ದೆಹಲಿಯಲ್ಲಿ ನಡೆದ 'ಇಂಡಿಯಾ ಎಐ ಇಂಪ್ಯಾಕ್ಟ್ ಸಮ್ಮಿಟ್ 2026' (India AI Impact Summit 2026) ಶೃಂಗಸಭೆಯ ಸಂದರ್ಭದಲ್ಲಿ ನಡೆದ ಯುವ ಕಾಂಗ್ರೆಸ್ ಪ್ರತಿಭಟನೆಯನ್ನು ಖಂಡಿಸಿ, ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರು ತಮ್ಮ 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಭಾರತವು ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮುತ್ತಿರುವ ಈ ಐತಿಹಾಸಿಕ ಕ್ಷಣದಲ್ಲಿ, ಕಾಂಗ್ರೆಸ್ ಪಕ್ಷದ ವರ್ತನೆಯು ದೇಶಕ್ಕೆ ಅವಮಾನ ತರುವಂತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿಕಾರಿದ್ದಾರೆ.
When the world's top CEOs and foreign delegates gathered in Delhi to discuss India's AI breakthrough at the India AI Impact Summit 2026, @IYC workers decided to "protest" by turning the venue into a shouting match and going shirtless outside the halls. This is not dissent. It is… pic.twitter.com/mQAfwAFM4N
— Vijayendra Yediyurappa (@BYVijayendra) February 20, 2026
ದೆಹಲಿಯ ಭಾರತ್ ಮಂಟಪದಲ್ಲಿ ವಿಶ್ವದ ನೂರಾರು ದೇಶಗಳ ಪ್ರತಿನಿಧಿಗಳು, ತಂತ್ರಜ್ಞಾನ ಕ್ಷೇತ್ರದ ದಿಗ್ಗಜರು ಮತ್ತು ವಿದೇಶಿ ನಿಯೋಗಗಳು ಭಾಗವಹಿಸಿದ್ದ 'ಇಂಡಿಯಾ ಎಐ ಇಂಪ್ಯಾಕ್ಟ್ ಸಮ್ಮಿಟ್ 2026' ನಡೆಯುತ್ತಿದ್ದ ವೇಳೆ, ಭಾರತೀಯ ಯುವ ಕಾಂಗ್ರೆಸ್ (IYC) ಕಾರ್ಯಕರ್ತರು ನಡೆಸಿದ 'ಅರೆಬೆತ್ತಲೆ' ಪ್ರತಿಭಟನೆಯು ಕೇವಲ ರಾಜಕೀಯ ವಿರೋಧವಲ್ಲ, ಅದು ರಾಷ್ಟ್ರಕ್ಕೆ ಮಾಡಿದ ದ್ರೋಹ ಎಂದು ಅವರು ಬಣ್ಣಿಸಿದ್ದಾರೆ.
ವಿಜಯೇಂದ್ರ ಅವರ ಪೋಸ್ಟ್-
"ವಿಶ್ವದ ಅಗ್ರಗಣ್ಯ ಸಿಇಒಗಳು ಮತ್ತು ವಿದೇಶಿ ಗಣ್ಯರು ಭಾರತದ ಎಐ ಕ್ರಾಂತಿಯ ಬಗ್ಗೆ ಚರ್ಚಿಸಲು ದೆಹಲಿಯಲ್ಲಿ ಸೇರಿದ್ದಾಗ, ಯುವ ಕಾಂಗ್ರೆಸ್ ಕಾರ್ಯಕರ್ತರು ಶೃಂಗಸಭೆಯ ಆವರಣದ ಹೊರಗೆ ಅರೆಬೆತ್ತಲೆಯಾಗಿ ಕಿರುಚಾಡುತ್ತಾ ಪ್ರತಿಭಟಿಸುವ ಮೂಲಕ ಕಾರ್ಯಕ್ರಮದ ಘನತೆಯನ್ನು ಹಾಳುಮಾಡಿದ್ದಾರೆ. ಇದು ಸೈದ್ಧಾಂತಿಕ ಭಿನ್ನಾಭಿಪ್ರಾಯವಲ್ಲ, ಇದು ನಾಚಿಕೆಗೇಡಿನ ಸಂಗತಿ," ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಇತಿಹಾಸವೇ ಹೀಗೆ!
ಬಿ.ವೈ. ವಿಜಯೇಂದ್ರ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸುತ್ತಾ, "ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ವರ್ಚಸ್ಸನ್ನು ಕೆಡಿಸುವುದು ಕಾಂಗ್ರೆಸ್‌ಗೆ ಹೊಸತಲ್ಲ. ಅವರ ನಾಯಕ ರಾಹುಲ್ ಗಾಂಧಿ ಅವರೇ ವಿದೇಶಗಳಿಗೆ ಹೋದಾಗ ಭಾರತದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ. ನಾಯಕರೇ ಅಂತಹ ಹಾದಿ ಹಿಡಿದಾಗ, ಅವರ ಅನುಯಾಯಿಗಳು ಅದನ್ನೇ ಅನುಸರಿಸುವುದು ಸಹಜ. ಭಾರತವು ವಿಶ್ವದ ಅತಿದೊಡ್ಡ ಎಐ ಶೃಂಗಸಭೆಯನ್ನು ಆಯೋಜಿಸಿ, ಜಾಗತಿಕ ತಂತ್ರಜ್ಞಾನ ದೈತ್ಯರಿಂದ ಶತಕೋಟಿ ಡಾಲರ್ ಹೂಡಿಕೆಯನ್ನು ಆಕರ್ಷಿಸುತ್ತಿರುವಾಗ, ಕಾಂಗ್ರೆಸ್ ಇಡೀ ರಾಷ್ಟ್ರವನ್ನು ಮುಜುಗರಕ್ಕೀಡುಮಾಡಲು ನಿರ್ಧರಿಸಿದೆ," ಎಂದು ಟೀಕಿಸಿದ್ದಾರೆ.
ನಿರ್ಮಾಣ ಮತ್ತು ವಿನಾಶದ ನಡುವಿನ ವ್ಯತ್ಯಾಸ
ಇಂದು ಭಾರತವು ಎಐ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿದೆ, ಸ್ಟಾರ್ಟ್‌ಅಪ್‌ಗಳಿಗೆ ಉತ್ತೇಜನ ನೀಡುತ್ತಿದೆ ಮತ್ತು ಭವಿಷ್ಯದ ಉದ್ಯೋಗಗಳನ್ನು ಸೃಷ್ಟಿಸುತ್ತಿದೆ. ಆದರೆ ಕಾಂಗ್ರೆಸ್ ಮಾತ್ರ ಕ್ಷುಲ್ಲಕ ಸುದ್ದಿಗಳಿಗಾಗಿ ಮತ್ತು ಪ್ರಚಾರಕ್ಕಾಗಿ ದೇಶದ ಗೌರವವನ್ನು ಹರಾಜು ಹಾಕುತ್ತಿದೆ. "ಒಂದು ಕಡೆ ದೇಶವನ್ನು ಕಟ್ಟುವ ಕೆಲಸ ನಡೆಯುತ್ತಿದ್ದರೆ, ಇನ್ನೊಂದೆಡೆ ಅದನ್ನು ಕೆಡವುವ ಶಕ್ತಿಗಳು ಸಕ್ರಿಯವಾಗಿವೆ. ಇಂತಹ ವರ್ತನೆಗೆ ದಿಕ್ಕಾರವಿರಲಿ," ಎಂದು ವಿಜಯೇಂದ್ರ ಅವರು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಫೆಬ್ರವರಿ 20, 2026 ರಂದು ದೆಹಲಿಯ ಭಾರತ್ ಮಂಟಪದಲ್ಲಿ ಶೃಂಗಸಭೆ ನಡೆಯುತ್ತಿದ್ದಾಗ, ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ವಿರುದ್ಧ ಘೋಷಣೆ ಕೂಗುತ್ತಾ ಕೆಲವು ಯುವ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದರು. ಇದರಿಂದ ವಿದೇಶಿ ಅತಿಥಿಗಳ ಮುಂದೆ ಭಾರತದ ಭದ್ರತೆ ಮತ್ತು ಶಿಸ್ತಿನ ಬಗ್ಗೆ ತಪ್ಪು ಸಂದೇಶ ರವಾನೆಯಾದಂತಾಗಿದೆ ಎಂಬುದು ಬಿಜೆಪಿಯ ಗಂಭೀರ ಆರೋಪವಾಗಿದೆ.