಥವಾ ಮೆರವಣಿಗೆ ನಡೆಯುವ ಜಾಗಗಳಿಗೆ ಹೋಗಬಾರದು, ಸ್ಥಳೀಯ ಮಾಧ್ಯಮಗಳ ಸುದ್ದಿಗಳ ಮೇಲೆ ನಿಗಾ ಇಡಬೇಕು ಮತ್ತು ಸದಾ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇರಾನ್‌ನ ರಾಜಧಾನಿ ಟೆಹ್ರಾನ್ ಸೇರಿದಂತೆ ಹಲವು ನಗರಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಬೀದಿಗಿಳಿದು ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಒಂದು ತಿಂಗಳ ಹಿಂದೆ ದೇಶಾದ್ಯಂತ ನಡೆದಿದ್ದ ರ*ಕ್ತಪಾತದ ನಂತರ, ಈಗ ಮತ್ತೆ ವಿಶ್ವವಿದ್ಯಾಲಯಗಳು ಆರಂಭವಾಗುತ್ತಿದ್ದಂತೆ ವಿದ್ಯಾರ್ಥಿಗಳ ಆಕ್ರೋಶ ಭುಗಿಲೆದ್ದಿದೆ. ಈ ವರ್ಷದ ಆರಂಭದಲ್ಲಿ (ಜನವರಿ 8 ಮತ್ತು 9 ರಂದು) ನಡೆದ ಭೀಕರ ಹ*ಲ್ಲೆಗಳಲ್ಲಿ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದರು ಎಂದು ಅಲ್ ಜಜೀರಾ ವರದಿ ಮಾಡಿದೆ. ಆ ಸಮಯದಲ್ಲಿ ಇರಾನ್ ಸರ್ಕಾರವು ದೇಶಾದ್ಯಂತ ಇಂಟರ್ನೆಟ್ ಮತ್ತು ಸಂವಹನ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿತ್ತು.
ಟೆಹ್ರಾನ್ ವಿಶ್ವವಿದ್ಯಾಲಯ, ಷರೀಫ್ ತಾಂತ್ರಿಕ ವಿಶ್ವವಿದ್ಯಾಲಯದಂತಹ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಸಮಯದಲ್ಲಿ ಸರ್ಕಾರ ವಿರೋಧಿ ವಿದ್ಯಾರ್ಥಿಗಳು ಮತ್ತು ಸರ್ಕಾರದ ಬೆಂಬಲಿಗರ ನಡುವೆ ಭೀಕರ ಸಂಘರ್ಷ ನಡೆದಿದೆ. ಸರ್ಕಾರದ ಪರವಾಗಿರುವ 'ಬಸಿಜ್' ಎಂಬ ಅರೆಸೇನಾ ಪಡೆಯ ಸದಸ್ಯರು ಪ್ರತಿಭಟನಾಕಾರರ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ವಿಶ್ವವಿದ್ಯಾಲಯಗಳ ಸುತ್ತಮುತ್ತ ಭಾರಿ ಶಸ್ತ್ರಸಜ್ಜಿತ ಪೊಲೀಸರನ್ನು ನಿಯೋಜಿಸಲಾಗಿದ್ದು, ಯುದ್ಧದಂತಹ ವಾತಾವರಣ ನಿರ್ಮಾಣವಾಗಿದೆ.
— India in Iran (@India_in_Iran) February 23, 2026
ಇರಾನ್ ಕೇವಲ ಆಂತರಿಕ ಕಲಹದಿಂದ ಮಾತ್ರವಲ್ಲದೆ, ಅಮೆರಿಕ ಮತ್ತು ಇಸ್ರೇಲ್ ದೇಶಗಳೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಯುದ್ಧದ ಭೀತಿಯನ್ನೂ ಎದುರಿಸುತ್ತಿದೆ. ಇದು ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸಿದೆ. ಆದ್ದರಿಂದ, ಅಲ್ಲಿರುವ ಭಾರತೀಯರು ಯಾವುದೇ ಅಪಾಯಕ್ಕೆ ಸಿಲುಕಬಾರದು ಎಂಬುದು ಭಾರತ ಸರ್ಕಾರದ ಮುಖ್ಯ ಉದ್ದೇಶವಾಗಿದೆ.