ರಾಜ್ಯ ರಾಜಕೀಯದಲ್ಲಿ ಇವತ್ತು ಅತ್ಯಂತ ಮಹತ್ವದ ಹಾಗೂ ಐತಿಹಾಸಿಕ ಕ್ಷಣವೊಂದು ದಾಖಲಾಗಿದೆ. ಲೋಕಭವನದಲ್ಲಿ ನಿಗದಿಯಾಗಿದ್ದ ಶುಭ ಮುಹೂರ್ತದಲ್ಲೇ ಕಾಂಗ್ರೆಸ್‌ನ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಭರ್ಜರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಅವರು ಅಲ್ಲಿ ಪ್ರಮಾಣವಚನ ಮುಗಿಸಿ ಸಿಎಂ ಕುರ್ಚಿ ಕಡೆಗೆ ಹೆಜ್ಜೆ ಇಡುತ್ತಿದ್ದಂತೆ, ಇತ್ತ ರಾಜ್ಯದ ಶಕ್ತಿ ಸೌಧವಾದ ‘ವಿಧಾನಸೌಧ’ದ ಮುಖ್ಯಮಂತ್ರಿ ಕಚೇರಿಯಲ್ಲೂ ಹೊಸ ಕಳೆ ಬಂದಿದೆ.
ಕಳಚಿದ ಹಳೇ ಬೋರ್ಡ್, ಬಂತು ಹೊಸ ಪ್ಲೇಟ್
ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ಸರ್ಕಸ್ ನಡೆಯುತ್ತಲೇ ಇತ್ತು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದರೂ, ಹೊಸ ಸಿಎಂ ಬರುವವರೆಗೂ ಅವರೇ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರಿದಿದ್ದರು. ಇದೇ ಕಾರಣಕ್ಕೆ ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಮುಖ್ಯಮಂತ್ರಿಗಳ ಆಫೀಸ್ ಬಾಗಿಲಲ್ಲಿ ಇಷ್ಟು ದಿನ ಸಿದ್ದರಾಮಯ್ಯ ಅವರ ಹೆಸರಿನ ಬೋರ್ಡ್ ಹಾಗೇ ಇತ್ತು.
ಆದರೆ ಬುಧವಾರ ಮಧ್ಯಾಹ್ನ ಲೋಕಭವನದಲ್ಲಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುತ್ತಿದ್ದಂತೆ, ಇತ್ತ ವಿಧಾನಸೌಧದ ಸಿಬ್ಬಂದಿ ಅಲರ್ಟ್ ಆದರು. ತಕ್ಷಣವೇ ಕಾರ್ಯಪ್ರವೃತ್ತರಾದ ಆಫೀಸ್ ಸ್ಟಾಫ್, ಸಿಎಂ ಚೇಂಬರ್ ಬಾಗಿಲಲ್ಲಿದ್ದ ‘ಸಿದ್ದರಾಮಯ್ಯ, ಮುಖ್ಯಮಂತ್ರಿ’ ಎಂಬ ಹಳೆಯ ನಾಮಫಲಕವನ್ನು ಗೌರವಪೂರ್ವಕವಾಗಿ ಕೆಳಗಿಳಿಸಿದರು. ಅದರ ಜಾಗದಲ್ಲಿ ತರಬೇವಲಾಗಿದ್ದ ಹೊಚ್ಚ ಹೊಸ ‘ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ’ ಎಂಬ ಬೋರ್ಡ್ ಅನ್ನು ಅಳವಡಿಸಿದರು!
ಹೂವಿನ ಹಾರ ಹಾಕಿ ಗ್ರಾಂಡ್ ವೆಲ್ಕಮ್
ಹೊಸ ಸಿಎಂ ನಾಮಫಲಕ ಫಿಕ್ಸ್ ಆಗುತ್ತಿದ್ದಂತೆ ವಿಧಾನಸೌಧದ ಸಿಬ್ಬಂದಿ ಆ ಬೋರ್ಡ್‌ಗೆ ಸುಂದರವಾದ ಹೂವಿನ ಹಾರ ಹಾಕಿ ಶೃಂಗರಿಸಿದರು. ಅಷ್ಟೇ ಅಲ್ಲ, ಹೊಸ ಮುಖ್ಯಮಂತ್ರಿಗಳನ್ನು ಬರಮಾಡಿಕೊಳ್ಳಲು ಇಡೀ ಸಿಎಂ ಕಚೇರಿಯ ಬಾಗಿಲುಗಳು ಮತ್ತು ಕಾರಿಡಾರ್‌ಗಳನ್ನು ರಂಗುರಂಗಿನ ಹೂವುಗಳು ಹಾಗೂ ತಳಿರು ತೋರಣಗಳಿಂದ ಮದುವಣಗಿತ್ತಿಯಂತೆ ಸಿಂಗಾರ ಮಾಡಲಾಗಿತ್ತು. ಕಚೇರಿಯ ಒಳಗಿನ ಮುಖ್ಯಮಂತ್ರಿಗಳ ಆಲಿಶಾನ್ ಕುರ್ಚಿಯನ್ನು ಕೂಡ ಹೊಸದಾಗಿ ರೆಡಿ ಮಾಡಿ ಇಡಲಾಗಿತ್ತು. ಈ ಸಂಭ್ರಮದ ದೃಶ್ಯಗಳನ್ನು ನೋಡಲು ವಿಧಾನಸೌಧದ ಆವರಣದಲ್ಲಿ ನೂಕುನುಗ್ಗಲು ಉಂಟಾಗಿತ್ತು.
ಅಜ್ಜಯ್ಯನ ಫೋಟೋ, ಕೈಲೊಂದು ಸಂವಿಧಾನ ಪುಸ್ತಕ
ಇನ್ನು ಲೋಕಭವನದಲ್ಲಿ ನಡೆದ ಪ್ರಮಾಣವಚನ ಕಾರ್ಯಕ್ರಮದಲ್ಲೂ ಡಿಕೆಶಿ ಅವರ ಸ್ಟೈಲ್ ಸಖತ್ ಹೈಲೈಟ್ ಆಗಿತ್ತು. ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡುವ ಮುನ್ನ ಡಿ.ಕೆ. ಶಿವಕುಮಾರ್ ಅವರು ತಾವೇ ಸ್ವತಃ ತಂದಿದ್ದ ತಮ್ಮ ಆರಾಧ್ಯ ದೈವ, ನೆಚ್ಚಿನ ಗುರುಗಳಾದ ಶ್ರೀ ಅಜ್ಜಯ್ಯನವರ (ಲಕ್ಷ್ಮಿಪುರದ ಅಜ್ಜಯ್ಯ) ಫೋಟೋಗೆ ಭಕ್ತಿಯಿಂದ ಸಾಷ್ಟಾಂಗ ನಮಸ್ಕಾರ ಮಾಡಿದರು.
ಅದಾದ ಬಳಿಕ, ಭಾರತದ ಸಂವಿಧಾನದ ಪುಸ್ತಕವನ್ನು (Constitution Book) ತಮ್ಮ ಕೈಯಲ್ಲಿ ಗಟ್ಟಿಯಾಗಿ ಹಿಡಿದುಕೊಂಡು, ಅತ್ಯಂತ ಗಾಂಭೀರ್ಯದಿಂದ ಮುಖ್ಯಮಂತ್ರಿಯಾಗಿ ಪ್ರತಿಜ್ಞೆ ಮಾಡಿದರು. ದೈವಭಕ್ತಿ ಮತ್ತು ದೇಶದ ಸಂವಿಧಾನ ಎರಡನ್ನೂ ಜೊತೆಯಾಗಿಯೇ ಗೌರವಿಸಿದ ಡಿಕೆಶಿ ಅವರ ಈ ನಡಾವಳಿ ನೆರೆದಿದ್ದ ಎಲ್ಲರ ಮನಗೆದ್ದಿತು.
ರಾಜಕೀಯದಲ್ಲಿ ಏನೇ ಏಳುಬೀಳುಗಳು ಬಂದರೂ ಧೃತಿಗೆಡದೆ 'ಕನಕಪುರ ಬಂಡೆ'ಯಂತೆ ನಿಂತು, ಇವತ್ತು ಕರುನಾಡಿನ ರಾಜ ಸಿಂಹಾಸನ ಏರಿರುವ ಡಿ.ಕೆ. ಶಿವಕುಮಾರ್ ಅವರಿಗೆ ಈಗ ವಿಧಾನಸೌಧದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಕೂಡ ಆತ್ಮೀಯವಾಗಿ ಸ್ವಾಗತ ಕೋರಿದ್ದಾರೆ. ಒಟ್ಟಿನಲ್ಲಿ, ಹೊಸ ಸಿಎಂ ನಾಮಫಲಕದೊಂದಿಗೆ ವಿಧಾನಸೌಧದಲ್ಲಿ ಈಗ ಹೊಸ ಆಡಳಿತದ ಸವಾರಿ ಅಧಿಕೃತವಾಗಿ ಶುರುವಾಗಿದೆ.