ನಿನ್ನೆ ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಹೊರಟಿದ್ದ ಪ್ರಯಾಣಿಕರಿಗೆ ಅದು ಬರೀ ಪ್ರಯಾಣವಾಗಿರಲಿಲ್ಲ, ಸಾಕ್ಷಾತ್ ಯಮನ ದರ್ಶನವಾಗಿ ಮರಳಿ ಬಂದಂತಹ ಅನುಭವ. ಕೇವಲ 90 ನಿಮಿಷಗಳ ಹಾದಿಯಲ್ಲಿ ಬರಬೇಕಿದ್ದ ವಿಮಾನವು ದಾರಿಯ ಮಧ್ಯದಲ್ಲೇ ಹದಗೆಟ್ಟು, ನಾಲ್ಕು ಗಂಟೆಗಳ ಕಾಲ ಆಕಾಶದಲ್ಲೇ ಅತಂತ್ರವಾಗಿ ಉಳಿದ ಕಥೆ ಕೇಳಿದ್ರೆ ಎದೆ ಝಲ್ಲನ್ನುತ್ತೆ.
ಮಧ್ಯಾಹ್ನ 3 ಗಂಟೆಗೆ ಹೈದರಾಬಾದ್‌ನಿಂದ ಗರ್ಜಿಸುತ್ತಾ ಮೇಲೆದ್ದ Fly91 (IC3401) ವಿಮಾನವು ಹುಬ್ಬಳ್ಳಿಯ ಸಮೀಪ ಬರುವವರೆಗೂ ಎಲ್ಲವೂ ನಾರ್ಮಲ್ ಆಗಿತ್ತು. ಆದರೆ ಹುಬ್ಬಳ್ಳಿ ಹತ್ತಿರವಾಗುತ್ತಿದ್ದಂತೆ ವಿಮಾನದಲ್ಲಿ ಸಣ್ಣ ಶಬ್ದ ಶುರುವಾಯಿತು. ವಿಮಾನದ ಸ್ಪೀಡ್ ಮತ್ತು ಡೈರೆಕ್ಷನ್ ಮೇಲೆ ಪೈಲಟ್‌ಗಳಿಗೆ ಇದ್ದ ಕಂಟ್ರೋಲ್ ಮಿಸ್ ಆಯಿತು. ಹುಬ್ಬಳ್ಳಿ ಏರ್‌ಪೋರ್ಟ್ ಕಣ್ಣೆದುರೇ ಇದ್ದರೂ ವಿಮಾನವನ್ನು ಕೆಳಗಿಳಿಸಲು ಸಾಧ್ಯವಾಗಲಿಲ್ಲ!
ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನ ಏಕಾಏಕಿ ಮುಂಡಗೋಡ, ದಾವಣಗೆರೆ, ಶಿವಮೊಗ್ಗದ ಸುತ್ತಾ ಹಾರಲು ಶುರುಮಾಡಿತು. ವಿಮಾನದ ಒಳಗೆ ಗಾಬರಿ ಹೆಚ್ಚಾಯಿತು.
ಕಣ್ಣೀರಿನ ಪ್ರಾರ್ಥನೆ: ಮಕ್ಕಳು, ವೃದ್ಧರು ಚೀರಾಡುತ್ತಾ ದೇವರಿಗೆ ಕೈಮುಗಿಯುತ್ತಿದ್ದರು. ಕೆಲವರಂತೂ ಇವತ್ತು ನಾವು ಸಾಯೋದು ಗ್ಯಾರಂಟಿ ಅಂತ ಕಣ್ಣೀರು ಹಾಕುತ್ತಿದ್ದರು.
ಆತ್ಮೀಯರಿಗೆ ಸಂದೇಶ: ಪರಿಸ್ಥಿತಿ ಎಷ್ಟು ಭಯಾನಕವಾಗಿತ್ತೆಂದರೆ, ಕೆಲವು ಪ್ರಯಾಣಿಕರು ತಮ್ಮ ಮೊಬೈಲ್ ತೆಗೆದು ಮನೆಯವರಿಗೆ "ನಾವಿನ್ನು ಬರೋದು ಡೌಟು, ಎಲ್ಲರೂ ಕ್ಷಮಿಸಿ" ಅಂತ ವಾಟ್ಸಾಪ್ ಮೆಸೇಜ್ ಕಳುಹಿಸಿದ್ದರು. ಅದು ಅವರ ಕೊನೆಯ ಮೆಸೇಜ್ ಆಗಬಹುದು ಎಂಬ ಭೀತಿ ಎಲ್ಲರನ್ನೂ ಕಾಡಿತ್ತು.
ಪೈಲಟ್‌ಗಳ ಜಾಣ್ಮೆ ಮತ್ತು ಬೆಂಗಳೂರಿನಲ್ಲಿ ಸೇಫ್ ಲ್ಯಾಂಡಿಂಗ್
ಒಂದೆಡೆ ಇಂಧನ ಖಾಲಿಯಾಗುವ ಭಯ, ಇನ್ನೊಂದೆಡೆ ತಾಂತ್ರಿಕ ದೋಷ. ಸತತ ನಾಲ್ಕು ಗಂಟೆಗಳ ಕಾಲ ಸಾವಿನೊಂದಿಗೆ ಕಣ್ಣಾಮುಚ್ಚಾಲೆ ಆಡಿದ ಪೈಲಟ್‌ಗಳು ಹೇಗಾದರೂ ಮಾಡಿ ವಿಮಾನವನ್ನು ಇಳಿಸಲು ನಿರ್ಧರಿಸಿದರು. ಕೊನೆಗೆ ಸಂಜೆ 7:30ರ ಸುಮಾರಿಗೆ ಬೆಂಗಳೂರಿನ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ವಿಮಾನ ಯಶಸ್ವಿಯಾಗಿ ನೆಲ ಮುಟ್ಟಿತು. ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಇಡೀ ವಿಮಾನ ನಿಲ್ದಾಣದ ಸಿಬ್ಬಂದಿ ಮತ್ತು ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ಪ್ರಯಾಣಿಕರು ಫುಲ್ ಗರಂ!
ಸಾವಿನ ದವಡೆಯಿಂದ ಪಾರಾಗಿ ಬಂದರೂ ಪ್ರಯಾಣಿಕರ ಆಕ್ರೋಶ ಮಾತ್ರ ಕಮ್ಮಿಯಾಗಿಲ್ಲ. "ನಮ್ಮ ಜೀವದ ಜೊತೆ ಆಟ ಆಡಿದ Fly91 ಸಂಸ್ಥೆಯ ನಿರ್ಲಕ್ಷ್ಯಕ್ಕೆ ಯಾರು ಹೊಣೆ?" ಎಂದು ಪ್ರಶ್ನಿಸುತ್ತಿದ್ದಾರೆ. ಒಂದು ಸಣ್ಣ ತಾಂತ್ರಿಕ ತಪ್ಪಿನಿಂದ ಇಡೀ ವಿಮಾನ ಹಾರಾಡುವ ಶವಪೆಟ್ಟಿಗೆಯಾಗುವ ಸಾಧ್ಯತೆ ಇತ್ತು ಎಂಬುದು ಈಗ ಜನರ ಆತಂಕಕ್ಕೆ ಕಾರಣವಾಗಿದೆ.