"ಮೇಕೆದಾಟು ಪಾದಯಾತ್ರೆಯ ಸಂದರ್ಭದಲ್ಲಿ ಹಗಲು-ರಾತ್ರಿ ದಣಿದು, ಸುಸ್ತಾಗಿ ನಾನು ವಾಲಿಕೊಂಡು ನಡೆದ ವಿಡಿಯೋವನ್ನು ಇಟ್ಟುಕೊಂಡು, ‘ಕುಡುಕ ತೂರಾಡುತ್ತಿದ್ದಾನೆ’ ಎಂದು ವರ್ಷಗಟ್ಟಲೆಯಿಂದ ಸುಳ್ಳು ಸುದ್ದಿ ಹರಡಿ ಮಜಾ ತಗೊಂಡ್ರು. ಇಂತಹ ಫೇಕ್ ನ್ಯೂಸ್ ನಶೆಯನ್ನು ಯಾರೂ ಹತ್ತಿಸಿಕೊಳ್ಳಬೇಡಿ," ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ 'ಪತ್ರಿಕಾ ದಿನಾಚರಣೆ' ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಮಾಧ್ಯಮಗಳು ಸಮಾಜದ ಜಾಗೃತಿಗಾಗಿ ಕೆಲಸ ಮಾಡಬೇಕೇ ಹೊರತು, ವ್ಯಕ್ತಿತ್ವ ಹರಣದ ಸುಳ್ಳು ಸುದ್ದಿಗಳನ್ನಲ್ಲ ಎಂದು ಅವರು ಕಿವಿಮಾತು ಹೇಳಿದರು.
ಕನ್ನಡದ ಮೊದಲ ಪತ್ರಿಕೆ 'ಮಂಗಳೂರು ಸಮಾಚಾರ' ಸ್ಮರಣೆ
1843ರ ಜುಲೈ 1 ರಂದು ಕನ್ನಡದ ಮೊಟ್ಟಮೊದಲ ಪತ್ರಿಕೆಯಾದ 'ಮಂಗಳೂರು ಸಮಾಚಾರ' ಪ್ರಕಟಗೊಂಡ ಐತಿಹಾಸಿಕ ದಿನದ ನೆನಪಿನಲ್ಲಿ ಪ್ರತಿವರ್ಷ ಜುಲೈ 1 ರಂದು ಪತ್ರಿಕಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ಸಂದರ್ಭವನ್ನು ಸ್ಮರಿಸಿದ ಮುಖ್ಯಮಂತ್ರಿಗಳು, "ಸ್ವಾತಂತ್ರ್ಯ ಪೂರ್ವದಿಂದಲೂ ಪತ್ರಿಕೋದ್ಯಮವು ದೇಶದ ಪ್ರಗತಿಗೆ ಮತ್ತು ಪ್ರಜಾಪ್ರಭುತ್ವದ ಅಡಿಪಾಯಕ್ಕೆ ಅತ್ಯಂತ ನಿರ್ಣಾಯಕ ಪಾತ್ರ ವಹಿಸಿದೆ. ಮಾಹಿತಿ ತಲುಪಿಸುವ, ಪ್ರಶ್ನಿಸುವ ಹಾಗೂ ಸಮಾಜವನ್ನು ಜಾಗೃತಗೊಳಿಸುವ ಮಹತ್ವದ ಕಾರ್ಯವನ್ನು ಪ್ರತಿ ಪತ್ರಕರ್ತನೂ ಜವಾಬ್ದಾರಿಯಿಂದ ನಿರ್ವಹಿಸುತ್ತಿದ್ದಾರೆ. ಸತ್ಯದ ಪರ ಧ್ವನಿಯಾಗಿ, ಅನ್ಯಾಯದ ವಿರುದ್ಧ ಹೋರಾಡುವ ನನ್ನೆಲ್ಲಾ ಸಮಸ್ತ ಮಾಧ್ಯಮ ಮಿತ್ರರಿಗೆ ಪತ್ರಿಕಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು" ಎಂದು ಅಭಿನಂದಿಸಿದರು.
ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಪತ್ರಿಕಾರಂಗ ಎಂಬ ನಾಲ್ಕು ಪ್ರಮುಖ ಆಧಾರ ಸ್ತಂಭಗಳಿವೆ. ಮೊದಲ ಮೂರು ಸ್ತಂಭಗಳು ತಪ್ಪು ಮಾಡಿದಾಗ ಅದನ್ನು ಸಮಾಜಕ್ಕೆ ತೋರಿಸಿ ತಿದ್ದುವ ಮಹತ್ತರ ಜವಾಬ್ದಾರಿ ಪತ್ರಿಕಾರಂಗದ ಮೇಲಿದೆ. ಪತ್ರಕರ್ತರು ಏನೇ ಬರೆದರೂ, ಏನನ್ನೇ ಪ್ರಸಾರ ಮಾಡಿದರೂ ತಮ್ಮ ಆತ್ಮಸಾಕ್ಷಿಯನ್ನು ಗಮನದಲ್ಲಿಟ್ಟುಕೊಂಡು ಬರೆಯಬೇಕು ಎಂದು ಅವರು ಮನವಿ ಮಾಡಿದರು. "ಅನೇಕರು ಮಾಧ್ಯಮಗಳನ್ನು ವಿರೋಧ ಪಕ್ಷದ ಕೆಲಸ ಮಾಡುತ್ತವೆ ಎನ್ನುತ್ತಾರೆ. ಆದರೆ, ಮಾಧ್ಯಮಗಳು ಸಮಾಜದ ಬದಲಾವಣೆಗೆ ಶ್ರಮಿಸುವ ಮತ್ತು ಆಡಳಿತ ಪಕ್ಷವನ್ನು ತಿದ್ದುವ ನಿಜವಾದ ಶಕ್ತಿಗಳು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ" ಎಂದರು.
'ಆಸ್ಪತ್ರೆಗೆ ದಾಖಲು' ಎಂಬ ಸುಳ್ಳು ಸುದ್ದಿ ಮತ್ತು 'ಫೇಕ್ ನಶೆ'
ಇತ್ತೀಚಿನ ದಿನಗಳಲ್ಲಿ ಮಾಧ್ಯಮ ವಲಯದಲ್ಲಿ ಫೇಕ್ ನ್ಯೂಸ್ (ಸುಳ್ಳು ಸುದ್ದಿ) ಪಿಡುಗು ಹೆಚ್ಚಾಗುತ್ತಿರುವುದನ್ನು ಸಿಎಂ ಡಿ.ಕೆ. ಶಿವಕುಮಾರ್ ಕಟುವಾಗಿ ಟೀಕಿಸಿದರು. ತಮ್ಮದೇ ಇಂದಿನ ಉದಾಹರಣೆಯನ್ನು ನೀಡಿದ ಅವರು, "ಕಳೆದ ಆರೇಳು ತಿಂಗಳಿನಿಂದ ನಾನು ಯಾವುದೇ ಆರೋಗ್ಯ ತಪಾಸಣೆ ಮಾಡಿಸಿರಲಿಲ್ಲ. ಹೀಗಾಗಿ ಕೇವಲ ಸಾಮಾನ್ಯ ತಪಾಸಣೆಗಾಗಿ (Regular Checkup) ಇಂದು ಬೆಳಗ್ಗೆ ಆಸ್ಪತ್ರೆಗೆ ಹೋಗಿದ್ದೆ. ಆದರೆ, ನಾನು ಆಸ್ಪತ್ರೆಗೆ ಗಂಭೀರವಾಗಿ ದಾಖಲಾಗಿದ್ದೇನೆ (Admit) ಎಂದು ಕೆಲ ಟಿವಿ ಚಾನೆಲ್‌ಗಳಲ್ಲಿ ಬ್ರೇಕಿಂಗ್ ನ್ಯೂಸ್ ಪ್ರಸಾರ ಮಾಡಿದ್ದಾರೆ ಎಂದು ನನ್ನ ಖಾಸಗಿ ಕಾರ್ಯದರ್ಶಿ ಹೇಳುತ್ತಿದ್ದ" ಎಂದು ಆಶ್ಚರ್ಯ ವ್ಯಕ್ತಪಡಿಸಿದರು.
"ನಿನ್ನೆಯಷ್ಟೇ ನಾವು ರಾಜ್ಯದಲ್ಲಿ ನಶಾ ಮುಕ್ತ ಭಾರತ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಿದ್ದೆವು. ಆದರೆ ಸಮಾಜದಲ್ಲಿ ಈಗ ಮಾದಕ ದ್ರವ್ಯಗಳ ನಶೆಗಿಂತ ಈ ಫೇಕ್ ನ್ಯೂಸ್‌ನ ನಶೆ ಅತಿಯಾಗಿ ಹರಡುತ್ತಿದೆ. ಯಾರ್ಯಾರೋ ಏನೋ ಹೇಳಿದರು ಅಥವಾ ಸೋಷಿಯಲ್ ಮೀಡಿಯಾದಲ್ಲಿ ಯಾವುದೋ ವಿಡಿಯೋ ಸಿಕ್ಕಿತು ಎಂದ ತಕ್ಷಣ ಮಾಧ್ಯಮಗಳಲ್ಲಿ ಅದನ್ನು ಪ್ರಸಾರ ಮಾಡಬೇಡಿ. ಯಾವುದೇ ಸುದ್ದಿಯನ್ನು ಬಿತ್ತರಿಸುವ ಮುನ್ನ ಅದರ ಸತ್ಯಾಸತ್ಯತೆಯನ್ನು ಪರಾಮರ್ಶೆ ಮಾಡಿ, ದೃಢಪಡಿಸಿಕೊಂಡು ನಂತರ ಪ್ರಕಟಿಸಿ" ಎಂದು ಅವರು ಮಾಧ್ಯಮಗಳಿಗೆ ಕೋರಿದರು.
ಮೇಕೆದಾಟು ಪಾದಯಾತ್ರೆ ವಿಡಿಯೋ ದುರ್ಬಳಕೆ
ಕಾಂಗ್ರೆಸ್ ಪಕ್ಷದ ವತಿಯಿಂದ ಕೊರೋನಾ ಆತಂಕದ ನಡುವೆಯೂ ಹಮ್ಮಿಕೊಳ್ಳಲಾಗಿದ್ದ ಐತಿಹಾಸಿಕ ‘ಮೇಕೆದಾಟು ಪಾದಯಾತ್ರೆ’ಯ ದಿನಗಳನ್ನು ಸಿಎಂ ನೆನಪಿಸಿಕೊಂಡರು. "ಮೇಕೆದಾಟು ಯೋಜನೆ ಜಾರಿಗೆ ತರಬೇಕು ಎಂದು ನಾವು ಪಾದಯಾತ್ರೆ ಮಾಡಿದ್ದು ನನ್ನ ವೈಯಕ್ತಿಕ ಹಿತಾಸಕ್ತಿಗಾಗಿ ಅಲ್ಲ, ಇಡೀ ರಾಜ್ಯದ ಮತ್ತು ಬೆಂಗಳೂರಿನ ಜನತೆಯ ಒಳಿತಿಗಾಗಿ. ಆಗ ನಮ್ಮ ವಿರೋಧ ಪಕ್ಷದವರು ನಮ್ಮನ್ನು ಬೇಕಾದಷ್ಟು ಟೀಕೆ ಮಾಡಿದರು, ಅದಕ್ಕೆ ನಾವೇನೂ ತಲೆಕೆಡಿಸಿಕೊಳ್ಳಲಿಲ್ಲ. ಆದರೆ ಮಾಧ್ಯಮಗಳು ನಡೆದುಕೊಂಡ ರೀತಿ ಬೇಸರ ತರಿಸಿತು" ಎಂದರು.
"ಮೇಕೆದಾಟು ಪಾದಯಾತ್ರೆ ಮಾಡುವಾಗ ಸಂಗಮ ರಸ್ತೆಯಲ್ಲಿ ಭಾರಿ ತಿರುವು ಇತ್ತು. ನಾನು ಮತ್ತು ನಮ್ಮ ಕಾಂಗ್ರೆಸ್ ಕಾರ್ಯಕರ್ತರು ಮೂರ್ನಾಲ್ಕು ದಿನಗಳಿಂದ ಹಗಲು-ರಾತ್ರಿ ಎನ್ನದೆ ಪಾದಯಾತ್ರೆಯ ಯಶಸ್ಸಿಗಾಗಿ ದುಡಿದು ಸಂಪೂರ್ಣ ಬಳಲಿ ಹೋಗಿದ್ದೆವು. ಜನದಟ್ಟಣೆಯ ನಡುವೆ ನಮ್ಮ ಕಾರ್ಯಕರ್ತರು ನನ್ನನ್ನು ಮುನ್ನುಗ್ಗಿಸಲು ತಳ್ಳುತ್ತಿದ್ದರು. ಆ ಆಯಾಸದ ನಡುವೆ ರಸ್ತೆಯ ತಿರುವಿನಲ್ಲಿ ನಾನು ಒಂದೆರಡು ಕಡೆ ಸುಸ್ತಿನಿಂದ ವಾಲಿದ್ದೆ. ಆದರೆ ಟಿವಿಯವರು ಆ ದೃಶ್ಯವನ್ನು ಮಾತ್ರ ವಿಡಿಯೋ ಮಾಡಿಕೊಂಡು, ‘ಇವನು ವರ್ಷಗಟ್ಟಲೆಯಿಂದ ಕುಡಿಯುತ್ತಿದ್ದಾನೆ, ನೋಡಿ ಹೇಗೆ ತೂರಾಡುತ್ತಿದ್ದಾನೆ’ ಎಂದು ಸುಳ್ಳು ಕಥೆ ಕಟ್ಟಿ ಪ್ರಸಾರ ಮಾಡಿದರು" ಎಂದು ಕಿಡಿಕಾರಿದರು.
"ಈಗಲೂ ಆ ಎಡಿಟ್ ಮಾಡಿದ ಸುಳ್ಳು ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಕೇವಲ ಟಿಆರ್‌ಪಿಗಾಗಿ ಅಥವಾ ಮತ್ತೊಬ್ಬರ ಮಾನಹಾನಿ ಮಾಡಿ ಮಜಾ ತೆಗೆದುಕೊಳ್ಳಲು ನಮ್ಮನ್ನು ಬಳಸಿಕೊಳ್ಳುತ್ತಿದ್ದಾರೆ. ಇಂತಹ ಬೇಜವಾಬ್ದಾರಿ ನಡವಳಿಕೆಗಳಿಂದ ಒಟ್ಟಾರೆ ಮಾಧ್ಯಮ ರಂಗದ ಮೇಲಿರುವ ಗೌರವ ಮತ್ತು ವಿಶ್ವಾಸಾರ್ಹತೆ ಸಾರ್ವಜನಿಕರಲ್ಲಿ ದಿನೇದಿನೆ ಕಡಿಮೆಯಾಗುತ್ತದೆ. ಮಾಧ್ಯಮ ಮಿತ್ರರಲ್ಲಿ ನನ್ನ ವಿನಂತಿ ಏನೆಂದರೆ, ದಯವಿಟ್ಟು ಸತ್ಯಾಂಶ ತಿಳಿಯದೆ ಯಾವುದೇ ವ್ಯಕ್ತಿಯ ತೇಜೋವಧೆ ಮಾಡುವ ಸುದ್ದಿಗಳನ್ನು ಮಾಡಬೇಡಿ" ಎಂದು ಡಿ.ಕೆ. ಶಿವಕುಮಾರ್ ಭಾವುಕರಾಗಿ ಮನವಿ ಮಾಡಿದರು.