ಇನ್ಫುಯೆನ್ಸರ್ ಬ್ಲಾಕ್‌ಮೇಲ್ ಕೇಸ್‌ಗೆ ಬಂತು ಬಿಗ್ ಟ್ವಿಸ್ಟ್ - ಗಂಡನ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ ಪತ್ನಿ!!

ಬೆಂಗಳೂರು: ಕೆಲವು ದಿನಗಳ ಹಿಂದೆ ಆಂಧ್ರ ಮೂಲದ ಉದ್ಯಮಿ ಕಾರ್ತಿಕ್ ಎಂಬುವವರು ಕನ್ನಡದ ಜನಪ್ರಿಯ ಇನ್ಫುಯೆನ್ಸರ್ ಯುವತಿಯೊಬ್ಬಳು ತನಗೆ ಒಂದೂವರೆ ಕೋಟಿ ರೂಪಾಯಿಗೆ ಬ್ಲಾಕ್‌ಮೇಲ್ ಮಾಡುತ್ತಿದ್ದಾಳೆ ಎಂದು ದೂರು ನೀಡಿದ್ದರು. ಆದರೆ ಈಗ ಈ ಕಥೆಗೆ ಕ್ಲೈಮ್ಯಾಕ್ಸ್ ಬದಲಾಗಿದೆ. ಕಾರ್ತಿಕ್ ಪತ್ನಿ ಹರ್ಷಿತಾ ಅವರೇ ರಂಗಕ್ಕಿಳಿದಿದ್ದು, "ನನ್ನ ಗಂಡ ಸುಳ್ಳು ಹೇಳ್ತಿದ್ದಾನೆ, ಆ ಯುವತಿ ಹಣ ಕೇಳಿಲ್ಲ" ಎಂದು ಪೊಲೀಸರಿಗೆ ಪತ್ರ ಬರೆದಿದ್ದಾರೆ.

ಉದ್ಯಮಿ ಕಾರ್ತಿಕ್ ಅಸಲಿ ಮುಖವಾಡ ಕಳಚಿದ ಪತ್ನಿ ಹರ್ಷಿತಾ
ಉದ್ಯಮಿ ಕಾರ್ತಿಕ್ ಅಸಲಿ ಮುಖವಾಡ ಕಳಚಿದ ಪತ್ನಿ ಹರ್ಷಿತಾ

ಪತ್ನಿ ಹರ್ಷಿತಾ ಹೊರಿಸಿರುವ ಗಂಭೀರ ಆರೋಪಗಳೇನು?

ಹೆಚ್‌ಕೆ ಫಾರ್ಮಾ ಕಾಸ್ಮೆಟಿಕ್ಸ್ ಕಂಪನಿಯ ಡೈರೆಕ್ಟರ್ ಆಗಿರುವ ಹರ್ಷಿತಾ ಅವರು ಜಯನಗರ ಪೊಲೀಸರಿಗೆ ಮತ್ತು ಮಹಿಳಾ ಆಯೋಗಕ್ಕೆ ಸುದೀರ್ಘ ದೂರು ನೀಡಿದ್ದಾರೆ. ಅವರ ದೂರಿನ ಮುಖ್ಯಾಂಶಗಳು ಇಲ್ಲಿವೆ:

ಸುಳ್ಳು ಉದ್ಯಮಿ: ಕಾರ್ತಿಕ್ ಯಾವುದೇ ದೊಡ್ಡ ಬಿಸಿನೆಸ್‌ಮ್ಯಾನ್ ಅಲ್ಲ. ಆತ ಕೇವಲ ಪತ್ನಿಯ ಕ್ಲಿನಿಕ್‌ನ ಮಾರ್ಕೆಟಿಂಗ್ ನೋಡಿಕೊಳ್ಳುತ್ತಿದ್ದ ಅಷ್ಟೆ.

ಲೈಂಗಿಕ ಸಂಬಂಧ ಮುಚ್ಚಿಡಲು ಸಂಚು: ಕಾರ್ತಿಕ್ ಆ ಯುವತಿಯ ಜೊತೆ ಮಾತ್ರವಲ್ಲದೆ, ಇನ್ನೂ ಹಲವು ಯುವತಿಯರ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಆ ಇನ್ಫುಯೆನ್ಸರ್ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದಾನೆ. ತನ್ನ ಕೃತ್ಯಗಳು ಹೊರಬರಬಾರದು ಎಂದು ಆಕೆಯನ್ನು ಬ್ಲಾಕ್‌ಮೇಲರ್ ಎಂದು ಚಿತ್ರಿಸುತ್ತಿದ್ದಾನೆ.

ಮಾಲ್ಡೀವ್ಸ್ ಪ್ರವಾಸ: ಯುವತಿಯನ್ನು ಹೈದರಾಬಾದ್, ಬೆಂಗಳೂರು ಮತ್ತು ಮಾಲ್ಡೀವ್ಸ್‌ಗೆ ಕಾರ್ತಿಕ್ ಕರೆದುಕೊಂಡು ಹೋಗಿದ್ದಕ್ಕೆ ಸಾಕ್ಷಿಗಳಿವೆ.

ಮೊಬೈಲ್ ಕಳವು ಮತ್ತು ಹ್ಯಾಕಿಂಗ್ ಪ್ಲಾನ್!

ಕಳೆದ ವರ್ಷ ಆಗಸ್ಟ್‌ನಲ್ಲಿ ಆ ಯುವತಿ ಕಾರ್ತಿಕ್ ಮನೆಗೆ ಬಂದು ಆತನ ಲೈಂಗಿಕ ಕಿರುಕುಳದ ಬಗ್ಗೆ ಕುಟುಂಬದ ಮುಂದೆ ಅಳಲು ತೋಡಿಕೊಂಡಿದ್ದಳು. ಆಗ ಕಾರ್ತಿಕ್ "ನಮ್ಮತ್ರ ದುಡ್ಡಿದೆ ಅಂತ ಇವಳು ಸುಳ್ಳು ಹೇಳ್ತಿದ್ದಾಳೆ" ಎಂದು ಮನೆಯವರನ್ನು ನಂಬಿಸಿದ್ದ. ಆಕೆಯ ಬಳಿ ಇದ್ದ ಸಾಕ್ಷ್ಯಗಳನ್ನು ನಾಶಪಡಿಸಲು ಕಾರ್ತಿಕ್ ತನ್ನ ಸ್ನೇಹಿತರಾದ ಲೋಕೇಶ್ ಮತ್ತು ನಾಗವರ್ಮ ಮೂಲಕ ಯುವತಿಯ ಎರಡು ಮೊಬೈಲ್ ಮತ್ತು ಟ್ಯಾಬ್‌ಗಳನ್ನು ಕಳವು ಮಾಡಿಸಿದ್ದ ಎನ್ನಲಾಗಿದೆ.

ಈ ಬಗ್ಗೆ ಹೈದರಾಬಾದ್‌ನ ಗಚ್ಚಿಬೌಲಿ ಠಾಣೆಯಲ್ಲಿ ದೂರು ದಾಖಲಾದಾಗ, ಪೊಲೀಸರು ವಿಚಾರಣೆ ನಡೆಸಿದ್ದರು. ಆ ಕಳುವಾದ ಮೊಬೈಲ್ ಕಾರ್ತಿಕ್ ಬೆಡ್‌ರೂಂನಲ್ಲೇ ಸಿಕ್ಕಿತ್ತು! ಅಷ್ಟೇ ಅಲ್ಲದೆ ಆಕೆಯ ಇನ್‌ಸ್ಟಾಗ್ರಾಮ್ ಅಕೌಂಟ್ ಅನ್ನು ಕೂಡ ಕಾರ್ತಿಕ್ ಹ್ಯಾಕ್ ಮಾಡಿದ್ದ ಎಂದು ಪತ್ನಿ ಆರೋಪಿಸಿದ್ದಾರೆ.

ಪತ್ನಿ ಈಗ ಪ್ರತ್ಯೇಕ ವಾಸ

ಗಂಡನ ಅಸಲಿ ಬುದ್ಧಿ ತಿಳಿದ ಮೇಲೆ ಹರ್ಷಿತಾ ಕಳೆದ ಎರಡು ತಿಂಗಳಿನಿಂದ ಹೈದರಾಬಾದ್‌ನಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. "ಯುವತಿ ನನಗೆ ಆತನ ಕುಕೃತ್ಯಗಳ ಬಗ್ಗೆ ಸಾಕ್ಷ್ಯ ಸಮೇತ ಮಾಹಿತಿ ನೀಡಿದಳು. ಅದನ್ನು ನೋಡಿ ನನಗೆ ಶಾಕ್ ಆಯ್ತು. ಆಕೆ ದೂರು ನೀಡಿದರೆ ತನಗೆ ತೊಂದರೆಯಾಗಬಹುದು ಎಂಬ ಭಯದಿಂದ ನನ್ನ ಗಂಡನೇ ಅವಳ ಮೇಲೆ ಸುಳ್ಳು ಬ್ಲಾಕ್‌ಮೇಲ್ ಕೇಸ್ ಹಾಕಿದ್ದಾನೆ" ಎಂದು ಹರ್ಷಿತಾ ಪೊಲೀಸರಿಗೆ ತಿಳಿಸಿದ್ದಾರೆ.

ಜಯನಗರ ಪೊಲೀಸರಿಗೆ ಸಾಕ್ಷ್ಯ ಸಲ್ಲಿಕೆ

ಜಯನಗರ ಪೊಲೀಸರು ನೋಟಿಸ್ ನೀಡಿದಾಗ ಹರ್ಷಿತಾ ಅವರು ಗಂಡನ ಎಲ್ಲಾ ವಾಟ್ಸಾಪ್ ಮೆಸೇಜ್‌ಗಳು, ಬೆದರಿಕೆ ಕರೆಗಳು ಮತ್ತು ಇತರ ಯುವತಿಯರಿಗೆ ವಂಚಿಸಿರುವ ಸಾಕ್ಷ್ಯಗಳನ್ನು ನೀಡಿದ್ದಾರೆ. ಈ ದೂರಿನ ಪ್ರತಿಯನ್ನು ಕರ್ನಾಟಕ ಮತ್ತು ತೆಲಂಗಾಣ ಡಿಐಜಿ ಸೇರಿದಂತೆ ಹೈಕೋರ್ಟ್ ನ್ಯಾಯಮೂರ್ತಿಗಳಿಗೂ ರವಾನಿಸಿದ್ದಾರೆ.

ಒಟ್ಟಿನಲ್ಲಿ ಬ್ಲಾಕ್‌ಮೇಲ್ ಮಾಡಿದ್ದಾಳೆ ಎನ್ನಲಾದ ಯುವತಿಯ ಪರವಾಗಿ ಪತ್ನಿಯೇ ನಿಂತಿರುವುದು ಈ ಪ್ರಕರಣದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಉದ್ಯಮಿ ಎಂದು ಹೇಳಿಕೊಂಡಿದ್ದ ಕಾರ್ತಿಕ್ ಈಗ ಸ್ವತಃ ಕಾನೂನಿನ ಸುಳಿಗೆ ಸಿಲುಕುವ ಸಾಧ್ಯತೆ ದಟ್ಟವಾಗಿದೆ.

Latest News