ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ವರುಣನ ಅಬ್ಬರ ಜೋರಾಗಿದ್ದು, ಕೇವಲ ಒಂದೇ ಒಂದು ದಿನದ ಭಾರಿ ಮಳೆಗೆ ಪ್ರಸಿದ್ಧ ಪುಣ್ಯಕ್ಷೇತ್ರ ಗೋಕರ್ಣ ಜಲಾವೃತಗೊಂಡಿದೆ. ಇತಿಹಾಸ ಪ್ರಸಿದ್ಧ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಸ್ಥಾನದ ಗರ್ಭಗುಡಿಯೊಳಗೆ ಮಳೆ ನೀರು ನುಗ್ಗಿದ್ದು, ಇಡೀ ದೇವಸ್ಥಾನದ ಆವರಣ ಕೆರೆಯಂತಾಗಿದೆ. ಈ ಹಠಾತ್ ಪ್ರವಾಹದ ಪರಿಸ್ಥಿತಿಯಿಂದಾಗಿ ದೇವಸ್ಥಾನಕ್ಕೆ ಆಗಮಿಸುವ ದೇಶ-ವಿದೇಶಗಳ ಭಕ್ತರ ದರ್ಶನಕ್ಕೆ ಭಾರಿ ಹಿನ್ನಡೆಯಾಗಿದ್ದು, ಪವಿತ್ರ ಆತ್ಮಲಿಂಗ ದರ್ಶನ ಮತ್ತು ಪೂಜಾ ಕಾರ್ಯಗಳಿಗೆ ತೀವ್ರ ಅಡಚಣೆ ಉಂಟಾಗಿದೆ.
ಆತ್ಮಲಿಂಗ ಸ್ಪರ್ಶ ದರ್ಶನಕ್ಕೆ ನಿರ್ಬಂಧ
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದಲ್ಲಿ ಸುರಿದ ಧಾರಾಕಾರ ಮಳೆಗೆ ಇಡೀ ದೇವಸ್ಥಾನದ ಆವರಣ ನೀರಿನಿಂದ ತುಂಬಿಹೋಗಿದೆ. ಅತ್ಯಂತ ಪವಿತ್ರವಾದ ಮಹಾಬಲೇಶ್ವರ ದೇವರ ಗರ್ಭಗುಡಿಯೊಳಗೆ ನೀರು ನುಗ್ಗಿದ ಕಾರಣ, ಭಕ್ತರ ಸುರಕ್ಷತೆಯ ದೃಷ್ಟಿಯಿಂದ ಶ್ರೀ ಕ್ಷೇತ್ರದ ಪ್ರಮುಖ ಆಕರ್ಷಣೆಯಾದ 'ಆತ್ಮಲಿಂಗ ಸ್ಪರ್ಶ ದರ್ಶನ'ವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಗರ್ಭಗುಡಿಯ ಸುತ್ತಲೂ ನೀರು ನಿಂತಿರುವುದರಿಂದ ಭಕ್ತರು ಒಳಗೆ ಹೋಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ಮಹಾಪೂಜೆಗೂ ವಿಘ್ನ ತಂದ ಮಳೆ ನೀರು
ಶ್ರೀ ಕ್ಷೇತ್ರದಲ್ಲಿ ಪ್ರತಿದಿನ ಮಧ್ಯಾಹ್ನ ನಿಖರವಾಗಿ ೧೨:೩೦ ಕ್ಕೆ ಪರಶಿವನ ಆತ್ಮಲಿಂಗಕ್ಕೆ ಅತ್ಯಂತ ಶ್ರದ್ಧಾಭಕ್ತಿಗಳಿಂದ ಮಹಾಪೂಜೆಯನ್ನು ನೆರವೇರಿಸಲಾಗುತ್ತದೆ. ಈ ಪೂಜೆಯನ್ನು ಕಣ್ಣಾರೆ ಕಣ್ತುಂಬಿಕೊಳ್ಳಲು ನಿತ್ಯ ಸಾವಿರಾರು ಭಕ್ತರು ಸಾಲಿನಲ್ಲಿ ನಿಲ್ಲುತ್ತಾರೆ. ಆದರೆ, ಗರ್ಭಗುಡಿಯೊಳಗೆ ಮೊಣಕಾಲುದ್ದ ನೀರು ನಿಂತಿದ್ದರಿಂದ ಇತಿಹಾಸದಲ್ಲೇ ಅಪರೂಪ ಎನ್ನುವಂತೆ ನಿಗದಿತ ಸಮಯಕ್ಕೆ ಮಧ್ಯಾಹ್ನದ ಮಹಾಪೂಜೆಯನ್ನು ಮಾಡಲು ಸಾಧ್ಯವಾಗದಷ್ಟು ಗಂಭೀರ ಸಮಸ್ಯೆ ಎದುರಾಯಿತು. ಅರ್ಚಕರು ಮತ್ತು ದೇವಸ್ಥಾನದ ಸಿಬ್ಬಂದಿ ಗರ್ಭಗುಡಿಯಿಂದ ನೀರನ್ನು ಹೊರಹಾಕಲು ಹರಸಾಹಸ ಪಡಬೇಕಾಯಿತು.
ಹಳ್ಳದಂತಾದ ಗೋಕರ್ಣದ ಬೀದಿಗಳು
ಕೇವಲ ದೇವಸ್ಥಾನ ಮಾತ್ರವಲ್ಲದೆ, ಇಡೀ ಗೋಕರ್ಣ ಪಟ್ಟಣವೇ ಮಳೆ ನೀರಿಗೆ ತತ್ತರಿಸಿಹೋಗಿದೆ. ಗೋಕರ್ಣದ ಪ್ರಮುಖ ರಸ್ತೆಗಳು, ಮಾರುಕಟ್ಟೆ ಮತ್ತು ರಥಬೀದಿಗಳು ಸಂಪೂರ್ಣವಾಗಿ ಜಲಾವೃತಗೊಂಡು ಹಳ್ಳದಂತಾಗಿ ಮಾರ್ಪಟ್ಟಿವೆ. ಕರಾವಳಿಯ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಧಾರ್ಮಿಕ ಕ್ಷೇತ್ರವಾಗಿರುವುದರಿಂದ ಮಳೆಯ ನಡುವೆಯೂ ಸಾವಿರಾರು ಪ್ರವಾಸಿಗರು ಮತ್ತು ಭಕ್ತರು ಇಲ್ಲಿಗೆ ಆಗಮಿಸಿದ್ದರು. ಆದರೆ, ರಸ್ತೆಗಳ ಮೇಲೆ ಮೂರು ಅಡಿಗೂ ಹೆಚ್ಚು ನೀರು ಹರಿಯುತ್ತಿರುವುದರಿಂದ ಸಾರ್ವಜನಿಕರು ಮತ್ತು ಪ್ರವಾಸಿಗರು ನಡೆದಾಡಲೂ ಸಾಧ್ಯವಾಗದೆ ಭಾರಿ ಕಿರಿಕಿರಿ ಅನುಭವಿಸುವಂತಾಯಿತು. ವಾಹನ ಸಂಚಾರವೂ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.
ಸ್ಥಳೀಯ ಆಡಳಿತದ ನಿರ್ಲಕ್ಷ್ಯವೇ ಕಾರಣ
ಕೇವಲ ಒಂದು ದಿನ ಸುರಿದ ಮಳೆಗೆ ಇಷ್ಟೊಂದು ದೊಡ್ಡ ಮಟ್ಟದ ಅವಾಂತರ ಸೃಷ್ಟಿಯಾಗಲು ಸ್ಥಳೀಯ ಗ್ರಾಮ ಪಂಚಾಯತ್ ಹಾಗೂ ಆಡಳಿತ ಮಂಡಳಿಯ ಸಂಪೂರ್ಣ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಮತ್ತು ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮುಂಗಾರು ಮಳೆ ಆರಂಭವಾಗುವ ಮುನ್ನವೇ ಪಟ್ಟಣದ ರಾಜಕಾಲುವೆ ಹಾಗೂ ಚರಂಡಿಗಳಲ್ಲಿ ತುಂಬಿಕೊಂಡಿದ್ದ ಕಸ ಮತ್ತು ಹೂಳನ್ನು ತೆಗೆಯಬೇಕಾಗಿತ್ತು. ಆದರೆ, ಆಡಳಿತ ಮಂಡಳಿಯು ಚರಂಡಿ ಸ್ವಚ್ಛಗೊಳಿಸುವ ಕನಿಷ್ಠ ಜವಾಬ್ದಾರಿಯನ್ನೂ ನಿಭಾಯಿಸದ ಕಾರಣ, ಮಳೆ ನೀರು ಸರಾಗವಾಗಿ ಹರಿದು ಹೋಗಲು ಜಾಗವಿಲ್ಲದೆ ನೇರವಾಗಿ ರಸ್ತೆಗಳಿಗೆ ಮತ್ತು ದೇವಸ್ಥಾನದ ಆವರಣಕ್ಕೆ ನುಗ್ಗಿದೆ.
ಕೋಟಿ ತೀರ್ಥ ಮತ್ತು ಸುತ್ತಮುತ್ತಲಿನ ಪರಿಸರದಿಂದ ಹರಿದು ಬರುವ ನೀರು ಸಮುದ್ರ ಸೇರಲು ಇರುವ ಚರಂಡಿ ಮಾರ್ಗಗಳು ಬ್ಲಾಕ್ ಆಗಿರುವುದು ಈ ಪ್ರವಾಹ ಸದೃಶ ಪರಿಸ್ಥಿತಿಗೆ ಕಾರಣವಾಗಿದೆ. ರಾಷ್ಟ್ರ ಮಟ್ಟದ ಧಾರ್ಮಿಕ ಕೇಂದ್ರವೊಂದರಲ್ಲಿ ಇಂತಹ ಮೂಲಸೌಕರ್ಯದ ಕೊರತೆ ಇರುವುದು ನಿಜಕ್ಕೂ ನಾಚಿಕೆಗೇಡು ಎಂದು ಪ್ರವಾಸಿಗರು ಆಡಳಿತದ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ತಕ್ಷಣವೇ ಹೂಳು ತೆಗೆದು, ನೀರು ಸರಾಗವಾಗಿ ಹರಿದು ಹೋಗಲು ಶಾಶ್ವತ ವ್ಯವಸ್ಥೆ ಕಲ್ಪಿಸಬೇಕಿದೆ. ಇಲ್ದಿದ್ದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗುವ ಸಾಧ್ಯತೆ ಇದೆ.