Apr 23, 2026 Languages : ಕನ್ನಡ | English

ಬಾಗಿಲು ತೆರೆದ ಬದರಿನಾಥ ಧಾಮ - ಹಿಮಾಲಯದ ಮಡಿಲಲ್ಲಿ ಭಕ್ತಿಯ ಸಂಭ್ರಮ, ಇಂದಿನಿಂದ ಚಾರ್‌ಧಾಮ ಯಾತ್ರೆ!!

ಭಾರತದ ಪವಿತ್ರ ಯಾತ್ರಾಸ್ಥಳಗಳಲ್ಲಿ ಒಂದಾದ ಉತ್ತರಾಖಂಡದ ಬದರಿನಾಥ ಧಾಮದ ಬಾಗಿಲುಗಳು ಇಂದು ಅದ್ಧೂರಿಯಾಗಿ ತೆರೆಯಲ್ಪಟ್ಟಿವೆ. ಇದರೊಂದಿಗೆ 2026ರ ಸಾಲಿನ ಚಾರ್‌ಧಾಮ ಯಾತ್ರೆ ಈಗ ಪೂರ್ಣ ಪ್ರಮಾಣದಲ್ಲಿ ಆರಂಭವಾದಂತಾಗಿದೆ. ಸಾವಿರಾರು ಭಕ್ತರ 'ಬದ್ರಿ ವಿಶಾಲ್ ಲಾಲ್ ಕಿ ಜೈ' ಎಂಬ ಜಯಘೋಷಗಳ ನಡುವೆ, ಹಿಮಚ್ಛಾದಿತ ಪರ್ವತಗಳ ನಡುವೆ ನೆಲೆಸಿರುವ ಮಹಾವಿಷ್ಣುವಿನ ದರ್ಶನಕ್ಕೆ ಭಕ್ತ ಸಾಗರವೇ ಹರಿದುಬರುತ್ತಿದೆ.

25 ಕ್ವಿಂಟಾಲ್ ಹೂವುಗಳ ಅಲಂಕಾರ
25 ಕ್ವಿಂಟಾಲ್ ಹೂವುಗಳ ಅಲಂಕಾರ

ಬಾಗಿಲು ತರೆಯುವ ಶುಭ ಸಂದರ್ಭಕ್ಕಾಗಿ ಬದರಿನಾಥ ದೇವಾಲಯವನ್ನು ಬರೋಬ್ಬರಿ 25 ಕ್ವಿಂಟಾಲ್ ವೈವಿಧ್ಯಮಯ ಹೂವುಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು. ದೇವಾಲಯದ ಗೋಪುರದಿಂದ ಹಿಡಿದು ಪ್ರಾಕಾರದವರೆಗೆ ಹೂವುಗಳ ಘಮಲು ಹರಡಿದ್ದು, ಭಕ್ತರಿಗೆ ಸಾಕ್ಷಾತ್ ವೈಕುಂಠಕ್ಕೇ ಬಂದ ಅನುಭವವಾಗುತ್ತಿತ್ತು. ವೇದಘೋಷಗಳು ಮತ್ತು ಶಂಖನಾದದ ನಡುವೆ ಅರ್ಚಕರು ಪೂಜೆ ಸಲ್ಲಿಸಿ ಪವಿತ್ರ ಬಾಗಿಲುಗಳನ್ನು ತೆರೆದರು. ಇಂದಿನಿಂದ ಮುಂದಿನ ಆರು ತಿಂಗಳ ಕಾಲ ಭಕ್ತರಿಗೆ ಇಲ್ಲಿ ದರ್ಶನ ಭಾಗ್ಯ ಸಿಗಲಿದೆ.

ಯಾತ್ರೆಯ ವೇಳಾಪಟ್ಟಿ ಹೀಗಿದೆ:

ಈಗಾಗಲೇ ಚಾರ್‌ಧಾಮದ ಇತರ ಮೂರು ಪ್ರಮುಖ ಧಾಮಗಳ ಬಾಗಿಲು ಕೂಡ ತೆರೆಯಲಾಗಿದೆ:

ಯಮುನೋತ್ರಿ ಮತ್ತು ಗಂಗೋತ್ರಿ: ಅಕ್ಷಯ ತೃತೀಯದಂದೇ ಯಾತ್ರೆಗೆ ಚಾಲನೆ ಸಿಕ್ಕಿತ್ತು.

ಕೇದಾರನಾಥ: ಏಪ್ರಿಲ್ 22 ರಂದು ಶಿವನ ದರ್ಶನಕ್ಕೆ ಬಾಗಿಲು ತೆರೆಯಲಾಗಿತ್ತು.

ಬದರಿನಾಥ: ಇಂದು ಬದರಿನಾಥನ ಪ್ರವೇಶದೊಂದಿಗೆ ಚಾರ್‌ಧಾಮ ಯಾತ್ರೆ ಸಂಪೂರ್ಣಗೊಂಡಿದೆ.

ಬದರಿನಾಥಕ್ಕೆ ಯಾಕಿಷ್ಟು ಮಹತ್ವ?

ಹಿಂದೂ ಧರ್ಮದಲ್ಲಿ ಬದರಿನಾಥವನ್ನು ‘ಭೂಮಿಯ ವೈಕುಂಠ’ ಎಂದು ಕರೆಯಲಾಗುತ್ತದೆ. ಆಕಾಶ ಅಥವಾ ಪಾತಾಳ ಲೋಕದಲ್ಲಿ ಹುಡುಕಿದರೂ ಬದರಿನಾಥಕ್ಕೆ ಸಮನಾದ ಕ್ಷೇತ್ರ ಇನ್ನೊಂದಿಲ್ಲ ಎಂಬುದು ಭಕ್ತರ ಅಚಲ ನಂಬಿಕೆ. ಇಲ್ಲಿನ ಅಲಕನಂದಾ ನದಿಯ ಸ್ನಾನ ಮತ್ತು ದೈವದ ದರ್ಶನದಿಂದ ಮನುಷ್ಯನು ಜನ್ಮ-ಮರಣದ ಚಕ್ರದಿಂದ ಮುಕ್ತಿ ಪಡೆದು ಮೋಕ್ಷ ಹೊಂದುತ್ತಾನೆ ಎನ್ನಲಾಗುತ್ತದೆ.

ಬದರಿನಾಥ ಎಂಬ ಹೆಸರು ಬಂದಿದ್ದೇ ಒಂದು ವಿಶೇಷ. ಪುರಾಣಗಳ ಪ್ರಕಾರ, ಭಗವಾನ್ ವಿಷ್ಣುವು ಇಲ್ಲಿ ತಪಸ್ಸು ಮಾಡುತ್ತಿದ್ದಾಗ ಕಡುಬಿಸಿಲು ಮತ್ತು ಮಳೆಯಿಂದ ಆತನನ್ನು ರಕ್ಷಿಸಲು ಲಕ್ಷ್ಮಿ ದೇವಿಯು ‘ಬದರಿ’ (ಬೋರೆ ಹಣ್ಣಿನ) ಮರದ ರೂಪ ಧರಿಸಿ ವಿಷ್ಣುವಿಗೆ ನೆರಳು ನೀಡಿದಳಂತೆ. ದೇವಿಯ ಈ ಪ್ರೀತಿ ಮತ್ತು ಭಕ್ತಿಗೆ ಮೆಚ್ಚಿದ ವಿಷ್ಣು, ಇನ್ಮುಂದೆ ಈ ಜಾಗ ತನ್ನ ಹೆಸರಿಗಿಂತ ಲಕ್ಷ್ಮಿಯ ಹೆಸರಿನಿಂದ (ಬದರಿ) ಗುರುತಿಸಿಕೊಳ್ಳಲಿ ಎಂದು 'ಬದರಿನಾಥ' ಎಂದು ಕರೆದನು.

ಹಿಮಾಲಯದ ಮಡಿಲಲ್ಲಿರುವ ಈ ಕ್ಷೇತ್ರವನ್ನು ಆದಿ ಶಂಕರಾಚಾರ್ಯರು ಪುನರುಜ್ಜೀವನಗೊಳಿಸಿದ್ದರು. ಇದು 108 ವೈಷ್ಣವ ದಿವ್ಯ ದೇಶಗಳಲ್ಲಿ ಅತ್ಯಂತ ಪ್ರಮುಖವಾದುದು. ಇಲ್ಲಿನ ಪ್ರಕೃತಿ ಸೌಂದರ್ಯ ಮತ್ತು ಅಲ್ಲಿನ ಆಧ್ಯಾತ್ಮಿಕ ಸೆಳೆತ ಪ್ರತಿಯೊಬ್ಬ ಯಾತ್ರಿಕನಿಗೂ ಜೀವನದ ಶ್ರೇಷ್ಠ ಅನುಭವ ನೀಡುತ್ತದೆ.

Latest News