Mar 5, 2026 Languages : ಕನ್ನಡ | English

ಬಂಗಲೆ ಇದ್ದವರಿಗಿಲ್ಲ ಬಡವರ ಕಾರ್ಡ್ - ಅಕ್ರಮವಾಗಿ ಸೌಲಭ್ಯ ಪಡೆಯುವವರ ನಿದ್ದೆಗೆಡಿಸಿದ ಆಹಾರ ಇಲಾಖೆ!!

ಕರ್ನಾಟಕ ರಾಜ್ಯ ಸರ್ಕಾರವು ಅಕ್ರಮವಾಗಿ ಬಿಪಿಎಲ್ BPL ಕಾರ್ಡ್ ಹೊಂದಿರುವವರ ವಿರುದ್ಧ ತೀವ್ರವಾದ ಕ್ರಮಕ್ಕೆ ಮುಂದಾಗಿದ್ದು, ಕಳೆದ ಐದು ತಿಂಗಳಲ್ಲಿ ಲಕ್ಷಾಂತರ ಮಂದಿಗೆ ದೊಡ್ಡ ಆಘಾತ ನೀಡಿದೆ.

ಅಕ್ರಮದ ವಿರುದ್ಧ ಶುರುವಾಗಿದೆ ಸರ್ಕಾರದ ಕಟ್ಟುನಿಟ್ಟಿನ ಆಪರೇಷನ್
ಅಕ್ರಮದ ವಿರುದ್ಧ ಶುರುವಾಗಿದೆ ಸರ್ಕಾರದ ಕಟ್ಟುನಿಟ್ಟಿನ ಆಪರೇಷನ್

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ನಡೆಸಿದ ವಿಶೇಷ ಕಾರ್ಯಾಚರಣೆಯ ಅಡಿಯಲ್ಲಿ ಸುಮಾರು 15.12 ಲಕ್ಷ ಜನರು BPL ಸೌಲಭ್ಯದಿಂದ ವಂಚಿತರಾಗಿದ್ದಾರೆ. ಸರ್ಕಾರದ ಈ ಕಟ್ಟುನಿಟ್ಟಿನ ಕ್ರಮದಿಂದಾಗಿ ಅರ್ಹ ಬಡವರಿಗೆ ಮಾತ್ರ ಸೌಲಭ್ಯ ಸಿಗುವಂತಾಗಲಿ ಎಂಬ ಆಶಯ ವ್ಯಕ್ತವಾಗಿದ್ದರೂ ಸಾಮಾನ್ಯ ವರ್ಗದ ಜನರಲ್ಲಿ ಆತಂಕ ಕೂಡ ಮನೆಮಾಡಿದೆ.

ಇಲಾಖೆಯ ಅಂಕಿಅಂಶಗಳ ಪ್ರಕಾರ, ಈ ಅವಧಿಯಲ್ಲಿ ಒಟ್ಟು 5,632 ಬಿಪಿಎಲ್ ಕಾರ್ಡ್‌ಗಳನ್ನು ಶಾಶ್ವತವಾಗಿ ರದ್ದುಗೊಳಿಸಿದ್ದಾರೆ. ಇದಲ್ಲದೆ, ಸುಮಾರು 4.09 ಲಕ್ಷ ಕಾರ್ಡ್‌ಗಳನ್ನು ಬಿಪಿಎಲ್ ವಿಭಾಗದಿಂದ ಎಪಿಎಲ್ APL ವಿಭಾಗಕ್ಕೆ ವರ್ಗಾಯಿಸಲಾಗಿದೆ. ಇದರಿಂದಾಗಿ ಸುಮಾರು 14.68 ಲಕ್ಷ ಮಂದಿಗೆ ಸಿಗುತ್ತಿದ್ದ ಉಚಿತ ಪಡಿತರ ಸೌಲಭ್ಯಕ್ಕೆ ಬ್ರೇಕ್ ಬಿದ್ದಿದೆ. 

23 ಸಾವಿರಕ್ಕೂ ಹೆಚ್ಚು ಪಡಿತರ ಚೀಟಿಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದ್ದು, ಫಲಾನುಭವಿಗಳು ಸರಿಯಾದ ದಾಖಲೆಗಳನ್ನು ಒದಗಿಸದಿದ್ದರೆ ಅವುಗಳೂ ರದ್ದಾಗುವ ಭೀತಿ ಎದುರಾಗಿದೆ. ಶ್ರೀಮಂತರು ಮತ್ತು ಅರ್ಹವಲ್ಲದವರು ಬಡವರ ಹೆಸರಿನಲ್ಲಿ ಸೌಲಭ್ಯ ಪಡೆಯುತ್ತಿರುವುದನ್ನು ತಡೆಯುವುದು ಈ ಕಾರ್ಯಾಚರಣೆಯ ಮುಖ್ಯ ಉದ್ದೇಶವಾಗಿದೆ.

ಮತ್ತೊಂದೆಡೆ, ಸರ್ಕಾರದ ಈ ನಿರ್ಧಾರಕ್ಕೆ ಸಾರ್ವಜನಿಕ ವಲಯದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅತಿ ಶ್ರೀಮಂತರು, ಕಾರು ಮತ್ತು ಬಂಗಲೆ ಹೊಂದಿರುವವರು ಬಿಪಿಎಲ್ ಕಾರ್ಡ್ ಬಳಸುತ್ತಿರುವುದನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವುದು ಸ್ವಾಗತಾರ್ಹ ಎಂದು ಹಲವರು ಹೇಳಿದ್ದಾರೆ.

ಕಡು ಬಡವರು ಮತ್ತು ಕೂಲಿ ಕಾರ್ಮಿಕರಿಗೆ ಹೊಸ ಕಾರ್ಡ್‌ಗಳು ಸುಲಭವಾಗಿ ಸಿಗುತ್ತಿಲ್ಲ ಎಂಬ ಆಕ್ರೋಶವೂ ವ್ಯಕ್ತವಾಗಿದೆ. ಕೇವಲ ತಾಂತ್ರಿಕ ಕಾರಣಗಳನ್ನು ಒಡ್ಡಿ ಬಡವರ ಕಾರ್ಡ್‌ಗಳನ್ನು ಕಿತ್ತುಕೊಳ್ಳಬೇಡಿ, ಬದಲಾಗಿ ನಿಜವಾದ ಅರ್ಹರನ್ನು ಗುರುತಿಸಿ ಸೌಲಭ್ಯ ನೀಡಿ ಎಂದು ಸಾರ್ವಜನಿಕರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ನಡುವೆ ಬಿಪಿಎಲ್ ಕಾರ್ಡ್ ಪಡೆಯಲು ಇರುವ ಆದಾಯದ ಮಿತಿಯನ್ನು ಏರಿಸುವ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಪ್ರಸ್ತುತ ಕೇಂದ್ರ ಸರ್ಕಾರದ ಮಾನದಂಡದಂತೆ ವಾರ್ಷಿಕ ಆದಾಯ 1.20 ಲಕ್ಷ ರೂಪಾಯಿಗಿಂತ ಕಡಿಮೆ ಇರಬೇಕು. ಆದರೆ ಈಗಿನ ಕಾಲದಲ್ಲಿ ಕೂಲಿ ಕೆಲಸ ಮಾಡುವವರಿಗೂ ವರ್ಷಕ್ಕೆ 1.80 ಲಕ್ಷ ರೂಪಾಯಿಗಿಂತ ಹೆಚ್ಚು ಆದಾಯ ಬರುತ್ತಿದೆ.

ಈ ಹಿನ್ನೆಲೆಯಲ್ಲಿ ಆದಾಯ ಮಿತಿಯನ್ನು ಪರಿಷ್ಕರಿಸುವ ಬಗ್ಗೆ ಆಹಾರ ಸಚಿವರು ಈ ಹಿಂದೆ ಭರವಸೆ ನೀಡಿದ್ದರು. ಒಂದು ವೇಳೆ ಆದಾಯ ಮಿತಿಯಲ್ಲಿ ಬದಲಾವಣೆಯಾದರೆ ಮಾತ್ರ ಮಧ್ಯಮ ವರ್ಗದ ಅನೇಕರಿಗೆ ಸಮಾಧಾನ ಸಿಗಲಿದೆ. ಸದ್ಯಕ್ಕೆ ಮಾತ್ರ ಸರ್ಕಾರದ ಈ ಸಮರವು ಅನರ್ಹ ಕಾರ್ಡ್‌ದಾರರ ನಿದ್ದೆಗೆಡಿಸಿದೆ.