ಪ್ರೇಯಸಿಯ ವ್ಯಾಮೋಹಕ್ಕೆ ಬಲಿಯಾದ ಪತ್ನಿ - ಇಲಿ ಪಾಷಾಣ ಕುಡಿಸಿ, ಅಪಘಾತವೆಂದು ಬಿಂಬಿಸಿ ಕೊ*ಲೆಗೈದ ಪಾಪಿ ಪತಿ!!

ಜಿಲ್ಲೆಯ ಗೋಕಾಕ ತಾಲೂಕಿನ ಶಿಂದಿಕುರಬೇಟ ಗ್ರಾಮದಲ್ಲಿ ನಡೆದ ಹೃದಯವಿದ್ರಾವಕ ಕೃತ್ಯವೊಂದು ಬೆಳಕಿಗೆ ಬಂದಿದೆ. ವಿಧವೆಯೊಬ್ಬಳ ಪ್ರೇಮದ ಬಲೆಯಲ್ಲಿ ಬಿದ್ದ ವ್ಯಕ್ತಿಯೊಬ್ಬ, ತನ್ನ ಪತ್ನಿಯನ್ನೇ ಕೊಲೆಗೈದು, ಅದನ್ನು ಅಪಘಾತವೆಂದು ಬಿಂಬಿಸಲು ಯತ್ನಿಸಿದ ಘಟನೆ ಸಮಾಜವನ್ನೇ ಬೆಚ್ಚಿಬೀಳಿಸಿದೆ.

ಪತ್ನಿಯನ್ನೇ ಕಟುಕನಂತೆ ಕೊಂದ ಗೋಕಾಕ ಪತಿಯ ಕ್ರೌರ್ಯ
ಪತ್ನಿಯನ್ನೇ ಕಟುಕನಂತೆ ಕೊಂದ ಗೋಕಾಕ ಪತಿಯ ಕ್ರೌರ್ಯ

ಮೃತ ಮಹಿಳೆಯನ್ನು ಶಿಂದಿಕುರಬೇಟ ಗ್ರಾಮದ ಸಕ್ಕುಬಾಯಿ ಪಟಾಯತ್ (32) ಎಂದು ಗುರುತಿಸಲಾಗಿದೆ. ಈಕೆಯ ಪತಿ ಸಂತೋಷ ಪಟಾಯತ್ ಎಂಬಾತನೇ ಈ ಕೃತ್ಯದ ಆರೋಪಿ. ಕಳೆದ 9 ವರ್ಷಗಳ ಹಿಂದೆ ಧಾರವಾಡ ತಾಲೂಕಿನ ಕಲ್ಲೂರ ಗ್ರಾಮದ ಸಕ್ಕುಬಾಯಿಯೊಂದಿಗೆ ಸಂತೋಷನ ವಿವಾಹವಾಗಿತ್ತು. ದಂಪತಿಗೆ ಸಂಸಾರ ಸುಗಮವಾಗಿ ಸಾಗುತ್ತಿದ್ದರೂ, ಆರೋಪಿ ಸಂತೋಷ ಕಳೆದ ನಾಲ್ಕು ವರ್ಷಗಳಿಂದ ತನ್ನದೇ ಗ್ರಾಮದ ವಿಧವೆಯೊಬ್ಬಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನು. ಆ ವಿಧವೆಯೊಂದಿಗೆ ಉಳಿದ ಜೀವನ ಕಳೆಯಲು ಅಡ್ಡಿಯಾಗಿದ್ದ ಪತ್ನಿಯನ್ನೇ ಮುಗಿಸಲು ಸಂತೋಷ ಸಂಚು ರೂಪಿಸಿದ್ದನು.

ದೇವಸ್ಥಾನಕ್ಕೆ ಕರೆದೊಯ್ದು ಕೃತ್ಯ ಎಸಗಿದ ಕಿರಾತಕ

ಅಧಿಕ ಮಾಸದ ನೆಪವೊಡ್ಡಿ, ತನ್ನ ಪತ್ನಿ ಸಕ್ಕುಬಾಯಿಯನ್ನು ಬೈಲಹೊಂಗಲ ತಾಲೂಕಿನ ಮರುಕುಂಬಿ ಗ್ರಾಮದಲ್ಲಿರುವ ಚಾಮುಂಡೇಶ್ವರಿ ದೇಗುಲಕ್ಕೆ ಕರೆದೊಯ್ದಿದ್ದನು. ದರ್ಶನ ಮುಗಿಸಿ ವಾಪಸ್ ಬರುವ ದಾರಿಯಲ್ಲಿ, 'ದೇವಿ ಪ್ರಸಾದ' ಎಂದು ನಂಬಿಸಿ ತಂಪುಪಾನೀಯದಲ್ಲಿ ಇಲಿ ಪಾಷಾಣ (ವಿಷ) ಮತ್ತು ಬಳೆ ಚೂರುಗಳನ್ನು ಬೆರೆಸಿ ಸಕ್ಕುಬಾಯಿಗೆ ಕುಡಿಸಿದ್ದನು.

ವಿಷ ಸೇವಿಸಿದ ಕೆಲವೇ ನಿಮಿಷಗಳಲ್ಲಿ ಸಕ್ಕುಬಾಯಿ ಪ್ರಜ್ಞೆ ತಪ್ಪಿದ್ದಾಳೆ. ಆಗ ನಡುರಸ್ತೆಯಲ್ಲೇ ಆಕೆಯ ಕುತ್ತಿಗೆ ಹಿಸುಕಿ ಸಾಯಿಸಿದ ಸಂತೋಷ, ನಂತರ ಕೊ*ಲೆಯನ್ನೇ ಅಪಘಾತವೆಂದು ಬಿಂಬಿಸಲು ಪತ್ನಿಯ ಮೃತದೇಹದ ಮೇಲೆ ಬೈಕ್ ಎತ್ತಿಹಾಕಿದ್ದಾನೆ. ತಾನು ಕೂಡ ಗಾಯಗೊಂಡವನಂತೆ ನಟಿಸುತ್ತಾ, ಸುಮಾರು ಎರಡು-ಮೂರು ಗಂಟೆಗಳ ಕಾಲ ರಸ್ತೆ ಪಕ್ಕವೇ ಬಿದ್ದು ಹೈಡ್ರಾಮಾ ಮಾಡಿದ್ದನು. ಯಾರೂ ಗಮನಿಸಿಲ್ಲ ಎಂದು ಖಚಿತಪಡಿಸಿಕೊಂಡ ನಂತರ, ತಾನೇ ಸ್ವತಃ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ಅಪಘಾತವಾಗಿದೆ ಎಂದು ಸುಳ್ಳು ಮಾಹಿತಿ ನೀಡಿದ್ದನು.

ಮರಣೋತ್ತರ ಪರೀಕ್ಷೆಯಲ್ಲಿ ಬಯಲಾದ ಸತ್ಯ

ಪೊಲೀಸರು ಸ್ಥಳಕ್ಕೆ ಆಗಮಿಸಿ ಸಕ್ಕುಬಾಯಿ ಮೃತದೇಹವನ್ನು ಪರಿಶೀಲಿಸಿದಾಗ, ಅವರಿಗೆ ಅನುಮಾನ ಮೂಡಿದೆ. ತಕ್ಷಣವೇ ಮೃತದೇಹವನ್ನು ಬೆಳಗಾವಿಯ ಬೀಮ್ಸ್ (BIMS) ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಲ್ಲಿ ಇದು ಅಪಘಾತವಲ್ಲ, ಕತ್ತು ಹಿಸುಕಿ ಮತ್ತು ವಿಷ ಉಣಿಸಿ ಮಾಡಿದ ಕೊಲೆ ಎಂದು ಸಾಬೀತಾಗಿದೆ.

ತಕ್ಷಣವೇ ಎಚ್ಚೆತ್ತ ಗೋಕಾಕ ಗ್ರಾಮೀಣ ಪೊಲೀಸರು, ಆರೋಪಿ ಸಂತೋಷನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದರು. ಕಠಿಣ ವಿಚಾರಣೆಯ ಮುಂದೆ ಸತ್ಯ ಬಾಯ್ಬಿಟ್ಟ ಸಂತೋಷ, ಪ್ರೇಯಸಿಯೊಂದಿಗೆ ಸುಖವಾಗಿ ಜೀವನ ಕಳೆಯಲು ಪತ್ನಿಯನ್ನು ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಈ ಕೃತ್ಯಕ್ಕೆ ಸಂಬಂಧಿಸಿದಂತೆ ಸಂತೋಷನನ್ನು ಹಿಂಡಲಗಾ ಜೈಲಿಗೆ ಕಳುಹಿಸಲಾಗಿದೆ.

ಈ ಭೀಕರ ಕೊಲೆಯಲ್ಲಿ ಆರೋಪಿ ಸಂತೋಷನ ಪ್ರೇಯಸಿಯ ಪಾತ್ರ ಇದೆಯೇ ಅಥವಾ ಆಕೆಯ ಪ್ರಚೋದನೆ ಮೇರೆಗೆ ಈ ಕೃತ್ಯ ನಡೆದಿದೆಯೇ ಎಂಬ ಬಗ್ಗೆ ಗೋಕಾಕ ಗ್ರಾಮೀಣ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಘಟನೆಯ ಗಂಭೀರತೆಯನ್ನು ಪರಿಗಣಿಸಿ, ಸಮಗ್ರ ತನಿಖೆಗೆ ಆದೇಶಿಸಿದ್ದಾರೆ.

ಮದುವೆಯಾದ 9 ವರ್ಷಗಳ ನಂತರ ಇಂತಹ ಅಮಾನವೀಯ ಕೃತ್ಯ ನಡೆದಿದ್ದು, ಪತ್ನಿಯ ಕುತ್ತಿಗೆ ಹಿಸುಕಿ, ಅಪಘಾತ ಎಂದು ನಾಟಕವಾಡಿದ ಪತಿಯ ಕ್ರೌರ್ಯ ಕಂಡು ಸ್ಥಳೀಯರು ಆಘಾತಕ್ಕೀಡಾಗಿದ್ದಾರೆ. ಸಕ್ಕುಬಾಯಿಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಆರೋಪಿಗೆ ಕಠಿಣ ಶಿಕ್ಷೆಯಾಗಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Latest News