ವಿಧಾನಸೌಧದಲ್ಲಿ ಕೊನೆಗೂ ಮುಗಿಯಿತು ಹೈ-ವೋಲ್ಟೇಜ್ ಕ್ಲೈಮ್ಯಾಕ್ಸ್ - ಸಿದ್ದರಾಮಯ್ಯ ತಗೊಂಡ ಆ ಒಂದು ಇಂಟರೆಸ್ಟಿಂಗ್ ನಿರ್ಧಾರವೇನು?

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕಳೆದೆರಡು ದಿನಗಳಿಂದ ನಡೀತಿದ್ದ ಕುರ್ಚಿ ಬದಲಾವಣೆಯ ಹೈಡ್ರಾಮಾಕ್ಕೆ ಈಗ ಅಧಿಕೃತ ಮುದ್ರೆ ಬಿದ್ದಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಿಸೈನ್ ಮಾಡಿದ ಬೆನ್ನಲ್ಲೇ, ನೂತನ ಸಿಎಂ ಆಯ್ಕೆ ಪ್ರಕ್ರಿಯೆ ಫುಲ್ ಸ್ಪೀಡ್‌ನಲ್ಲಿ ನಡೆದಿದೆ. ಶನಿವಾರ ಸಂಜೆ ವಿಧಾನಸೌಧದಲ್ಲಿ ನಡೆದ ಹೈವೋಲ್ಟೇಜ್ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ವಿಧಾನಸೌಧದಲ್ಲಿ ಮುಗಿಯಿತು ಹೈ-ವೋಲ್ಟೇಜ್ ಕ್ಲೈಮ್ಯಾಕ್ಸ್
ವಿಧಾನಸೌಧದಲ್ಲಿ ಮುಗಿಯಿತು ಹೈ-ವೋಲ್ಟೇಜ್ ಕ್ಲೈಮ್ಯಾಕ್ಸ್

ಈ ಮಹತ್ವದ ಬೆಳವಣಿಗೆಯ ಬೆನ್ನಲ್ಲೇ ನೂತನ ಮುಖ್ಯಮಂತ್ರಿಯಾಗಿ ಜೂನ್ 3ಕ್ಕೆ ಪ್ರಮಾಣವಚನ ಸ್ವೀಕರಿಸಲಿರುವ ಡಿಕೆಶಿ, ಇಂದು ಸಂಜೆಯೇ ಲೋಕಭವನಕ್ಕೆ (ರಾಜಭವನ) ತೆರಳಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಹೊಸ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ.

ಸಿದ್ದು ಪ್ರಸ್ತಾಪ, ಪರಮೇಶ್ವರ್ ಅನುಮೋದನೆ: ಅವಿರೋಧವಾಗಿ ಆಯ್ಕೆಯಾದ ಕನಕಪುರ ಬಂಡೆ!

ವಿಧಾನಸೌಧದಲ್ಲಿ ಇಂದು ಸಂಜೆ 4 ಗಂಟೆಗೆ ಸರಿಯಾಗಿ ಕಾಂಗ್ರೆಸ್ ಶಾಸಕರ ಬಿಗ್ ಮೀಟಿಂಗ್ ಶುರುವಾಯಿತು. ಸಭೆಯಲ್ಲಿ ಎಲ್ಲರ ಕಣ್ಣುಗಳು ಮುಂದಿನ ನಾಯಕ ಯಾರಾಗ್ತಾರೆ ಅನ್ನೋದರ ಮೇಲೆಯೇ ಇತ್ತು. ಸಭೆ ಆರಂಭವಾಗುತ್ತಿದ್ದಂತೆ ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಖುದ್ದಾಗಿ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಅಧಿಕೃತವಾಗಿ ಪ್ರಸ್ತಾಪ ಮಾಡಿದರು.

ಸಿದ್ದರಾಮಯ್ಯ ಅವರು ಹೆಸರು ಪ್ರಸ್ತಾಪಿಸುತ್ತಿದ್ದಂತೆ ಎದ್ದು ನಿಂತ ಹಿರಿಯ ನಾಯಕ ಹಾಗೂ ಮಾಜಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಇದನ್ನು ಗಟ್ಟಿಯಾಗಿ ಅನುಮೋದಿಸಿದರು. ಆ ನಂತರ ಸಭೆಯಲ್ಲಿದ್ದ ನೂತನ ಕೈ ಶಾಸಕರೆಲ್ಲರೂ ಒಮ್ಮತದಿಂದ ಮೇಜು ಕುಟ್ಟಿ ಡಿಕೆಶಿ ನಾಯಕತ್ವಕ್ಕೆ ಜೈ ಎಂದರು. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಕಣ್ಣೆದುರಲ್ಲೇ ಈ ಇಡೀ ಪ್ರಕ್ರಿಯೆ ಅತ್ಯಂತ ಸ್ಮೂತ್ ಆಗಿ ಮುಗಿದಿದ್ದು, ಡಿಕೆಶಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಲಾಯಿತು.

ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಸಿ ಬಂದಿದ್ದ ಡಿಕೆಶಿ; ಶಾಸಕರಿಗೆಲ್ಲಾ ಹಸ್ತಲಾಘವ!

ಇನ್ನು ಇವತ್ತಿನ ಸಿಎಲ್‌ಪಿ ಮೀಟಿಂಗ್‌ನಲ್ಲಿ ಡಿ.ಕೆ. ಶಿವಕುಮಾರ್ ಅವರ ಬಾಡಿ ಲ್ಯಾಂಗ್ವೇಜ್ ಮತ್ತು ನಡೆ ಎಲ್ಲರ ಗಮನ ಸೆಳೆಯುವಂತಿತ್ತು. ತಮಗೆ ಸಿಎಂ ಪಟ್ಟ ಒಲಿಯುವ ಇಂತಹ ಮಹತ್ವದ ಸಭೆಗೂ ಮುನ್ನ ಡಿಕೆಶಿ ಅವರು ವಿಧಾನಸೌಧದ ತಮ್ಮ ಕೊಠಡಿಯಲ್ಲಿ ತಾವೇ ಅತ್ಯಂತ ಭಕ್ತಿಯಿಂದ ಪೂಜಿಸುವ ನಡೆದಾಡುವ ದೇವರು 'ಅಜ್ಜಯ್ಯನಿಗೆ' ವಿಶೇಷ ಪೂಜೆ ಮತ್ತು ನಮನ ಸಲ್ಲಿಸಿ ಆಶೀರ್ವಾದ ಪಡೆದುಕೊಂಡೇ ಸಭೆಗೆ ಎಂಟ್ರಿ ಕೊಟ್ಟಿದ್ದರು.

ಕೂತಲ್ಲೇ ಹೋಗಿ ಶೇಕ್‌ಹ್ಯಾಂಡ್ ಕೊಟ್ಟ ಭಾವಿ ಸಿಎಂ: ಸಭೆಗೆ ಬಂದ ಡಿ.ಕೆ. ಶಿವಕುಮಾರ್ ಅವರು ತಾವೊಬ್ಬರೇ ವೇದಿಕೆಯಲ್ಲಿ ಅಹಂನಿಂದ ಕುಳಿತುಕೊಳ್ಳಲಿಲ್ಲ. ಬದಲಾಗಿ, ಸಭೆಯಲ್ಲಿದ್ದ ಪ್ರತಿಯೊಬ್ಬ ಶಾಸಕರು ಕುಳಿತಿದ್ದ ಜಾಗಕ್ಕೇ ಖುದ್ದಾಗಿ ನಡೆದುಕೊಂಡು ಹೋಗಿ, ಎಲ್ಲರಿಗೂ ಅತ್ಯಂತ ವಿನಮ್ರತೆಯಿಂದ ಹಸ್ತಲಾಘವ (Handshake) ಮಾಡಿ ಧನ್ಯವಾದ ಅರ್ಪಿಸಿದರು. ಡಿಕೆಶಿ ಅವರ ಈ ನಡೆಗೆ ಶಾಸಕರು ಫುಲ್ ಫಿದಾ ಆಗಿದ್ದು, ಹಳೆಯ ಮುನಿಸುಗಳನ್ನೆಲ್ಲಾ ಮರೆತು ಹೊಸ ನಾಯಕನಿಗೆ ಬೆಂಬಲ ಘೋಷಿಸಿದ್ದಾರೆ.

ಸರ್ಕಾರ ರಚನೆಗೆ ಕೌಂಟ್‌ಡೌನ್: ರಾಜ್ಯಪಾಲರ ಭೇಟಿಗೆ ಡಿಕೆಶಿ ಟೀಮ್ ರೆಡಿ!

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಅಧಿಕೃತವಾಗಿ ಸೆಲೆಕ್ಟ್ ಆಗಿರುವ ಡಿ.ಕೆ. ಶಿವಕುಮಾರ್ ಅವರು ಇವತ್ತು ಸಂಜೆಯೇ ಲೋಕಭವನಕ್ಕೆ ಲಗ್ಗೆ ಇಡಲಿದ್ದಾರೆ. ಹಿರಿಯ ನಾಯಕರ ದಂಡಿನೊಂದಿಗೆ ರಾಜಭವನಕ್ಕೆ ತೆರಳಲಿರುವ ಅವರು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಲಿದ್ದಾರೆ.

ತಮ್ಮನ್ನು ಕಾಂಗ್ರೆಸ್ ಶಾಸಕರೆಲ್ಲರೂ ಒಮ್ಮತದ ನಾಯಕನನ್ನಾಗಿ ಆರಿಸಿರುವ ಅಧಿಕೃತ ಪತ್ರವನ್ನು ರಾಜ್ಯಪಾಲರ ಕೈಗಿಟ್ಟು, ರಾಜ್ಯದಲ್ಲಿ ನೂತನ ಸರ್ಕಾರ ರಚಿಸಲು ತಮಗೆ ಅವಕಾಶ ಮಾಡಿಕೊಡಬೇಕು ಎಂದು ಹಕ್ಕು ಮಂಡಿಸಲಿದ್ದಾರೆ. ಒಟ್ಟಿನಲ್ಲಿ ಜೂನ್ 3ರ ಬುಧವಾರ ನಡೆಯಲಿರುವ ಸಿಂಪಲ್ ಪ್ರಮಾಣವಚನ ಕಾರ್ಯಕ್ರಮಕ್ಕೂ ಮುನ್ನ, ಇವತ್ತು ಶನಿವಾರವೇ ಡಿಕೆಶಿ ಅವರ ಪಟ್ಟಾಭಿಷೇಕದ ಅರ್ಧದಷ್ಟು ಕೆಲಸಗಳು ಸಕ್ಸಸ್ ಫುಲ್ ಆಗಿ ಮುಗಿದಿದ್ದು, ಕನಕಪುರದ ಬಂಡೆ ಈಗ ಕಫೀಷಿಯಲ್ ಆಗಿ ಕರ್ನಾಟಕದ ನೂತನ ಸಾರಥಿಯಾಗಿದ್ದಾರೆ.

Latest News