ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ಅಭಾವವಿದೆ ಎಂಬ ಸಾರ್ವಜನಿಕರ ಆತಂಕ ಮತ್ತು ವಿರೋಧ ಪಕ್ಷಗಳ ಟೀಕೆಗಳಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ತೆರೆ ಎಳೆದಿದ್ದಾರೆ. ಮಂಗಳವಾರ ವಿಧಾನ ಪರಿಷತ್ತಿನಲ್ಲಿ ನಡೆದ ಸುದೀರ್ಘ ಚರ್ಚೆಯ ವೇಳೆ ಮಾತನಾಡಿದ ಅವರು, ರಾಜ್ಯದ ಯಾವುದೇ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆಯಿಲ್ಲ ಮತ್ತು ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದು ವಿವರಿಸಿದರು. ಸಣ್ಣಪುಟ್ಟ ಕಾಯಿಲೆಗಳಾದ ಶೀತ, ಕೆಮ್ಮು ಮತ್ತು ಸಾಮಾನ್ಯ ಸೋಂಕು ನಿವಾರಕ ಔಷಧಗಳೂ ಲಭ್ಯವಿಲ್ಲ ಎಂಬ ವಿರೋಧ ಪಕ್ಷದ ಸದಸ್ಯರ ಆರೋಪಗಳನ್ನು ಸಚಿವರು ಈ ವೇಳೆ ತಳ್ಳಿಹಾಕಿದರು.
ಔಷಧಗಳ ವಿತರಣೆಯಲ್ಲಿ ವಿಳಂಬವಾಗುವುದನ್ನು ತಡೆಯಲು ಖರೀದಿ ಪ್ರಕ್ರಿಯೆಯನ್ನು ಈಗ ಸರಳಗೊಳಿಸಲಾಗಿದೆ. ಒಟ್ಟು ಅಗತ್ಯವಿರುವ ಔಷಧಿಗಳಲ್ಲಿ ಶೇ. 80ರಷ್ಟನ್ನು ಸರ್ಕಾರವೇ ನೇರವಾಗಿ ಟೆಂಡರ್ ಮೂಲಕ ಖರೀದಿ ಮಾಡುತ್ತಿದೆ. ಇನ್ನುಳಿದ ಶೇ. 20ರಷ್ಟು ತುರ್ತು ಔಷಧಿಗಳನ್ನು ಸ್ಥಳೀಯವಾಗಿ ಖರೀದಿಸಲು ಆಯಾ ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯವಿರುವ ಅನುದಾನವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಇದರಿಂದಾಗಿ ಸ್ಥಳೀಯ ಮಟ್ಟದಲ್ಲಿ ಯಾವುದೇ ಔಷಧದ ತುರ್ತು ಅಗತ್ಯವಿದ್ದಲ್ಲಿ ಆಸ್ಪತ್ರೆಗಳೇ ತಕ್ಷಣ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಚರ್ಚೆಯ ವೇಳೆ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ರೇಬೀಸ್ ಲಸಿಕೆಯ ಖರೀದಿ ದರದಲ್ಲಿನ ವ್ಯತ್ಯಾಸವನ್ನು ಪ್ರಸ್ತಾಪಿಸಿದರು. ಇತರ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಹೆಚ್ಚಿನ ದರಕ್ಕೆ ಲಸಿಕೆ ಖರೀದಿಸಲಾಗುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಹಿಂದೆ ಖರೀದಿ ಪ್ರಕ್ರಿಯೆಯಲ್ಲಿ ಕೆಲವು ಲೋಪದೋಷಗಳು ನಡೆದಿರುವುದನ್ನು ಮುಕ್ತವಾಗಿ ಒಪ್ಪಿಕೊಂಡರು. ಆದರೆ, ಅಂತಹ ಅಕ್ರಮಗಳನ್ನು ಈಗಾಗಲೇ ಗುರುತಿಸಿ ಸರಿಪಡಿಸಲಾಗಿದೆ ಮತ್ತು ಪಾರದರ್ಶಕತೆಯನ್ನು ತರಲು ಕಟ್ಟುನಿಟ್ಟಿನ ಕ್ರಮ ಜಾರಿಗೆ ತರಲಾಗಿದೆ ಎಂದು ಭರವಸೆ ನೀಡಿದರು.
ಔಷಧಗಳ ಗುಣಮಟ್ಟವನ್ನು ಕಾಪಾಡಿಕೊಳ್ಳಲು 'ವೇರ್‌ಹೌಸ್ ಕ್ವಾರಂಟೈನ್' ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಸುಮಾರು 270 ಕೋಟಿ ರೂಪಾಯಿ ಮೌಲ್ಯದ ಔಷಧಗಳನ್ನು ಖರೀದಿಸಲಾಗಿದ್ದು, ಅವುಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿ ಗುಣಮಟ್ಟ ಖಚಿತಪಡಿಸಿಕೊಂಡ ನಂತರವೇ ಆಸ್ಪತ್ರೆಗಳಿಗೆ ವಿತರಿಸಲಾಗುತ್ತಿದೆ. ಅಲ್ಲದೆ, ಔಷಧಗಳ ಅವಧಿ ಮುಗಿಯುವ (Expiry) ಸಮಸ್ಯೆಯನ್ನು ತಪ್ಪಿಸಲು ವಾರ್ಷಿಕ ಖರೀದಿ ಬದಲಿಗೆ ಪ್ರತಿ ಮೂರು ತಿಂಗಳಿಗೊಮ್ಮೆ (ತ್ರೈಮಾಸಿಕ) ಪೂರೈಕೆ ಮಾಡುವ ಹೊಸ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದೆ. ಹೆಚ್ಚಿನ ಕಂಪನಿಗಳು ಟೆಂಡರ್‌ನಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಹಳೆಯ ಕಠಿಣ ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಈ ಎಲ್ಲ ಬದಲಾವಣೆಗಳು ರಾಜ್ಯದ ಆರೋಗ್ಯ ವ್ಯವಸ್ಥೆಯನ್ನು ಇನ್ನಷ್ಟು ಜನಸ್ನೇಹಿಯಾಗಿಸಲಿವೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.