Apr 3, 2026 Languages : ಕನ್ನಡ | English

ದಾವಣಗೆರೆ ಬಿಜೆಪಿ ಟಿಕೆಟ್ ಫೈಟ್ - ಬಿಎಸ್‌ವೈ ಬಣಕ್ಕೆ ಹೈಕಮಾಂಡ್ ಶಾಕ್! ಸಿದ್ದೇಶ್ವರ್ ಆಪ್ತನಿಗೆ ಒಲಿದ ಅದೃಷ್ಟ!!

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿ ಘೋಷಣೆಯಾಗುತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಚಲನ ಸೃಷ್ಟಿಯಾಗಿದೆ. ಹೈಕಮಾಂಡ್ ಈ ಬಾರಿ 'ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ' ಬಣಕ್ಕೆ ಶಾಕ್ ನೀಡಿ, ಅವರ ವಿರೋಧಿ ಬಣದ ನಾಯಕನಿಗೆ ಮಣೆ ಹಾಕುವ ಮೂಲಕ ಅಚ್ಚರಿ ಮೂಡಿಸಿದೆ. ಈ ಬೆಳವಣಿಗೆಯಿಂದಾಗಿ ದಾವಣಗೆರೆ ಜಿಲ್ಲಾ ರಾಜಕಾರಣದಲ್ಲಿ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್ ಕೈ ಮೇಲಾದಂತಾಗಿದೆ.

ದಾವಣಗೆರೆ ಬಿಜೆಪಿ ಶಾಕ್! ಬಿಎಸ್‌ವೈ ಬಣಕ್ಕೆ ಹೈಕಮಾಂಡ್ ದೊಡ್ಡ ಸಂದೇಶ
ದಾವಣಗೆರೆ ಬಿಜೆಪಿ ಶಾಕ್! ಬಿಎಸ್‌ವೈ ಬಣಕ್ಕೆ ಹೈಕಮಾಂಡ್ ದೊಡ್ಡ ಸಂದೇಶ

1. ಬಿಎಸ್​​ವೈ ಆಪ್ತರಿಗೆ ತಪ್ಪಿದ ಟಿಕೆಟ್
ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಬಿ.ಎಸ್. ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ಪರಮಾಪ್ತ ಎನ್ನಲಾದ ಎಂ.ಪಿ. ರೇಣುಕಾಚಾರ್ಯ ಅವರು ತಮ್ಮ ಬೆಂಬಲಿಗ ಬಿ.ಜಿ. ಅಜಯ್ ಕುಮಾರ್ ಅವರಿಗೆ ಟಿಕೆಟ್ ಕೊಡಿಸಲು ತೀವ್ರ ಕಸರತ್ತು ನಡೆಸಿದ್ದರು. ದೆಹಲಿ ಮಟ್ಟದಲ್ಲಿ ಓಡಾಟ ನಡೆಸಿದ್ದ ರೇಣುಕಾಚಾರ್ಯ ಅವರಿಗೆ ಹೈಕಮಾಂಡ್ ನಿರ್ಧಾರದಿಂದ ತೀವ್ರ ಮುಖಭಂಗವಾಗಿದೆ. ಬಿಎಸ್​​ವೈ ಬಣದ ಪ್ರಭಾವವನ್ನು ಮೀರಿ ಹೊಸ ಮುಖಕ್ಕೆ ಟಿಕೆಟ್ ಘೋಷಣೆಯಾಗಿದೆ.

2. ಸಿದ್ದೇಶ್ವರ್ ಬಣದ ಅಭ್ಯರ್ಥಿಗೆ ಮಣೆ
ಬಿಎಸ್​​ವೈ ಕುಟುಂಬದ ವಿರುದ್ಧ ಬಹಿರಂಗವಾಗಿ ತೊಡೆತಟ್ಟಿರುವ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಅವರ ಬಣದಲ್ಲಿ ಗುರುತಿಸಿಕೊಂಡಿರುವ ಶ್ರೀನಿವಾಸ ಟಿ. ದಾಸಕರಿಯಪ್ಪ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸಿದ್ದೇಶ್ವರ್ ಪತ್ನಿಯ ಸೋಲಿಗೆ ರೇಣುಕಾಚಾರ್ಯ ಅವರ ಗುಂಪುಗಾರಿಕೆಯೇ ಕಾರಣ ಎಂಬ ಕೋಪ ಸಿದ್ದೇಶ್ವರ್ ಅವರಿಗಿತ್ತು. ಈಗ ತಮ್ಮ ಆಪ್ತನಿಗೆ ಟಿಕೆಟ್ ಕೊಡಿಸುವ ಮೂಲಕ ಸಿದ್ದೇಶ್ವರ್ ಅವರು ದಾವಣಗೆರೆ ಬಿಜೆಪಿಯಲ್ಲಿ ತಮ್ಮ ಹಿಡಿತವನ್ನು ಮರಳಿ ಸ್ಥಾಪಿಸಿದ್ದಾರೆ.

3. ಜಾತಿ ಲೆಕ್ಕಾಚಾರದ ಬದಲಾವಣೆ
ಸಾಮಾನ್ಯವಾಗಿ ದಾವಣಗೆರೆಯಲ್ಲಿ ಲಿಂಗಾಯತ ಅಥವಾ ಮರಾಠ ಸಮುದಾಯದ ನಾಯಕರಿಗೆ ಟಿಕೆಟ್ ನೀಡುವ ಸಂಪ್ರದಾಯ ಇತ್ತು. ಆದರೆ ಈ ಬಾರಿ ಬಿಜೆಪಿ ಆ ಪದ್ಧತಿಯನ್ನು ಬದಿಗೊತ್ತಿದೆ. ರಾಜ್ಯ ಎಸ್​​ಟಿ ಮೋರ್ಚಾ ಉಪಾಧ್ಯಕ್ಷರಾಗಿರುವ ಪರಿಶಿಷ್ಟ ಪಂಗಡದ (ST) ನಾಯಕ ಶ್ರೀನಿವಾಸ್ ದಾಸಕರಿಯಪ್ಪ ಅವರಿಗೆ ಟಿಕೆಟ್ ನೀಡಿರುವುದು ದೊಡ್ಡ 'ಸರ್ಪ್ರೈಸ್' ಆಗಿದೆ. ಈ ಮೂಲಕ ಬಂಡಾಯ ಎದ್ದಿದ್ದ ಶ್ರೀನಿವಾಸ್ ಅವರನ್ನು ಸಮಾಧಾನಪಡಿಸುವಲ್ಲಿ ಹೈಕಮಾಂಡ್ ಯಶಸ್ವಿಯಾಗಿದೆ.

4. ರೇಣುಕಾಚಾರ್ಯ ವರ್ಸಸ್ ಸಿದ್ದೇಶ್ವರ್
ಈ ಟಿಕೆಟ್ ಹಂಚಿಕೆಯು ಕೇವಲ ಒಬ್ಬ ಅಭ್ಯರ್ಥಿಯ ಆಯ್ಕೆಯಲ್ಲ, ಬದಲಾಗಿ ಇಬ್ಬರು ಪ್ರಭಾವಿ ನಾಯಕರ ನಡುವಿನ ಪ್ರತಿಷ್ಠೆಯ ಕಣವಾಗಿತ್ತು. ರೇಣುಕಾಚಾರ್ಯ ಅವರು ದೆಹಲಿಗೆ ಹೋಗಿ ಬಂದರೂ ಅವರ ಮಾತು ನಡೆಯಲಿಲ್ಲ. ಇದು ರಾಜ್ಯ ಬಿಜೆಪಿ ಘಟಕದಲ್ಲಿ ವಿಜಯೇಂದ್ರ ಅವರ ನಾಯಕತ್ವಕ್ಕೆ ಮತ್ತು ಬಿಎಸ್​​ವೈ ಬಣಕ್ಕೆ ಕೇಂದ್ರದ ನಾಯಕರು ನೀಡಿದ ಪರೋಕ್ಷ ಎಚ್ಚರಿಕೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಯುಗಾದಿ ಹಬ್ಬದ ದಿನದಂದೇ ದಾವಣಗೆರೆ ಬಿಜೆಪಿಯಲ್ಲಿ ದೊಡ್ಡ ಬದಲಾವಣೆಯ ಗಾಳಿ ಬೀಸಿದೆ. ಬಾಗಲಕೋಟೆಯಲ್ಲಿ ವೀರಣ್ಣ ಚರಂತಿಮಠ ಅವರಿಗೆ ಸುಲಭವಾಗಿ ಟಿಕೆಟ್ ಸಿಕ್ಕಿದ್ದರೂ, ದಾವಣಗೆರೆಯಲ್ಲಿ ಮಾತ್ರ ಆಂತರಿಕ ಕಚ್ಚಾಟ ಮತ್ತು ಬಣ ರಾಜಕೀಯದ ನಡುವೆಯೇ ಹೈಕಮಾಂಡ್ ತನ್ನ ಅಂತಿಮ ನಿರ್ಧಾರ ಪ್ರಕಟಿಸಿದೆ.

Latest News