Apr 11, 2026 Languages : ಕನ್ನಡ | English

ಬಿಜೆಪಿ ವಿರುದ್ಧ ಗರಂ ಆಗಿ ಕಾಂಗ್ರೆಸ್ ಸೇರಿದ್ದ ಸೆಜಲ್ ಗೋಹೇಲ್‌ - ದಿಢೀರ್ ವಾಪಸ್ ಬಂದಿದ್ದೇಕೆ? ಅಸಲಿ ಸತ್ಯ ಇಲ್ಲಿದೆ ನೋಡಿ!!

ಗುಜರಾತ್ ರಾಜಕಾರಣದಲ್ಲಿ ಸೋಮವಾರ ಒಂದು ವಿಚಿತ್ರ ನಾಟಕ ನಡೆಯಿತು. ವಾರ್ಡ್ ಸಂಖ್ಯೆ 3ರ ಬಿಜೆಪಿ ಕಾರ್ಪೊರೇಟರ್ ಸೆಜಲ್ ಗೋಹೇಲ್ ಅವರು ಮಾಡಿದ ಕೆಲಸಕ್ಕೆ ಇಡೀ ರಾಜ್ಯವೇ ಕಣ್ಣರಳಿಸಿ ನೋಡುವಂತಾಗಿದೆ. ಕೇವಲ ಮೂರೇ ಗಂಟೆಯಲ್ಲಿ ಅವರು ಅತ್ತ ಕಾಂಗ್ರೆಸ್‌ಗೆ ಹೋಗಿ, ಇತ್ತ ವಾಪಸ್ ಬಿಜೆಪಿಗೆ ಬಂದು 'ಯು-ಟರ್ನ್' ಹೊಡೆದಿದ್ದಾರೆ.

ಬೆಳಗ್ಗೆ ಕಾಂಗ್ರೆಸ್, ಮಧ್ಯಾಹ್ನ ಬಿಜೆಪಿ! 3 ಗಂಟೆಯಲ್ಲಿ ಯು-ಟರ್ನ್ ಹೊಡೆದ ಕಾರ್ಪೊರೇಟರ್ ಸೆಜಲ್ ಗೋಹೇಲ್
ಬೆಳಗ್ಗೆ ಕಾಂಗ್ರೆಸ್, ಮಧ್ಯಾಹ್ನ ಬಿಜೆಪಿ! 3 ಗಂಟೆಯಲ್ಲಿ ಯು-ಟರ್ನ್ ಹೊಡೆದ ಕಾರ್ಪೊರೇಟರ್ ಸೆಜಲ್ ಗೋಹೇಲ್

ಬೆಳಗ್ಗೆ ಕಾಂಗ್ರೆಸ್ ಶೋ!

ಕಾರ್ಪೊರೇಟರ್ ಸೆಜಲ್ ಗೋಹೇಲ್ ಸೋಮವಾರ ಬೆಳಗ್ಗೆ ದಿಢೀರನೆ ಬಿಜೆಪಿಗೆ ಗುಡ್‌ಬೈ ಹೇಳಿ ಸಂಚಲನ ಮೂಡಿಸಿದ್ದರು. ಅಷ್ಟೇ ಅಲ್ಲ, ಬಿಜೆಪಿ ವಿರುದ್ಧ ಸಖತ್ ಗರಂ ಆಗಿದ್ದರು. "ಬಿಜೆಪಿಯಲ್ಲಿ ದಲಿತರಿಗೆ ಬೆಲೆಯೇ ಇಲ್ಲ. ಅಕ್ರಮ ಮದ್ಯದ ವಿರುದ್ಧ ಧ್ವನಿ ಎತ್ತಿದ್ದಕ್ಕೆ ನನ್ನ ಪತಿಯ ಮೇಲೆ ಹಲ್ಲೆಯಾಯಿತು, ಆದರೂ ಪಕ್ಷ ನನ್ನ ಕೈ ಹಿಡಿಯಲಿಲ್ಲ" ಎಂದು ಆರೋಪಗಳ ಸುರಿಮಳೆಯನ್ನೇ ಗೈದಿದ್ದರು. ಆಮೇಲೆ ತಡಮಾಡದೆ ಕೈ (ಕಾಂಗ್ರೆಸ್) ನಾಯಕರ ಸಮ್ಮುಖದಲ್ಲಿ ಕಾಂಗ್ರೆಸ್ ಶಾಲು ಹೊದ್ದುಕೊಂಡರು.

ಸೆಜಲ್ ಬಂದಿದ್ದರಿಂದ ಇತ್ತ ಕಾಂಗ್ರೆಸ್ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿತ್ತು. ಇನ್ನು ಬಿಜೆಪಿಯ ಕಥೆ ಮುಗಿಯಿತು ಅಂದುಕೊಳ್ಳುವಷ್ಟರಲ್ಲಿ ಟ್ವಿಸ್ಟ್ ಸಿಕ್ಕಿದೆ. ಕಾಂಗ್ರೆಸ್ ಸೇರಿದ ಮೂರೇ ಗಂಟೆಯಲ್ಲಿ ಸೆಜಲ್ ಅವರು ಮತ್ತೆ ಬಿಜೆಪಿ ಕಚೇರಿಯಲ್ಲಿ ಕಾಣಿಸಿಕೊಂಡರು! ಎಲ್ಲರೂ ಶಾಕ್ ಆಗಿ ನೋಡುತ್ತಿರುವಾಗಲೇ ಮೈಕ್ ಹಿಡಿದ ಸೆಜಲ್, "ನನ್ನನ್ನು ಕಾಂಗ್ರೆಸ್‌ನವರು ದಾರಿ ತಪ್ಪಿಸಿದ್ದರು. ಅವರು ಹೇಳಿಕೊಟ್ಟಂತೆ ಸುಳ್ಳು ಆರೋಪ ಮಾಡಿದೆ. ಈಗ ನನ್ನ ತಪ್ಪಿನ ಅರಿವಾಗಿದೆ, ಸಾಯುವವರೆಗೂ ನಾನು ಬಿಜೆಪಿಯಲ್ಲೇ ಇರುತ್ತೇನೆ" ಎಂದು ಹೇಳಿ ಎಲ್ಲರಿಗೂ ಶಾಕ್ ಕೊಟ್ಟರು.

ನೆಟ್ಟಿಗರ ಕಿಚಾಯಿಸುವಿಕೆ

  • ಈ ನಾಟಕ ನೋಡಿ ಸುಮ್ಮನಿರದ ಸೋಶಿಯಲ್ ಮೀಡಿಯಾ ಮಂದಿ ಮಸ್ತ್ ಕಾಮೆಂಟ್ ಮಾಡುತ್ತಿದ್ದಾರೆ:
  • "ಬಹುಶಃ 3 ಗಂಟೆಯಲ್ಲಿ ಇಡಿಯಿಂದ ಫೋನ್ ಬಂದಿರಬೇಕು!"
  • "ಇದು ವಿಶ್ವದ ಅತಿ ವೇಗದ ರಾಜಕೀಯ ಪಕ್ಷಾಂತರ!"
  • "ಬೆಳಗ್ಗೆ ಹೋಗಿ ಮಧ್ಯಾಹ್ನ ಲಂಚ್‌ಗೆ ವಾಪಸ್ ಬಂದರಲ್ಲಪ್ಪಾ!" ಎಂದು ಕಾಲೆಳೆದಿದ್ದಾರೆ.

ಕಾಂಗ್ರೆಸ್ ಆಕ್ರೋಶ

ಕಾಂಗ್ರೆಸ್ ನಾಯಕ ಮನೋಹರಸಿಂಹ ಗೋಹಿಲ್ ಈ ಬಗ್ಗೆ ಕೆಂಡಾಮಂಡಲವಾಗಿದ್ದಾರೆ. "ನಾವು ಯಾರನ್ನೂ ಬಲವಂತವಾಗಿ ಕರೆತಂದಿಲ್ಲ, ಅವರೇ ಬಂದಿದ್ದರು. ಆದರೆ ಮೂರೇ ಗಂಟೆಯಲ್ಲಿ ಅವರ ಮನಸ್ಸು ಬದಲಾಗಿದೆ ಅಂದರೆ ಇದರ ಹಿಂದೆ ಬಿಜೆಪಿಯ ದೊಡ್ಡ ಮಟ್ಟದ ಬೆದರಿಕೆ ತಂತ್ರ ಕೆಲಸ ಮಾಡಿದೆ" ಎಂದು ಆಕ್ರೋಶ ಹೊರಹಾಕಿದ್ದಾರೆ.