ಫಾರೋ ದ್ವೀಪಗಳಲ್ಲಿ ಕ್ರೂರ ಆಚರಣೆ - ಕೇವಲ ಕೆಲವೇ ದಿನಗಳಲ್ಲಿ 700ಕ್ಕೂ ಅಧಿಕ ತಿಮಿಂಗಿಲ, ಡಾಲ್ಫಿನ್‌ಗಳ ಭೀಕರ ಹತ್ಯಾ!!

ಉತ್ತರ ಅಟ್ಲಾಂಟಿಕ್ ಮಹಾಸಾಗರದಲ್ಲಿರುವ ಡೆನ್ಮಾರ್ಕ್‌ನ ಫಾರೋ ದ್ವೀಪಗಳಲ್ಲಿ ಇತ್ತೀಚೆಗೆ ಮನುಷ್ಯನ ಕ್ರೌರ್ಯಕ್ಕೆ ನೂರಾರು ಮೂಕಪ್ರಾಣಿಗಳು ಬಲಿಯಾಗಿವೆ. ಇಲ್ಲಿನ ಸಾಂಪ್ರದಾಯಿಕ ಹಬ್ಬದ ಹೆಸರಿನಲ್ಲಿ ಬರೋಬ್ಬರಿ 700ಕ್ಕೂ ಹೆಚ್ಚು ಪೈಲಟ್ ತಿಮಿಂಗಿಲಗಳು (Whales) ಮತ್ತು ಡಾಲ್ಫಿನ್‌ಗಳನ್ನು ಅತ್ಯಂತ ಭೀಕರವಾಗಿ ಕೊಲ್ಲಲಾಗಿದೆ. ಸಾವಿರ ವರ್ಷಗಳ ಇತಿಹಾಸವಿರುವ 'ಗ್ರೈಂಡ್ ಡ್ರಾಪ್' ಎಂಬ ಈ ಬೇಟೆಯಾಡುವ ಸಂಪ್ರದಾಯದ ವಿರುದ್ಧ ಈಗ ಜಾಗತಿಕ ಮಟ್ಟದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

ಫಾರೋ ದ್ವೀಪಗಳಲ್ಲಿ 700ಕ್ಕೂ ಹೆಚ್ಚು ಮೂಕಪ್ರಾಣಿಗಳ ಭೀಕರ ಹತ್ಯಾ | Photo Credit: AI
ಫಾರೋ ದ್ವೀಪಗಳಲ್ಲಿ 700ಕ್ಕೂ ಹೆಚ್ಚು ಮೂಕಪ್ರಾಣಿಗಳ ಭೀಕರ ಹತ್ಯಾ | Photo Credit: AI

ಏನಿದು 'ಗ್ರೈಂಡ್ ಡ್ರಾಪ್' ಭೀಕರ ಹತ್ಯಾಕಾಂಡ?

ಜಾಗತಿಕ ಪರಿಸರ ಸಂರಕ್ಷಣಾ ಸಂಸ್ಥೆಗಳಾದ ‘ಸೀ ಶೆಫರ್ಡ್’ ಮತ್ತು ‘ಓಷನ್ ಕೇರ್’ ನೀಡಿರುವ ವರದಿಗಳ ಪ್ರಕಾರ, ಇತ್ತೀಚೆಗೆ ನಡೆದ ಮೂರು ಪ್ರತ್ಯೇಕ ಬೇಟೆಗಳಲ್ಲಿ ಒಟ್ಟು 706 ತಿಮಿಂಗಿಲ ಹಾಗೂ ಡಾಲ್ಫಿನ್‌ಗಳನ್ನು ಕರಾವಳಿಗೆ ಅಟ್ಟಿಸಿಕೊಂಡು ಬಂದು ಹಿಡಿಯಲಾಗಿದೆ. ಮೇ ಕೊನೆಯ ವಾರದಲ್ಲಿ ಈ ದ್ವೀಪದ ರಾಜಧಾನಿ ಟೋರ್ಶಾವ್ನ್ ಸೇರಿದಂತೆ ಮೂರು ಪ್ರಮುಖ ಕೊಲ್ಲಿಗಳಲ್ಲಿ (Bay) ಈ ರಕ್ತಮಯ ಬೇಟೆ ನಡೆದಿದೆ.

ಸಾಮಾನ್ಯವಾಗಿ ಸಮುದ್ರದಲ್ಲಿ ಈ ಪ್ರಾಣಿಗಳು ಗುಂಪಾಗಿ ಹೋಗುವಾಗ ದೋಣಿಗಳ ಮೂಲಕ ಸುತ್ತುವರೆದು, ಅವುಗಳನ್ನು ಬಲವಂತವಾಗಿ ಕರಾವಳಿಯ ಆಳವಿಲ್ಲದ ದಡಕ್ಕೆ ತರಲಾಗುತ್ತದೆ. ಆ ಬಳಿಕ ಇಡೀ ಸಮುದಾಯದ ಜನರೇ ಸೇರಿ ಅವುಗಳನ್ನು ಕಟುಕನಂತೆ ಕೊಲ್ಲುತ್ತಾರೆ. ಈ ಬಾರಿ ಪ್ರಾಣಿಗಳನ್ನು ಬೇಗನೆ ಸಾಯಿಸುವ ಆಧುನಿಕ ಉಪಕರಣಗಳ ಕೊರತೆಯಿದ್ದ ಕಾರಣ, ತಿಮಿಂಗಿಲಗಳು ಮತ್ತು ಡಾಲ್ಫಿನ್‌ಗಳು ಸಾಯುವ ಮುನ್ನ ದೀರ್ಘಕಾಲದವರೆಗೆ ನರಕಯಾತನೆ ಹಾಗೂ ತೀವ್ರ ನೋವನ್ನು ಅನುಭವಿಸಿವೆ ಎಂದು ಪರಿಸರವಾದಿಗಳು ಕಣ್ಣೀರು ಹಾಕಿದ್ದಾರೆ.

ವೈಕಿಂಗ್ ಸಂಪ್ರದಾಯದ ಹೆಸರಲ್ಲಿ ಸಮರ್ಥನೆ

ಈ ದ್ವೀಪದಲ್ಲಿ ವಾಸಿಸುವ ಜನರಿಗೆ ಇದು ಸುಮಾರು 1,000 ವರ್ಷಗಳಷ್ಟು ಹಳೆಯದಾದ 'ವೈಕಿಂಗ್ ಸಂಪ್ರದಾಯ'. ಅಲ್ಲಿನ ಸ್ಥಳೀಯ ಸರ್ಕಾರ ಮತ್ತು ನಾಗರಿಕರು ಈ ಆಚರಣೆಯನ್ನು ತಮ್ಮ 'ಸಾಂಸ್ಕೃತಿಕ ಗುರುತು' ಎಂದು ಹೆಮ್ಮೆಯಿಂದ ಸಮರ್ಥಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲದೆ, ಇದು ಇಡೀ ಸಮುದಾಯಕ್ಕೆ ನೈಸರ್ಗಿಕವಾಗಿ ಉಚಿತ ಆಹಾರ ಒದಗಿಸುವ ಮೂಲ ಎಂದು ವಾದಿಸುತ್ತಾರೆ.

ಆದರೆ, ಪ್ರಾಣಿ ಹಕ್ಕುಗಳ ಕಾರ್ಯಕರ್ತರು ಈ ವಾದವನ್ನು ಕಠಿಣವಾಗಿ ವಿರೋಧಿಸಿದ್ದಾರೆ. "ಫಾರೋ ದ್ವೀಪಗಳು ಈಗ ಹಳೆಯ ಕಾಲದ ಹಳ್ಳಿಯಾಗಿ ಉಳಿದಿಲ್ಲ, ಅದು ಆಧುನಿಕ ಮತ್ತು ಆರ್ಥಿಕವಾಗಿ ಅತ್ಯಂತ ಶ್ರೀಮಂತವಾಗಿರುವ ರಾಷ್ಟ್ರವಾಗಿದೆ. ಸೂಪರ್ ಮಾರ್ಕೆಟ್‌ಗಳಲ್ಲಿ ಎಲ್ಲಾ ತರಹದ ಆಹಾರ ಸಿಗುವಾಗ, ಕೇವಲ ಸಾಂಪ್ರದಾಯಿಕ ಮೋಜಿಗಾಗಿ ಇಂತಹ ಕ್ರೂರ ಅಭ್ಯಾಸಗಳನ್ನು ಮುಂದುವರಿಸುವುದು ತಪ್ಪು. ಇದರ ಬದಲಿಗೆ ಪರಿಸರ ಸ್ನೇಹಿ ಪರ್ಯಾಯಗಳನ್ನು ಕಂಡುಕೊಳ್ಳಬೇಕು" ಎಂದು ಅವರು ಒತ್ತಾಯಿಸುತ್ತಿದ್ದಾರೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ಟ್ರೇಡ್ ವಾರ್ ಭೀತಿ

ಈ ಭೀಕರ ಘಟನೆಯು ಜಾಗತಿಕ ಮಟ್ಟದಲ್ಲಿ ಪ್ರಾಣಿ ಹಿಂಸೆ ತಡೆಗಟ್ಟುವಿಕೆ ಮತ್ತು ಸಾಂಪ್ರದಾಯಿಕ ಆಚರಣೆಗಳ ನಡುವಿನ ವ್ಯತ್ಯಾಸದ ಬಗ್ಗೆ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಯುನೈಟೆಡ್ ಕಿಂಗ್‌ಡಮ್ (UK) ಸಂಸತ್ತಿನ 72 ಕ್ಕೂ ಹೆಚ್ಚು ಸಂಸದರು ಒಟ್ಟಾಗಿ ಈ ಸಾಂಪ್ರದಾಯಿಕ ಹತ್ಯಾಕಾಂಡವನ್ನು ತೀವ್ರವಾಗಿ ಖಂಡಿಸಿದ್ದಾರೆ.

ಅಷ್ಟೇ ಅಲ್ಲದೆ, 2026 ರ ಕೊನೆಯಲ್ಲಿ ಫಾರೋ ದ್ವೀಪಗಳೊಂದಿಗೆ ನಡೆಯಲಿರುವ ಜಾಗತಿಕ ವ್ಯಾಪಾರ ಒಪ್ಪಂದಗಳ (Global Trade Agreements) ಮರುಪರಿಶೀಲನೆಯಲ್ಲಿ ಪ್ರಾಣಿ ಕಲ್ಯಾಣದ ಕಠಿಣ ನಿಯಮಗಳನ್ನು ಕಡ್ಡಾಯಗೊಳಿಸಬೇಕು ಎಂದು ಯುಕೆ ಸಂಸದರು ಪಟ್ಟು ಹಿಡಿದಿದ್ದಾರೆ. ಅಂದರೆ, ಇಂತಹ ಕ್ರೂರ ಆಚರಣೆಗಳನ್ನು ನಿಲ್ಲಿಸದಿದ್ದರೆ ಈ ದ್ವೀಪದೊಂದಿಗೆ ವ್ಯಾಪಾರವನ್ನೇ ಕಟ್ ಮಾಡುವುದಾಗಿ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ. ಸದ್ಯ ಸಾಂಸ್ಕೃತಿಕ ಆಚರಣೆ ಹಾಗೂ ಪ್ರಾಣಿ ದಯೆಯ ನಡುವಿನ ಈ ಜಟಾಪಟಿ ಇಡೀ ವಿಶ್ವದ ಗಮನ ಸೆಳೆದಿದೆ.

Latest News