ನಮ್ಮ ರಾಜ್ಯದ ಜೈಲುಗಳು ಇತ್ತೀಚೆಗೆ ಸುದ್ದಿಯಾಗುತ್ತಿರುವುದು ಕೈದಿಗಳು ಸುಧಾರಣೆಯಾಗುತ್ತಿದ್ದಾರೆ ಅಂತಲ್ಲ, ಬದಲಿಗೆ ಅಲ್ಲಿ ನಡೆಯುತ್ತಿರುವ 'ರಾಜಾತಿಥ್ಯ' ಮತ್ತು 'ಕಳ್ಳಾಟ'ಗಳಿಂದ! ಬೆಂಗಳೂರಿನ ಪರಪ್ಪನ ಅಗ್ರಹಾರದ ಘಟನೆಗಳು ಇನ್ನೂ ಜನರ ಮನಸ್ಸಿನಿಂದ ಮಾಸುವ ಮುನ್ನವೇ, ಈಗ ಹುಬ್ಬಳ್ಳಿಯ ಉಪ ಕಾರಾಗೃಹದಲ್ಲೂ ಅಂತಹದ್ದೇ ಕಿರಿಕ್ ಬಯಲಾಗಿದೆ. ಜೈಲಿನ ಬ್ಯಾರಕ್ ಮೇಲೆ ಪೊಲೀಸರು ದಾಳಿ ಮಾಡಿದಾಗ ಸರಣಿ ಮೊಬೈಲ್‌ಗಳು ಮತ್ತು ಚಾರ್ಜರ್‌ಗಳು ಪತ್ತೆಯಾಗಿವೆ.
ಹುಬ್ಬಳ್ಳಿಯ ಈ ಉಪ ಕಾರಾಗೃಹದಲ್ಲಿ ಸಿಬ್ಬಂದಿಗಳು ಸಡನ್ ಆಗಿ ಬ್ಯಾರಕ್ ನಂಬರ್ 8ರ ಮೇಲೆ ದಾಳಿ ನಡೆಸಿದ್ದರು. ತಪಾಸಣೆ ಮಾಡಿದಾಗ ಅಲ್ಲಿ ಬರೀ ಕೈದಿಗಳಿರಲಿಲ್ಲ, ಬದಲಿಗೆ ಅವರಿಗಿಂತ ಹೆಚ್ಚಾಗಿ ಸ್ಮಾರ್ಟ್ ಫೋನ್‌ಗಳು, ಚಾರ್ಜರ್‌ಗಳು ಮತ್ತು ಕನೆಕ್ಟರ್‌ಗಳು ಪತ್ತೆಯಾಗಿವೆ. ಜೈಲಿನೊಳಗೆ ಇವೆಲ್ಲಾ ಹೇಗೆ ಬಂದವು? ಯಾರು ತಂದುಕೊಟ್ಟರು? ಎಂಬ ಪ್ರಶ್ನೆ ಈಗ ದೊಡ್ಡದಾಗಿ ಕಾಡುತ್ತಿದೆ.
ವಿಪರ್ಯಾಸವೆಂದರೆ, ಅಲ್ಲಿ ಮೊಬೈಲ್ ಸಿಕ್ಕರೂ ಕೂಡ "ಇದು ನಂದು" ಅಂತ ಯಾವೊಬ್ಬ ಕೈದಿಯೂ ಒಪ್ಪಿಕೊಳ್ಳುತ್ತಿಲ್ಲ. ಮೊಬೈಲ್ ತಾನಾಗಿಯೇ ಹಾರಿ ಬಂದು ಜೈಲಿನೊಳಗೆ ಕೂರಲು ಸಾಧ್ಯವಿಲ್ಲವಲ್ಲ? ಯಾರೂ ಮಾಲೀಕತ್ವ ಒಪ್ಪಿಕೊಳ್ಳದ ಕಾರಣ, ಆ ಬ್ಯಾರಕ್‌ನಲ್ಲಿದ್ದ ವಿನೋದ್, ದೀಪಕ್, ನಟರಾಜ ಸೇರಿದಂತೆ ಒಟ್ಟು 13 ವಿಚಾರಣಾಧೀನ ಕೈದಿಗಳ ಮೇಲೆ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಜಾಮರ್ ಇದ್ದರೂ ನೆಟ್‌ವರ್ಕ್ ಫುಲ್!
ರಾಜ್ಯದ ಬಹುತೇಕ ಜೈಲುಗಳಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮೊಬೈಲ್ ಜಾಮರ್‌ಗಳನ್ನು ಅಳವಡಿಸಲಾಗಿದೆ. ಆದರೆ ಆಶ್ಚರ್ಯವೆಂದರೆ, ಈ ಜಾಮರ್‌ಗಳ ಕಣ್ತಪ್ಪಿಸಿ ಕೈದಿಗಳು ಫೇಸ್‌ಬುಕ್ ಲೈವ್ ಬರುತ್ತಾರೆ, ವಿಡಿಯೋ ಕಾಲ್ ಮಾಡುತ್ತಾರೆ! ಪರಪ್ಪನ ಅಗ್ರಹಾರದಲ್ಲಂತೂ ಕೈದಿಗಳು ಮೊಬೈಲ್‌ಗಳನ್ನು ಹಾಲಿನ ಕವರ್‌ಗಳಲ್ಲಿ ಪ್ಯಾಕ್ ಮಾಡಿ, ಕೊಳಚೆ ನೀರಿನ ಪೈಪ್‌ಗಳ ಒಳಗೆ ಬಚ್ಚಿಟ್ಟಿದ್ದರು. ಅದನ್ನು ಹಿಡಿಯಲು ಹೋದ ಸಿಬ್ಬಂದಿಗೆ ಜೀವ ಬೆದರಿಕೆ ಹಾಕುವಷ್ಟು ಈ ಕೈದಿಗಳು ಅಪ್‌ಡೇಟ್ ಆಗಿದ್ದಾರೆ.
ಡಿಜಿಪಿ ಅಲೋಕ್ ಕುಮಾರ್ ಅವರು ಈ ಹಿಂದೆಯೇ ಅಸಮಾಧಾನ ವ್ಯಕ್ತಪಡಿಸಿದಂತೆ, ಜೈಲಿನ ಅಧಿಕಾರಿಗಳು ಅಥವಾ ವಾರ್ಡರ್‌ಗಳ ಸಹಾಯವಿಲ್ಲದೆ ಇಂತಹ ವಸ್ತುಗಳು ಒಳಗೆ ಹೋಗಲು ಸಾಧ್ಯವೇ ಇಲ್ಲ. ಗೇಟ್‌ನಲ್ಲಿ ಅಷ್ಟೊಂದು ತಪಾಸಣೆ ನಡೆದರೂ ಮೊಬೈಲ್ ಒಳಗೆ ಹೋಗುತ್ತಿದೆ ಎಂದರೆ ಭದ್ರತೆಯಲ್ಲಿ ದೊಡ್ಡ ಓಟೆಯಿದೆ ಎಂದೇ ಅರ್ಥ.
ಜೈಲಿಗೆ ಹೋಗುವುದು ತಪ್ಪು ತಿದ್ದಿಕೊಳ್ಳಲು, ಆದರೆ ಈಗಿನ ಪರಿಸ್ಥಿತಿ ನೋಡಿದರೆ ಜೈಲುಗಳು ಕ್ರೈಮ್ ನೆಟ್‌ವರ್ಕ್ ನಡೆಸುವ ಕಚೇರಿಗಳಂತೆ ಬದಲಾಗುತ್ತಿವೆಯೇ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ. ಹದಿನೈದು ದಿನಗಳಿಗೊಮ್ಮೆ ತಪಾಸಣೆ ನಡೆದರೂ ಪ್ರತಿ ಬಾರಿಯೂ ಮೊಬೈಲ್‌ಗಳು ಸಿಗುತ್ತಲೇ ಇವೆ ಎಂದರೆ, ಜೈಲು ವ್ಯವಸ್ಥೆಯನ್ನೇ ಒಮ್ಮೆ ಬುಡಮೇಲು ಮಾಡಿ ಸರಿಪಡಿಸಬೇಕಾದ ಅನಿವಾರ್ಯತೆ ಇದೆ.
ಸದ್ಯಕ್ಕೆ ಹುಬ್ಬಳ್ಳಿ ಜೈಲು ಅಧೀಕ್ಷಕ ಶಹಾಬುದ್ದೀನ್ ಅವರ ದೂರಿನ ಮೇರೆಗೆ ತನಿಖೆ ನಡೆಯುತ್ತಿದೆ. ಈ ಮೊಬೈಲ್‌ಗಳ ಮೂಲಕ ಕೈದಿಗಳು ಯಾರಿಗೆ ಕರೆ ಮಾಡುತ್ತಿದ್ದರು? ಜೈಲಿನ ಒಳಗಿಂದಲೇ ಏನಾದರೂ ಡೀಲ್ ಕುದುರಿಸುತ್ತಿದ್ದರಾ? ಎಂಬುದು ತನಿಖೆಯಿಂದ ಹೊರಬರಬೇಕಿದೆ.