ವೇಗಕ್ಕೆ ಬಲಿಯಾದ 19ರ ಯುವತಿ - ಹೆಲ್ಮೆಟ್ ಇಲ್ಲದ 'ಜೋಶ್' ತಂದೊಡ್ಡಿತು ದೊಡ್ಡ ಅನಾಹುತ; ಭಯಾನಕ ವಿಡಿಯೋ ವೈರಲ್!!

ಇತ್ತೀಚಿನ ದಿನಗಳಲ್ಲಿ ಯುವಜನತೆಗೆ ಬೈಕ್ ಮೇಲೆ ವೇಗವಾಗಿ ಸವಾರಿ ಮಾಡುವುದು ಒಂದು ದೊಡ್ಡ ಕ್ರೇಜ್ ಆಗಿಬಿಟ್ಟಿದೆ. ಆದರೆ ಆ ಕ್ಷಣದ ಮೋಜು ಇಡೀ ಬದುಕನ್ನೇ ಕಿತ್ತುಕೊಳ್ಳಬಹುದು ಎಂಬುದಕ್ಕೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದ ಈ ಘಟನೆ ಒಂದು ಕರಾಳ ಸಾಕ್ಷಿ. ದೆಹಲಿ ಪೊಲೀಸ್ ಸೇರಬೇಕೆಂಬ ಕನಸು ಕಂಡಿದ್ದ 19 ವರ್ಷದ ಇಕ್ರಾ ಎಂಬ ಯುವತಿ, ಒಂದು ಸಣ್ಣ ನಿರ್ಲಕ್ಷ್ಯದಿಂದಾಗಿ ಇಂದು ಹೆ*ಣವಾಗಿ ಮಲಗಿದ್ದಾಳೆ.

ಬೈಕ್ ಸವಾರಿ ಮೋಜು ಅಲ್ಲ, ಜೀವದ ಅಪಾಯ; | Photo Credit: https://x.com/HateDetectors
ಬೈಕ್ ಸವಾರಿ ಮೋಜು ಅಲ್ಲ, ಜೀವದ ಅಪಾಯ; | Photo Credit: https://x.com/HateDetectors

ಗಾಜಿಯಾಬಾದ್‌ನ ಪಸೊಂಡಾ ನಿವಾಸಿಯಾದ ಇಕ್ರಾ, 12ನೇ ತರಗತಿ ಮುಗಿಸಿ ಪೊಲೀಸ್ ಕೆಲಸಕ್ಕೆ ಸೇರಲು ಸಿದ್ಧತೆ ನಡೆಸುತ್ತಿದ್ದಳು. ಅಂದು ತನ್ನ ಸ್ನೇಹಿತ ಹಶೀಮ್ ಜೊತೆ ಬೈಕ್‌ನಲ್ಲಿ ಹೊರಟಿದ್ದ ಇಕ್ರಾಳಿಗೆ ತಾನು ಮನೆಗೆ ಮರಳುವುದಿಲ್ಲ ಎಂಬ ಅರಿವಿರಲಿಲ್ಲ. ವೇವ್ ಸಿಟಿ ಎಂಬ ಪ್ರದೇಶದ ಬಳಿ ಸುಮಾರು 70 ಕಿ.ಮೀ ವೇಗದಲ್ಲಿ ಬೈಕ್ ಸಂಚರಿಸುತ್ತಿತ್ತು. ದುರಂತವೆಂದರೆ, ಇಬ್ಬರ ತಲೆಯಲ್ಲೂ ಹೆಲ್ಮೆಟ್ ಇರಲಿಲ್ಲ.

ಶೂಟಿಂಗ್ ಮಾಡುತ್ತಿದ್ದ ವೀಡಿಯೋಗಳಲ್ಲಿ ಅವರು ತಮ್ಮ ಕುಟುಂಬದವರ ಜೊತೆ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಾ ಬೈಕ್ ಚಲಾಯಿಸುತ್ತಿರುವುದು ಕಂಡುಬಂದಿದೆ. ಅತಿ ವೇಗ ಮತ್ತು ಗಮನ ಬೇರೆಡೆ ಹರಿದಿದ್ದರಿಂದ ಬೈಕ್ ನಿಯಂತ್ರಣ ತಪ್ಪಿ ಭೀಕರ ಅಪಘಾತ ಸಂಭವಿಸಿದೆ. ಇಕ್ರಾ ಬೈಕ್‌ನಿಂದ ಕೆಳಗೆ ಬಿದ್ದು ನೇರವಾಗಿ ತಲೆಗೆ ಪೆಟ್ಟು ಬಿದ್ದಿದೆ. ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಆಕೆ ಕೊನೆಯುಸಿರೆಳೆದಿದ್ದಾಳೆ ಎಂದು ಕೇಳಿಬಂದಿದೆ.  ಬೈಕ್ ಚಲಾಯಿಸುತ್ತಿದ್ದ ಹಶೀಮ್ ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದಿದ್ದಾನೆ.

ಇವತ್ತಿನ ಕಾಲದಲ್ಲಿ ಬೈಕ್ ಮೇಲೆ ಸ್ಟಂಟ್ ಮಾಡುವುದು ಅಥವಾ ವೇಗವಾಗಿ ಚಲಾಯಿಸುತ್ತಾ ವೀಡಿಯೋ ಮಾಡುವುದು ಫ್ಯಾಷನ್ ಆಗಿದೆ. ಆದರೆ ಗಾಳಿಯ ವೇಗದಲ್ಲಿ ಹೋಗುವಾಗ ತಲೆಯ ಮೇಲೆ ಹೆಲ್ಮೆಟ್ ಇಲ್ಲದಿದ್ದರೆ ಏನಾಗುತ್ತದೆ ಎಂಬುದಕ್ಕೆ ಇಕ್ರಾಳ ಸಾವೇ ದೊಡ್ಡ ಉದಾಹರಣೆ.

ಭಾರತದಲ್ಲಿ ನಡೆಯುವ ದ್ವಿಚಕ್ರ ವಾಹನ ಅಪಘಾತಗಳಲ್ಲಿ ಸಾಯುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಂಕಿ-ಅಂಶಗಳ ಪ್ರಕಾರ, ಅಪಘಾತದ ಸಮಯದಲ್ಲಿ ಸರಿಯಾಗಿ ಹೆಲ್ಮೆಟ್ ಧರಿಸಿದ್ದರೆ ತಲೆಗೆ ಬೀಳುವ ಪೆಟ್ಟಿನಿಂದ ಸಂಭವಿಸುವ ಶೇ. 42ರಷ್ಟು ಸಾವುಗಳನ್ನು ತಡೆಯಬಹುದು. ಅಂದರೆ ಇಕ್ರಾಳ ತಲೆಯ ಮೇಲೆ ಒಂದು ಹೆಲ್ಮೆಟ್ ಇದ್ದಿದ್ದರೆ, ಆಕೆ ಇವತ್ತು ಬದುಕಿರುತ್ತಿದ್ದಳು.

ಪೊಲೀಸ್ ಇಲಾಖೆಗೆ ಸೇರಿ ದೇಶದ ಸೇವೆ ಮಾಡಬೇಕೆಂದುಕೊಂಡಿದ್ದ ಮಗಳು ಇಂದು ಇಲ್ಲ ಎನ್ನುವುದನ್ನು ಕೇಳಿ ಆಕೆಯ ಪೋಷಕರು ಕಂಗಾಲಾಗಿದ್ದಾರೆ. ನಮ್ಮ ಕ್ಷಣಿಕ ಸಂತೋಷಕ್ಕೆ ನಮ್ಮ ಜೀವದ ಜೊತೆಗೆ ನಮ್ಮನ್ನು ನಂಬಿದವರ ಬದುಕನ್ನೂ ಹಾಳು ಮಾಡುತ್ತಿದ್ದೇವೆ ಎಂಬ ಅರಿವು ನಮಗಿರಲಿ.

ಅದು 1 ಕಿ.ಮೀ ದೂರವಿರಲಿ ಅಥವಾ 100 ಕಿ.ಮೀ ಇರಲಿ, ಬೈಕ್ ಹತ್ತಿದ ತಕ್ಷಣ ಹೆಲ್ಮೆಟ್ ಧರಿಸಿ. ರಸ್ತೆಗಳು ನಮಗಷ್ಟೇ ಅಲ್ಲ, ಎಲ್ಲರಿಗೂ ಇವೆ. 70-80 ಕಿ.ಮೀ ವೇಗ ನಗರ ಪ್ರದೇಶಗಳಲ್ಲಿ ಪ್ರಾಣಾಪಾಯಕ್ಕೆ ಹತ್ತಿರ. ಚಲಿಸುವ ವಾಹನದ ಮೇಲೆ ಫೋನ್ ಮಾಡುವುದು ಅಥವಾ ವೀಡಿಯೋ ಮಾಡುವುದು ಮೃತ್ಯುವನ್ನು ಆಹ್ವಾನಿಸಿದಂತೆ. ಸಾವಿರ ಕನಸು ಹೊತ್ತಿದ್ದ ಇಕ್ರಾಳ ಸಾವು ನಮಗೆಲ್ಲರಿಗೂ ಪಾಠವಾಗಲಿ. ರಸ್ತೆಯಲ್ಲಿ ಸಂಚರಿಸುವಾಗ ಜಾಗರೂಕರಾಗಿರಿ, ನಿಮ್ಮ ಕುಟುಂಬ ನಿಮಗಾಗಿ ಕಾಯುತ್ತಿದೆ.