Apr 22, 2026 Languages : ಕನ್ನಡ | English

ಪತಿಯ ಅಕ್ರಮ ಸಂಬಂಧಕ್ಕೆ ಬಲಿಯಾದಳಾ ಕಾವ್ಯ? ಪೆನ್‌ಡ್ರೈವ್‌ನಿಂದ ಹೊರಬಂತು ಫೋಟೋ!!

ಮದುವೆ ಅಂದಮೇಲೆ ಸಾವಿರ ಕನಸುಗಳಿರುತ್ತವೆ. ಆದರೆ ದಾವಣಗೆರೆಯ ಮಂಡಲೂರು ಗ್ರಾಮದ ಕಾವ್ಯ ಎಂಬ 26 ವರ್ಷದ ಯುವತಿಯ ಬಾಳಲ್ಲಿ ಆ ಕನಸುಗಳೆಲ್ಲ ಎರಡೇ ವರ್ಷಕ್ಕೆ ಮಣ್ಣು ಪಾಲಾಗಿವೆ. ದಾವಣಗೆರೆಯ ಅಂಚೆ ಇಲಾಖೆ ವಸತಿಗೃಹದಲ್ಲಿ ಕಾವ್ಯ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಈಗ ಇದು ಹತ್ಯೆಯೋ ಅಥವಾ ಆತ್ಮಹತ್ಯೆಯೋ ಎಂಬ ದೊಡ್ಡ ಚರ್ಚೆ ಶುರುವಾಗಿದೆ.

ಮದುವೆಯಾದ ಎರಡೇ ವರ್ಷಕ್ಕೆ ಸಂಸಾರದಲ್ಲಿ ಬಿರುಗಾಳಿ
ಮದುವೆಯಾದ ಎರಡೇ ವರ್ಷಕ್ಕೆ ಸಂಸಾರದಲ್ಲಿ ಬಿರುಗಾಳಿ

ನಡೆದಿದ್ದೇನು?
ಕಾವ್ಯ, ಹೊದಿಗೆರೆ ನಿವಾಸಿ ಮನುವನ್ನು ಮೆಚ್ಚಿ ಸಂಭ್ರಮದಿಂದ ಮದುವೆಯಾಗಿದ್ದಳು. ಮದುವೆಗೂ ಮುನ್ನ ಈ ಜೋಡಿ ಸಖತ್ ಅದ್ಧೂರಿಯಾಗಿ ಫೋಟೋಶೂಟ್ ಕೂಡ ಮಾಡಿಸಿಕೊಂಡಿತ್ತು. ಮಗಳ ಜೀವನ ಚೆನ್ನಾಗಿರಲಿ ಎಂದು ಪೋಷಕರು ಲಕ್ಷಾಂತರ ರೂಪಾಯಿ ಸಾಲ ಮಾಡಿ ಮದುವೆ ಮಾಡಿಕೊಟ್ಟಿದ್ದರು. ಆದರೆ, ಸಂಸಾರ ಶುರುವಾದ ಕೆಲವೇ ದಿನಗಳಲ್ಲಿ ಗಂಡನ ಅಸಲಿ ಆಟ ಬಯಲಾಗಿದೆ.

ಪೆನ್‌ಡ್ರೈವ್‌ನಲ್ಲಿತ್ತು ಅಸಲಿ ಗುಟ್ಟು!
ಪತಿ ಮನುವಿಗೆ ಬೇರೆ ಯುವತಿಯ ಜೊತೆ ಅಕ್ರಮ ಸಂಬಂಧ ಇತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲ, ತವರು ಮನೆಯಿಂದ ಹಣ ತರುವಂತೆ ಕಾವ್ಯಳಿಗೆ ಆತ ನಿರಂತರವಾಗಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದನಂತೆ. ಗಂಡನ ಈ ಅಕ್ರಮ ವ್ಯವಹಾರದ ಬಗ್ಗೆ ಪಕ್ಕಾ ಸಾಕ್ಷಿ ಕಲೆ ಹಾಕಿದ್ದ ಕಾವ್ಯ, ಆತ ಬೇರೆ ಯುವತಿ ಜೊತೆ ಮಾಡಿದ್ದ ಚಾಟಿಂಗ್ ಸ್ಕ್ರೀನ್‌ಶಾಟ್‌ಗಳು ಮತ್ತು ಇತರೆ ದಾಖಲೆಗಳನ್ನು ಒಂದು ಪೆನ್‌ಡ್ರೈವ್‌ನಲ್ಲಿ ಸ್ಟೋರ್ ಮಾಡಿ, ತನ್ನ ತಮ್ಮನ ಬ್ಯಾಗ್‌ನಲ್ಲಿ ಯಾರಿಗೂ ತಿಳಿಯದಂತೆ ಬಚ್ಚಿಟ್ಟಿದ್ದಳು.

ಪೋಷಕರ ಆಕ್ರೋಶ: "ಇದು ಕತ್ತು ಹಿಸುಕಿ ಮಾಡಿದ ಹತ್ಯೆ"
"ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳುವವಳಲ್ಲ, ಆಕೆಯ ಪತಿ ಮನುವೇ ಕತ್ತು ಹಿಸುಕಿ ಆಕೆಯನ್ನು ಹತ್ಯೆ ಮಾಡಿದ್ದಾನೆ" ಎಂದು ಕಾವ್ಯ ಪೋಷಕರು ಕಣ್ಣೀರು ಹಾಕುತ್ತಿದ್ದಾರೆ. ಮಗಳ ಸಾವಿಗೆ ನ್ಯಾಯ ಬೇಕು ಎಂದು ಅವರು ದಾವಣಗೆರೆ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಇಲ್ಲಿ ಮತ್ತೊಂದು ಮುಖ್ಯ ವಿಷಯವೆಂದರೆ, ಪೊಲೀಸರ ತನಿಖೆಯ ಬಗ್ಗೆ ಪೋಷಕರಿಗೆ ನಂಬಿಕೆ ಇಲ್ಲದಂತಾಗಿದೆ. "ಪೊಲೀಸರು ಸರಿಯಾಗಿ ತನಿಖೆ ನಡೆಸುತ್ತಿಲ್ಲ, ಹೀಗಾಗಿ ನಮ್ಮ ಬಳಿ ಇರೋ ಸಾಕ್ಷ್ಯಗಳನ್ನ (ಪೆನ್‌ಡ್ರೈವ್) ನಾವು ನೇರವಾಗಿ ನ್ಯಾಯಾಲಯಕ್ಕೆ ನೀಡುತ್ತೇವೆ ಹೊರತು ಪೊಲೀಸರಿಗೆ ಕೊಡಲ್ಲ" ಎಂದು ಪಟ್ಟು ಹಿಡಿದಿದ್ದಾರೆ.

ತನಿಖೆಯಿಂದ ಹೊರಬರಬೇಕಿದೆ ಸತ್ಯ
ಒಂದು ಕಡೆ ಸಾಲ ಮಾಡಿ ಮದುವೆ ಮಾಡಿದ ಪೋಷಕರ ಆಕ್ರಂದನ, ಇನ್ನೊಂದು ಕಡೆ ಗಂಡನ ಅಕ್ರಮ ಸಂಬಂಧದ ಆರೋಪ. ಈ ಎರಡರ ನಡುವೆ ಕಾವ್ಯ ಸಾವಿನ ಹಿಂದಿರೋ ಅಸಲಿ ರಹಸ್ಯವೇನು? ಅಕ್ರಮ ಸಂಬಂಧಕ್ಕಾಗಿ ಹೆಂಡತಿಯನ್ನೇ ಹತ್ಯೆ ಮಾಡಲಾಯಿತೇ ಅಥವಾ ಕಿರುಕುಳ ತಾಳಲಾರದೆ ಕಾವ್ಯ ಇಂತಹ ನಿರ್ಧಾರ ತಗೊಂಡ್ರಾ ಎಂಬುದು ಪೊಲೀಸರ ತನಿಖೆಯಿಂದಲೇ ಹೊರಬರಬೇಕಿದೆ.