ಬೆಂಗಳೂರು ನಗರದ ವಿದ್ಯಾರಣ್ಯಪುರದಲ್ಲಿರುವ ದೇವಾಂಶ್ ಡಿಸೈನರ್ ಬೊಟಿಕ್ ವಿರುದ್ಧ ಮಹಿಳೆಯರು ಗಂಭೀರ ಆರೋಪಗಳನ್ನು ಹೊರ ಹಾಕಿದ್ದಾರೆ. ಫ್ಯಾಷನ್ ಡಿಸೈನರ್ ಕೋರ್ಸ್ ಹೆಸರಿನಲ್ಲಿ ಲಕ್ಷಾಂತರ ಹಣವನ್ನು ವಸೂಲಿ ಮಾಡಿ, ಯಾವುದೇ ತರಬೇತಿ ನೀಡದೆ ವಂಚನೆ ನಡೆಸಿದ್ದಾರೆ ಎಂಬ ಆರೋಪ ಮಹಿಳೆಯರಿಂದ ಕೇಳಿಬಂದಿದೆ. ಮಹಿಳೆಯರ ಹೇಳಿಕೆಯ ಪ್ರಕಾರ, ವೀಕೆಂಡ್ ಕ್ಲಾಸ್‌ಗಳಿಗೆ ₹50,000, ಒಂದು ವಾರದ ಕ್ಲಾಸ್‌ಗೆ ₹80,000, ಮತ್ತು ಕೋರ್ಸ್ ಮುಗಿದ ನಂತರ ಫೋಟೋಶೂಟ್‌ಗೆ ₹40,000 ಹೆಚ್ಚುವರಿ ಹಣವನ್ನು ವಸೂಲಿ ಮಾಡಲಾಗಿದೆ. ಸುಮಾರು 30 ವಿದ್ಯಾರ್ಥಿಗಳಿಂದ ಲಕ್ಷಾಂತರ ಹಣವನ್ನು ಪಡೆದು, ಸರಿಯಾದ ತರಬೇತಿ ನೀಡದೆ ಮೋಸ ಮಾಡಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ.
ಮಹಿಳೆಯರು ಹೇಳುವಂತೆ, ಕೋರ್ಸ್‌ನಲ್ಲಿ ಕೇವಲ ಸ್ಟ್ಯಾಂಡರ್ಡ್ ಸೈಜ್ ಬ್ಲೌಸ್ ಡಿಸೈನ್‌ಗಳನ್ನು ಮಾತ್ರ ಕಲಿಸಲಾಗಿದ್ದು, ಬಾಡಿ ಸೈಜ್ ಸ್ಟಿಚಿಂಗ್ ಕುರಿತು ಯಾವುದೇ ತರಬೇತಿ ನೀಡಲಾಗಿಲ್ಲ. 2.5 ತಿಂಗಳ ಕೋರ್ಸ್ ಎಂದು ಹೇಳಿದ್ದರೂ, 7 ತಿಂಗಳು ಕಳೆದರೂ ಯಾವುದೇ ಪಾಠಗಳನ್ನು ಕಲಿಸಿಲ್ಲವೆಂದು ವಿದ್ಯಾರ್ಥಿನಿಯರು ಅಳಲು ವ್ಯಕ್ತಪಡಿಸಿದ್ದಾರೆ. “ನಮ್ಮ ಹಣ ನಮಗೆ ಮರಳಿ ಕೊಡಿಸಿ” ಎಂದು ಮಹಿಳೆಯರು ಒಟ್ಟಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಕ್ಷಾಂತರ ಹಣವನ್ನು ಕೊಟ್ಟು ಮೋಸ ಹೋಗಿರುವುದರಿಂದ, ದೇವಾಂಶ್ ಡಿಸೈನರ್ ಬೊಟಿಕ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಮಹಿಳೆಯರು ಆರೋಪಿಸಿರುವಂತೆ, ದೇವಾಂಶ್ ಡಿಸೈನರ್ ಬೊಟಿಕ್ ಈಗ ಮೈಸೂರಿನಲ್ಲಿ ಮತ್ತೊಂದು ಬ್ರಾಂಚ್ ತೆರೆಯಲು ಯೋಜನೆ ಮಾಡಿದ್ದು, ಅಲ್ಲಿಯೂ ಇದೇ ರೀತಿಯ ಮೋಸ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. ಇದರಿಂದ ಸ್ಥಳೀಯ ಮಹಿಳೆಯರಲ್ಲಿ ಆತಂಕ ಹೆಚ್ಚಾಗಿದೆ. ಈ ಆರೋಪಗಳ ಬಗ್ಗೆ ದೇವಾಂಶ್ ಬೊಟಿಕ್ ಪ್ರತಿಕ್ರಿಯೆ ನೀಡಿದ್ದು, “ನಾವು ಯಾರಿಗೂ ಮೋಸ ಮಾಡಿಲ್ಲ. ಸುಮ್ಮನೆ ಆರೋಪ ಮಾಡುತ್ತಿದ್ದಾರೆ” ಎಂದು ಹೇಳಿಕೆ ನೀಡಿದ್ದಾರೆ. ಈ ಪ್ರಕರಣವು ಈಗ ಸಾಮಾಜಿಕವಾಗಿ ಚರ್ಚೆಗೆ ಕಾರಣವಾಗಿದ್ದು, ಮಹಿಳೆಯರು ತಮ್ಮ ಹಣವನ್ನು ಮರಳಿ ಪಡೆಯಲು ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಫ್ಯಾಷನ್ ಡಿಸೈನರ್ ತರಬೇತಿ ಹೆಸರಿನಲ್ಲಿ ನಡೆದಿರುವ ಈ ಆರೋಪಗಳು, ಶಿಕ್ಷಣ ಕ್ಷೇತ್ರದಲ್ಲಿ ನಂಬಿಕೆ ಮತ್ತು ಭದ್ರತೆ ಕುರಿತ ಪ್ರಶ್ನೆಗಳನ್ನು ಎಬ್ಬಿಸಿವೆ.