'ಬಂಡೆ'ಯ ಕೈಗೆ ಕರುನಾಡ ಸಾರಥ್ಯ - ಕರ್ನಾಟಕದ ಹೊಸ ಸಿಎಂ ಆಗಿ ಡಿ.ಕೆ. ಶಿವಕುಮಾರ್ ಸಾಮ್ರಾಜ್ಯದ ಇನ್ಸೈಡ್ ಸ್ಟೋರಿ!!

ರಾಜ್ಯ ರಾಜಕಾರಣದಲ್ಲಿ ಕೊನೆಗೂ ಹೈಡ್ರಾಮಾ ಮುಗಿದು, ಹೊಸ ಅಧ್ಯಾಯ ಶುರುವಾಗಿದೆ. ಬುಧವಾರ ಸಂಜೆ 4.05 ಕ್ಕೆ ಸರಿಯಾಗಿ ಡಿ.ಕೆ. ಶಿವಕುಮಾರ್ (64 ವರ್ಷ) ಕರ್ನಾಟಕದ 18ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ರಾಜಧಾನಿಯ ಲೋಕಭವನದ ಗಾಜಿನ ಮನೆಯಲ್ಲಿ ನಡೆಯಲಿರೋ ಅದ್ಧೂರಿ ಸಮಾರಂಭದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಡಿಕೆಶಿಗೆ ಪ್ರಮಾಣವಚನ ಬೋಧಿಸಲಿದ್ದಾರೆ. ಸದಾ ಧರ್ಮ, ದೇವರ ಮೇಲೆ ಅಪಾರ ನಂಬಿಕೆ ಇಟ್ಟಿರುವ ಡಿಕ್ಷಿ, ತಮ್ಮ ಆರಾಧ್ಯ ದೈವ 'ಅಜ್ಜಯ್ಯ ಸ್ವಾಮಿ' ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ದಟ್ಟವಾಗಿದೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ದೇಶಾದ್ಯಂತ ಇರುವ ಇಂಡಿಯಾ ಮೈತ್ರಿಕೂಟದ ಗಣ್ಯರು ಹಾಗೂ ರಾಜ್ಯದ ಪ್ರಮುಖ ಮಠಾಧೀಶರು, ಧರ್ಮಗುರುಗಳು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.

'ಅಜ್ಜಯ್ಯ'ನ ಹೆಸರಲ್ಲಿ ಪ್ರಮಾಣ ವಚನ
'ಅಜ್ಜಯ್ಯ'ನ ಹೆಸರಲ್ಲಿ ಪ್ರಮಾಣ ವಚನ

ಕೊನೆಗೂ ಮುಗಿದ ದೆಹಲಿ ದರ್ಬಾರ್!

ಕಳೆದ ಗುರುವಾರ ದೆಹಲಿಯಲ್ಲಿ ನಡೆದ ಮ್ಯಾರಥಾನ್ ಮೀಟಿಂಗ್‌ಗಳ ಬಳಿಕ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 'ಅಧಿಕಾರ ಹಸ್ತಾಂತರದ ಸಮಯ ಬಂದಿದೆ' ಎಂದು ರಾಹುಲ್ ಗಾಂಧಿ ನೀಡಿದ ಸಂದೇಶದ ಬೆನ್ನಲ್ಲೇ ಸಿದ್ದರಾಮಯ್ಯ ಸದ್ದಿಲ್ಲದೆ ಕುರ್ಚಿ ಖಾಲಿ ಮಾಡಿಕೊಟ್ಟಿದ್ದಾರೆ. ಇನ್ನುಳಿದ 1 ವರ್ಷ 10 ತಿಂಗಳ ಅವಧಿಗೆ ಅಂದರೆ 2028ರ ಮುಂದಿನ ವಿಧಾನಸಭಾ ಚುನಾವಣೆಯವರೆಗೆ ಡಿಕೆಶಿ ಅವರೇ ಕರುನಾಡಿನ ಸಾರಥಿ. ಹೊಸ ಕ್ಯಾಬಿನೆಟ್ ಫೈನಲ್ ಮಾಡಲು ಡಿಕೆಶಿ ಮತ್ತು ಸಿದ್ದರಾಮಯ್ಯ ಜೋಡಿ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಜೊತೆ ಸುದೀರ್ಘ ಚರ್ಚೆ ನಡೆಸಿದೆ. ಡಿಕೆಶಿ, ಸಿದ್ದರಾಮಯ್ಯ ಮತ್ತು ಖರ್ಗೆ ಮೂವರ ಬೆಂಬಲಿಗರಿಗೂ ಸಮಾನವಾಗಿ ಸಚಿವ ಸ್ಥಾನ ಹಂಚಲು ಹೈಕಮಾಂಡ್ ಮಾಸ್ಟರ್ ಪ್ಲಾನ್ ಮಾಡಿದೆ.

ಯಾರಿಗೆ ಸಿಗುತ್ತೆ ಮಂತ್ರಿ ಗಿರಿ? ಯಾರಿಗೆ ಕೊಕ್?

ಇವತ್ತು ಸಿಎಂ ಜೊತೆಗೆ ಸುಮಾರು 10 ರಿಂದ 15 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಚಾನ್ಸ್ ಇದೆ. ಸಂಪುಟ ಸೇರಲಿರುವ ಸಂಭವನೀಯ ನಾಯಕರ ಲಿಸ್ಟ್ ಇಲ್ಲಿದೆ:

  • ಕೆ.ಜೆ. ಜಾರ್ಜ್, ಡಾ. ಜಿ. ಪರಮೇಶ್ವರ, ರಾಮಲಿಂಗ ರೆಡ್ಡಿ
  • ಕೃಷ್ಣ ಬೈರೇಗೌಡ, ಯು.ಟಿ. ಖಾದರ್, ಎಂ.ಬಿ. ಪಾಟೀಲ್
  • ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ಡಾ. ಯತೀಂದ್ರ ಸಿದ್ದರಾಮಯ್ಯ
  • ಕೆ.ಎಚ್. ಮುನಿಯಪ್ಪ (ಅಥವಾ ಅವರ ಮಗಳು ರೂಪಕಲಾ ಶಶಿಧರ್)

ಆದರೆ, ಟ್ವಿಸ್ಟ್ ಅಂದರೆ ಮೊದಲ ಪಟ್ಟಿಯಲ್ಲೇ ಸಚಿವರಾಗುತ್ತಾರೆ ಅಂದುಕೊಂಡಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಹೆಸರು ಕೊನೆ ಕ್ಷಣದಲ್ಲಿ ಡ್ರಾಪ್ ಆಗುವ ಲಕ್ಷಣ ಕಾಣಿಸುತ್ತಿದೆ. ಅವರ ಬದಲಿಗೆ ಹಿರಿಯ ನಾಯಕರಾದ ದಿನೇಶ್ ಗುಂಡೂರಾವ್ ಮತ್ತು ಈಶ್ವರ್ ಖಂಡ್ರೆ ಅವರ ಹೆಸರುಗಳು ಮುಂಚೂಣಿಗೆ ಬಂದಿವೆ. ಇನ್ನು ಸಿದ್ದರಾಮಯ್ಯ ಅವರ ಆಪ್ತ ಸತೀಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನದ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಕಟ್ಟುವ ಪ್ಲಾನ್ ಕೂಡ ನಡೆದಿದೆ. ಅತ್ತ ಆಡಿಯೋ ಸೋರಿಕೆ ವಿವಾದದಲ್ಲಿ ಸಿಲುಕಿಕೊಂಡ ಜಮೀರ್ ಅಹ್ಮದ್ ಖಾನ್ ಅವರ ಮಂತ್ರಿ ಕನಸಿಗೆ ಸದ್ಯಕ್ಕೆ ಬ್ರೇಕ್ ಬಿದ್ದಂತಿದೆ. ಹಿರಿಯ ನಾಯಕ ಜಿ. ಪರಮೇಶ್ವರ ಅವರಿಗೆ ಡಿಸಿಎಂ ಹುದ್ದೆ ಸಿಗಬಹುದು ಎಂಬ ಟಾಕ್ ಜೋರಾಗಿದೆಯಾದರೂ, ಇಬ್ಬರು ಡಿಸಿಎಂ ಮಾಡುವ ಪ್ರಸ್ತಾವನೆಗೆ ಹೈಕಮಾಂಡ್‌ನಿಂದ ಇನ್ನು ಗ್ರೀನ್ ಸಿಗ್ನಲ್ ಸಿಕ್ಕಿಲ್ಲ.

ಜೂನ್ 18ರ ನಂತರ 2ನೇ ಲಿಸ್ಟ್!

ಕರ್ನಾಟಕ ನಿಯಮಾವಳಿ ಪ್ರಕಾರ ಸಿಎಂ ಸೇರಿ ಒಟ್ಟು 34 ಸಚಿವರು ಇರಬಹುದು. ಈಗ ಬರೀ 15 ಜನರಿಗೆ ಮಾತ್ರ ಚಾನ್ಸ್ ಸಿಗುತ್ತಿರುವುದರಿಂದ ಸೀಟು ಗಿಟ್ಟಿಸಿಕೊಳ್ಳಲು ಭರ್ಜರಿ ಲಾಬಿ ನಡೀತಿದೆ. ನಾಯಕರು ದೆಹಲಿಗೆ ಹಾರುತ್ತಲೇ ಇದ್ದಾರೆ. ಆದರೆ ಜೂನ್ 18 ರಂದು ನಡೆಯಲಿರುವ 4 ರಾಜ್ಯಸಭೆ ಹಾಗೂ 7 ವಿಧಾನ ಪರಿಷತ್ ಚುನಾವಣೆ ಮುಗಿದ ಮೇಲೆ ಬಾಕಿ ಉಳಿದ ಸಚಿವ ಸ್ಥಾನಗಳನ್ನು ಭರ್ತಿ ಮಾಡಲಾಗುತ್ತದೆ. ಆದರೆ ಹಳೇ ಸಂಪುಟದಲ್ಲಿದ್ದ ಹಲವರಿಗೆ ಮುಂದಿನ ಹಂತದಲ್ಲಿ ಕೈ ಬಿಡುವುದು ಗ್ಯಾರಂಟಿ ಎನ್ನಲಾಗುತ್ತಿದೆ.

ಬೆಂಗಳೂರಿಗೆ ಬಂತು 'ಎಸ್.ಎಂ. ಕೃಷ್ಣ' ಕಾಲದ ಗತ್ತು!

ಐಟಿ ಸಿಟಿ ಬೆಂಗಳೂರಿನ ಪೋಸ್ಟರ್ ಬಾಯ್ ಎಂದೇ ಕರೆಸಿಕೊಳ್ಳುವ ಡಿಕೆಶಿ ಸಿಎಂ ಆಗುತ್ತಿರುವುದಕ್ಕೆ ಬಿಸಿನೆಸ್ ಲೋಕ ಭರ್ಜರಿ ವೆಲ್ಕಮ್ ಮಾಡಿದೆ. ಬೆಂಗಳೂರನ್ನು ಸಿಂಗಾಪುರ ಮಾಡ್ತೀನಿ ಅಂತಿರೋ ಡಿಕೆಶಿಯನ್ನು ದೊಡ್ಡ ದೊಡ್ಡ ಉದ್ಯಮಿಗಳು ಈಗಲೇ ಮಾಜಿ ಸಿಎಂ ದಿವಂಗತ ಎಸ್.ಎಂ. ಕೃಷ್ಣ ಅವರಿಗೆ ಹೋಲಿಸಲು ಶುರು ಮಾಡಿದ್ದಾರೆ.

ಅಧಿಕಾರಕ್ಕೆ ಬರ್ತಿದ್ದಂತೆ ಡಿಕೆಶಿ ಕೊಡ್ತಾರಾ 3 ಬಿಗ್ ಗಿಫ್ಟ್?

2013 ರಲ್ಲಿ ಸಿದ್ದರಾಮಯ್ಯ ಸಿಎಂ ಆದ ತಕ್ಷಣ 'ಅನ್ನಭಾಗ್ಯ' ಘೋಷಿಸಿ 'ಅನ್ನರಾಮಯ್ಯ' ಅನಿಸಿಕೊಂಡಿದ್ದರು. ಈಗ ಡಿಕೆಶಿ ಕೂಡ ಮೂರು ಧಮಾಕಾ ಆಫರ್ ಘೋಷಿಸುವ ಸಾಧ್ಯತೆ ಇದೆ:

ವಿದ್ಯಾರ್ಥಿ ರಥ: ಶಕ್ತಿ ಯೋಜನೆಯಿಂದಾಗಿ ಬಸ್‌ಗಳಲ್ಲಿ ರಶ್ ಜಾಸ್ತಿಯಾಗಿ ವಿದ್ಯಾರ್ಥಿಗಳಿಗೆ ಸೀಟು ಸಿಗುತ್ತಿರಲಿಲ್ಲ. ಅದಕ್ಕಾಗಿ ಸ್ಟೂಡೆಂಟ್ಸ್‌ಗೆ ಮಾತ್ರ ವಿಶೇಷ ಉಚಿತ ಬಸ್ ಸೇವೆ.

ಹಾಲಿನ ಪ್ರೋತ್ಸಾಹ ಧನ: ಡೈರಿ ರೈತರಿಗೆ ಲೀಟರ್ ಹಾಲಿಗೆ 1 ರೂಪಾಯಿ ಹೆಚ್ಚುವರಿ ಪ್ರೋತ್ಸಾಹ ಧನ.

ಉದ್ಯೋಗ ಭಾಗ್ಯ: ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಡೆಡ್‌ಲೈನ್ ಫಿಕ್ಸ್ ಮಾಡಿ ನೇಮಕಾತಿ ಪ್ರಕ್ರಿಯೆ ಆರಂಭಿಸುವುದು.

ವಿಧಾನಸೌಧದಲ್ಲಿ ಹೊಸ ಆಡಳಿತದ ಸಾರಥ್ಯ ವಹಿಸಿಕೊಳ್ಳಲು 'ಬಂಡೆ'ಯಂತಹ ನಾಯಕ ಸಜ್ಜಾಗಿದ್ದಾರೆ!

Latest News