ರಾಮನಗರ: ಜಿಲ್ಲೆಯ ಹೆಮ್ಮೆಯ ಪುತ್ರ, ಕನಕಪುರದ ಬಂಡೆ ಡಿ.ಕೆ. ಶಿವಕುಮಾರ್ (DK Shivakumar) ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಶುಭ ಘಳಿಗೆ ಹತ್ತಿರವಾಗ್ತಿದ್ದಂತೆ, ಇತ್ತ ಇಡೀ ರಾಮನಗರ ಜಿಲ್ಲೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಜೂನ್ 3 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಈ ಐತಿಹಾಸಿಕ ಪದಗ್ರಹಣ ಸಮಾರಂಭಕ್ಕೆ ರಾಮನಗರ ಜಿಲ್ಲೆಯೊಂದರಿಂದಲೇ ಬರೋಬ್ಬರಿ 50 ರಿಂದ 60 ಸಾವಿರ ಜನರನ್ನು ಸೇರಿಸಿ ಭರ್ಜರಿ ಶಕ್ತಿ ಪ್ರದರ್ಶನ ಮಾಡಲು ಜಿಲ್ಲಾ ಕಾಂಗ್ರೆಸ್ ಭರ್ಜರಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ತಮ್ಮ ಜಿಲ್ಲೆಯ ನಾಯಕ ರಾಜ್ಯದ ಅತ್ಯುನ್ನತ ಗದ್ದುಗೆ ಏರುತ್ತಿರುವುದನ್ನು ಕಣ್ಣಾರೆ ಕಂಡು ಸಂಭ್ರಮಿಸಲು ಇಡೀ ಜಿಲ್ಲೆ ಸಜ್ಜಾಗಿದ್ದು, ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ ಮತ್ತು ಹಾರೋಹಳ್ಳಿ ತಾಲೂಕುಗಳಲ್ಲಿ ಸರಣಿ ಪೂರ್ವಭಾವಿ ಸಭೆಗಳು ಜರಗುತ್ತಿವೆ.
ಶಾಸಕರಿಂದ ಜವಾಬ್ದಾರಿ ಹಂಚಿಕೆ: ಬಸ್, ಊಟ ಫುಲ್ ವ್ಯವಸ್ಥೆ!
ಈಗಾಗಲೇ ರಾಮನಗರ ಕ್ಷೇತ್ರದ ಶಾಸಕ ಇಕ್ಬಾಲ್ ಹುಸೇನ್ ಅವರು ರಾಮನಗರ ಮತ್ತು ಹಾರೋಹಳ್ಳಿಯಲ್ಲಿ ಬೃಹತ್ ಕಾರ್ಯಕರ್ತರ ಸಭೆ ನಡೆಸಿದ್ದಾರೆ. ಇತ್ತ ಮಾಗಡಿ ಶಾಸಕ ಬಾಲಕೃಷ್ಣ ಅವರು ಬಿಡದಿಯಲ್ಲಿ ಮುಖಂಡರ ಸಭೆ ನಡೆಸಿ ಜವಾಬ್ದಾರಿಗಳನ್ನು ಹಂಚಿದ್ದಾರೆ.
ಸಭೆಯಲ್ಲಿ ಮಾತನಾಡಿದ ಶಾಸಕರು, "ಇದು ನಮ್ಮ ಜಿಲ್ಲೆಯ ಹಬ್ಬ. ಬೆಂಗಳೂರಿಗೆ ಬರುವ ಪ್ರತಿಯೊಬ್ಬ ಅಭಿಮಾನಿ ಮತ್ತು ಕಾರ್ಯಕರ್ತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ," ಎಂದಿದ್ದಾರೆ. ಇದಕ್ಕಾಗಿ ಹಳ್ಳಿ ಹಳ್ಳಿಗಳಿಂದ ಜನರನ್ನು ಕರೆತರಲು ನೂರಾರು ಬಸ್‌ಗಳ ವ್ಯವಸ್ಥೆ ಮಾಡಲಾಗುತ್ತಿದ್ದು, ಎಲ್ಲರಿಗೂ ಸೂಕ್ತ ಊಟ ಹಾಗೂ ತಿಂಡಿಯ ಜವಾಬ್ದಾರಿಯನ್ನು ಸ್ಥಳೀಯ ನಾಯಕರಿಗೆ ವಹಿಸಲಾಗಿದೆ. ಅಲ್ಲದೆ, ಬೆಂಗಳೂರು ರಸ್ತೆಯುದ್ದಕ್ಕೂ ಡಿಕೆಶಿಗೆ ಶುಭ ಕೋರುವ ದೈತ್ಯ ಕಟೌಟ್‌ಗಳನ್ನು ನಿಲ್ಲಿಸಲು ಪ್ಲಾನ್ ಮಾಡಲಾಗಿದೆ.
"ತಿಹಾರ್ ಟು ವಿಧಾನಸೌಧ": ಡಿಕೆಶಿ ಕಠಿಣ ಪಯಣ ನೆನೆದ ಇಕ್ಬಾಲ್ ಹುಸೇನ್
ಸಭೆಯಲ್ಲಿ ಭಾವುಕರಾಗಿ ಮಾತನಾಡಿದ ಶಾಸಕ ಇಕ್ಬಾಲ್ ಹುಸೇನ್, "ಬಹಳ ದಿನಗಳ ನಂತರ ರಾಜ್ಯದ ಜನರ ಮತ್ತು ನಮ್ಮ ಜಿಲ್ಲೆಯ ಕನಸು ನನಸಾಗುತ್ತಿದೆ. ಡಿಕೆಶಿ ಅವರು ಕಾಂಗ್ರೆಸ್ ಪಕ್ಷವನ್ನು ಕೇವಲ ರಾಜಕೀಯ ವೇದಿಕೆಯಾಗಿ ನೋಡಲಿಲ್ಲ, ಅದನ್ನು ದೇವರೆಂದು ಪೂಜಿಸಿದವರು. ದೇಶದಲ್ಲಿ ಎಲ್ಲೇ ಕಾಂಗ್ರೆಸ್‌ಗೆ ಕಷ್ಟ ಬಂದರೂ ಟ್ರಬಲ್ ಶೂಟರ್ ಆಗಿ ನಿಂತವರು," ಎಂದು ಕೊಂಡಾಡಿದರು.
ಹೋರಾಟದ ಹಾದಿ: "ಅವರು ಸಂಕಷ್ಟದ ದಿನಗಳಲ್ಲಿ ತಿಹಾರ್ ಜೈಲಿಗೆ ಹೋಗಿ ಬಂದ ತಕ್ಷಣ ವರಿಷ್ಠರು ಅವರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಕೊಟ್ಟರು. ಅಲ್ಲಿಂದ ಅವರು ಸುಮ್ಮನೆ ಕೂರಲಿಲ್ಲ. ಕೊರೊನಾ ಸಮಯದಲ್ಲಿ ಜೂಮ್ ಮೀಟಿಂಗ್ ಮೂಲಕ ಇಡೀ ರಾಜ್ಯದ ಕಾರ್ಯಕರ್ತರನ್ನು ಜೋಡಿಸಿದರು. 'ಆರೋಗ್ಯ ಹಸ್ತ', 'ಸ್ವಾತಂತ್ರ್ಯ ನಡಿಗೆ' ಹಾಗೂ ಇಡೀ ದಕ್ಷಿಣ ಕರ್ನಾಟಕದ ಜೀವನಾಡಿಯಾದ 'ಮೇಕೆದಾಟು ಪಾದಯಾತ್ರೆ'ಯಂತಹ ಹತ್ತಾರು ಹೋರಾಟಗಳನ್ನು ಕಟ್ಟಿ ಬೆಳೆಸಿದರು. ಅವರ ಈ ಅಸಾಧಾರಣ ಸಂಘಟನಾ ಚತುರತೆಯೇ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ತಂದುಕೊಟ್ಟಿತು. ಇಂದು ಹೈಕಮಾಂಡ್ ಅವರ ಕಾಯಕ ನಿಷ್ಠೆಗೆ ತಕ್ಕ ಗೌರವ ನೀಡಿದೆ," ಎಂದು ಇಕ್ಬಾಲ್ ಹುಸೇನ್ ಹೆಮ್ಮೆಯಿಂದ ಹೇಳಿದರು.
ಗ್ರಾಮ ಪಂಚಾಯತಿ ಮಟ್ಟದಿಂದ ಬೆಂಗಳೂರಿಗೆ ಲಗ್ಗೆ!
ಈ ಮಹಾಸಂಗ್ರಾಮದ ಯಶಸ್ಸಿಗಾಗಿ ಯುವ ಕಾಂಗ್ರೆಸ್, ಎನ್‌ಎಸ್‌ಯುಐ (NSUI), ಮಹಿಳಾ ಘಟಕ ಸೇರಿದಂತೆ ಕಾಂಗ್ರೆಸ್‌ನ ಎಲ್ಲಾ ವಿಭಾಗಗಳು ಹಗಲಿರುಳು ಶ್ರಮಿಸುತ್ತಿವೆ. ಗ್ರಾಪಂ ಮಟ್ಟದಿಂದ ಹಿಡಿದು ಜಿಲ್ಲಾ ಮಟ್ಟದವರೆಗಿನ ಪ್ರತಿಯೊಬ್ಬ ಮುಖಂಡನೂ ಈ ಕಾರ್ಯಕ್ರಮವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾನೆ.
ಸಭೆಯಲ್ಲಿ ಮಾಜಿ ಶಾಸಕ ಕೆ.ರಾಜು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಕೆಎಮ್‌ಎಫ್ (KMF) ಮಾಜಿ ಅಧ್ಯಕ್ಷ ಪಿ.ನಾಗರಾಜು, ಜಿಪಂ ಮಾಜಿ ಅಧ್ಯಕ್ಷ ಕೆ.ರಮೇಶ್ ಸೇರಿದಂತೆ ಹಲವು ಪ್ರಮುಖ ನಾಯಕರು ಭಾಗವಹಿಸಿದ್ದರು.
"ಇದು ನಮ್ಮ ಜಿಲ್ಲೆಯ ಕಾರ್ಯಕ್ರಮ"
ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚೇತನ್ ಕುಮಾರ್ ಮಾತನಾಡಿ, "ನಮ್ಮ ಜಿಲ್ಲೆಯವರೇ ಸಿಎಂ ಆಗುತ್ತಿರುವುದು ಇಡೀ ಜಿಲ್ಲೆಯ ಜನರಲ್ಲಿ ದೀಪಾವಳಿಯ ಸಂಭ್ರಮ ತಂದಿದೆ. ಶಾಸಕ ಇಕ್ಬಾಲ್ ಹುಸೇನ್ ಅವರ ಮಾರ್ಗದರ್ಶನದಲ್ಲಿ ಸಕಲ ಸಿದ್ಧತೆಗಳು ಮುಕ್ತಾಯದ ಹಂತದಲ್ಲಿದ್ದು, ಜೂನ್ 3 ರಂದು ಬೆಂಗಳೂರಿನ ಲೋಕ ಭವನ ರಾಮನಗರದ ಜನರಿಂದ ಕಂಗೊಳಿಸಲಿದೆ," ಎಂದು ವಿಶ್ವಾಸ ವ್ಯಕ್ತಪಡಿಸಿದರು. ಒಟ್ಟಿನಲ್ಲಿ, 'ಡಿ.ಕೆ ಅಣ್ಣ'ನ ಪಟ್ಟಾಭಿಷೇಕವನ್ನು ಇತಿಹಾಸದ ಪುಟಗಳಲ್ಲಿ ದಾಖಲಾಗುವಂತೆ ಮಾಡಲು ಗಂಡುಮೆಟ್ಟಿದ ನಾಡು ರಾಮನಗರ ಸಂಪೂರ್ಣವಾಗಿ ಸಜ್ಜಾಗಿದೆ.