ಹಾವೇರಿ ಜಿಲ್ಲೆಯ ಕರ್ಜಗಿ ಗ್ರಾಮದಲ್ಲಿ ಅಚ್ಚರಿಯ ಹಾಗೂ ದುಃಖದ ಘಟನೆಯೊಂದು ನಡೆದಿದೆ. ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೆಸರು ಮಾಡಿದ್ದ, ಪ್ರಸಿದ್ಧ ಕೊಬ್ಬರಿ ಹೋರಿ 'ಓಂ-112' ಅನಾರೋಗ್ಯದಿಂದ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಹೌದು ಈ ಹೋರಿ ಜಗದೀಶ್ ನಾಗಪ್ಪ ಮಾಣೆಗರ ಎಂಬ ರೈತನಿಗೆ ಸೇರಿದ್ದು, ಅನೇಕ ಸ್ಪರ್ಧೆಗಳಲ್ಲಿ ತನ್ನ ಶೌರ್ಯವನ್ನು ತೋರಿಸಿ ಅಭಿಮಾನಿಗಳ ಹೃದಯ ಗೆದ್ದಿತ್ತು ಎನ್ನಲಾಗಿದೆ.
ಅತ್ತ ಕರ್ಜಗಿ ಗ್ರಾಮದ ಜನತೆ ಹಾಗೂ ಹೋರಿ ಅಭಿಮಾನಿಗಳಿಗೆ ಈ ಸುದ್ದಿ ದೊಡ್ಡ ಆಘಾತ ತಂದಿದೆ. 'ಅಭಿಮಾನಿಗಳ ಪೈಲ್ವಾನ್' ಎಂದು ಕರೆಯಲ್ಪಡುತ್ತಿದ್ದ ಈ ಹೋರಿ, ತನ್ನದೇ ಆದ ಶಕ್ತಿ ಮತ್ತು ಕೌಶಲ್ಯದಿಂದ ಹಲವಾರು ಸ್ಪರ್ಧೆಗಳಲ್ಲಿ ಜಯ ಗಳಿಸಿತ್ತು. ಮೂರು ಬೈಕ್, ಬೆಳ್ಳಿ ಗದೆ, ಟ್ರಜೂರಿ ಸೇರಿದಂತೆ ಅನೇಕ ಬಹುಮಾನಗಳನ್ನು ಗೆಲ್ಲುವ ಮೂಲಕ ಪಡೆದಿದ್ದ ಈ ಹೋರಿ, ರಾಜ್ಯಮಟ್ಟದಲ್ಲಿ ತನ್ನದೇ ಆದ ಹೆಸರು ಮಾಡಿತ್ತು.
ಹೋರಿ ಸಾವಿನ ಸುದ್ದಿ ತಿಳಿದ ಕೂಡಲೇ ಸಾವಿರಾರು ಅಭಿಮಾನಿಗಳು ಅಂತಿಮ ದರ್ಶನ ಪಡೆಯಲು ಗ್ರಾಮಕ್ಕೆ ಹರಿದು ಬಂದರು. ಹೋರಿ ತನ್ನ ಜೀವನದಲ್ಲಿ ತೋರಿದ ಶೌರ್ಯವನ್ನು ನೆನೆದು, ಅಭಿಮಾನಿಗಳು ಕಣ್ಣೀರಿನಿಂದ ವಿದಾಯ ಹೇಳಿದರು. ಗ್ರಾಮದಲ್ಲಿ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಸಿ, ಹೋರಿ ಅಂತಿಮ ಯಾತ್ರೆ ನಡೆಯಿತು.ಹೌದು ಮೆರವಣಿಗೆಯಲ್ಲಿ ಭಾಗವಹಿಸಿದ ಜನರು ಈ ಹೋರಿ ಸಾಧನೆಗಳನ್ನು ನೆನೆದು, "ಓಂ-112" ಹೆಸರಿನ ಹೋರಿ ಕೇವಲ ಒಂದು ಪ್ರಾಣಿ ಅಲ್ಲ, ನಮ್ಮ ಹಳ್ಳಿಯ ಗೌರವ" ಎಂದು ಭಾವುಕವಾಗಿ ಹೇಳಿದರು.
ಹೋರಿ ಮಾಲೀಕ ಜಗದೀಶ್ ನಾಗಪ್ಪ ಮಾಣೆಗರ ಕೂಡ ತಮ್ಮ ಹೃದಯದ ಮಾತು ಹಂಚಿಕೊಂಡು, "ನನ್ನ ಹೋರಿ ನನಗೆ ಮಗನಂತೆ. ಅವನನ್ನು ಕಳೆದುಕೊಂಡು ತುಂಬಾ ದುಃಖವಾಗಿದೆ" ಎಂದು ಕಣ್ಣೀರಿಟ್ಟರು. ಅಂತಿಮವಾಗಿ, ಹೋರಿ ಮಾಲೀಕನ ಜಮೀನಿನಲ್ಲಿ ಹೋರಿ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು. ಗ್ರಾಮಸ್ಥರು ಹಾಗೂ ಅಭಿಮಾನಿಗಳು ಹೂವುಗಳಿಂದ ಗೌರವ ಸಲ್ಲಿಸಿ, ಹೋರಿ ನೆನಪನ್ನು ಹೃದಯದಲ್ಲಿ ಉಳಿಸಿಕೊಂಡರು ಎಂದು ಹೇಳಬಹುದು. ಹಾವೇರಿ ಜಿಲ್ಲೆಯ ಕರ್ಜಗಿ ಗ್ರಾಮದಲ್ಲಿ ನಡೆದ ಈ ಘಟನೆ, ಹೋರಿ ಅಭಿಮಾನಿಗಳ ಮನಸ್ಸಿನಲ್ಲಿ ಭಾವುಕ ನೆನಪು ಮೂಡಿಸಿದೆ. "ಓಂ-112" ಕೊಬ್ಬರಿ ಹೋರಿ ತನ್ನ ಶೌರ್ಯದಿಂದ ಜನಮನ ಗೆದ್ದಿದಂತೆ, ತನ್ನ ಅಂತಿಮ ಯಾತ್ರೆಯಲ್ಲಿಯೂ ಜನರ ಹೃದಯದಲ್ಲಿ ಶಾಶ್ವತವಾಗಿ ಉಳಿಯಿತು ನೋಡಿ.