Apr 4, 2026 Languages : ಕನ್ನಡ | English

ನೀವು ತಿನ್ನುತ್ತಿರೋದು ಮಾವಿನ ಹಣ್ಣೋ ಅಥವಾ ಸ್ಲೋ ಪಾಯ್ಸನ್? ಹೊಳೆಯುವ ಹಣ್ಣಿನ ಹಿಂದಿರೋ ಕರಾಳ ಸತ್ಯ ಇಲ್ಲಿದೆ!!

ಬೇಸಿಗೆ ಬಂತು ಅಂದ್ರೆ ಸಾಕು, ಎಲ್ಲರ ಬಾಯಲ್ಲೂ ನೀರೂರಿಸೋದು ಹಣ್ಣುಗಳ ರಾಜ ಮಾವಿನ ಹಣ್ಣು. ಮಾರುಕಟ್ಟೆಯಲ್ಲಿ ಈಗಷ್ಟೇ ಮಾವಿನ ಹಣ್ಣುಗಳ ಹವಾ ಶುರುವಾಗಿದೆ. ಆದ್ರೆ, ನೀವು ಮಾವಿನ ಹಣ್ಣು ತಿನ್ನುವ ಮುನ್ನ ಒಂದಿಷ್ಟು ಎಚ್ಚರ ವಹಿಸಲೇಬೇಕು. ಯಾಕಂದ್ರೆ, ನೀವು ತಿನ್ನುತ್ತಿರೋದು ಹಣ್ಣೋ ಅಥವಾ ಕೆಮಿಕಲ್ ವಿಷವೋ ಅನ್ನೋ ಅನುಮಾನ ಈಗ ಶುರುವಾಗಿದೆ.

ಅತಿಯಾದ ಹಳದಿ ಬಣ್ಣಕ್ಕೆ ಮರುಳಾಗಬೇಡಿ
ಅತಿಯಾದ ಹಳದಿ ಬಣ್ಣಕ್ಕೆ ಮರುಳಾಗಬೇಡಿ

ಇತ್ತೀಚೆಗೆ ಹೈದರಾಬಾದ್ ಪೊಲೀಸ್ ಕಮಿಷನರ್ ವಿ.ಸಿ. ಸಜ್ಜನರ್ ಅವರು ಮಾವಿನ ಹಣ್ಣಿನ ಕಲಬೆರಕೆ ಬಗ್ಗೆ ಜನರಲ್ಲಿ ದೊಡ್ಡ ಮಟ್ಟದ ಜಾಗೃತಿ ಮೂಡಿಸುತ್ತಿದ್ದಾರೆ. ಹೈದರಾಬಾದ್ ಪೊಲೀಸರ ಈ ಕಾರ್ಯ ಈಗ ಬೆಂಗಳೂರಿನಲ್ಲೂ ಚರ್ಚೆಯಾಗ್ತಿದೆ. ನಮ್ಮ ಬೆಂಗಳೂರು ಪೊಲೀಸರು ಕೂಡ ಇದೇ ರೀತಿ ಜಾಗೃತಿ ಮೂಡಿಸಬೇಕಿದೆ ಅನ್ನೋದು ಸಾರ್ವಜನಿಕರ ಒತ್ತಾಯ.

ಏನಿದು ಮಾವಿನ ಹಣ್ಣಿನ 'ಕೆಮಿಕಲ್' ಕಥೆ?

ಕೆಲವು ವ್ಯಾಪಾರಿಗಳು ಲಾಭದ ಆಸೆಗೆ ಬಿದ್ದು, ಹಣ್ಣುಗಳನ್ನು ಬೇಗ ಮಾಗಿಸಲು 'ಕ್ಯಾಲ್ಸಿಯಂ ಕಾರ್ಬೈಡ್' (Calcium Carbide) ಅನ್ನೋ ಅಪಾಯಕಾರಿ ಕೆಮಿಕಲ್ ಬಳಸುತ್ತಿದ್ದಾರೆ. ನೋಡಲು ತುಂಬಾ ಸುಂದರವಾಗಿ, ಹೊಳೆಯುವ ಚಿನ್ನದ ಬಣ್ಣದಲ್ಲಿ ಕಾಣುವ ಈ ಹಣ್ಣುಗಳು ವಾಸ್ತವದಲ್ಲಿ ವಿಷಕಾರಿ. ಇವು ಹೊರನೋಟಕ್ಕೆ ಹಳದಿಯಾಗಿದ್ದರೂ, ಒಳಗಡೆ ಕಚ್ಚಾ ಇರುತ್ತವೆ ಮತ್ತು ತಿನ್ನಲು ಅಯೋಗ್ಯವಾಗಿರುತ್ತವೆ.

ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮ?

ಈ ಕೆಮಿಕಲ್ ಯುಕ್ತ ಮಾವಿನ ಹಣ್ಣು ತಿಂದರೆ ತಕ್ಷಣವೇ ಕೆಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು:

  • ಗಂಟಲು ಉರಿ ಮತ್ತು ವಿಪರೀತ ವಾಕರಿಕೆ.

  • ವಾಂತಿ ಮತ್ತು ಭೇದಿ (ಡಯೇರಿಯಾ).

  • ದೀರ್ಘಕಾಲದವರೆಗೆ ಇಂತಹ ಹಣ್ಣುಗಳನ್ನು ಸೇವಿಸಿದರೆ ನರಮಂಡಲದ ಹಾನಿ ಹಾಗೂ ಉಸಿರಾಟದ ತೊಂದರೆಯೂ ಕಾಡಬಹುದು.

ಕೆಮಿಕಲ್ ಹಣ್ಣನ್ನು ಗುರುತಿಸುವುದು ಹೇಗೆ?

ನೈಸರ್ಗಿಕವಾಗಿ ಹಣ್ಣಾದ ಮಾವು ಎಂದಿಗೂ ಒಂದೇ ಸಮನಾದ (Uniform) ಬಣ್ಣವನ್ನು ಹೊಂದಿರುವುದಿಲ್ಲ. ಆದರೆ ಕೆಮಿಕಲ್ ಹಾಕಿದ ಹಣ್ಣುಗಳು ಇಡೀ ಹಣ್ಣು ಅತಿಯಾದ ಹಳದಿ ಬಣ್ಣದಲ್ಲಿರುತ್ತದೆ. ಇನ್ನು ಕೆಲವು ಟಿಪ್ಸ್ ಇಲ್ಲಿವೆ:

  1. ವಾಸನೆ: ಹಣ್ಣಿನ ಹತ್ತಿರ ಹೋದಾಗ ಮಾವಿನ ಹಣ್ಣಿನ ನೈಸರ್ಗಿಕ ಸುವಾಸನೆ ಬದಲು ಕೆಮಿಕಲ್ ವಾಸನೆ ಬರ್ತಿದ್ರೆ ಅದು ಡೇಂಜರ್!

  2. ಬಣ್ಣ: ಅತಿಯಾದ ಏಕರೂಪದ ಹಳದಿ ಬಣ್ಣವಿದ್ದರೆ ಜಾಗರೂಕರಾಗಿರಿ.

  3. ಬೇಕಿಂಗ್ ಸೋಡಾ ಟೆಸ್ಟ್: ಹಣ್ಣನ್ನು ಬೇಕಿಂಗ್ ಸೋಡಾ ಮಿಶ್ರಿತ ನೀರಿನಲ್ಲಿ ತೊಳೆದಾಗ ಅನಿರೀಕ್ಷಿತವಾಗಿ ಬಣ್ಣ ಬದಲಾದರೆ ಅದು ಕೆಮಿಕಲ್ ಹಣ್ಣು ಅಂತಲೇ ಅರ್ಥ.

  4. ಆರ್ಗ್ಯಾನಿಕ್ ಹೆಸರಲ್ಲಿ ಮೋಸ: 'ಆರ್ಗ್ಯಾನಿಕ್' ಅಂತ ಲೇಬಲ್ ಹಾಕಿದ ತಕ್ಷಣ ನಂಬಬೇಡಿ, ಸರಿಯಾಗಿ ಪರಿಶೀಲಿಸಿ ಖರೀದಿಸಿ.

ಹೈದರಾಬಾದ್ ಮಾದರಿ ಬೆಂಗಳೂರಿಗೆ ಬೇಕಿದೆ!

ಹೈದರಾಬಾದ್ ಪೊಲೀಸ್ ಇಲಾಖೆಯ H-FAST ತಂಡವು ಈಗ ಕಲಬೆರಕೆ ಹಣ್ಣು ಮಾರುವವರ ಮೇಲೆ ಹದ್ದಿನ ಕಣ್ಣಿಟ್ಟಿದೆ. "ಜಾಗೃತ ಹೈದರಾಬಾದ್ – ಸುರಕ್ಷಿತ ಹೈದರಾಬಾದ್" ಎಂಬ ಘೋಷವಾಕ್ಯದೊಂದಿಗೆ ಅಲ್ಲಿನ ಪೊಲೀಸರು ಜನರಿಗೆ ಧೈರ್ಯ ತುಂಬುತ್ತಿದ್ದಾರೆ. ಅಲ್ಲಿನ ಜನರಿಗೆ ಯಾವುದಾದರೂ ಕೆಮಿಕಲ್ ಹಣ್ಣು ಮಾರಾಟದ ಬಗ್ಗೆ ಗೊತ್ತಾದ್ರೆ ತಕ್ಷಣ ಡಯಲ್ 100 ಅಥವಾ ಸಹಾಯವಾಣಿಗೆ ಕರೆ ಮಾಡಬಹುದು.

ಇದೇ ರೀತಿ ನಮ್ಮ ಬೆಂಗಳೂರು ಪೊಲೀಸರು ಹಾಗೂ ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಕೂಡ ಮಾರುಕಟ್ಟೆಗಳ ಮೇಲೆ ದಾಳಿ ನಡೆಸಿ, ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಬೆಂಗಳೂರಿನ ರಸ್ತೆ ಬದಿಯಲ್ಲಿ ಮಾರುವ ಮಾವಿನ ಹಣ್ಣುಗಳ ಬಗ್ಗೆಯೂ ನಿಗಾ ವಹಿಸುವುದು ಅವಶ್ಯಕ.

ಹಣ್ಣು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ನಿಜ, ಆದ್ರೆ ಅದು ನೈಸರ್ಗಿಕವಾಗಿರಲಿ. ಅತಿಯಾದ ಹೊಳಪು ಮತ್ತು ಸುಂದರ ಬಣ್ಣಕ್ಕೆ ಮರುಳಾಗಿ ನಿಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳಬೇಡಿ. ಹಣ್ಣುಗಳನ್ನು ಖರೀದಿಸುವಾಗ ಸ್ವಲ್ಪ ಸಮಯ ತಗೆದುಕೊಂಡು ಸರಿಯಾಗಿ ಪರೀಕ್ಷಿಸಿ ತರುವುದು ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯಕ್ಕೆ ಕ್ಷೇಮ. ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುವ ಇಂತಹ ವ್ಯಾಪಾರಿಗಳಿಗೆ ಕಡಿವಾಣ ಬೀಳಲೇಬೇಕು.