Apr 12, 2026 Languages : ಕನ್ನಡ | English

BMTC ಬಸ್ಸಿನಲ್ಲಿ ಪುರುಷರಿಗೂ 'ಶಕ್ತಿ' ಭಾಗ್ಯ - ಈ ಕಂಡಕ್ಟರ್‌ಗಳ ಐಡಿಯಾ ಸೂಪರ್!!

ರಾಜ್ಯ ಸರ್ಕಾರದ 'ಶಕ್ತಿ ಯೋಜನೆ' ಮಹಿಳೆಯರಿಗಷ್ಟೇ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಬಿಎಂಟಿಸಿಯ ಕೆಲ ಕಂಡಕ್ಟರ್‌ಗಳು ಮಾತ್ರ ಇದನ್ನು ಪುರುಷರಿಗೂ ವಿಸ್ತರಿಸಿಬಿಟ್ಟಿದ್ದಾರೆ. ಅಷ್ಟೇ ಅಲ್ಲ, ಸರ್ಕಾರಕ್ಕೆ ಹೋಗಬೇಕಿದ್ದ ಹಣವನ್ನು ತಮ್ಮ ಸ್ವಂತ ಅಕೌಂಟ್‌ಗೆ ಜಮೆ ಮಾಡಿಕೊಂಡು ಬಿಎಂಟಿಸಿಗೆ ಚಳ್ಳೆಹಣ್ಣು ತಿನಿಸಿದ್ದಾರೆ. ಈಗ ಈ ಹಗರಣ ಬಯಲಾಗಿದ್ದು, ಸದ್ಯಕ್ಕೆ ನಾಲ್ವರು ಕಂಡಕ್ಟರ್‌ಗಳನ್ನು ಸಸ್ಪೆಂಡ್ ಮಾಡಿ ಮನೆಗೆ ಕಳುಹಿಸಲಾಗಿದೆ.

ಬಿಎಂಟಿಸಿಯಲ್ಲಿ ಭರ್ಜರಿ ಲೂಟಿ
ಬಿಎಂಟಿಸಿಯಲ್ಲಿ ಭರ್ಜರಿ ಲೂಟಿ

ರಾಜ್ಯದ ಕೋಟ್ಯಂತರ ಮಹಿಳೆಯರು ಉಚಿತ ಬಸ್ ಪ್ರಯಾಣದ ಲಾಭ ಪಡೆಯುತ್ತಿದ್ದರೆ, ಇತ್ತ ಕಂಡಕ್ಟರ್‌ಗಳು "ಅನ್ನ ತಿಂದ ಮನೆಗೆ ಕನ್ನ ಹಾಕುವ" ಕೆಲಸ ಮಾಡಿದ್ದಾರೆ. ಇವರು ಉಪಯೋಗಿಸಿಕೊಂಡಿದ್ದು ಕನ್ನಡ ಬಾರದ ಪ್ರಯಾಣಿಕರನ್ನು.

ಹೌದು, ಶಕ್ತಿ ಯೋಜನೆಯ ಟಿಕೆಟ್ ಮೇಲೆ "ಮಹಿಳೆಯರಿಗೆ ಉಚಿತ ಪ್ರಯಾಣ" ಎಂದು ಕನ್ನಡದಲ್ಲಿ ಮಾತ್ರ ಬರೆಯಲಾಗಿರುತ್ತದೆ. ಇದನ್ನು ಬಂಡವಾಳ ಮಾಡಿಕೊಂಡ ಈ ಕಂಡಕ್ಟರ್‌ಗಳು, ಕನ್ನಡ ಓದಲು ಬಾರದ ಹೊರರಾಜ್ಯದ ಪುರುಷ ಪ್ರಯಾಣಿಕರಿಗೆ ಶಕ್ತಿ ಯೋಜನೆಯ 'ಜೀರೋ ಟಿಕೆಟ್' ನೀಡುತ್ತಿದ್ದರು. ಅವರಿಂದ ಪೂರ್ತಿ ಟಿಕೆಟ್ ದರವನ್ನು ನಗದು ರೂಪದಲ್ಲಿ ವಸೂಲಿ ಮಾಡಿ ತಮ್ಮ ಜೇಬಿಗೆ ಇಳಿಸಿಕೊಳ್ಳುತ್ತಿದ್ದರು. ಸರ್ಕಾರಕ್ಕೆ ಹೋಗಬೇಕಾದ ಹಣ ಇವರ ಪಾಲಾಗುತ್ತಿತ್ತು.

ಇನ್ನು ಕಂಡಕ್ಟರ್‌ಗಳ ಬುದ್ಧಿವಂತಿಕೆ ಇಲ್ಲಿಗೆ ನಿಲ್ಲಲಿಲ್ಲ. ಡಿಜಿಟಲ್ ಇಂಡಿಯಾದ ಲಾಭವನ್ನು ಇವರು ಪೂರ್ತಿಯಾಗಿ ಪಡೆದುಕೊಂಡಿದ್ದಾರೆ. ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಕರ ಅನುಕೂಲಕ್ಕೆಂದು ಅಧಿಕಾರಿಗಳು ಯುಪಿಐ ಕ್ಯೂಆರ್ ಕೋಡ್ (QR Code) ಅಳವಡಿಸಿದ್ದಾರೆ. ಆದರೆ ಈ ಕಿಲಾಡಿ ಕಂಡಕ್ಟರ್‌ಗಳು ಬಸ್ ಡಿಪೋದಿಂದ ಹೊರಬರುತ್ತಿದ್ದಂತೆಯೇ ಸರ್ಕಾರಿ ಕ್ಯೂಆರ್ ಕೋಡ್ ಸ್ಟಿಕ್ಕರ್ ಅನ್ನು ಕಿತ್ತು ಜೇಬಿಗೆ ಹಾಕಿಕೊಳ್ಳುತ್ತಿದ್ದರು.

ಯಾರಾದರೂ ಪ್ರಯಾಣಿಕರು "ಫೋನ್ ಪೇ ಅಥವಾ ಗೂಗಲ್ ಪೇ ಮಾಡ್ತೀವಿ" ಅಂದಾಗ, ಇವರು ತಮ್ಮ ಮೊಬೈಲ್‌ನಲ್ಲಿರುವ ವೈಯಕ್ತಿಕ ಅಕೌಂಟ್‌ನ ಕ್ಯೂಆರ್ ಕೋಡ್ ತೋರಿಸುತ್ತಿದ್ದರು. ಪ್ರಯಾಣಿಕರು ಪಾವತಿಸಿದ ಹಣ ನೇರವಾಗಿ ಕಂಡಕ್ಟರ್ ಬ್ಯಾಂಕ್ ಅಕೌಂಟ್‌ಗೆ ಹೋಗುತ್ತಿತ್ತು. ಸರ್ಕಾರಕ್ಕೆ ಒಂದು ರೂಪಾಯಿಯೂ ತಲುಪುತ್ತಿರಲಿಲ್ಲ.

ಬಿಎಂಟಿಸಿ ಸೆಕ್ಯೂರಿಟಿ ಅಧಿಕಾರಿಗಳು ದಿಢೀರ್ ತಪಾಸಣೆ ನಡೆಸಿದಾಗ ಹತ್ತಕ್ಕೂ ಹೆಚ್ಚು ಮಂದಿ ಈ ಕಳ್ಳಾಟದಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ. ಸದ್ಯಕ್ಕೆ ನಾಲ್ವರನ್ನು ಅಮಾನತು ಮಾಡಲಾಗಿದ್ದು, ಅವರ ಲೂಟಿ ವಿವರ ಹೀಗಿದೆ:

ಸೂರ್ಯನಾರಾಯಣ (ಡಿಪೋ-18): ಇವರು ಬರೋಬ್ಬರಿ 54,290 ರೂ. ವಂಚಿಸಿದ್ದಾರೆ.

ಬೊಮ್ಮಲಿಂಗೇಶ್ ಸಿ. (ಡಿಪೋ-18): ಇವರು 16,404 ರೂ. ಲಪಟಾಯಿಸಿದ್ದಾರೆ.

ಬ್ರಿಜೇಶ್ ಬಾಬು (ಡಿಪೋ-51): ಇವರ ಅಕೌಂಟ್‌ಗೆ 9,795 ರೂ. ಜಮೆಯಾಗಿದೆ.

ಮೋಹನ್ (ಡಿಪೋ-18): ಇವರು 6,117 ರೂ. ವಂಚನೆ ಮಾಡಿದ್ದಾರೆ.

ಅಧಿಕಾರಿಗಳ ಖೆಡ್ಡಾಕ್ಕೆ ಬಿದ್ದ ಕಿಲಾಡಿಗಳು

ಬಿಎಂಟಿಸಿ ಅಧಿಕಾರಿಗಳಿಗೆ ಸಂಶಯ ಬಂದು ಇವರ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು ಪರಿಶೀಲಿಸಿದಾಗ ಅಸಲಿ ವಿಷಯ ಹೊರಬಂದಿದೆ. ಪ್ರತಿಯೊಬ್ಬರ ಅಕೌಂಟ್‌ನಲ್ಲಿಯೂ ಯುಪಿಐ ಮೂಲಕ ಸಾವಿರಾರು ರೂಪಾಯಿ ವ್ಯವಹಾರ ನಡೆದಿರುವುದು ಪತ್ತೆಯಾಗಿದೆ. "ಕೇವಲ ನಾಲ್ವರಷ್ಟೇ ಅಲ್ಲ, ಇನ್ನು ನೂರಾರು ಕಂಡಕ್ಟರ್‌ಗಳು ಇಂತಹ ಕೃತ್ಯದಲ್ಲಿ ತೊಡಗಿರಬಹುದು" ಎಂಬ ಶಂಕೆ ಅಧಿಕಾರಿಗಳಲ್ಲಿದೆ. ಮುಂದಿನ ದಿನಗಳಲ್ಲಿ ತನಿಖೆ ತೀವ್ರಗೊಂಡರೆ ಇನ್ನಷ್ಟು ಮಂದಿ ಕೆಲಸ ಕಳೆದುಕೊಳ್ಳುವುದು ಗ್ಯಾರಂಟಿ.

ಜನಸಾಮಾನ್ಯರಿಗೆ ಅನುಕೂಲವಾಗಲಿ ಎಂದು ಸರ್ಕಾರ ಯೋಜನೆಗಳನ್ನು ತಂದರೆ, ಅದನ್ನು ಬಳಸಿಕೊಂಡು ಇವರು ಜೇಬು ತುಂಬಿಸಿಕೊಳ್ಳುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಈ ಹಿಂದೆ ಕೂಡ ಇಂತಹ ಪ್ರಕರಣಗಳು ನಡೆದಿದ್ದರೂ, ಕಂಡಕ್ಟರ್‌ಗಳು ಮಾತ್ರ ಪಾಠ ಕಲಿತಿಲ್ಲ ಅನ್ನೋದು ಸ್ಪಷ್ಟವಾಗಿದೆ.