May 9, 2026 Languages : ಕನ್ನಡ | English

ಕಾಡಿನಲ್ಲೂ ಶುರುವಾಯ್ತು ಕಳ್ಳರ ಹಾವಳಿ - ಹುಲಿ ಲೆಕ್ಕ ಹಾಕಲು ಇಟ್ಟಿದ್ದ ಕ್ಯಾಮೆರಾವನ್ನೇ ಹೊತ್ತೊಯ್ದ ಕಿಡಿಗೇಡಿಗಳ ಘಟನೆ!!

ಚಿಕ್ಕಮಗಳೂರು: ಸಾಮಾನ್ಯವಾಗಿ ಕಳ್ಳರು ಮನೆ, ಅಂಗಡಿ ಅಥವಾ ದೇವಸ್ಥಾನಗಳಿಗೆ ಕನ್ನ ಹಾಕೋದನ್ನು ಕೇಳಿದ್ದೇವೆ. ಆದರೆ ಚಿಕ್ಕಮಗಳೂರಿನಲ್ಲಿ ಕಳ್ಳರು ಈಗ ಕಾಡಿಗೂ ಲಗ್ಗೆ ಇಟ್ಟಿದ್ದಾರೆ! ಮುತ್ತೋಡಿ ಅರಣ್ಯ ವಲಯದಲ್ಲಿ ಅರಣ್ಯ ಇಲಾಖೆಯವರು ಹುಲಿಗಳ ಲೆಕ್ಕ ಹಾಕಲು ಇಟ್ಟಿದ್ದ ಕ್ಯಾಮೆರಾಗಳನ್ನೇ ಕಳ್ಳರು 'ಟ್ರ್ಯಾಪ್' ಮಾಡಿ ಹೊತ್ತೊಯ್ದಿರುವ ಘಟನೆ ಈಗ ಎಲ್ಲರನ್ನೂ ಅಚ್ಚರಿಗೀಡು ಮಾಡಿದೆ.

ಹುಲಿ ಗಣತಿ ಕ್ಯಾಮೆರಾಗಳನ್ನೇ ಕದ್ದ ಕಳ್ಳರು;
ಹುಲಿ ಗಣತಿ ಕ್ಯಾಮೆರಾಗಳನ್ನೇ ಕದ್ದ ಕಳ್ಳರು;

ಹುಲಿ ಗಣತಿಗೇ ಕಳ್ಳರ ಕಾಟ;

ವಿಷಯ ಏನೆಂದರೆ, ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಈಗ ಹುಲಿ ಗಣತಿ ಕಾರ್ಯಾಚರಣೆ ನಡೆಯುತ್ತಿದೆ. ಕಾಡಿನಲ್ಲಿ ಹುಲಿಗಳ ಓಡಾಟ ಮತ್ತು ಅವುಗಳ ಸಂಖ್ಯೆಯನ್ನು ಪತ್ತೆಹಚ್ಚಲು ಅರಣ್ಯ ಇಲಾಖೆಯವರು ಅಲ್ಲಲ್ಲಿ ಹೈಟೆಕ್ ಕ್ಯಾಮೆರಾಗಳನ್ನು ಅಳವಡಿಸಿದ್ದರು. ಚಿಕ್ಕಮಗಳೂರು ತಾಲೂಕಿನ ಕೆಸವಿನಮನೆ ಡೀಮ್ಡ್ ಫಾರೆಸ್ಟ್‌ನಲ್ಲಿ ಇಂತಹ ಎರಡು ಕ್ಯಾಮೆರಾಗಳನ್ನು ಹಾಕಲಾಗಿತ್ತು. ಆದರೆ, ಹುಲಿಗಳನ್ನು ಸೆರೆಹಿಡಿಯಬೇಕಿದ್ದ ಈ ಕ್ಯಾಮೆರಾಗಳು ಈಗ ಕಳ್ಳರ ಪಾಲಾಗಿವೆ!

ಗಸ್ತಿಗೆ ಹೋದಾಗ ಸಿಕ್ಕಿತು ಶಾಕ್

ಮೇ 4ರವರೆಗೆ ಈ ಕ್ಯಾಮೆರಾಗಳು ಸರಿಯಾಗಿ ಕೆಲಸ ಮಾಡುತ್ತಿದ್ದವು. ಆದರೆ ಮೇ 5ರಂದು ಉಪವಲಯ ಅರಣ್ಯಾಧಿಕಾರಿ ಯಾಸೀನ್ ಬಾಷಾ ಮತ್ತು ಅರಣ್ಯ ಪಾಲಕ ನಂದೀಶ್ ಅವರು ಗಸ್ತಿಗೆ ಹೋದಾಗ, ಕ್ಯಾಮೆರಾ ಇಟ್ಟಿದ್ದ ಜಾಗ ಖಾಲಿ ಇರೋದನ್ನು ಕಂಡು ದಂಗಾಗಿದ್ದಾರೆ. ಸುಮಾರು 40 ಸಾವಿರ ರೂಪಾಯಿ ಮೌಲ್ಯದ ಎರಡು ಬೆಲೆಬಾಳುವ ಕ್ಯಾಮೆರಾಗಳನ್ನು ಕಿಡಿಗೇಡಿಗಳು ಕದ್ದು ಪರಾರಿಯಾಗಿದ್ದಾರೆ.

ಬೇಟೆಗಾರರ ಕೈವಾಡದ ಶಂಕೆ?

ಅಭಯಾರಣ್ಯ ಎಂದರೆ ಅಲ್ಲಿಗೆ ಎಂಟ್ರಿ ಕೊಡಲು ಅನುಮತಿ ಕಡ್ಡಾಯ. ಅಂತಹ ಕಟ್ಟುನಿಟ್ಟಿನ ಜಾಗದಲ್ಲೂ ಕಳ್ಳತನ ನಡೆದಿದೆ ಎಂದರೆ ಇದು ಅರಣ್ಯ ಇಲಾಖೆಯ ಭದ್ರತೆಯ ಬಗ್ಗೆ ದೊಡ್ಡ ಪ್ರಶ್ನೆ ಮೂಡಿಸಿದೆ. ಕೇವಲ ಕ್ಯಾಮೆರಾ ಹಣಕ್ಕಾಗಿ ಈ ಕಳ್ಳತನ ನಡೆದಿದೆಯೇ ಅಥವಾ ಕಾಡು ಪ್ರಾಣಿಗಳ ಬೇಟೆಗಾರರು ಮತ್ತು ಮರಗಳ್ಳರು ತಮ್ಮ ಅಕ್ರಮಗಳು ರೆಕಾರ್ಡ್ ಆಗಬಾರದು ಎಂಬ ಕಾರಣಕ್ಕೆ ಈ ಕೆಲಸ ಮಾಡಿದ್ದಾರೆಯೇ? ಎಂಬ ಸಂಶಯ ಈಗ ಎಲ್ಲರನ್ನೂ ಕಾಡುತ್ತಿದೆ.

ಕ್ಯಾಮೆರಾಗಳೇ ಮಾಯವಾಗಿರೋದ್ರಿಂದ ಈಗ ಕಾಡು ಪ್ರಾಣಿಗಳ ಸುರಕ್ಷತೆಯ ಬಗ್ಗೆಯೂ ಆತಂಕ ಶುರುವಾಗಿದೆ. ಈ ಕಳ್ಳತನದಿಂದಾಗಿ ಹುಲಿ ಗಣತಿ ಕಾರ್ಯಕ್ಕೂ ಸ್ವಲ್ಪ ಅಡ್ಡಿಯುಂಟಾಗಿದೆ.

ಮಲ್ಲಂದೂರು ಠಾಣೆಯಲ್ಲಿ ಕೇಸ್ ಫೈಲ್

ಈ ಬಗ್ಗೆ ಉಪವಲಯ ಅರಣ್ಯಾಧಿಕಾರಿ ಯಾಸೀನ್ ಬಾಷಾ ಅವರು ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕಾಡಿನೊಳಗೆ ನುಗ್ಗಿ ಕ್ಯಾಮೆರಾ ಎಗರಿಸಿದ ಆ 'ಕಿರಾತಕ' ಕಳ್ಳರಿಗಾಗಿ ಹುಡುಕಾಟ ಶುರು ಮಾಡಿದ್ದಾರೆ.

"ಕಳ್ಳನಿಗಿಂತ ಕುಳ್ಳ ಹಿರಿಯ" ಎನ್ನುವಂತೆ, ಅರಣ್ಯ ಇಲಾಖೆ ಹಾಕಿದ್ದ ಟ್ರ್ಯಾಪ್‌ಗೇ ಕಳ್ಳರು ಟ್ರ್ಯಾಪ್ ಹಾಕಿ ಹೋಗಿರುವುದು ಮಾತ್ರ ವಿಪರ್ಯಾಸ..

Latest News