Dec 15, 2025 Languages : ಕನ್ನಡ | English

ಬೆಂಗಳೂರು: 1700 ಕೋಟಿ ವೆಚ್ಚದ 161.78 ಕಿ.ಮೀ ವೈಟ್ ಟಾಪಿಂಗ್!! ತಡ ಆಗ್ತಿರೋದಕ್ಕೆ ಕಾರಣ ಇಲ್ಲಿದೆ

ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವೈಟ್‌ಟಾಪಿಂಗ್ ಕಾಮಗಾರಿಯನ್ನು ಕೈಗೊಂಡಿದೆ. ನಗರದ ಹೃದಯಭಾಗ ಸೇರಿದಂತೆ ಹಲವೆಡೆ ಕಾಮಗಾರಿ ಚುರುಕುಗೊಂಡಿದ್ದರೂ, ಸಾರ್ವಜನಿಕ ವಲಯದಿಂದ ವಿಳಂಬದ ಆರೋಪಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಜಿಬಿಎ ಮುಖ್ಯ ಎಂಜಿನಿಯರ್ ಡಾ. ರಾಘವೇಂದ್ರ ಪ್ರಸಾದ್ ಅವರು ಮಾಹಿತಿ ಹಂಚಿಕೊಂಡಿದ್ದು, ಕಾಮಗಾರಿಗಳಿಗೆ ವೇಗ ನೀಡಲಾಗುತ್ತಿದ್ದು ಶೀಘ್ರಗತಿಯಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ ಎಂದು ಕೇಳಿ ಬಂದಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆದೇಶ ಹಾಗೂ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರ ನಿರ್ದೇಶನದ ಮೇರೆಗೆ ಕಾಮಗಾರಿಗಳ ಮೇಲ್ವಿಚಾರಣೆ ನಿರಂತರವಾಗಿ ನಡೆಯುತ್ತಿದೆ.

ವೈಟ್ ಟಾಪಿಂಗ್
ವೈಟ್ ಟಾಪಿಂಗ್

1700 ಕೋಟಿ ರೂ. ವೆಚ್ಚ – 161.78 ಕಿ.ಮೀ ಉದ್ದ

ಜಿಬಿಎ ವ್ಯಾಪ್ತಿಯಲ್ಲಿ ಒಟ್ಟು 161.78 ಕಿ.ಮೀ ಉದ್ದದ ವೈಟ್‌ಟಾಪಿಂಗ್ ಕಾಮಗಾರಿಗಳನ್ನು 16 ಪ್ಯಾಕೇಜ್‌ಗಳಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಇದಕ್ಕೆ ರಾಜ್ಯ ಸರ್ಕಾರದಿಂದ 800 ಕೋಟಿ ರೂ. ಹಾಗೂ ಎಸ್ಕ್ರೋ ನಿಧಿಯಿಂದ 900 ಕೋಟಿ ರೂ. ಸೇರಿ ಒಟ್ಟು 1700 ಕೋಟಿ ರೂ. ವೆಚ್ಚವಾಗಲಿದೆ ಎಂದು ಹೇಳಲಾಗುತ್ತಿದ್ದು ಪ್ರಸ್ತುತ 14 ಪ್ಯಾಕೇಜ್‌ಗಳಲ್ಲಿ 1487 ಕೋಟಿ ರೂ. ವೆಚ್ಚದಲ್ಲಿ 145.68 ಕಿ.ಮೀ ಉದ್ದದ 104 ರಸ್ತೆಗಳಲ್ಲಿ ಕಾಮಗಾರಿ ಪ್ರಾರಂಭವಾಗಿದೆ. ಉಳಿದ 16.1 ಕಿ.ಮೀ ಉದ್ದದ 14 ರಸ್ತೆಗಳಿಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ.

ಪೂರ್ಣಗೊಂಡ ಮತ್ತು ಪ್ರಗತಿಯಲ್ಲಿರುವ ಕಾಮಗಾರಿ

2016 ರಿಂದ 2023 ರವರೆಗೆ 124.17 ಕಿ.ಮೀ ಉದ್ದದ 47 ರಸ್ತೆಗಳಲ್ಲಿ ವೈಟ್‌ಟಾಪಿಂಗ್ ಕಾಮಗಾರಿ ಪೂರ್ಣಗೊಂಡಿದೆ. 2023-24ರಲ್ಲಿ 145.68 ಕಿ.ಮೀ ಉದ್ದದ 104 ರಸ್ತೆಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಮುಂದಿನ 2025-28 ಅವಧಿಯಲ್ಲಿ 488 ಕಿ.ಮೀ ಉದ್ದದ ರಸ್ತೆಗಳಿಗೆ ವೈಟ್‌ಟಾಪಿಂಗ್ ಕಾಮಗಾರಿ ನಡೆಸುವ ಉದ್ದೇಶವಿದ್ದು, ಅದಕ್ಕೆ ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದೆ.

ವಿಳಂಬಕ್ಕೆ ಪ್ರಮುಖ ಕಾರಣಗಳು ಇಲ್ಲಿವೆ

ನಗರದಲ್ಲಿ ಕಾಮಗಾರಿ ವಿಳಂಬವಾಗಲು ಪ್ರಮುಖ ಕಾರಣವೆಂದರೆ ಸಂಚಾರಿ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯುವ ಪ್ರಕ್ರಿಯೆ. ಜೊತೆಗೆ ಜಲಮಂಡಳಿಯಿಂದ ಕುಡಿಯುವ ನೀರಿನ ಪೈಪ್‌ಲೈನ್ ಹಾಗೂ ಒಳಚರಂಡಿ ವ್ಯವಸ್ಥೆಯ ಸ್ಥಳಾಂತರ ತ್ವರಿತವಾಗಿ ಪೂರ್ಣಗೊಳ್ಳದಿರುವುದೂ ಮತ್ತೊಂದು ಅಡ್ಡಿ. ಈ ಸಮಸ್ಯೆಗಳನ್ನು ಪರಿಹರಿಸಲು ಪಾಲಿಕೆ ಸಮನ್ವಯ ಸಾಧಿಸುತ್ತಿದ್ದು, ಕಾಮಗಾರಿಗೆ ವೇಗ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Latest News