ಹಂಪಿ ಉತ್ಸವ 2026 – ವಿಜಯನಗರ ಸಾಮ್ರಾಜ್ಯದ ಗತವೈಭವದ ಅದ್ಧೂರಿ ಹಬ್ಬಕ್ಕೆ ಭರ್ಜರಿ ತಯಾರಿ!!

ಹಂಪಿ ಉತ್ಸವವು ವಿಜಯನಗರ ಸಾಮ್ರಾಜ್ಯದ ಗತವೈಭವ, ಕಲೆ ಮತ್ತು ಸಂಸ್ಕೃತಿಯನ್ನು ಅನಾವರಣಗೊಳಿಸುವ ವಿಶ್ವಪ್ರಸಿದ್ಧ ಸಾಂಸ್ಕೃತಿಕ ಹಬ್ಬವಾಗಿದೆ. ಹಂಪಿಯ ಐತಿಹಾಸಿಕ ಸ್ಮಾರಕಗಳ ನಡುವೆ ನಡೆಯುವ ಈ ಉತ್ಸವವು ಮೂರು ದಿನಗಳ ಅದ್ಧೂರಿ ಕಾರ್ಯಕ್ರಮವಾಗಿದ್ದು, ನೃತ್ಯ, ಸಂಗೀತ, ಜನಪದ ಕಲೆಗಳು ಮತ್ತು ಬೆಳಕು-ಶಬ್ದ ಪ್ರದರ್ಶನಗಳನ್ನು ಒಳಗೊಂಡಿದೆ. ಈ ಬಾರಿ ಹಂಪಿ ಉತ್ಸವವು 2026ರ ಫೆಬ್ರವರಿ 13ರಿಂದ 15ರವರೆಗೆ ನಡೆಯಲಿದೆ.

ಕರ್ನಾಟಕದ ಪರಂಪರೆಯನ್ನು ವಿಶ್ವದ ಮುಂದೆ ತೋರಿಸಲಿರುವ ಹಂಪಿ ಉತ್ಸವ 2026
ಕರ್ನಾಟಕದ ಪರಂಪರೆಯನ್ನು ವಿಶ್ವದ ಮುಂದೆ ತೋರಿಸಲಿರುವ ಹಂಪಿ ಉತ್ಸವ 2026

ವಿಜಯನಗರ ಸಾಮ್ರಾಜ್ಯದ ಶ್ರೀಮಂತ ಪರಂಪರೆಯನ್ನು ಸ್ಮರಿಸುವ ಈ ಹಬ್ಬವನ್ನು "ವಿಜಯೋತ್ಸವ" ಎಂದೂ ಕರೆಯಲಾಗುತ್ತದೆ. ಶಾಸ್ತ್ರೀಯ ಸಂಗೀತ, ಭರತನಾಟ್ಯ, ಜನಪದ ಕಲೆಗಳು ಹಾಗೂ ಅಂತರರಾಷ್ಟ್ರೀಯ ಮಟ್ಟದ ಕಲಾವಿದರಿಂದ ಪ್ರದರ್ಶನಗಳು ನಡೆಯಲಿವೆ. ಜೊತೆಗೆ ಸಾಹಸ ಕ್ರೀಡೆಗಳು, ಕುಸ್ತಿ ಪಂದ್ಯಾವಳಿ, ಎತ್ತಿನ ಬಂಡಿ ಮೇಳ, ಶ್ವಾನ ಸ್ಪರ್ಧೆ, ಫಲ-ಪುಷ್ಪ ಪ್ರದರ್ಶನ ಮತ್ತು ಆಹಾರ ಮೇಳಗಳು ಈ ಉತ್ಸವದ ವಿಶೇಷ ಆಕರ್ಷಣೆಗಳಾಗಿವೆ. ಹಂಪಿಯ ವಿರೂಪಾಕ್ಷೇಶ್ವರ ದೇವಾಲಯ, ಗಾಯತ್ರಿ ಪೀಠ ಮುಂತಾದ ಸ್ಮಾರಕಗಳಲ್ಲಿ ಅದ್ಧೂರಿ ವೇದಿಕೆಗಳನ್ನು ನಿರ್ಮಿಸಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ಕರ್ನಾಟಕದ ಇತಿಹಾಸ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುವುದರ ಜೊತೆಗೆ, ಜಾನಪದ ಕಲಾವಿದರಿಗೆ ವೇದಿಕೆ ಕಲ್ಪಿಸುವುದು ಈ ಉತ್ಸವದ ಪ್ರಮುಖ ಉದ್ದೇಶವಾಗಿದೆ. ಹಂಪಿ ಉತ್ಸವಕ್ಕೆ ತಾರಾ ಮೆರಗು ತರಲು ವಿಜಯನಗರ ಜಿಲ್ಲಾಡಳಿತವು ಕನ್ನಡದ ಪ್ರಮುಖ ನಟ-ನಟಿಯರಿಗೆ ಆಹ್ವಾನ ನೀಡಿದೆ. ಸ್ಯಾಂಡಲ್ವುಡ್‌ನ ಸ್ಟಾರ್ ನಟರಾದ ಶಿವರಾಜಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್, ಡಾಲಿ ಧನಂಜಯ, ಧ್ರುವ ಸರ್ಜಾ ಮತ್ತು ಝೈದ್ ಖಾನ್ ಅವರು ಆಗಮಿಸಲಿದ್ದಾರೆ. 

ನಟಿಯರಾದ ರಚಿತಾ ರಾಮ್, ಸಪ್ತಮಿ ಗೌಡ ಹಾಗೂ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೂ ಆಹ್ವಾನ ನೀಡಲಾಗಿದೆ. ಇದೇ ರೀತಿ, ಉತ್ಸವದಲ್ಲಿ ಸಂಗೀತ ಲೋಕದ ಗಣ್ಯರು ತಮ್ಮ ಕಲೆಯನ್ನು ಪ್ರದರ್ಶಿಸಲಿದ್ದಾರೆ. ಜನಪ್ರಿಯ ಗಾಯಕ ವಿಜಯ್ ಪ್ರಕಾಶ್, ಸಂಗೀತ ನಿರ್ದೇಶಕ ಅರ್ಜುನ ಜನ್ಯ, ರಘು ದೀಕ್ಷಿತ್, ನವೀನ್ ಸಜ್ಜು, ಕಾಲಿವುಡ್ ಗಾಯಕಿ ಮಂಗ್ಲಿ ಹಾಗೂ ಬಾಲಿವುಡ್ ಗಾಯಕ ಮನಿಕಾಂತ ಖಾದ್ರಿ ಅವರು ತಮ್ಮ ಗಾಯನದಿಂದ ಉತ್ಸವಕ್ಕೆ ಮೆರಗು ನೀಡಲಿದ್ದಾರೆ.

ಹಂಪಿ ಉತ್ಸವವು ಕಲೆ, ಸಂಸ್ಕೃತಿ, ಇತಿಹಾಸ ಮತ್ತು ತಾರಾ ಮೆರಗು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುವ ಮಹೋತ್ಸವ. ಮೂರು ದಿನಗಳ ಕಾಲ ನಡೆಯುವ ಈ ಹಬ್ಬವು ಕರ್ನಾಟಕದ ಪರಂಪರೆಯನ್ನು ವಿಶ್ವದ ಮುಂದೆ ತೋರಿಸುವುದರ ಜೊತೆಗೆ, ಕನ್ನಡ ಸಿನಿರಂಗ ಮತ್ತು ಸಂಗೀತ ಲೋಕದ ತಾರೆಯರ ಹಾಜರಾತಿಯಿಂದ ಇನ್ನಷ್ಟು ಅದ್ಧೂರಿಯಾಗಲಿದೆ. 

Latest News