ಕಳೆದ ಬುಧವಾರ ತಡರಾತ್ರಿ ಬಿಹಾರದ ಶರಣ್ ಜಿಲ್ಲೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ತನ್ನ ಹಳೆಯ ಮನೆಯ ಸಮೀಪ ಸೌದೆ ತರಲು ಹೋಗಿದ್ದಳು. ಈ ಸಂದರ್ಭದಲ್ಲಿ ಅದೇ ಗ್ರಾಮದ ಐವರು ಕಾಮುಕರು ಆಕೆಯ ಮೇಲೆ ಕಣ್ಣು ಹಾಕಿದ್ದಾರೆ. ನಿರ್ಜನವಾಗಿದ್ದ ಹಳೆಯ ಕಟ್ಟಡವೊಂದಕ್ಕೆ ಆಕೆಯನ್ನು ಎಳೆದುಕೊಂಡು ಹೋಗಿ, ಐವರು ಸೇರಿ ಸಾಮೂಹಿಕ ಅ*ತ್ಯಾಚಾರ ಎಸಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಷ್ಟಕ್ಕೇ ನಿಲ್ಲದ ಈ ನರಾಧಮರು, ಆಕೆಯನ್ನು ಸಾ*ಯಿಸುವ ಉದ್ದೇಶದಿಂದ ಸಮೀಪದ ಬಾವಿಗೆ ತಳ್ಳಿದ್ದಾರೆ ಎಂದು ಕೇಳಿಬಂದಿದೆ. ಕುಟುಂಬದವರ ಪ್ರಕಾರ, ಆ ಬಾಲೆ ಬಾವಿಯಲ್ಲಿ ಸುಮಾರು 30 ನಿಮಿಷಗಳ ಕಾಲ ಬದುಕಲು ಹೋರಾಟ ನಡೆಸಿದ್ದಾಳೆ. ಗ್ರಾಮಸ್ಥರು ಆಕೆಯನ್ನು ಬಾವಿಯಿಂದ ಹೊರತೆಗೆಯುವಷ್ಟರಲ್ಲಿ ಆಕೆ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಳು.
ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು ಈಗಾಗಲೇ ಯುವರಾಜ್ ಕುಮಾರ್ ಎಂಬ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಉಳಿದ ನಾಲ್ವರು ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಸಾಮೂಹಿಕ ಅ*ತ್ಯಾಚಾರ ಮತ್ತು ಕೊ*ಲೆ ಪ್ರಕರಣದ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆದರೆ, ಇಲ್ಲಿ ಒಂದು ಅಚ್ಚರಿಯ ವಿಷಯವೆಂದರೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಯ್ ಕುಮಾರ್ ಅವರು 'ಬಾಲಕಿ ತಾನಾಗಿಯೇ ಬಾವಿಗೆ ಜಿಗಿದಿರಬಹುದು' ಎಂದು ಪ್ರಾಥಮಿಕ ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ. ವೈದ್ಯಕೀಯ ವರದಿ ಬಂದ ನಂತರವಷ್ಟೇ ಸತ್ಯಾಂಶ ತಿಳಿಯಲಿದೆ ಎಂದು ಅವರು ಹೇಳಿದ್ದಾರೆ.
ಪೊಲೀಸರ ಈ ಹೇಳಿಕೆಯನ್ನು ಬಾಲಕಿಯ ಕುಟುಂಬದವರು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಇದು ಆಕಸ್ಮಿಕ ಸಾವು ಅಥವಾ ಆತ್ಮಹ*ತ್ಯೆಯಲ್ಲ, ಬದಲಾಗಿ ವ್ಯವಸ್ಥಿತವಾಗಿ ನಡೆದ ಕೊ*ಲೆ ಎಂದು ಅವರು ವಾದಿಸುತ್ತಿದ್ದಾರೆ. ಬಂಧಿತ ಆರೋಪಿ ಯುವರಾಜ್ ಈ ಹಿಂದೆಯೂ ಹಲವು ಬಾರಿ ಆಕೆಗೆ ಕಿರುಕುಳ ನೀಡಿದ್ದ ಎನ್ನಲಾಗಿದೆ. ಆಕೆಯ ಮೇಲೆ ದೌರ್ಜನ್ಯ ನಡೆಸಿ ಸಾಕ್ಷ್ಯ ನಾಶಪಡಿಸಲು ಬಾವಿಗೆ ತಳ್ಳಲಾಗಿದೆ ಎಂಬುದು ಕುಟುಂಬದ ನೇರ ಆರೋಪ. ತನ್ನ ಮಗಳನ್ನು ಕಳೆದುಕೊಂಡ ತಂದೆ ತಾಯಿ ಈಗ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಮತ್ತು ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ.
ಇಂತಹ ಘಟನೆಗಳು ನಮ್ಮ ಸಮಾಜದಲ್ಲಿ ಹೆಣ್ಣುಮಕ್ಕಳು ಎಷ್ಟು ಅಸುರಕ್ಷಿತರಾಗಿದ್ದಾರೆ ಎಂಬುದನ್ನು ತೋರಿಸುತ್ತದೆ. ಸೌದೆ ತರಲು ಹೋದ ಬಾಲಕಿ ಹೆ*ಣವಾಗಿ ಮರಳುತ್ತಾಳೆ ಎಂದರೆ, ನಾವು ಎಂತಹ ಕ್ರೂರ ವ್ಯವಸ್ಥೆಯಲ್ಲಿದ್ದೇವೆ ಎಂಬ ಪ್ರಶ್ನೆ ಮೂಡುತ್ತದೆ. ಕೇವಲ ಕಾನೂನು ಬಿಗಿಯಾದರೆ ಸಾಲದು, ಹೆಣ್ಣುಮಕ್ಕಳ ಮೇಲೆ ದರ್ಪ ತೋರುವ ಇಂತಹ ವಿಕೃತ ಮನಸ್ಥಿತಿಗಳಿಗೆ ಸಮಾಜದಲ್ಲಿ ಭಯ ಹುಟ್ಟಿಸುವಂತ ಶಿಕ್ಷೆಯಾಗಬೇಕು.
ಸದ್ಯಕ್ಕೆ ಈ ಪ್ರಕರಣದ ವೈದ್ಯಕೀಯ ವರದಿಯನ್ನು ಎಲ್ಲರೂ ಎದುರು ನೋಡುತ್ತಿದ್ದಾರೆ. ಆ ಬಾಲಕಿಯ ಹೋರಾಟ ಮತ್ತು ಆಕೆಯ ಕುಟುಂಬದ ಕಣ್ಣೀರಿಗೆ ನ್ಯಾಯ ಸಿಗುತ್ತದೆಯೇ ಎಂಬುದನ್ನು ಕಾಲವೇ ನಿರ್ಧರಿಸಬೇಕು.