ನವದೆಹಲಿ/ಮೀರತ್: ದೇಶದ ರಾಜಧಾನಿಯಲ್ಲಿ ಇತ್ತೀಚೆಗೆ ನಡೆದ 'ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ'ಯ ವೇಳೆ ಕಾಂಗ್ರೆಸ್ ಯುವ ಘಟಕದ ಕಾರ್ಯಕರ್ತರು ಶರ್ಟ್‌ಗಳನ್ನು ಬಿಚ್ಚಿ ನಡೆಸಿದ ಪ್ರತಿಭಟನೆಯು ಈಗ ದೊಡ್ಡ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಕಾಂಗ್ರೆಸ್ ಪಕ್ಷವು ಜಾಗತಿಕ ವೇದಿಕೆಯನ್ನು ತನ್ನ "ಕೊಳಕು ಮತ್ತು ಬೆತ್ತಲೆ ರಾಜಕೀಯ" ಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. "ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ನಾಯಕರು ವರ್ತಿಸಿದ ರೀತಿ, ಆ ಪಕ್ಷವು ಎಷ್ಟು ಸೈದ್ಧಾಂತಿಕವಾಗಿ ದಿವಾಳಿಯಾಗಿದೆ ಮತ್ತು ಬಡವಾಗಿದೆ ಎಂಬುದನ್ನು ತೋರಿಸುತ್ತದೆ. ನೀವು ಈಗಾಗಲೇ ಸೈದ್ಧಾಂತಿಕವಾಗಿ ಬೆತ್ತಲೆಯಾಗಿದ್ದೀರಿ, ಇನ್ನು ನಿಮ್ಮ ಬಟ್ಟೆಗಳನ್ನು ಬಿಚ್ಚುವ ಅಗತ್ಯವೇನಿತ್ತು?" ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಭಾರತವು ಜಾಗತಿಕ ಮಟ್ಟದಲ್ಲಿ ಸಾಧಿಸುತ್ತಿರುವ ಯಶಸ್ಸನ್ನು ಕಾಂಗ್ರೆಸ್‌ಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅವರು ಕುಟುಕಿದರು.
ಕಳೆದ ಶುಕ್ರವಾರ ದೆಹಲಿಯಲ್ಲಿ ವಿಶ್ವದ ಅತಿದೊಡ್ಡ ಎಐ (ಕೃತಕ ಬುದ್ಧಿಮತ್ತೆ) ಸಮ್ಮೇಳನ ನಡೆಯುತ್ತಿತ್ತು. ಈ ವೇಳೆ ಯುವ ಕಾಂಗ್ರೆಸ್‌ನ ಒಂದು ಗುಂಪು ಶರ್ಟ್‌ಗಳನ್ನು ಧರಿಸದೆ ಸಭಾಂಗಣಕ್ಕೆ ನುಗ್ಗಿತ್ತು. ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದಗಳನ್ನು ವಿರೋಧಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನಾಕಾರರು ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚಿತ್ರಗಳಿರುವ ಬಟ್ಟೆಗಳನ್ನು ಹಿಡಿದು ಭದ್ರತಾ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದರು. ಈ ವರ್ತನೆಯು ಜಾಗತಿಕ ಪ್ರತಿನಿಧಿಗಳ ಮುಂದೆ ದೇಶದ ಘನತೆಗೆ ಧಕ್ಕೆ ತಂದಿದೆ ಎಂಬುದು ಸರ್ಕಾರದ ವಾದವಾಗಿದೆ.
ಪ್ರಧಾನಿ ಮೋದಿ ಅವರು ಕಾಂಗ್ರೆಸ್‌ಗೆ ಎಚ್ಚರಿಕೆ ನೀಡುತ್ತಾ, "ಎಐ ಗ್ಲೋಬಲ್ ಶೃಂಗಸಭೆಯು ಕೇವಲ ಬಿಜೆಪಿ ಅಥವಾ ಸರ್ಕಾರದ ಕಾರ್ಯಕ್ರಮವಾಗಿರಲಿಲ್ಲ. ಅಲ್ಲಿ ಯಾವುದೇ ಬಿಜೆಪಿ ನಾಯಕರು ಹಾಜರಿರಲಿಲ್ಲ. ಅದು ಭಾರತದ ಹೆಮ್ಮೆಯ ವಿಷಯವಾಗಿತ್ತು. ಆದರೆ ಕಾಂಗ್ರೆಸ್ ನನ್ನ ಮೇಲಿನ ದ್ವೇಷಕ್ಕಾಗಿ ದೇಶದ ಗೌರವವನ್ನು ಮಣ್ಣು ಪಾಲು ಮಾಡಿದೆ. ಅವರು ನನ್ನನ್ನು ಅವಮಾನಿಸಲು ನನ್ನ ತಾಯಿಯನ್ನು ಎಳೆದು ತರುತ್ತಾರೆ, ನನ್ನ ಸಮಾಧಿ ಅಗೆಯಲು ಬಯಸುತ್ತಾರೆ. ಆದರೆ ಇಡೀ ದೇಶ ಅವರ ಈ ಭ್ರಷ್ಟ ನೀತಿಯನ್ನು ಗಮನಿಸುತ್ತಿದೆ," ಎಂದು ಆಕ್ರೋಶ ಹೊರಹಾಕಿದರು.
ಈ ಅಶಿಸ್ತಿನ ಪ್ರತಿಭಟನೆಗೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಪ್ರಮುಖ ಯುವ ಕಾಂಗ್ರೆಸ್ ನಾಯಕರನ್ನು ಬಂಧಿಸಿದ್ದಾರೆ. ರಾಷ್ಟ್ರೀಯ ಕಾರ್ಯದರ್ಶಿ ಕೃಷ್ಣ ಹರಿ, ಕುಂದನ್ ಯಾದವ್, ಅಜಯ್ ಕುಮಾರ್ ಮತ್ತು ನರಸಿಂಹ ಯಾದವ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯವು ಈ ನಾಲ್ವರು ಪ್ರತಿಭಟನಾಕಾರರನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಅಂತರಾಷ್ಟ್ರೀಯ ವೇದಿಕೆಯಲ್ಲಿ ಭದ್ರತಾ ಲೋಪ ಉಂಟುಮಾಡಿದ ಮತ್ತು ದೇಶದ ಘನತೆಗೆ ಧಕ್ಕೆ ತಂದ ಆರೋಪದಡಿ ಇವರ ಮೇಲೆ ತನಿಖೆ ನಡೆಯುತ್ತಿದೆ.
ಪ್ರತಿಭಟನೆ ಮಾಡುವುದು ಪ್ರಜಾಪ್ರಭುತ್ವದ ಹಕ್ಕು ಎಂಬುದು ನಿಜವಾದರೂ, ಅಂತರಾಷ್ಟ್ರೀಯ ಗಣ್ಯರ ಮುಂದೆ ಶರ್ಟ್‌ಗಳನ್ನು ಬಿಚ್ಚಿ ವರ್ತಿಸುವುದು ಸರಿಯೇ ಎಂಬ ಚರ್ಚೆ ಈಗ ಶುರುವಾಗಿದೆ. ಪ್ರಧಾನಿ ಮೋದಿಯವರ ಈ ಕಠಿಣ ಮಾತುಗಳು ಮುಂಬರುವ ಚುನಾವಣೆಗಳ ಮೇಲೆ ಯಾವ ರೀತಿಯ ಪ್ರಭಾವ ಬೀರಲಿವೆ ಎಂಬುದು ಕುತೂಹಲ ಮೂಡಿಸಿದೆ.