ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಸರ್ಕಾರ ರಚಿಸಿದ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಅವರು ಫುಲ್ ಆಕ್ಷನ್ ಮೂಡ್‌ಗೆ ಬಂದಿದ್ದಾರೆ. ಗುರುವಾರ ವಿಧಾನಸೌಧದಲ್ಲಿ ಸರ್ಕಾರದ ಎಲ್ಲಾ ಇಲಾಖೆಗಳ ಉನ್ನತ ಮಟ್ಟದ ಅಧಿಕಾರಿಗಳ ಮಹತ್ವದ ಸಭೆ ನಡೆಸಿದ ಸಿಎಂ, ಆಡಳಿತಕ್ಕೆ ಬಿಗಿ ಮುದ್ರೆ ಒತ್ತುವ ಕೆಲಸ ಮಾಡಿದ್ದಾರೆ. ಸಭೆಯಲ್ಲಿ ಸರ್ಕಾರದ ಗುರಿ, ಆಲೋಚನೆ ಮತ್ತು ನಿರೀಕ್ಷೆಗಳೇನು ಎಂಬುದನ್ನು ಅಧಿಕಾರಿಗಳಿಗೆ ಖಡಕ್ ಆಗಿ ಮನದಟ್ಟು ಮಾಡಿಕೊಟ್ಟಿದ್ದಾರೆ.
"ಸಚಿವರು, ಶಾಸಕರು ಅಷ್ಟೇ ಏಕೆ, ಖುದ್ದಾಗಿ ನನ್ನ ಆಫೀಸ್‌ನಿಂದಲೇ ಒತ್ತಡ ಬಂದರೂ ಯಾವುದೇ ಪ್ರಭಾವಕ್ಕೆ ಮಣಿಯಬೇಡಿ. ಕಾನೂನು ಚೌಕಟ್ಟು ಮೀರದಂತೆ ಕೆಲಸ ಮಾಡಿ. ಜನರಿಗೆ ಪಾರದರ್ಶಕ, ಮುಕ್ತ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನೀಡಲು ಕೈಜೋಡಿಸಿ," ಎಂದು ಅಧಿಕಾರಿಗಳಿಗೆ ತಲೆಗೆ ಹೊಡೆದ ಹಾಗೆ ತಾಕೀತು ಮಾಡಿದ್ದಾರೆ.
ಆಡಳಿತಕ್ಕೆ ಹೊಸ ದಿಕ್ಕು: 15 ದಿನಗಳ ಗಡುವು
ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಹೊಸ ಸರ್ಕಾರ ಯಾವ ದಿಕ್ಕಿನಲ್ಲಿ ಯೋಚನೆ ಮಾಡುತ್ತಿದೆ ಎಂಬ ಸ್ಪಷ್ಟ ಸಂದೇಶವನ್ನು ಅಧಿಕಾರಿಗಳಿಗೆ ರವಾನಿಸಿದ್ದಾರೆ. "ನಮ್ಮ ಸರ್ಕಾರ ಜಾತಿ, ಧರ್ಮ ಅಥವಾ ಯಾವುದೇ ಪ್ರಭಾವಕ್ಕೆ ಒಳಗಾಗುವುದಿಲ್ಲ. ಜನರ ಭಾವನೆಗಳಿಗೆ ತಕ್ಕಂತೆ ಕೆಲಸ ಮಾಡಬೇಕು," ಎಂದು ಆರ್ಡರ್ ಮಾಡಿದ್ದಾರೆ.
ಇದರ ಜೊತೆಗೆ ಇಲಾಖೆಗಳ ಕೆಲಸ ಕಾರ್ಯಗಳನ್ನು ಸರಿದೂಗಿಸಲು ಒಂದಿಷ್ಟು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ:
ಕಾರ್ಯಯೋಜನೆ ಸಿದ್ಧತೆ: ಮುಂದಿನ 15 ದಿನಗಳಲ್ಲಿ ಎಲ್ಲಾ ಇಲಾಖೆಗಳ ಆರ್ಥಿಕ ಚೌಕಟ್ಟಿನ ಕಾರ್ಯಯೋಜನೆ ರೆಡಿ ಇರಬೇಕು.
ಲೆಕ್ಕ ಪಕ್ಕಾ ಇರಲಿ: ಪ್ರತಿಯೊಂದು ಜಿಲ್ಲೆಯ ಖರ್ಚು-ವೆಚ್ಚಗಳಿಗೆ ಪಕ್ಕಾ ಲೆಕ್ಕ ಇರಬೇಕು. ಪ್ರತಿಯೊಬ್ಬರಿಗೂ ಹೊಣೆಗಾರಿಕೆ ಇರಬೇಕು.
ಕಾಮನ್ ಸೆನ್ಸ್ ಮುಖ್ಯ: ಬರೀ ಬುದ್ಧಿವಂತಿಕೆಗಿಂತ ಸಾಮಾನ್ಯ ಪ್ರಜ್ಞೆ (Common Sense) ಇದ್ದಾಗ ಮಾತ್ರ ಜನರ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯ ಎಂದಿದ್ದಾರೆ.
ಸಭೆಯಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್, ಸಚಿವರಾದ ರಾಮಲಿಂಗಾರೆಡ್ಡಿ, ಈಶ್ವರ್ ಖಂಡ್ರೆ, ಯು.ಟಿ.ಖಾದರ್ ಹಾಗೂ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ರಾಜ್ಯದ ಪ್ರಮುಖ ಆಫೀಸರ್‌ಗಳು ಹಾಜರಿದ್ದರು.
ನಿರುದ್ಯೋಗಿಗಳಿಗೆ ಗುಡ್ ನ್ಯೂಸ್: ಕಾಲಮಿತಿಯೊಳಗೆ 56,000 ಹುದ್ದೆ ಭರ್ತಿ
ಉದ್ಯೋಗಾಕಾಂಕ್ಷಿಗಳಿಗೆ ಸಿಎಂ ಭರ್ಜರಿ ಸಿಹಿ ಸುದ್ದಿ ಕೊಟ್ಟಿದ್ದಾರೆ. ರಾಜ್ಯದ ಎಲ್ಲಾ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಕಂಪ್ಲೀಟ್ ರಿಪೋರ್ಟ್ ನೀಡಲು 15 ದಿನಗಳ ಟೈಮ್ ಕೊಟ್ಟಿದ್ದಾರೆ. ಸುಮಾರು 56 ಸಾವಿರ ಹುದ್ದೆಗಳ ಭರ್ತಿಗೆ ಪ್ರತ್ಯೇಕ ಸಮಯ ನಿಗದಿ (Timeframe) ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಇದರ ಜೊತೆಗೆ, ಯುವಕರಿಗೆ ಉದ್ಯೋಗ ಕೊಡಿಸಲು 'ಖಾಸಗಿ ಉದ್ಯೋಗ ವಿನಿಮಯ ಕೇಂದ್ರ' ಸ್ಥಾಪಿಸುವ ಪ್ಲಾನ್ ಕೂಡ ಸರ್ಕಾರದ ಮುಂದಿದೆ. ಇನ್ನು, ದೆಹಲಿಯಲ್ಲಿರುವ ಕರ್ನಾಟಕ ಭವನದ ಕೆಲಸದ ಶೈಲಿ ತಮಗೆ ತೃಪ್ತಿ ತಂದಿಲ್ಲ ಎಂದಿರುವ ಸಿಎಂ, ಶೀಘ್ರದಲ್ಲೇ ಅಲ್ಲಿಗೆ ಭೇಟಿ ನೀಡಿ ಕೆಲ ಹೊಸ ವಿಭಾಗಗಳನ್ನು ಕ್ರಿಯೇಟ್ ಮಾಡುವುದಾಗಿ ತಿಳಿಸಿದ್ದಾರೆ.
ವೋಟರ್ ಐಡಿ ಅಲರ್ಟ್: ಯಾರೂ ಹಕ್ಕು ಕಳೆದುಕೊಳ್ಳಬಾರದು
ರಾಜ್ಯದಲ್ಲಿ ಈಗ ವಿಶೇಷ ತೀವ್ರ ಮತ ಪರಿಷ್ಕರಣೆ (SIR) ನಡೆಯುತ್ತಿದ್ದು, ಯಾರೊಬ್ಬರೂ ವೋಟಿಂಗ್ ಹಕ್ಕು ಕಳೆದುಕೊಳ್ಳದಂತೆ ನೋಡಿಕೊಳ್ಳಿ ಎಂದು ಆಫೀಸರ್‌ಗಳಿಗೆ ಸೂಚನೆ ನೀಡಲಾಗಿದೆ. ಬೇರೆ ರಾಜ್ಯಗಳಲ್ಲಿ ಲಕ್ಷಾಂತರ ಜನ ಲಿಸ್ಟ್‌ನಿಂದ ಹೊರಗುಳಿದ ಉದಾಹರಣೆ ಇದೆ, ನಮ್ಮಲ್ಲಿ ಹಾಗಾಗಬಾರದು. ಸಿಎಂ, ಡಿಸಿಎಂ ಸೇರಿದಂತೆ ಪ್ರತಿಯೊಬ್ಬ ಮತದಾರನೂ ಎನ್ಯುಮರೇಷನ್ ಅರ್ಜಿ ತುಂಬಿ, ದಾಖಲೆ ಕೊಡಬೇಕು. ಇಲ್ಲದಿದ್ದರೆ ವೋಟಿಂಗ್ ರೈಟ್ಸ್ ಸಿಗಲ್ಲ ಎಂದು ಜನರಲ್ಲಿ ಜಾಗೃತಿ ಮೂಡಿಸಲು ಹೆಲ್ಪ್ ಡೆಸ್ಕ್ ತೆರೆಯಲು ಆರ್ಡರ್ ಮಾಡಿದ್ದಾರೆ.
ಶಾಲೆಗಳ ನಿರ್ಮಾಣಕ್ಕೆ 8,000 ಕೋಟಿ ಸಿಎಸ್‌ಆರ್ ನಿಧಿ ಬಳಕೆ
ಕರ್ನಾಟಕ ಪಬ್ಲಿಕ್ ಶಾಲೆಗಳ (KPS) ನಿರ್ಮಾಣಕ್ಕೆ ಕಾರ್ಪೊರೇಟ್ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ (CSR) ನಿಧಿಯನ್ನು ಬಳಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ರಾಜ್ಯದಲ್ಲಿ ಸುಮಾರು 8 ಸಾವಿರ ಕೋಟಿ ಸಿಎಸ್‌ಆರ್ ಫಂಡ್ ಇದ್ದರೂ ಅದು ಎಲ್ಲಿ ಬಳಕೆಯಾಗುತ್ತಿದೆ ಎಂಬ ಮಾಹಿತಿ ಇಲ್ಲ. ಹೀಗಾಗಿ ಇನ್ಮುಂದೆ ಈ ನಿಧಿಯ ಅಡಿಯಲ್ಲಿ ಪ್ರತಿ ಮೂರು ಗ್ರಾಮ ಪಂಚಾಯಿತಿಗೆ ಒಂದರಂತೆ ಹೈಟೆಕ್ ಕೆಪಿಎಸ್ ಶಾಲೆಗಳನ್ನು ಕಟ್ಟಲು ನೆರವು ನೀಡುವಂತೆ ಎಲ್ಲಾ ಕಂಪನಿಗಳಿಗೆ ಸರ್ಕಾರದಿಂದ ಪತ್ರ ಬರೆಯಲಾಗುವುದು. ಶಿಕ್ಷಣದ ನಂತರ ಹೆಲ್ತ್ ಸೆಕ್ಟರ್‌ಗೂ ಈ ನಿಧಿ ಬಳಸಿಕೊಳ್ಳಲಾಗುವುದು ಎಂದಿದ್ದಾರೆ.
ಗ್ಯಾರಂಟಿ ಪರಿಷ್ಕರಣೆ ಇಲ್ಲ, ಆದರೆ ಲೂಟಿಗೆ ಬೀಳಲಿದೆ ಬ್ರೇಕ್
"ನಾವು ಯಾವುದೇ ಗ್ಯಾರಂಟಿ ಯೋಜನೆಗಳನ್ನು ಸ್ಟಾಪ್ ಮಾಡಲ್ಲ ಅಥವಾ ಪರಿಷ್ಕರಣೆ (Revision) ಮಾಡಲ್ಲ," ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ. ಆದರೆ, ಯೋಜನೆಗಳ ಹೆಸರಲ್ಲಿ ನಡೆಯುತ್ತಿರುವ ಗೋಲ್‌ಮಾಲ್ ತಡೆಯಲು ಫಲಾನುಭವಿಗಳ ಮೊಬೈಲ್ ನಂಬರ್ ಹಾಗೂ ಕಂಪ್ಲೀಟ್ ವಿವರಗಳನ್ನು ಕಲೆಹಾಕಲಾಗುವುದು ಎಂದಿದ್ದಾರೆ.
ಗೃಹಜ್ಯೋತಿ: 1.64 ಕೋಟಿ ಜನ ಉಚಿತ ಕರೆಂಟ್ ಪಡೆಯುತ್ತಿದ್ದಾರೆ. ಆದರೆ ಕೆಲವರು ವಾಸದ ಮನೆಗೆ 200 ಯೂನಿಟ್ ಫ್ರೀ ತಗೊಂಡು, ಅದನ್ನು ಕಮರ್ಷಿಯಲ್ ಬಿಸಿನೆಸ್‌ಗೆ ಬಳಸುತ್ತಿದ್ದಾರೆ. ಕೆಲವರ ಹೆಸರಲ್ಲೇ ಐದಾರು ಮೀಟರ್ ಇವೆ. ಇವರೆಲ್ಲ ಯಾರು ಎಂಬ ಮಾಹಿತಿ ಸರ್ಕಾರಕ್ಕೆ ಬೇಕಿದೆ.
ಗೃಹಲಕ್ಷ್ಮಿ: ಮೃತಪಟ್ಟ ಮಹಿಳೆಯರ ಹೆಸರಿನಲ್ಲೂ ಕೆಲವೆಡೆ ಗೃಹಲಕ್ಷ್ಮಿ ದುಡ್ಡು ಡ್ರಾ ಆಗುತ್ತಿದ್ದು, ಇದರಿಂದ ಸುಮಾರು 120 ಕೋಟಿ ರೂಪಾಯಿ ವ್ಯತ್ಯಾಸವಾಗಿದೆ. ಇದಕ್ಕೆ ಬ್ರೇಕ್ ಹಾಕಲು ಡೇಟಾ ಕಲೆಹಾಕಲಾಗುತ್ತಿದೆ ಎಂದಿದ್ದಾರೆ.
ಇನ್ನು ಕೊನೆಯದಾಗಿ ಮೇಕೆದಾಟು ಯೋಜನೆ ಬಗ್ಗೆ ಮಾತನಾಡಿದ ಸಿಎಂ, "ತಮಿಳುನಾಡಿನವರು ಕಳೆದ 30-40 ವರ್ಷಗಳಿಂದ ಇದನ್ನು ವಿರೋಧಿಸುತ್ತಲೇ ಇದ್ದಾರೆ. ನಾವು ಕೇಂದ್ರಕ್ಕೆ ನಮ್ಮ ಡಿಪಿಆರ್ (DPR) ಸಬ್ಮಿಟ್ ಮಾಡಿದ್ದೇವೆ. ತಮಿಳುನಾಡಿನ ಅಭಿಪ್ರಾಯಕ್ಕೆ ಗೌರವ ಕೊಡುತ್ತಲೇ, ನಮ್ಮ ರಾಜ್ಯದ ಹಿತಾಸಕ್ತಿಯ ಕೆಲಸವನ್ನು ನಾವು ಮಾಡೇ ತೀರುತ್ತೇವೆ," ಎಂದು ಖಡಕ್ ಆಗಿ ಹೇಳಿದ್ದಾರೆ.