ನೀವೇನಾದ್ರೂ ಬೆಂಗಳೂರಿಗರಾಗಿದ್ರೆ, ಇಲ್ಲಿನ ಟ್ರಾಫಿಕ್‌ನಲ್ಲಿ ಸಿಕ್ಕಿಬಿದ್ದು ದಿನಕ್ಕೆ ನೂರು ಸಲ ಶಾಪ ಹಾಕೋದು ಕಾಮನ್. ಆದ್ರೆ, ಬೆಳ್ಳಂದೂರಿನಿಂದ ಏರ್‌ಪೋರ್ಟ್‌ಗೆ ಹೋಗೋಕೆ ಬರೋಬ್ಬರಿ ಮೂರುವರೆ ಗಂಟೆ ಬೇಕಾಯ್ತು ಅಂದ್ರೆ ನಂಬ್ತೀರಾ? ಹೌದು, ಸಾಕ್ಷಿ ಅನ್ನೋ ಯುವತಿಯೊಬ್ಬಳು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರೋ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.
ಇದು ಜರ್ನಿ ಅಲ್ಲ, 'ಬದುಕುಳಿಯುವ ಹೋರಾಟ'!
ಸಾಕ್ಷಿ ತನ್ನ ವಿಡಿಯೋದಲ್ಲಿ ಹೇಳಿರೋದು ಕೇಳಿದ್ರೆ ನಿಜಕ್ಕೂ ಬೇಸರವಾಗುತ್ತೆ. ಸಂಜೆ 6 ಗಂಟೆಗೆ ಮನೆಯಿಂದ ಹೊರಟ ಆಕೆಗೆ ಏರ್‌ಪೋರ್ಟ್ ತಲುಪುವಾಗ ರಾತ್ರಿ 9.30 ಆಗಿತ್ತಂತೆ! ಈ ಬಗ್ಗೆ ಅವಳು ಹೇಳ್ತಾ, "ಇದು ಕೇವಲ ಪ್ರಯಾಣವಾಗಿರಲಿಲ್ಲ, ಒಂದು ರೀತಿ ಬದುಕುಳಿಯುವ ಹೋರಾಟ (Survival Struggle) ತರ ಅನಿಸ್ತು" ಅಂತ ಬೇಸರ ವ್ಯಕ್ತಪಡಿಸಿದ್ದಾಳೆ. ಟ್ರಾಫಿಕ್‌ನಲ್ಲಿ ಸಿಕ್ಕಿಬಿದ್ದು ತಲೆನೋವು, ಹಸಿವು ಎಲ್ಲವೂ ಸೇರಿ ಆಕೆ ಅನುಭವಿಸಿದ ಸಂಕಷ್ಟ ಅಷ್ಟಿಷ್ಟಲ್ಲ.
ಕಾಪಾಡಿದ ಇಂಡಿಗೋ ಫ್ಲೈಟ್!
ಅಷ್ಟೊತ್ತಿಗಾಗ್ಲೇ ವಿಮಾನ ಮಿಸ್ ಆಗುತ್ತೆ ಅನ್ನೋ ಭಯ ಸಾಕ್ಷಿಗೆ ಇತ್ತು. ಬ್ಯಾಗೇಜ್ ಡ್ರಾಪ್ ಮಾಡೋಕೆ ಟೈಮ್ ಇರುತ್ತಾ ಇಲ್ವಾ ಅನ್ನೋ ಆತಂಕದಲ್ಲೇ ಆಕೆ ಏರ್‌ಪೋರ್ಟ್ ತಲುಪಿದ್ದಾಳೆ. ಆದ್ರೆ ಅದೃಷ್ಟವಶಾತ್ ಇಂಡಿಗೋ ವಿಮಾನ ಸ್ವಲ್ಪ ಲೇಟ್ ಆಗಿ ಹೊರಡೋದಿತ್ತು. "ಈ ಸಲ ಆ ಫ್ಲೈಟ್ ಲೇಟ್ ಆಗಿದ್ದೇ ನನಗೆ ವರವಾಯ್ತು, ಇಂಡಿಗೋವೇ ನನ್ನ ಪಾಲಿನ ರಕ್ಷಕನಾಯ್ತು" ಅಂತ ಆಕೆ ತಮಾಷೆಯಾಗಿ ಬರೆದುಕೊಂಡಿದ್ದಾಳೆ.
ಮಳೆ ಬಂದ್ರೆ ಮುಗಿದೇ ಹೋಯ್ತು...
ಬೆಂಗಳೂರಲ್ಲಿ ಮಳೆ ಬಂತು ಅಂದ್ರೆ ರಸ್ತೆಗಳೆಲ್ಲ ಕೆರೆಯಂತಾಗುತ್ತವೆ. ಅದರಲ್ಲೂ ಬೆಳ್ಳಂದೂರು, ಔಟರ್ ರಿಂಗ್ ರೋಡ್ ಭಾಗದ ಸ್ಥಿತಿ ಕೇಳೋದೇ ಬೇಡ. ಕಿಲೋಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. ಅದಕ್ಕೇ ಸಾಕ್ಷಿ ಒಂದು ಕಿವಿಮಾತು ಹೇಳಿದ್ದಾಳೆ: "ಮಳೆಗಾಲದಲ್ಲಿ ಕಚೇರಿ ಟೈಮ್ ಮುಗಿಸಿ ಏರ್‌ಪೋರ್ಟ್‌ಗೆ ಹೋಗೋರು ಪ್ಲಾನ್ ಮಾಡಿದ್ದಕ್ಕಿಂತ ಒಂದೂವರೆ ಗಂಟೆ ಮುಂಚಿತವಾಗಿಯೇ ಹೊರಡಿ, ಇಲ್ಲದಿದ್ರೆ ಫ್ಲೈಟ್ ಮಿಸ್ ಆಗೋದು ಗ್ಯಾರಂಟಿ!"
ನೆಟ್ಟಿಗರ ವ್ಯಂಗ್ಯದ ಸುರಿಮಲೆ
ಈ ವಿಡಿಯೋ ನೋಡಿದ ನೆಟ್ಟಿಗರು ಕೂಡ ಸುಮ್ಮನೆ ಕೂತಿಲ್ಲ. "ಬೆಂಗಳೂರಿಂದ ಚೆನ್ನೈಗೆ ಹೋಗೋದಕ್ಕಿಂತ ಬೆಳ್ಳಂದೂರಿನಿಂದ ಏರ್‌ಪೋರ್ಟ್‌ಗೆ ಹೋಗೋಕೆ ಹೆಚ್ಚು ಟೈಮ್ ಬೇಕು" ಅಂತ ಒಬ್ಬರು ಕಾಮೆಂಟ್ ಮಾಡಿದ್ರೆ, ಇನ್ನೊಬ್ಬರು "ಫ್ಲೈಟ್ ಲೇಟ್ ಆಗೋದೇ ಈಗ ನಮಗೆ ಒಳ್ಳೇದಾಗ್ತಿದೆ, ಟ್ರಾಫಿಕ್ ಮ್ಯಾನೇಜ್ ಮಾಡೋಕೆ ಇದೇ ದಾರಿ" ಅಂತ ವ್ಯಂಗ್ಯವಾಡಿದ್ದಾರೆ.
ಸಿಲಿಕಾನ್ ಸಿಟಿಯ ಟ್ರಾಫಿಕ್ ಸಮಸ್ಯೆ ಈಗ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಏರ್‌ಪೋರ್ಟ್‌ಗೆ ಹೋಗೋರು ಫ್ಲೈಟ್ ಟಿಕೆಟ್ ಜೊತೆಗೆ ಒಂದು ದೊಡ್ಡ ಪಟ್ಟಿಯಷ್ಟು ತಾಳ್ಮೆಯನ್ನೂ ಜೊತೆಗೆ ಇಟ್ಕೋಬೇಕು ಅನ್ನೋದನ್ನ ಈ ವಿಡಿಯೋ ಸಾಬೀತುಪಡಿಸಿದೆ.