ಮಾರ್ಚ್ 23ರ ಸಾಯಂಕಾಲ ದೆಹಲಿ ಮೆಟ್ರೋದ ಮಹಿಳಾ ಬೋಗಿಯಲ್ಲಿ ನಡೆದ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಕೆಲವು ಯುವತಿಯರ ಗುಂಪು ಮೆಟ್ರೋ ಒಳಗೆ ನಡೆದುಕೊಂಡ ರೀತಿ ಕಂಡು ಸಹಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ವಿಡಿಯೋ ಪ್ರಕಾರ, ಮಹಿಳಾ ಕೋಚ್‌ನಲ್ಲಿ ಕೆಲವು ಯುವತಿಯರು ತುಂಬಾನೇ ಜೋರಾಗಿ ಮಾತನಾಡುತ್ತಾ, ಗಲಾಟೆ ಮಾಡುತ್ತಿದ್ದರು. ಬೋಗಿಯಲ್ಲಿದ್ದ ಇತರ ಪ್ರಯಾಣಿಕರು ಸ್ವಲ್ಪ ಸುಮ್ಮನಿರಿ, ಗಲಾಟೆ ಮಾಡಬೇಡಿ ಎಂದು ವಿನಂತಿಸಿಕೊಂಡಿದ್ದಾರೆ. ಆದರೆ, ಈ ವಿನಂತಿಯನ್ನು ಕೇಳಿಸಿಕೊಳ್ಳುವ ಬದಲು ಆ ಯುವತಿಯರ ಗುಂಪು ಮತ್ತಷ್ಟು ಅತಿರೇಕವಾಗಿ ವರ್ತಿಸಲು ಶುರು ಮಾಡಿದೆ.
ಅಲ್ಲಿಗೆ ನಿಲ್ಲಿಸದ ಈ ಯುವತಿಯರು, ಬೋಗಿಯ ಬಾಗಿಲ ಬಳಿ ನಿಂತು ತುಂಬಾನೇ ಅಶ್ಲೀಲವಾದ ಮತ್ತು ಕೆಟ್ಟ ಭಾಷೆಯಲ್ಲಿ ಬೈಯಲು ಶುರು ಮಾಡಿದ್ದಾರೆ. ಬೈಗುಳದ ಜೊತೆಗೆ ಪ್ರಯಾಣಿಕರತ್ತ ಆಕ್ರಮಣಕಾರಿಯಾಗಿ ಕೈ ಸನ್ನೆಗಳನ್ನು ಮಾಡಿದ್ದು ವಿಡಿಯೋದಲ್ಲಿದೆ.
ಯುವತಿಯರ ಈ ರೌಡಿ ವರ್ತನೆಯಿಂದಾಗಿ ಬೋಗಿಯಲ್ಲಿದ್ದ ಇತರ ಮಹಿಳಾ ಪ್ರಯಾಣಿಕರು ತುಂಬಾನೇ ಮುಜುಗರ ಅನುಭವಿಸಿದ್ದಾರೆ. ಆ ಗುಂಪಿನ ಅಬ್ಬರ ತಾಳಲಾರದೆ ಅನೇಕ ಪ್ರಯಾಣಿಕರು ತಮ್ಮ ಸೀಟುಗಳನ್ನು ಬಿಟ್ಟು ದೂರ ಹೋಗಿ ಕುಳಿತಿದ್ದಾರೆ. ಮಹಿಳೆಯರಿಗಾಗಿಯೇ ಇರುವ ವಿಶೇಷ ಬೋಗಿಯಲ್ಲಿ ಇಂತಹ ಅಸಭ್ಯ ವರ್ತನೆ ಕಂಡುಬಂದಿರುವುದು ಮೆಟ್ರೋ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಜನರು ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ (DMRC), ಸಿಐಎಸ್‌ಎಫ್ (CISF) ಮತ್ತು ದೆಹಲಿ ಪೊಲೀಸರನ್ನು ಟ್ಯಾಗ್ ಮಾಡಿ ಈ ಯುವತಿಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. "ಮಹಿಳಾ ಬೋಗಿ ಇರೋದೇ ಸುರಕ್ಷತೆಗಾಗಿ, ಆದರೆ ಇಲ್ಲೂ ಇಂತಹ ಕಿಡಿಗೇಡಿಗಳ ಕಾಟ ತಪ್ಪಿಲ್ಲ ಅಂದ್ರೆ ಹೇಗೆ?" ಎಂದು ಜನರು ಕಮೆಂಟ್ ಮಾಡುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ DMRC ಅಧಿಕಾರಿಗಳು, ಘಟನೆ ನಡೆದ ರೈಲಿನ ವಿವರಗಳನ್ನು ನೀಡುವಂತೆ ಕೇಳಿದ್ದಾರೆ. ಇಂತಹ ವರ್ತನೆಗಳನ್ನು ಸಹಿಸುವುದಿಲ್ಲ ಎಂದು ಹೇಳಿದ್ದರೂ, ಇದುವರೆಗೂ ಆ ಯುವತಿಯರ ಮೇಲೆ ಯಾವುದೇ ಎಫ್‌ಐಆರ್ ಅಥವಾ ಬಂಧನವಾದ ಬಗ್ಗೆ ಮಾಹಿತಿ ಹೊರಬಂದಿಲ್ಲ.
ದೆಹಲಿ ಮೆಟ್ರೋದಲ್ಲಿ ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ಹೆಚ್ಚಾಗುತ್ತಿವೆ. ರೀಲ್ಸ್ ಮಾಡುವ ಭರದಲ್ಲಿ ಅಥವಾ ಸುಮ್ಮನೆ ಅನಾಹುತ ಸೃಷ್ಟಿಸುವ ಉದ್ದೇಶದಿಂದ ಪ್ರಯಾಣಿಕರಿಗೆ ತೊಂದರೆ ಕೊಡಲಾಗುತ್ತಿದೆ. ಮೆಟ್ರೋದಂತಹ ಸಾರ್ವಜನಿಕ ಸ್ಥಳದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಕನಿಷ್ಠ ಜ್ಞಾನವೂ ಇಲ್ಲದಂತೆ ವರ್ತಿಸುವವರ ವಿರುದ್ಧ ಕಠಿಣ ಕ್ರಮದ ಅಗತ್ಯವಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
3-4 Girls started abusing a Lady sitting inside Delhi Metro (Women’s Coach) for no reason🤡
— Ghar Ke Kalesh (@gharkekalesh) March 24, 2026
pic.twitter.com/6Y8xNMZflG
ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವಾಗ ನಮಗಿರುವಷ್ಟೇ ಹಕ್ಕು ಇತರರಿಗೂ ಇರುತ್ತದೆ. ನಮ್ಮ ಮೋಜು ಅಥವಾ ಕೋಪ ಇತರರಿಗೆ ಕಿರಿಕಿರಿ ಉಂಟುಮಾಡಬಾರದು. ಅದರಲ್ಲೂ ಮಹಿಳೆಯರಿಗಾಗಿಯೇ ಮೀಸಲಿಟ್ಟ ಜಾಗದಲ್ಲಿ ಇಂತಹ ರೌಡಿಸಂ ನಡೆದರೆ ಸಾಮಾನ್ಯ ಹೆಣ್ಣುಮಕ್ಕಳು ಪ್ರಯಾಣ ಮಾಡುವುದು ಹೇಗೆ?