Apr 24, 2026 Languages : ಕನ್ನಡ | English

ಚುನಾವಣಾ ಅಭ್ಯರ್ಥಿ ಮೇಲೆ ಬೆಂಗಳೂರಿನಲ್ಲಿ ಮಚ್ಚು ಅಟ್ಯಾಕ್ - ದಾವಣಗೆರೆ ಕಣದಲ್ಲಿ ದ್ವೇಷದ ರಾಜಕಾರಣ!!

ಚುನಾವಣೆ ಅಂದಮೇಲೆ ಪೈಪೋಟಿ ಇರೋದು ಸಹಜ. ಆದರೆ ಇಲ್ಲಿ ಪೈಪೋಟಿಗಿಂತ ಹೆಚ್ಚಾಗಿ ದ್ವೇಷದ ರಾಜಕಾರಣ ಮನೆಗೆ ನುಗ್ಗಿದೆ. ದಾವಣಗೆರೆ ಉಪಚುನಾವಣೆಯ ಅಭ್ಯರ್ಥಿ ಹಾಗೂ 'ಯಂಗ್ ಸ್ಟಾರ್ ಎಂಪೋರಿಯಂ' ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಶಹಬಾಜ್ ಖಾನ್ ಮೇಲೆ ಬೆಂಗಳೂರಿನಲ್ಲಿ ಭೀಕರ ಹಲ್ಲೆ ನಡೆದಿದೆ.

ಪಕ್ಷದಿಂದ ಹೊರಹಾಕಿದ್ದಕ್ಕೆ ರೊಚ್ಚಿಗೆದ್ದ ಮಹಿಳೆ
ಪಕ್ಷದಿಂದ ಹೊರಹಾಕಿದ್ದಕ್ಕೆ ರೊಚ್ಚಿಗೆದ್ದ ಮಹಿಳೆ

ಶಹಬಾಜ್ ಖಾನ್ ದಾವಣಗೆರೆ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಪ್ರಚಾರ ಮುಗಿಸಿ ಬೆಂಗಳೂರಿಗೆ ಮರಳಿದ್ದರು. ಆದರೆ ಇದಕ್ಕೂ ಮುನ್ನವೇ ಇವರ ಪಕ್ಷದಲ್ಲಿದ್ದ ಕೆಲವರ ಜೊತೆ ಮುನಿಸು ಉಂಟಾಗಿತ್ತು. ಮುಹಮ್ಮದ್ ವಸೀಂ ಎಂಬಾತ ಶಹಬಾಜ್ ಖಾನ್ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಅವಹೇಳನಕಾರಿ ವೀಡಿಯೋ ಮಾಡಿದ್ದ. ಈ ಬಗ್ಗೆ ದಾವಣಗೆರೆ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು.

ಇದಾದ ನಂತರ ಹಸೀನಾ ಬಾನು ಎಂಬ ಮಹಿಳೆ ಕೂಡ ವೀಡಿಯೋ ಮಾಡಿ ಶಹಬಾಜ್ ಅವರಿಗೆ ಓಪನ್ ಆಗಿ ಬೆದರಿಕೆ ಹಾಕಿದ್ದಳು. "ನಿನ್ನನ್ನ ಹೊಡೆದು ಕಸದ ಬುಟ್ಟಿಗೆ ಹಾಕ್ತೀವಿ" ಎಂದು ವಾರ್ನಿಂಗ್ ನೀಡಿದ್ದಳು ಎನ್ನಲಾಗಿದೆ. ಇದರಿಂದ ಗರಂ ಆಗಿದ್ದ ಶಹಬಾಜ್ ಖಾನ್, ಹಸೀನಾ ಬಾನುವನ್ನು ತಕ್ಷಣವೇ ಪಕ್ಷದಿಂದ ವಜಾಗೊಳಿಸಿದ್ದರು.

ಮನೆಗೆ ನುಗ್ಗಿ ದಾಳಿ ಮಾಡಿದ ಮಹಿಳಾ ಮಣಿಯ ಗ್ಯಾಂಗ್!

ಪಕ್ಷದಿಂದ ಹೊರಹಾಕಿದ್ದೇ ತಡ, ಹಸೀನಾ ಬಾನು ಫುಲ್ ರೊಚ್ಚಿಗೆದ್ದಿದ್ದಾಳೆ. ಹೇಳಿದಂತೆಯೇ ಗ್ಯಾಂಗ್ ಕಟ್ಟಿಕೊಂಡು ಶಹಬಾಜ್ ಖಾನ್ ಅವರ ಬೆಂಗಳೂರಿನ ಮನೆಗೆ ನುಗ್ಗಿದ್ದಾಳೆ. ಹಸೀನಾ ಬಾನು ಜೊತೆಗೆ ಝೈದ್, ನಿಲೂಫರ್, ಮುಹಮ್ಮದ್ ವಸೀಂ ಸೇರಿದಂತೆ ಸುಮಾರು 5-6 ಜನರ ತಂಡ ಮಾರಕಾಸ್ತ್ರಗಳೊಂದಿಗೆ ಅಟ್ಯಾಕ್ ಮಾಡಿದೆ.

ದಾಳಿ ಮಾಡಿದ ಕಿರಾತಕರು ಶಹಬಾಜ್ ಖಾನ್ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ವೀಡಿಯೋದಲ್ಲಿ ಹೇಳಿದಂತೆಯೇ ಮಾರಣಾಂತಿಕವಾಗಿ ಹೊಡೆದು ಅಲ್ಲಿಂದ ಪರಾರಿಯಾಗಿದ್ದಾರೆ. ಸದ್ಯ ಗಾಯಗೊಂಡಿರುವ ಶಹಬಾಜ್ ಖಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೊಲೀಸರ ಕ್ರಮ

ಈ ಭೀಕರ ಘಟನೆ ಬೆಂಗಳೂರಿನ ಸುದ್ದುಗುಂಟೆ ಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆ ಸಂಬಂಧ ಶಹಬಾಜ್ ಖಾನ್ ದೂರು ನೀಡಿದ್ದು, ಹಸೀನಾ ಬಾನು ಮತ್ತು ಗ್ಯಾಂಗ್ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ. ದಾಳಿ ನಡೆಸಿದವರು ಯಾರು? ಎಲ್ಲಿದ್ದಾರೆ? ಎಂಬ ಬಗ್ಗೆ ಪೊಲೀಸರು ಈಗ ತನಿಖೆ ಚುರುಕುಗೊಳಿಸಿದ್ದಾರೆ.

"ನನ್ನ ಮೇಲೆ ಹಲ್ಲೆ ಮಾಡ್ತೀವಿ ಅಂತ ಮೊದಲೇ ವೀಡಿಯೋ ಮಾಡಿ ಬೆದರಿಕೆ ಹಾಕಿದ್ರು. ಈಗ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹೊಡೆದಿದ್ದಾರೆ," ಎಂದು ಶಹಬಾಜ್ ಖಾನ್ ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಾರೆ.

ಚುನಾವಣಾ ಅಭ್ಯರ್ಥಿಯ ಮೇಲೆ ಹೀಗೆ ಪ್ಲಾನ್ ಮಾಡಿ ಹಲ್ಲೆ ನಡೆಸಿರುವುದು ದಾವಣಗೆರೆ ಮತ್ತು ಬೆಂಗಳೂರು ಎರಡೂ ಕಡೆ ದೊಡ್ಡ ಚರ್ಚೆಗೆ ಕಾರಣವಾಗಿದೆ. ಸದ್ಯ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.