ಸೋಷಿಯಲ್ ಮೀಡಿಯಾದಲ್ಲಿ ಯಾವಾಗ ಏನು ವೈರಲ್ ಆಗುತ್ತೆ ಅಂತ ಯಾರೂ ಊಹಿಸೋಕೆ ಸಾಧ್ಯವೇ ಇಲ್ಲ! ಸದ್ಯಕ್ಕೆ ಇನ್‌ಸ್ಟಾಗ್ರಾಂ ಪ್ರಪಂಚದಲ್ಲಿ ಒಂದು ಹೊಸ ಅಕೌಂಟ್ ಇಡೀ ದೇಶದ ಗಮನ ಸೆಳೆಯುತ್ತಿದೆ. ಅದರ ಹೆಸರೇ ‘ಕಾಕ್ರೋಚ್ ಜನತಾ ಪಾರ್ಟಿ’ (@cockroachjantaparty). ಕೇಳೋಕೆ ಫನ್ನಿ ಅನಿಸಿದ್ರೂ, ಈ ಪೇಜ್ ಸೃಷ್ಟಿಸಿರೋ ಕ್ರೇಜ್ ಮಾತ್ರ ಸಾಮಾನ್ಯದ್ದಲ್ಲ. ಕೇವಲ ನಾಲ್ಕೇ ನಾಲ್ಕು ದಿನಗಳಲ್ಲಿ ಈ ಅಕೌಂಟ್ ಬರೋಬ್ಬರಿ 10 ಮಿಲಿಯನ್, ಅಂದರೆ 1 ಕೋಟಿಗೂ ಅಧಿಕ ಫಾಲೋವರ್ಸ್‌ಗಳನ್ನು ಸಂಪಾದಿಸಿ ಇತಿಹಾಸ ಸೃಷ್ಟಿಸಿದೆ!
ಯಾವ ಮಟ್ಟಿಗೆ ಅಂದ್ರೆ, ದೇಶದ ಆಡಳಿತ ಪಕ್ಷವಾದ ಬಿಜೆಪಿಯ ಆಫೀಶಿಯಲ್ ಇನ್‌ಸ್ಟಾಗ್ರಾಂ ಪೇಜ್‌ನ ಫಾಲೋವರ್ಸ್ ಸಂಖ್ಯೆಯನ್ನೇ ಇದು ಓವರ್‌ಟೇಕ್ ಮಾಡಿದೆ. ಸದ್ಯಕ್ಕೆ ಬಿಜೆಪಿ ಇನ್‌ಸ್ಟಾಗ್ರಾಂ ಖಾತೆಯಲ್ಲಿ 8.7 ಮಿಲಿಯನ್ ಫಾಲೋವರ್ಸ್ ಇದ್ದರೆ, ಈ ಜಿರಳೆ ಪಾರ್ಟಿ ಖಾತೆಯಲ್ಲಿ ಕ್ಷಣ ಕ್ಷಣಕ್ಕೂ ಕೌಂಟ್ ಏರುತ್ತಾ 10.6 ಮಿಲಿಯನ್ ತಲುಪಿದೆ! ಇನ್ನು ಕಾಂಗ್ರೆಸ್ 13.2 ಮಿಲಿಯನ್ ಹಾಗೂ ಆಮ್ ಆದ್ಮಿ ಪಾರ್ಟಿ 1.9 ಮಿಲಿಯನ್ ಫಾಲೋವರ್ಸ್ ಹೊಂದಿವೆ.
ಅಷ್ಟಕ್ಕೂ ಈ ಪೇಜ್ ಹುಟ್ಟಿಕೊಂಡಿದ್ದು ಹೇಗೆ?
ಎಲ್ಲದಕ್ಕೂ ಒಂದು ಕಾರಣ ಇರುತ್ತೆ ಅಲ್ವಾ? ಹಾಗೆ ಈ ಕಾಕ್ರೋಚ್ ಜನತಾ ಪಾರ್ಟಿ ಹುಟ್ಟಿಕೊಳ್ಳೋಕೆ ಸುಪ್ರೀಂಕೋರ್ಟ್‌ನ ಜಡ್ಜ್ ಒಬ್ಬರು ಆಡಿದ ಒಂದು ಮಾತೇ ಕಾರಣ! ಇತ್ತೀಚೆಗೆ ಕೋರ್ಟ್‌ನಲ್ಲಿ ವಕೀಲರೊಬ್ಬರ ಅರ್ಜಿಯ ವಿಚಾರಣೆ ನಡೆಸುವಾಗ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಸಖತ್ ಗರಂ ಆಗಿದ್ದರು.
"ಕೆಲವು ನಿರುದ್ಯೋಗಿ ಯುವಕರು ಜಿರಳೆಗಳ (ಕಾಕ್ರೋಚ್) ರೀತಿ ವರ್ತಿಸುತ್ತಿದ್ದಾರೆ. ಅವರಲ್ಲಿ ಕೆಲವರು ಮೀಡಿಯಾದಲ್ಲಿದ್ದರೆ, ಇನ್ನು ಕೆಲವರು ಸೋಶಿಯಲ್ ಮೀಡಿಯಾದಲ್ಲಿದ್ದಾರೆ, ಮತ್ತೆ ಕೆಲವರು ಆರ್‌ಟಿಐ ಕಾರ್ಯಕರ್ತರಾಗಿದ್ದಾರೆ" ಅಂತ ಕಿಡಿಕಾರಿದ್ದರು. ಜಡ್ಜ್ ಸಾಹೇಬ್ರು ಆಡಿದ ಈ 'ಜಿರಳೆ' ಅನ್ನೋ ಮಾತು ದೇಶದ ಯುವಕರಿಗೆ ಭರ್ಜರಿಯಾಗಿಯೇ ತಗುಲಿದೆ.
ಯುವಕರ ಸೈಲೆಂಟ್ ಪ್ರತಿಭಟನೆ: ಮೀಮ್ಸ್ ಮೂಲಕವೇ ತಿರುಗೇಟು!
ನ್ಯಾಯಾಧೀಶರ ಈ ಹೇಳಿಕೆಯಿಂದ ಸಿಟ್ಟಾದ ಯುವಕರು, ಅದನ್ನೇ ಒಂದು ವಿಡಂಬನಾತ್ಮಕ (ಸ್ಯಾಟೈರ್) ಅಭಿಯಾನವನ್ನಾಗಿ ಮಾಡಿಕೊಂಡರು. ಮೊದಲು 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ತಮಾಷೆಯಾಗಿ ಕಮೆಂಟ್ ಮಾಡಲು ಶುರು ಮಾಡಿದ ಯುವಪಡೆ, ಮೇ 17ರಂದು ಇನ್‌ಸ್ಟಾಗ್ರಾಂನಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ ಅನ್ನೋ ಹೆಸರಲ್ಲೇ ಒಂದು ಪೇಜ್ ಓಪನ್ ಮಾಡಿಬಿಟ್ಟರು. ಅಷ್ಟೇ, ಅಲ್ಲಿಂದ ಈ ಪೇಜ್‌ನ ಜನಪ್ರಿಯತೆ ರಾಕೆಟ್ ವೇಗದಲ್ಲಿ ದುಪ್ಪಟ್ಟಾಯ್ತು. ಕೇವಲ 78 ಗಂಟೆಗಳಲ್ಲಿ 3 ಮಿಲಿಯನ್ ದಾಟಿದ್ದ ಫಾಲೋವರ್ಸ್ ಸಂಖ್ಯೆ, ಈಗ 10 ಮಿಲಿಯನ್ ಗಡಿ ದಾಟಿದೆ.
ಏನಿದು ಪೇಜ್‌ನ ಅಸಲಿ ಉದ್ದೇಶ?
ಈ ಪೇಜ್ ಪ್ರೊಫೈಲ್‌ನಲ್ಲಿ "ಯುವಕರ, ಯುವಕರಿಗಾಗಿ ಮತ್ತು ಯುವಕರಿಂದಲೇ ರೂಪಿತವಾದ ರಾಜಕೀಯ ವೇದಿಕೆ" ಅಂತ ಬರೆದುಕೊಳ್ಳಲಾಗಿದೆ. ದೇಶದಲ್ಲಿ ಇವತ್ತು ಯುವಕರು ಎದುರಿಸುತ್ತಿರುವ ನಿರುದ್ಯೋಗ ಸಮಸ್ಯೆ, ಪೇಪರ್ ಲೀಕ್ ಹಗರಣಗಳು, ರಾಜಕೀಯ ನಾಯಕರ ಬೇಜವಾಬ್ದಾರಿತನ ಹಾಗೂ ಯುವ ಸಮುದಾಯದ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನಗಳ ವಿರುದ್ಧ ಈ ಪೇಜ್ ಧ್ವನಿ ಎತ್ತುತ್ತಿದೆ.
ಫಾಲೋವರ್ಸ್ ಕಮೆಂಟ್ಸ್: "ನಮ್ಮನ್ನ ಜಿರಳೆ ಅಂದುಕೊಂಡು ಲಘುವಾಗಿ ತಗೋಬೇಡಿ. ಯುವಕರ ಶಕ್ತಿಯನ್ನು ಅಂಡರ್‌ಎಸ್ಟಿಮೇಟ್ ಮಾಡಿದ್ರೆ ಏನಾಗುತ್ತೆ ಅಂತ ಈಗಲಾದರೂ ಗೊತ್ತಾಯ್ತಾ?" ಅಂತ ಯುವಕರು ಕಮೆಂಟ್ ಬಾಕ್ಸ್‌ನಲ್ಲಿ ಫುಲ್ ಆ್ಯಕ್ಟಿವ್ ಆಗಿದ್ದಾರೆ.
ಸದ್ಯಕ್ಕೆ ಈ ಖಾತೆಯಲ್ಲಿ ಇರೋದು ಬರೀ 56 ಪೋಸ್ಟ್‌ಗಳು ಮಾತ್ರ! ಆದರೂ ಇಡೀ ದೇಶದ ಯುವ ಸಮುದಾಯ ಈ ಪುಟವನ್ನು ಮುಗಿಬಿದ್ದು ಫಾಲೋ ಮಾಡ್ತಿದೆ. ಬರೀ ಇನ್‌ಸ್ಟಾಗ್ರಾಂ ಅಷ್ಟೇ ಅಲ್ಲ, ಇವರ 'ಎಕ್ಸ್' ಖಾತೆಯೂ 165,000 ಫಾಲೋವರ್ಸ್ ಪಡೆದು ಸದ್ದು ಮಾಡ್ತಿದೆ.
ಒಟ್ಟಿನಲ್ಲಿ, ವ್ಯವಸ್ಥೆಯ ವಿರುದ್ಧ ಸಿಟ್ಟಾಗಿದ್ದ ಯುವಕರು ಯಾವುದೇ ಗಲಾಟೆ ಮಾಡದೆ, ಡಿಜಿಟಲ್ ಜಗತ್ತಿನಲ್ಲಿ ಒಂದು ಕ್ಯೂಟ್ ಆದ ಜಿರಳೆ ಹೆಸರಿಟ್ಟುಕೊಂಡು ಮಾಡ್ತಿರೋ ಈ ಡಿಫರೆಂಟ್ ಪ್ರತಿಭಟನೆ ಸದ್ಯಕ್ಕಂತೂ ಇಡೀ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ!