ಸಂಬಂಧಿಕರು ಅಂದಮೇಲೆ ಕಷ್ಟ ಸುಖಕ್ಕೆ ಆಗಿರಬೇಕು ಎಂಬ ಮಾತಿದೆ. ಆದರೆ ಇಲ್ಲಿ ಹಾವೇರಿ ಜಿಲ್ಲೆಯ ಸುತ್ತಕೋಟಿ ಗ್ರಾಮದಲ್ಲಿ ಸಂಬಂಧಿಕರೇ ಯಮನಂತೆ ಎರಗಿದ್ದಾರೆ. ಗ್ರಾಮದ ಸೊಸೈಟಿ ಚುನಾವಣೆಯಲ್ಲಿ ತಾಯಿಯನ್ನು ಗೆಲ್ಲಿಸಿದ್ದಕ್ಕೆ ಶುರುವಾದ ದ್ವೇಷ, ಆಸ್ತಿ ಜಗಳದ ರೂಪ ಪಡೆದು ಕೊಲೆ ಯತ್ನದವರೆಗೆ ಹೋಗಿ ನಿಂತಿದೆ.
ಸುತ್ತಕೋಟಿ ಗ್ರಾಮದ ಸಿದ್ದೇಶ ಬಣಕಾರ ಎಂಬುವವರು ತಮ್ಮ ತಾಯಿಯನ್ನು ಗ್ರಾಮದ ಸೊಸೈಟಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಿಸಿದ್ದರು. ಅಂದಿನಿಂದ ಅದೇ ಗ್ರಾಮದ ಇವರ ಸಂಬಂಧಿಕರು ಸಿದ್ದೇಶ ಮತ್ತು ಅವರ ತಾಯಿಯ ಮೇಲೆ ದ್ವೇಷ ಸಾಧಿಸುತ್ತಿದ್ದರು ಎನ್ನಲಾಗಿದೆ. ಇದೇ ವಿಚಾರವಾಗಿ ಶುಕ್ರವಾರ ಆಸ್ತಿ ಜಗಳದ ನೆಪದಲ್ಲಿ ಜಗಳ ಶುರುವಾಗಿದೆ.
ಆರೋಪಿಗಳು ಏಕಾಏಕಿ ಕುಡಗೋಲು ಹಿಡಿದು ಸಿದ್ದೇಶ ಅವರನ್ನು ಕೊಲ್ಲಲು ಮುಂದಾಗಿದ್ದಾರೆ. ಈ ವೇಳೆ ಸಿದ್ದೇಶ ಅವರು ಪ್ರಾಣ ಉಳಿಸಿಕೊಳ್ಳಲು ಕೈ ಅಡ್ಡ ಮಾಡಿದಾಗ, ಅವರ ಕೈಗೆ ಕುಡಗೋಲಿನಿಂದ ತೀವ್ರವಾದ ಗಾಯವಾಗಿದೆ. ಸದ್ಯ ಸಿದ್ದೇಶ ಅವರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೊಬೈಲ್‌ನಲ್ಲಿ ಸೆರೆಯಾಯ್ತು ಅಸಲಿ ದೃಶ್ಯ
ಸಂಬಂಧಿಕರು ಕುಡಗೋಲು ಹಿಡಿದು ಅಟ್ಟಾಡಿಸುತ್ತಿರುವ ಮತ್ತು ಹ*ಲ್ಲೆ ಮಾಡುತ್ತಿರುವ ಭಯಾನಕ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅದನ್ನು ನೋಡಿದರೆ ಎಂತಹವರಿಗೂ ಮೈ ನಡುಗುತ್ತದೆ. ಬಣಕಾರ ಕುಟುಂಬದ ಒಟ್ಟು 8 ಜನರ ಮೇಲೆ ಈ ಸಂಬಂಧ ದೂರು ದಾಖಲಾಗಿದೆ.
ಪೊಲೀಸರ ನಡೆಗೆ ಆಕ್ರೋಶ
ಈ ಘಟನೆ ನಡೆದು ಸುಮಾರು 10 ದಿನಗಳೇ ಕಳೆದಿವೆ. ಹಂಸಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ ಸಹ, ಇದುವರೆಗೂ ಒಬ್ಬನೇ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿಲ್ಲ ಎಂಬುದು ಸಂತ್ರಸ್ತ ಕುಟುಂಬದ ಆರೋಪ. "ನಮ್ಮ ಕಣ್ಣಮುಂದೆಯೇ ಆರೋಪಿಗಳು ಓಡಾಡುತ್ತಿದ್ದಾರೆ, ಆದರೂ ಪೊಲೀಸರು ಯಾಕೆ ಸುಮ್ಮನಿದ್ದಾರೆ?" ಎಂದು ಸಿದ್ದೇಶ ಅವರ ಕುಟುಂಬ ಸದಸ್ಯರು ಆಕ್ರೋಶ ಹೊರಹಾಕಿದ್ದಾರೆ.
ನ್ಯಾಯಕ್ಕಾಗಿ ಕುಟುಂಬದ ಆಗ್ರಹ
ಹ*ಲ್ಲೆಗೊಳಗಾದ ಸಿದ್ದೇಶ ಅವರ ಕುಟುಂಬ ಸದ್ಯ ಭಯದ ನೆರಳಿನಲ್ಲಿ ಬದುಕುತ್ತಿದೆ. "ಸಾರ್ವಜನಿಕವಾಗಿ ಕುಡಗೋಲು ಹಿಡಿದು ಕೊ*ಲೆ ಮಾಡಲು ಬಂದವರನ್ನು ಬಂಧಿಸದೆ ಹೋದರೆ ಸಾಮಾನ್ಯ ಜನರ ಗತಿಯೇನು?" ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ. ಕೂಡಲೇ ಹಂಸಭಾವಿ ಪೊಲೀಸರು ಎಚ್ಚೆತ್ತುಕೊಂಡು ಆರೋಪಿಗಳನ್ನು ಜೈಲಿಗಟ್ಟಬೇಕು ಎಂಬುದು ಎಲ್ಲರ ಒತ್ತಾಯವಾಗಿದೆ.