ನಿಮ್ಮ ವಾರ್ಡ್‌ನ ಫೈನಲ್ ಓಟರ್ ಲಿಸ್ಟ್ ರೆಡಿ - ಜಿಬಿಎ ಪಟ್ಟಿಯ ರೋಚಕ ಲೆಕ್ಕಾಚಾರ ಇಲ್ಲಿದೆ ನೋಡಿ!!

ಬೆಂಗಳೂರು ಈಗ ಬರೀ ಬೆಂಗಳೂರಲ್ಲ, ಅದು ಗ್ರೇಟರ್ ಬೆಂಗಳೂರು (GBA). ಇದರ ಅಡಿಯಲ್ಲಿ ಬರುವ 5 ನಗರ ಪಾಲಿಕೆಗಳ ಚುನಾವಣಾ ತಯಾರಿ ಈಗ ಜೋರಾಗಿ ನಡೀತಿದೆ. ಜಿಬಿಎ ಚುನಾವಣೆ ಯಾವಾಗ ನಡೆಯುತ್ತೆ ಅನ್ನೋ ಕುತೂಹಲದ ನಡುವೆಯೇ, ಪ್ರಾಧಿಕಾರವು ಈಗ ಅಧಿಕೃತವಾಗಿ ಅಂತಿಮ ಮತದಾರರ ಪಟ್ಟಿಯನ್ನು (Final Voter List) ರಿಲೀಸ್ ಮಾಡಿದೆ.

"ಸೋಲುವ ಭಯಕ್ಕೆ ಕಾಂಗ್ರೆಸ್ ಹೈಡ್ರಾಮಾ"

ಇದರ ಜೊತೆಗೆ ಚುನಾವಣೆ ಮುಂದೂಡೋ ವಿಚಾರಕ್ಕೆ ಸಂಬಂಧಪಟ್ಟಂತೆ ರಾಜಕೀಯ ಕೆಸರೆರಚಾಟವೂ ಶುರುವಾಗಿದೆ.

ಎಷ್ಟು ಮತದಾರರು? ಇಲ್ಲಿದೆ ಲೆಕ್ಕಾಚಾರ!

ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಸುದ್ದಿಗೋಷ್ಠಿಯಲ್ಲಿ ಈ ಫೈನಲ್ ಲಿಸ್ಟ್ ಬಿಡುಗಡೆ ಮಾಡಿದ್ದಾರೆ. ಅವರ ಪ್ರಕಾರ:

ಒಟ್ಟು ಮತದಾರರು: 88,95,361 (ಸುಮಾರು 89 ಲಕ್ಷ!)

ಪುರುಷರು: 45,69,752

ಮಹಿಳೆಯರು: 43,21,143

ಇತರೆ: 1,633

ಒಟ್ಟು ವಾರ್ಡ್‌ಗಳು: 369

ವಿಶೇಷ ಅಂದ್ರೆ, ಬೆಂಗಳೂರು ದಕ್ಷಿಣದ ಸುಬ್ರಮಣ್ಯಪುರ (ವಾರ್ಡ್ 51) ವಾರ್ಡ್‌ನಲ್ಲಿ ಅತಿ ಹೆಚ್ಚು ಅಂದ್ರೆ 54 ಸಾವಿರಕ್ಕೂ ಅಧಿಕ ಮತದಾರರಿದ್ದಾರೆ. ಇನ್ನು ಬೆಂಗಳೂರು ಪೂರ್ವದ ಕೊತ್ತೂರು (ವಾರ್ಡ್ 16) ವಾರ್ಡ್‌ನಲ್ಲಿ ಅತಿ ಕಡಿಮೆ ಅಂದ್ರೆ ಕೇವಲ 10,940 ಮತದಾರರಿದ್ದಾರೆ.

ಪಟ್ಟಿ ತಯಾರಾಗಿದ್ದು ಹೇಗೆ?
ಮಾರ್ಚ್ 9ರಂದೇ ಕರಡು ಪಟ್ಟಿ ಬಿಡುಗಡೆ ಮಾಡಿ ಜನರಿಂದ ಆಕ್ಷೇಪಣೆಗಳನ್ನು ಕರೆಯಲಾಗಿತ್ತು. ಸಾರ್ವಜನಿಕರು ಸಲ್ಲಿಸಿದ ದೂರುಗಳು ಮತ್ತು ತಿದ್ದುಪಡಿಗಳನ್ನು ಪರಿಶೀಲಿಸಿದ ನಂತರ ಈಗ ಪಕ್ಕಾ ಆದ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಅಂದ್ರೆ ಈಗ ಚುನಾವಣೆಗೆ ರಂಗ ಸಿದ್ಧವಾಗಿದೆ ಎಂದರ್ಥ.

ಒಂದೆಡೆ ಚುನಾವಣಾ ಆಯೋಗ ಕೆಲಸ ಮಾಡ್ತಿದ್ರೆ, ಇನ್ನೊಂದೆಡೆ ಸರ್ಕಾರ ಈ ಚುನಾವಣೆಯನ್ನು ಮುಂದೂಡುವ ಪ್ಲಾನ್ ಮಾಡ್ತಿದೆ ಅನ್ನೋ ಮಾತುಗಳು ಕೇಳಿಬರ್ತಿವೆ. ಸುಪ್ರೀಂ ಕೋರ್ಟ್ ಜೂನ್ ಅಂತ್ಯದೊಳಗೆ ಎಲೆಕ್ಷನ್ ಮುಗಿಸಿ ಅಂತ ಹೇಳಿದ್ರೂ, ಸರ್ಕಾರ ಮಾತ್ರ ಆಯೋಗಕ್ಕೆ ಪತ್ರ ಬರೆದು ಸಮಯ ಕೇಳಿದೆಯಂತೆ.

ಇದಕ್ಕೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. "ಕಾಂಗ್ರೆಸ್‌ನವರಿಗೆ ಸೋಲೋ ಭಯ ಶುರುವಾಗಿದೆ, ಅದಕ್ಕೇ ಚುನಾವಣೆ ಮುಂದೂಡಲು ನೋಡ್ತಿದ್ದಾರೆ. ಇನ್ನು ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋದಿಲ್ಲ ಅಂತ ಅವರಿಗೇ ಗೊತ್ತಾಗಿದೆ" ಅಂತ ಕಿಡಿಕಾರಿದ್ದಾರೆ.