ಇರಾನ್-ಇಸ್ರೇಲ್ ಯುದ್ಧದ ಬಿಸಿ ಕರ್ನಾಟಕಕ್ಕೆ - ರಾಷ್ಟ್ರೀಯ ಹೆದ್ದಾರಿಯಲ್ಲೇ ಇಂಧನ ಖಾಲಿ, ಬಿಕೋ ಎನ್ನುತ್ತಿವೆ ಬಂಕ್‌ಗಳು!!

ಸದ್ಯ ಇಡೀ ಜಗತ್ತಿನ ಕಣ್ಣು ಮಧ್ಯಪ್ರಾಚ್ಯ ರಾಷ್ಟ್ರಗಳ ಮೇಲಿದೆ. ಅಲ್ಲಿ ನಡೆಯುತ್ತಿರುವ ಯುದ್ಧದ ವಾತಾವರಣದ ಬಿಸಿ ಈಗ ನೇರವಾಗಿ ನಮ್ಮ ರಾಜ್ಯದ ಸಾಮಾನ್ಯ ಜನರ ಜೇಬಿಗೆ ಹಾಗೂ ವಾಹನಗಳ ಟ್ಯಾಂಕ್‌ಗೆ ತಟ್ಟುವ ಲಕ್ಷಣಗಳು ಕಾಣಿಸುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ, ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಮುಖ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನದ ಕೊರತೆ ಕಾಣಿಸಿಕೊಂಡಿದ್ದು, ವಾಹನ ಸವಾರರು ಪೆಟ್ರೋಲ್ ಹಾಗೂ ಡೀಸೆಲ್ ಸಿಗದೆ ಕಂಗಾಲಾಗಿದ್ದಾರೆ.

ಎಲ್ಲೋ ನಡೆದ ಯುದ್ಧಕ್ಕೆ ಇಲ್ಲಿನ ಜನರ ಜೇಬಿಗೆ ಕತ್ತರಿ
ಎಲ್ಲೋ ನಡೆದ ಯುದ್ಧಕ್ಕೆ ಇಲ್ಲಿನ ಜನರ ಜೇಬಿಗೆ ಕತ್ತರಿ

ಚಿಕ್ಕಬಳ್ಳಾಪುರ ತಾಲೂಕಿನ ಸೇಟ್ ದಿನ್ನೆ ಬಳಿ ಇರುವ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‌ನಲ್ಲಿ ಇಂಧನ ಖಾಲಿಯಾಗಿದ್ದು, ಬಂಕ್ ಅನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ 44ರ ಪಕ್ಕದಲ್ಲೇ ಇರುವ ಈ ಬಂಕ್‌ಗೆ ಪ್ರತಿನಿತ್ಯ ಸಾವಿರಾರು ವಾಹನಗಳು ಬಂದು ಹೋಗುತ್ತವೆ. ಆದರೆ, ಈಗ ಪೆಟ್ರೋಲ್ ಇಲ್ಲ ಎಂಬ ಬೋರ್ಡ್ ನೋಡಿ ವಾಹನ ಸವಾರರು ನಿರಾಸೆಯಿಂದ ವಾಪಸ್ ಹೋಗುತ್ತಿದ್ದಾರೆ. ಯಾವಾಗಲೂ ವಾಹನಗಳ ಸಾಲು ಇರುತ್ತಿದ್ದ ಬಂಕ್ ಈಗ ಪೆಟ್ರೋಲ್ ಇಲ್ಲದೆ ಬಿಕೋ ಎನ್ನುತ್ತಿದೆ.

ದೂರದ ಊರುಗಳಿಗೆ ಪ್ರಯಾಣಿಸುವವರು ಹಾಗೂ ಪ್ರತಿನಿತ್ಯ ಕೆಲಸಕ್ಕೆ ಹೋಗುವವರು ಈ ಬಂಕ್‌ಗೆ ಬಂದು ಇಂಧನ ಕೇಳಿದರೆ 'ಸ್ಟಾಕ್ ಇಲ್ಲ' ಎಂಬ ಉತ್ತರ ಸಿಗುತ್ತಿದೆ. ಎಷ್ಟೋ ಜನ ತಮ್ಮ ವಾಹನಗಳಲ್ಲಿ ಪೆಟ್ರೋಲ್ ಕೊನೆಯ ಹಂತಕ್ಕೆ ಬಂದಾಗ ಬಂಕ್‌ಗೆ ಬರುತ್ತಾರೆ. ಅಂತಹವರಿಗೆ ಪೆಟ್ರೋಲ್ ಸಿಗದೆ ದಾರಿ ಮಧ್ಯೆ ಗಾಡಿ ನಿಲ್ಲುವ ಭೀತಿ ಎದುರಾಗಿದೆ. "ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುವಾಗ ಪೆಟ್ರೋಲ್ ಸಿಗದೇ ಹೋದರೆ ನಾವು ಎಲ್ಲಿಗೆ ಹೋಗಬೇಕು?" ಎಂದು ಸವಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವೆ ಹೆಚ್ಚಾಗುತ್ತಿರುವ ಯುದ್ಧದ ಕಾರ್ಮೋಡಗಳಿಂದಾಗಿ ಜಾಗತಿಕವಾಗಿ ತೈಲ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಆತಂಕ ಎದುರಾಗಿದೆ. ಕಚ್ಚಾ ತೈಲದ ಬೆಲೆ ಏರಿಕೆಯಾಗುವ ಮತ್ತು ಪೂರೈಕೆ ಕಡಿಮೆಯಾಗುವ ಮುನ್ಸೂಚನೆ ಸಿಗುತ್ತಿದ್ದಂತೆಯೇ, ಸ್ಥಳೀಯವಾಗಿ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನದ ಕೊರತೆ ಕಾಣಿಸಿಕೊಳ್ಳುತ್ತಿದೆ. ಕಂಪನಿಗಳಿಂದ ಬಂಕ್‌ಗಳಿಗೆ ಬರಬೇಕಾದ ಲೋಡ್‌ಗಳು ಸರಿಯಾದ ಸಮಯಕ್ಕೆ ತಲುಪುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಇದು ಕೇವಲ ಒಂದು ಬಂಕ್‌ನ ಕಥೆಯಲ್ಲ, ಇದೇ ಪರಿಸ್ಥಿತಿ ಮುಂದುವರೆದರೆ ಜಿಲ್ಲೆಯ ಇತರ ಬಂಕ್‌ಗಳಲ್ಲೂ ಪೆಟ್ರೋಲ್ ಕೊರತೆ ಎದುರಾಗಬಹುದು ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡಿದೆ. ಇತ್ತೀಚೆಗಷ್ಟೇ ತೈಲ ಬೆಲೆ ಏರಿಕೆಯಾಗಲಿದೆ ಎಂಬ ವದಂತಿಗಳು ಹಬ್ಬಿದ್ದವು, ಈಗ ಸ್ಟಾಕ್ ಇಲ್ಲದೆ ಬಂಕ್‌ಗಳು ಬಂದ್ ಆಗುತ್ತಿರುವುದು ಜನರಲ್ಲಿ ಆತಂಕವನ್ನು ಇಮ್ಮಡಿಗೊಳಿಸಿದೆ.

ಸದ್ಯಕ್ಕೆ ಸೇಟ್ ದಿನ್ನೆ ಬಳಿಯ ಇಂಡಿಯನ್ ಆಯಿಲ್ ಬಂಕ್ ಬಾಗಿಲು ಹಾಕಿದ್ದು, ಜಿಲ್ಲಾಡಳಿತ ಅಥವಾ ಸಂಬಂಧಪಟ್ಟ ತೈಲ ಕಂಪನಿಗಳು ಈ ಬಗ್ಗೆ ಗಮನಹರಿಸಿ ತಕ್ಷಣ ಇಂಧನ ಸರಬರಾಜು ಮಾಡುವಂತೆ ಜನರು ಒತ್ತಾಯಿಸುತ್ತಿದ್ದಾರೆ. ಯುದ್ಧ ಎಲ್ಲೋ ನಡೆದರೆ ಅದರ ಪರಿಣಾಮ ಇಲ್ಲಿನ ಬಡ ಜನರ ಮೇಲೆ ಬೀರುತ್ತಿರುವುದು ನಿಜಕ್ಕೂ ದುರಂತ.

Latest News