ಹಬ್ಬ ಬಂತು, ವೀಕೆಂಡ್ ಬಂತು ಅಂದ್ರೆ ಸಾಕು, ನಾವೆಲ್ಲಾ ಕೈಯಲ್ಲಿ ಲಿಸ್ಟ್ ಹಿಡ್ಕೊಂಡು ಮಾರ್ಕೆಟ್‌ಗೆ ಓಡ್ತೀವಿ. ಆದ್ರೆ ಈ ಶಾಪಿಂಗ್‌ನಲ್ಲಿ ಒಂದು ದೊಡ್ಡ ಕಾಟ ಅಂದ್ರೆ, ಒಂದೆರಡು ಗಂಟೆ ಅಡ್ಡಾಡುವಷ್ಟರಲ್ಲಿ ಕೈಯಲ್ಲಿ ಹತ್ತಾರು ಬ್ಯಾಗ್‌ಗಳು ಜಮೆಯಾಗಿಬಿಡುತ್ತವೆ. ಆ ಭಾರ ಹೊತ್ತುಕೊಂಡು, ಸುಸ್ತಾಗಿ, ಬೆವತು ಹೋಗೋದು ಒಂದ್ಕಡೆಯಾದ್ರೆ, ಇಷ್ಟಪಟ್ಟ ವಸ್ತುಗಳನ್ನು ಸರಿಯಾಗಿ ನೋಡೋಕೂ ಆಗಲ್ಲ!
"ಛೆ.. ಯಾರಾದ್ರೂ ನನ್ನ ಬ್ಯಾಗ್ ಹಿಡ್ಕೊಂಡು ಜೊತೆಯಲ್ಲೇ ಬಂದ್ರೆ ಎಷ್ಟು ಚೆನ್ನಾಗಿರ್ತಿತ್ತು" ಅಂತ ಅನ್ಕೋತೀರಾ ಅಲ್ವಾ? ನಿಮ್ಮ ಈ ಆಸೆಯನ್ನು ದೆಹಲಿಯ ಒಂದು ಸ್ಟಾರ್ಟ್‌ಅಪ್ ಕಂಪನಿ ನಿಜ ಮಾಡಿದೆ! ಹೌದು, ಈಗ ಮಾರ್ಕೆಟ್‌ನಲ್ಲಿ ಶಾಪಿಂಗ್ ಬ್ಯಾಗ್ ಹೊರಲೆಂದೇ ಬಾಯ್ಸ್ ಸಿಗ್ತಾರೆ. ಈ ಹೊಸ ಐಡಿಯಾಗೆ ಇಟ್ಟಿರೋ ಹೆಸರು ‘ಕ್ಯಾರಿ ಮೆನ್’ (Carry Men)!
ದೆಹಲಿಯ ಲಜಪತ್ ನಗರದಲ್ಲಿ ಹೊಸ ಹವಾ;
ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಕೆಲವು ಪೋಟೋಗಳು ಸಖತ್ ವೈರಲ್ ಆಗ್ತಿವೆ. ದೆಹಲಿಯ ಅತ್ಯಂತ ಬ್ಯುಸಿ ಮಾರ್ಕೆಟ್ ಆಗಿರೋ 'ಲಜಪತ್ ನಗರ'ದಲ್ಲಿ ಕೆಲವು ಸ್ಮಾರ್ಟ್ ಯುವಕರು ಗ್ರಾಹಕರ ಹಿಂದೆ ನಿಷ್ಠಾವಂತ ಬಾಡಿಗಾರ್ಡ್‌ಗಳಂತೆ ಬ್ಯಾಗ್ ಹಿಡಿದುಕೊಂಡು ಹೆಜ್ಜೆ ಹಾಕ್ತಿದ್ದಾರೆ. ಇದನ್ನು ನೋಡಿ ಜನ "ಇದೇನಿದು ಹೊಸ ಅವತಾರ?" ಅಂತ ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ಆದ್ರೆ ಇದು ಯಾವುದೇ ಗಿಮಿಕ್ ಅಲ್ಲ, ದುಡ್ಡು ಕೊಟ್ಟು ಪಡೆಯುವ ಅಪ್ಪಟ ಪ್ರೊಫೆಷನಲ್ ಸರ್ವಿಸ್!
ಬರೀ ಬ್ಯಾಗ್ ಹೊರಲ್ಲ, ಇವ್ರು ಮಾಡೋ ಬೇರೆ ಕೆಲಸಗಳೂ ಇವೆ!
ನಿಮಗೆ ಅನ್ಸಬಹುದು, ಬರೀ ಬ್ಯಾಗ್ ಹಿಡಿಯೋಕೆ ಇಷ್ಟೊಂದು ಬಿಲ್ಡಪ್ ಬೇಕಾ ಅಂತ? ಆದ್ರೆ ಈ 'ಕ್ಯಾರಿ ಮೆನ್'ಗಳು ಬ್ಯಾಗ್ ಹೊರ ಇಷ್ಟೇ ಅಲ್ಲ, ಇನ್ನೂ ಏನೇನು ಮಾಡ್ತಾರೆ ಗೊತ್ತಾ?
ಗಂಟೆ ಲೆಕ್ಕದಲ್ಲಿ ಚಾರ್ಜ್ - ಈ ಸರ್ವಿಸ್ ಸಿಗೋದು ಗಂಟೆಯ ಆಧಾರದ ಮೇಲೆ. ಒಂದು ಗಂಟೆಗೆ ಸುಮಾರು ₹149 ಚಾರ್ಜ್ ಮಾಡ್ತಾರೆ (ಕೆಲವೊಮ್ಮೆ ಆಫರ್ ಬೆಲೆಯಲ್ಲಿ ಅರ್ಧ ಗಂಟೆಗೆ ₹79 ಕೂಡ ಇರುತ್ತೆ).
ಲಿಮಿಟ್ ಎಷ್ಟು? - ಇವರು ಒಬ್ಬ ಗ್ರಾಹಕರ ಗರಿಷ್ಠ 12 ಕೆಜಿವರೆಗಿನ ಬ್ಯಾಗ್‌ಗಳನ್ನು ಆರಾಮಾಗಿ ಹೊತ್ತು ಸಾಗುತ್ತಾರೆ.
ಕ್ಯೂನಲ್ಲಿ ನಿಲ್ಲೋ ಉಸಾಬರಿ ಇಲ್ಲ - ಮಾರ್ಕೆಟ್‌ಗೆ ಹೋದಾಗ ಫೇಮಸ್ ಚಾಟ್ಸ್ ಅಥವಾ ತಿಂಡಿ ಅಂಗಡಿಗಳ ಮುಂದೆ ಉದ್ದನೆಯ ಕ್ಯೂ ಇರುತ್ತೆ ಅಲ್ವಾ? ನೀವು ಆರಾಮಾಗಿ ಇರಬಹುದು, ನಿಮಗೋಸ್ಕರ ಈ ಕ್ಯಾರಿ ಮೆನ್ ಕ್ಯೂನಲ್ಲಿ ನಿಂತು ಪಾರ್ಸಲ್ ಇಸ್ಕೊಂಡು ಬರ್ತಾರೆ!
ವಿಶೇಷ ಸೌಲಭ್ಯಗಳು - ಇವರ ಹತ್ತಿರ ಪೋರ್ಟಬಲ್ ಕ್ಯಾಂಪಿಂಗ್ ಚೇರ್‌ಗಳು ಇರುತ್ತವೆ. ನಿಮಗೆ ಸುಸ್ತಾದ್ರೆ ಮಾರ್ಕೆಟ್‌ನಲ್ಲೇ ಚೇರ್ ಹಾಕಿ ಕೂರಿಸ್ತಾರೆ. ಜೊತೆಗೆ ನಿಮ್ಮ ಫೋನ್ ಚಾರ್ಜ್ ಮುಗಿದ್ರೆ ಪವರ್ ಬ್ಯಾಂಕ್ ಕೊಡ್ತಾರೆ, ಬಿಸಿಲಿದ್ದರೆ ಛತ್ರಿ ಕೂಡ ಹಿಡಿತಾರೆ!
ಬದಲಾಗ್ತಿದೆ ಮೆಟ್ರೋ ಸಿಟಿ ಲೈಫ್ ಸ್ಟೈಲ್
ನಗರ ಪ್ರದೇಶಗಳಲ್ಲಿ ಜನರ ಲೈಫ್‌ಸ್ಟೈಲ್ ಎಷ್ಟು ಸ್ಪೀಡ್ ಆಗಿ ಬದಲಾಗ್ತಿದೆ ಅನ್ನೋದಕ್ಕೆ ಇದೊಂದು ಬೆಸ್ಟ್ ಎಕ್ಸಾಂಪಲ್. ಇವತ್ತಿನ ದಿನಗಳಲ್ಲಿ ಜನರಿಗೆ ಸಮಯ ಮತ್ತು ಆರಾಮ (Convenience) ಎರಡೂ ಮುಖ್ಯ. ದುಡ್ಡು ಕೊಟ್ಟರೆ ನಮ್ಮ ಸಣ್ಣಪುಟ್ಟ ಕೆಲಸಗಳಿಗೂ ಜನ ಸಿಗ್ತಾರೆ ಅನ್ನೋದು ಮತ್ತೊಮ್ಮೆ ಪ್ರೂವ್ ಆಗಿದೆ.
ಆರಂಭದಲ್ಲಿ ಇದು ಕೇವಲ ಶ್ರೀಮಂತರ ಶೋಕಿ ಅಂತ ಅಂದುಕೊಂಡರ ಜನ್ರು, ಈಗ ಇದರ ಅಸಲಿ ಲಾಭ ತಿಳಿಯುತ್ತಿದ್ದಾರೆ. ವಿಶೇಷವಾಗಿ ವಯಸ್ಸಾದವರು, ಗರ್ಭಿಣಿಯರು ಮತ್ತು ಸಣ್ಣ ಮಕ್ಕಳನ್ನು ಕರೆದುಕೊಂಡು ಮಾರ್ಕೆಟ್‌ಗೆ ಬರುವ ಪೋಷಕರಿಗೆ ಈ ಸರ್ವಿಸ್ ವರದಾನವಾಗಿದೆ. ಯಾಕಂದ್ರೆ ಮಕ್ಕಳನ್ನು ಎತ್ಕೊಂಡು ಬ್ಯಾಗ್ ಹೊರೋದು ಕಷ್ಟ, ಇಂತಹ ಟೈಮ್‌ನಲ್ಲಿ ಈ 'ಕ್ಯಾರಿ ಮೆನ್'ಗಳು ದೊಡ್ಡ ಹೆಲ್ಪ್ ಆಗ್ತಿದ್ದಾರೆ.
ನಮ್ಮ ಬೆಂಗಳೂರಿಗೂ ಬಂದ್ರೆ ಹೆಂಗಿರುತ್ತೆ?
ನೆಟ್ಟಿಗರು ಈ ಸರ್ವಿಸ್ ನೋಡಿ ಫುಲ್ ಫಿದಾ ಆಗಿದ್ದಾರೆ. "ಒಳ್ಳೆ ಐಡಿಯಾ ಮಾರಾಯ್ರೇ, ಇದರಿಂದ ಯುವಕರಿಗೆ ಕೆಲಸವೂ ಸಿಗುತ್ತೆ, ಜನರಿಗೆ ಹೆಲ್ಪ್ ಆಗುತ್ತೆ" ಅಂತ ಕೆಲವರು ಹೇಳ್ತಿದ್ದಾರೆ. ಇನ್ನು ಕೆಲವರು 'ನಮ್ಮ ಅಮ್ಮನನ್ನ ಶಾಪಿಂಗ್‌ಗೆ ಕಳಿಸೋಕೆ ಇನ್ಮುಂದೆ ಯೋಚನೆ ಮಾಡಬೇಕಾಗಿಲ್ಲ' ಅಂತ ಖುಷಿ ಪಡ್ತಿದ್ದಾರೆ..