ಜೂನ್ ತಿಂಗಳ ಮೊದಲ ದಿನವೇ ಸಾರ್ವಜನಿಕರಿಗೆ ಭಾರಿ ಆಘಾತ - ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ದಿಢೀರ್ ಜಂಪ್!!

ಇಂದು ಜೂನ್ ತಿಂಗಳ ಮೊದಲ ದಿನ. ಹೊಸ ತಿಂಗಳು ಆರಂಭವಾಗ್ತಿದ್ದಂತೆ ಸಾರ್ವಜನಿಕರಿಗೆ, ಅದರಲ್ಲೂ ಮುಖ್ಯವಾಗಿ ವ್ಯಾಪಾರಿಗಳು ಮತ್ತು ಹೋಟೆಲ್ ಮಾಲೀಕರಿಗೆ ಭಾರಿ ಆಘಾತ ಎದುರಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಗ್ಯಾಸ್ ಸಿಲಿಂಡರ್ ಬೆಲೆಯನ್ನು ಮತ್ತೆ ಪರಿಷ್ಕರಿಸಿದ್ದು, ಬೆಲೆಯಲ್ಲಿ ಭಾರಿ ಏರಿಕೆ ಕಂಡಿದೆ. ಇದರಿಂದಾಗಿ ಹೊರಗಡೆ ತಿನ್ನುವ ಹೋಟೆಲ್ ತಿಂಡಿ, ತಿನಿಸುಗಳ ಬೆಲೆಯೂ ಹೆಚ್ಚಾಗುವ ಆತಂಕ ಎದುರಾಗಿದೆ.

ಹೋಟೆಲ್ ಪ್ರಿಯರ ಜೇಬಿಗೆ ಬೀಳಲಿದೆ ಕತ್ತರಿ | Photo Credit: www.thehindubusinessline.com
ಹೋಟೆಲ್ ಪ್ರಿಯರ ಜೇಬಿಗೆ ಬೀಳಲಿದೆ ಕತ್ತರಿ | Photo Credit: www.thehindubusinessline.com

ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಭಾರಿ ಜಂಪ್!

ಹೋಟೆಲ್, ರೆಸ್ಟೋರೆಂಟ್‌ಗಳು ಹಾಗೂ ಸಣ್ಣಪುಟ್ಟ ಅಂಗಡಿಗಳಲ್ಲಿ ಬಳಸುವ 19 ಕೆಜಿಯ ವಾಣಿಜ್ಯ (Commercial) ಸಿಲಿಂಡರ್ ಬೆಲೆಯನ್ನು ತೈಲ ಕಂಪನಿಗಳು ಗಣನೀಯವಾಗಿ ಹೆಚ್ಚಿಸಿವೆ.

ದೇಶದ ರಾಜಧಾನಿ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 42 ರೂಪಾಯಿ ಹೆಚ್ಚಳವಾಗಿದ್ದು, ಈಗ ಅದರ ಒಟ್ಟು ಬೆಲೆ 3,113.50 ರೂಪಾಯಿ ತಲುಪಿದೆ. ಇನ್ನು ಕೋಲ್ಕತ್ತಾದಲ್ಲಂತೂ ಬರೋಬ್ಬರಿ 53.50 ರೂಪಾಯಿ ಏರಿಕೆಯಾಗಿದ್ದು, ಸಿಲಿಂಡರ್ ದರ 3,255.50 ರೂಪಾಯಿಗೆ ಬಂದು ನಿಂತಿದೆ.

ನಮ್ಮ 'ಛೋಟು ಸಿಲಿಂಡರ್' ಕೂಡ ಇನ್ಮುಂದೆ ದುಬಾರಿ

ಯಾವುದೇ ವಿಳಾಸದ ಪುರಾವೆ (Address Proof) ಇಲ್ಲದೆ ಸುಲಭವಾಗಿ ಸಿಗುವ, ಎಲ್ಲರೂ ಪ್ರೀತಿಯಿಂದ 'ಛೋಟು ಸಿಲಿಂಡರ್' ಅಂತ ಕರೆಯುವ 5 ಕೆಜಿಯ ಎಫ್‌ಟಿಎಲ್ (Free Trade LPG) ಸಿಲಿಂಡರ್ ಬೆಲೆ ಕೂಡ ಈ ಬಾರಿ ಹೆಚ್ಚಾಗಿದೆ.

ಬೀದಿ ಬದಿಯ ಸಣ್ಣ ವ್ಯಾಪಾರಿಗಳು, ಒಂಟಿಯಾಗಿ ವಾಸಿಸುವ ಕಾರ್ಮಿಕರು ಮತ್ತು ಹೊರಗಡೆ ರೂಮ್ ಮಾಡಿಕೊಂಡು ಓದುತ್ತಿರುವ ವಿದ್ಯಾರ್ಥಿಗಳಿಗೆ ಈ ಛೋಟು ಸಿಲಿಂಡರ್ ದೊಡ್ಡ ಆಸರೆಯಾಗಿತ್ತು. ಆದ್ರೆ ಇಂದಿನಿಂದ ಇದರ ಬೆಲೆಯನ್ನು 11 ರೂಪಾಯಿ ಹೆಚ್ಚಿಸಲಾಗಿದೆ. ಈ ಏರಿಕೆಯ ನಂತರ ದೆಹಲಿಯಲ್ಲಿ 5 ಕೆಜಿ ಸಿಲಿಂಡರ್ ಬೆಲೆ 821.50 ರೂಪಾಯಿ ಆಗಿದೆ. ತಿಂಗಳ ಬಜೆಟ್ ಲೆಕ್ಕಾಚಾರದಲ್ಲಿದ್ದ ಸಣ್ಣ ವ್ಯಾಪಾರಿಗಳಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಗೃಹಬಳಕೆ ಸಿಲಿಂಡರ್ ಬಳಸುವವರಿಗೆ ಸಣ್ಣ ರಿಲೀಫ್!

ವಾಣಿಜ್ಯ ಸಿಲಿಂಡರ್ ಬೆಲೆ ಕೇಳಿ ಹೋಟೆಲ್ ಮಾಲೀಕರು ತಲೆಮೇಲೆ ಕೈ ಹೊತ್ತು ಕುಳಿತಿದ್ದರೆ, ಮನೆಯಲ್ಲಿ ಅಡುಗೆ ಮಾಡುವವರಿಗೆ ಮಾತ್ರ ತಕ್ಕಮಟ್ಟಿನ ನೆಮ್ಮದಿ ಸಿಕ್ಕಿದೆ. ಮನೆಗಳಲ್ಲಿ ಬಳಸುವ 14.2 ಕೆಜಿಯ ಗೃಹಬಳಕೆ ಸಿಲಿಂಡರ್ ಬೆಲೆಯಲ್ಲಿ ಈ ಬಾರಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ವರದಿಯಾಗಿದೆ. ಹಾಗಾಗಿ ಸದ್ಯಕ್ಕೆ ಮನೆ ಬಜೆಟ್‌ಗೆ ಯಾವುದೇ ಹೆಚ್ಚುವರಿ ಹೊರೆ ಬಿದ್ದಿಲ್ಲ.

ಗ್ರಾಹಕರ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ!

ಈಗಾಗಲೇ ಕಮರ್ಷಿಯಲ್ ಸಿಲಿಂಡರ್ ಬೆಲೆ ದಿನದಿಂದ ದಿನಕ್ಕೆ ರಾಕೆಟ್ ವೇಗದಲ್ಲಿ ಏರುತ್ತಿರುವುದರಿಂದ ಹೋಟೆಲ್ ಉದ್ಯಮ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಗ್ಯಾಸ್ ಬೆಲೆ ಏರಿಕೆಯ ಭಾರವನ್ನು ಹೋಟೆಲ್ ಮಾಲೀಕರು ತಾವೊಬ್ಬರೇ ಹೊರಲು ಸಾಧ್ಯವಿಲ್ಲ. ಹೀಗಾಗಿ, ಬಹುತೇಕ ಹೋಟೆಲ್‌ಗಳು ಮತ್ತು ಕೆಫೆಗಳು ಈ ಹೆಚ್ಚುವರಿ ವೆಚ್ಚದ ಭಾರವನ್ನು ಗ್ರಾಹಕರ ಮೇಲೆಯೇ ವರ್ಗಾಯಿಸುತ್ತಿವೆ. ಅಂದರೆ, ಇನ್ಮುಂದೆ ನೀವು ಹೋಟೆಲ್‌ಗೆ ಹೋಗಿ ಕಾಫಿ, ಟೀ ಕುಡಿದರೂ ಅಥವಾ ಊಟ, ತಿಂಡಿ ಆರ್ಡರ್ ಮಾಡಿದರೂ ಅದಕ್ಕೆ ಹೆಚ್ಚಿನ ಹಣ ತೆರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಹೊಸ ತಿಂಗಳ ಮೊದಲ ದಿನವೇ ಸಿಕ್ಕ ಈ ಬೆಲೆ ಏರಿಕೆಯ ಶಾಕ್, ಮಧ್ಯಮ ವರ್ಗದವರ ಮತ್ತು ಸಣ್ಣ ವ್ಯಾಪಾರಿಗಳ ಜೇಬಿಗೆ ದೊಡ್ಡ ಕತ್ತರಿ ಹಾಕೋದ್ರಲ್ಲಿ ಅನುಮಾನವೇ ಇಲ್ಲ.

Latest News