Mar 31, 2026 Languages : ಕನ್ನಡ | English

ಐಐಟಿ ಬಾಂಬೆ ವಿಜ್ಞಾನಿಗಳ ಕಮಾಲ್: ಒಣಗಿದ ಎಲೆಗಳಿಂದಲೇ ಅಡುಗೆ ಅನಿಲ ತಯಾರಿ - ಎಲ್‌ಪಿಜಿ ಸಿಲಿಂಡರ್‌ಗೆ ಇನ್ಮುಂದೆ ಗುಡ್ ಬೈ!

ಸಾಮಾನ್ಯವಾಗಿ ಅಂಗಳದಲ್ಲಿ ಬಿದ್ದಿರುವ ಒಣಗಿದ ಎಲೆ ಮತ್ತು ಕಡ್ಡಿಗಳನ್ನು ನಾವು ಕಸ ಎಂದು ಗುಡಿಸಿ ಸುಟ್ಟು ಹಾಕುತ್ತೇವೆ. ಆದರೆ, ಮುಂಬೈನ ಐಐಟಿ ಬಾಂಬೆ (IIT Bombay) ವಿಜ್ಞಾನಿಗಳು ಈ ಕಸದಿಂದಲೇ ರಸ ತೆಗೆಯುವ ಹೊಸ ತಂತ್ರಜ್ಞಾನವೊಂದನ್ನು ಕಂಡುಹಿಡಿದಿದ್ದಾರೆ. ಒಣ ಎಲೆಗಳನ್ನು ಬಳಸಿ ಅಡುಗೆಗೆ ಬೇಕಾದ ಇಂಧನ ತಯಾರಿಸುವ ವಿಶೇಷ 'ಬಯೋಮಾಸ್ ಗ್ಯಾಸಿಫಿಕೇಶನ್' (Biomass Gasification) ಸಿಸ್ಟಮ್ ಅನ್ನು ಅಭಿವೃದ್ಧಿಪಡಿಸಿ ಅದಕ್ಕೆ ಪೇಟೆಂಟ್ ಕೂಡ ಪಡೆದುಕೊಂಡಿದ್ದಾರೆ. ಈ ಹೊಸ ಐಡಿಯಾದಿಂದ ಇನ್ಮುಂದೆ ಅಡುಗೆ ಅನಿಲದ (LPG) ಅವಲಂಬನೆ ಕಡಿಮೆಯಾಗೋದರಲ್ಲಿ ಸಂಶಯವಿಲ್ಲ.

15 ಸಾವಿರ ವಿದ್ಯಾರ್ಥಿಗಳಿಗೆ ಒಣ ಎಲೆ ಇಂಧನದಿಂದ ಅಡುಗೆ!! | Photo Credit: https://x.com/ANI
15 ಸಾವಿರ ವಿದ್ಯಾರ್ಥಿಗಳಿಗೆ ಒಣ ಎಲೆ ಇಂಧನದಿಂದ ಅಡುಗೆ!! | Photo Credit: https://x.com/ANI

ಯಾರಿದು ಸಾಧಕ ವಿಜ್ಞಾನಿ?

ಐಐಟಿ ಬಾಂಬೆಯ ಕೆಮಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಸಂಜಯ್ ಮಹಾಜನಿ ನೇತೃತ್ವದ ತಂಡ ಈ ಅದ್ಭುತ ತಂತ್ರಜ್ಞಾನವನ್ನು ಸಿದ್ಧಪಡಿಸಿದೆ. ಕಾಲೇಜು ಕ್ಯಾಂಪಸ್‌ನಲ್ಲಿ ಪ್ರತಿದಿನ ಟನ್‌ಗಟ್ಟಲೆ ಬೀಳುವ ಒಣ ಎಲೆಗಳನ್ನು ವಿಲೇವಾರಿ ಮಾಡುವುದು ದೊಡ್ಡ ತಲೆನೋವಾಗಿತ್ತು. ಈ ಕಸವನ್ನೇ ಇಂಧನವಾಗಿ ಬದಲಿಸಿದರೆ ಹೇಗೆ ಎಂಬ ಆಲೋಚನೆಯಿಂದ ಹುಟ್ಟಿಕೊಂಡಿದ್ದೇ ಈ ಹೊಸ ಮಿಷನ್. ಇಂದು ಈ ತಂತ್ರಜ್ಞಾನ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಪರಿಸರ ಪ್ರೇಮಿಗಳಿಗೆ ಮತ್ತು ಹೋಟೆಲ್ ಉದ್ಯಮಿಗಳಿಗೆ ಹೊಸ ಭರವಸೆ ನೀಡಿದೆ.

ಹೇಗೆ ಕೆಲಸ ಮಾಡುತ್ತೆ ಈ ತಂತ್ರಜ್ಞಾನ?

ಇದರ ಪ್ರಕ್ರಿಯೆ ತುಂಬಾ ಸರಳ ಮತ್ತು ಪರಿಣಾಮಕಾರಿ. ಮೊದಲು ಕ್ಯಾಂಪಸ್‌ನಲ್ಲಿ ಸಂಗ್ರಹವಾದ ಒಣಗಿದ ಎಲೆ ಮತ್ತು ಸಣ್ಣ ಕಡ್ಡಿಗಳನ್ನು ಪುಡಿ ಮಾಡಿ, ಅವುಗಳನ್ನು ಸಣ್ಣ ಸಣ್ಣ 'ಪೆಲೆಟ್ಸ್' (Pellets - ಗುಳಿಗೆಗಳಂತಹ ತುಂಡುಗಳು) ಆಗಿ ಬದಲಾಯಿಸಲಾಗುತ್ತದೆ. ಈ ಪೆಲೆಟ್‌ಗಳನ್ನು ಬಯೋಮಾಸ್ ಗ್ಯಾಸಿಫಿಕೇಶನ್ ಸಿಸ್ಟಮ್‌ಗೆ ಹಾಕಿದಾಗ, ಅವುಗಳಿಂದ ಸ್ಟೀಮ್ (ಆವಿ) ಉತ್ಪತ್ತಿಯಾಗುತ್ತದೆ. ಈ ಆವಿಯನ್ನು ಅಡುಗೆ ಮಾಡಲು ಬಳಸಬಹುದು. ಅಂದರೆ, ಎಲ್‌ಪಿಜಿ ಸಿಲಿಂಡರ್ ಮಾಡುವ ಕೆಲಸವನ್ನೇ ಈ ಒಣ ಎಲೆಗಳ ಪುಡಿ ಮಾಡುತ್ತದೆ. 

ಒಂದು ವರ್ಷದ ಸಕ್ಸಸ್ ಟೆಸ್ಟ್

ಕಳೆದ ಒಂದು ವರ್ಷದಿಂದ ಐಐಟಿ ಬಾಂಬೆಯ ಕ್ಯಾಂಟೀನ್‌ನಲ್ಲಿ ಈ ತಂತ್ರಜ್ಞಾನವನ್ನು ಪ್ರಾಯೋಗಿಕವಾಗಿ ಬಳಸಲಾಗುತ್ತಿದೆ. ಇದರ ರಿಸಲ್ಟ್ ಕೇಳಿದ್ರೆ ನೀವು ಅಚ್ಚರಿ ಪಡ್ತೀರಾ! ಪ್ರತಿದಿನ ಸುಮಾರು ಒಂದು ಎಲ್‌ಪಿಜಿ ಸಿಲಿಂಡರ್ ಬಳಸುವಷ್ಟು ಅನಿಲ ಈ ಸಿಸ್ಟಮ್‌ನಿಂದ ಉಳಿತಾಯವಾಗುತ್ತಿದೆ. ಅಷ್ಟೇ ಅಲ್ಲ, ಕಸ ವಿಲೇವಾರಿಗೆ ತಗಲುತ್ತಿದ್ದ ಖರ್ಚು ಕೂಡ ಈಗ ಶೂನ್ಯವಾಗಿದೆ. ಇದರ ಜೊತೆಗೆ ಇಂಗಾಲದ ಡೈ ಆಕ್ಸೈಡ್ (CO2) ಹೊರಸೂಸುವಿಕೆ ಕೂಡ ಗಣನೀಯವಾಗಿ ಕಡಿಮೆಯಾಗಿದ್ದು, ಪರಿಸರಕ್ಕೆ ಇದು ವರದಾನವಾಗಿದೆ.

15 ಸಾವಿರ ವಿದ್ಯಾರ್ಥಿಗಳಿಗೆ ಅಡುಗೆ ಸಿದ್ಧತೆ

ಕ್ಯಾಂಟೀನ್‌ನಲ್ಲಿ ಸಿಕ್ಕ ಯಶಸ್ಸಿನ ನಂತರ, ಈಗ ಐಐಟಿ ಬಾಂಬೆ ಈ ಸಿಸ್ಟಮ್ ಅನ್ನು ತನ್ನ 22-23 ಹಾಸ್ಟೆಲ್‌ಗಳಲ್ಲಿ ಅಳವಡಿಸಲು ಪ್ಲಾನ್ ಮಾಡಿದೆ. ಇಲ್ಲಿ ಸುಮಾರು 15,000 ವಿದ್ಯಾರ್ಥಿಗಳು ವಾಸಿಸುತ್ತಿದ್ದು, ಇವರೆಲ್ಲರಿಗೂ ಈ ಹೊಸ ಇಂಧನದ ಮೂಲಕವೇ ಅಡುಗೆ ಸಿದ್ಧವಾಗಲಿದೆ. ಮುಂಬೈನಂತಹ ನಗರ ಪ್ರದೇಶಗಳಲ್ಲಿ ಒಣ ಕಸದ ವಿಲೇವಾರಿ ದೊಡ್ಡ ಸಮಸ್ಯೆಯಾಗಿದ್ದು, ಇಂತಹ ತಂತ್ರಜ್ಞಾನಗಳು ಮಹಾನಗರ ಪಾಲಿಕೆಗಳಿಗೂ ಮಾದರಿಯಾಗಬಲ್ಲವು.

ನಮಗೆ ಇದರಿಂದ ಏನು ಲಾಭ?

ಈ ತಂತ್ರಜ್ಞಾನ ಕೇವಲ ಐಐಟಿ ಕ್ಯಾಂಪಸ್‌ಗೆ ಮಾತ್ರ ಸೀಮಿತವಾಗಬಾರದು. ಭವಿಷ್ಯದಲ್ಲಿ ಇದು ದೊಡ್ಡ ಹೋಟೆಲ್‌ಗಳು, ಮದುವೆ ಛತ್ರಗಳು ಮತ್ತು ಕೈಗಾರಿಕೆಗಳಿಗೂ ವಿಸ್ತರಣೆಯಾಗುವ ಸಾಧ್ಯತೆ ಇದೆ. ಇದರಿಂದ ಗ್ಯಾಸ್ ಬೆಲೆ ಏರಿಕೆಯ ಬಿಸಿ ತಪ್ಪುವುದರ ಜೊತೆಗೆ, ನೂರಾರು ಟನ್ ಒಣ ಕಸವನ್ನು ಮರುಬಳಕೆ ಮಾಡಿದಂತಾಗುತ್ತದೆ.

ನೋಡಿದ್ರಲ್ಲ, ವಿಜ್ಞಾನಿಗಳು ಮನಸ್ಸು ಮಾಡಿದರೆ ನಮಗೆ ಬೇಡವಾದ ಕಸ ಕೂಡ ಅಮೂಲ್ಯ ಇಂಧನವಾಗಬಲ್ಲದು. ಐಐಟಿ ಬಾಂಬೆಯ ಈ ಹೊಸ ಹೆಜ್ಜೆ 'ಕ್ಲೀನ್ ಎನರ್ಜಿ' ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಿದೆ.

Latest News