Apr 8, 2026 Languages : ಕನ್ನಡ | English

ಸಣ್ಣ ಸೇತುವೆಗಾಗಿ ನಿಂತಿತು ಬೃಹತ್ ಯೋಜನೆ - ಸಿಲಿಕಾನ್ ಸಿಟಿ ಟ್ರಾಫಿಕ್ ಕಷ್ಟಕ್ಕೆ ಮುಕ್ತಿ ಸಿಗೋದು ಯಾವಾಗ ಗೊತ್ತಾ!!

ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡಬೇಕಿದ್ದ ಸ್ಯಾಟಲೈಟ್ ಟೌನ್ ರಿಂಗ್ ರೋಡ್ (STRR) ಯೋಜನೆ ಈಗ ವಿಚಿತ್ರ ಕಾರಣಕ್ಕೆ ಹಳ್ಳ ಹಿಡಿದಿದೆ. ಬರೋಬ್ಬರಿ 21 ಕಿಲೋಮೀಟರ್ ಉದ್ದದ ರಸ್ತೆ ಸಿದ್ಧವಾಗಿದ್ದರೂ, ಕೇವಲ 54 ಮೀಟರ್‌ ಉದ್ದದ ರೈಲ್ವೆ ಸೇತುವೆ ಕೆಲಸ ಬಾಕಿ ಇರುವುದರಿಂದ ಇಡೀ ರಸ್ತೆ ಸಂಚಾರಕ್ಕೆ ಅಲಭ್ಯವಾಗಿದೆ.

2026 ಬಂದರೂ ಮುಗಿಯದ 54 ಮೀಟರ್ ಕೆಲಸ
2026 ಬಂದರೂ ಮುಗಿಯದ 54 ಮೀಟರ್ ಕೆಲಸ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮತ್ತು ರೈಲ್ವೆ ಇಲಾಖೆ ನಡುವಿನ 'ಇಗೋ' ಫೈಟ್‌ನಿಂದಾಗಿ ಸಾರ್ವಜನಿಕರು ಮತ್ತು ಟ್ರಕ್ ಚಾಲಕರು ಇಂದಿಗೂ ನಗರದ ಟ್ರಾಫಿಕ್ ಕಿರಿಕಿರಿ ಅನುಭವಿಸುವಂತಾಗಿದೆ.

ಹೊಸಕೋಟೆಯಿಂದ ತಮಿಳುನಾಡು ಗಡಿಯವರೆಗಿನ 20.9 ಕಿ.ಮೀ ರಸ್ತೆಯ ಬಹುತೇಕ ಕಾಮಗಾರಿ ಮುಗಿದಿದೆ. ಆದರೆ, ಬೆಂಗಳೂರು-ಚೆನ್ನೈ ರೈಲ್ವೆ ಹಳಿಗಳ ಮೇಲೆ ಒಂದು ಸೇತುವೆ ಕಟ್ಟಬೇಕಿದೆ. ಅಲ್ಲಿ ಅಳವಡಿಸಬೇಕಾದ 'ಬೌಸ್ಟ್ರಿಂಗ್ ಗರ್ಡರ್' (ಬಿಲ್ಲು ಆಕಾರದ ಕಬ್ಬಿಣದ ರಾಡ್‌ಗಳು) ಅಳವಡಿಸಲು ರೈಲ್ವೆ ಇಲಾಖೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಈ ಸಣ್ಣ ಕೆಲಸ ಮುಗಿಯದ ಕಾರಣ ಇಡೀ 21 ಕಿ.ಮೀ ರಸ್ತೆ ಎರಡು ವರ್ಷಗಳಿಂದ ಸುಮ್ಮನೆ ಬಿದ್ದಿದೆ.

ಈ ವಿಳಂಬಕ್ಕೆ ಯಾರು ಕಾರಣ ಎಂಬ ಪ್ರಶ್ನೆಗೆ NHAI ಮತ್ತು ರೈಲ್ವೆ ಇಲಾಖೆ ಪರಸ್ಪರ ಬೆರಳು ತೋರಿಸುತ್ತಿವೆ:

NHAI ವಾದ: "ನಾವು ಎಲ್ಲವನ್ನೂ ಸಿದ್ಧಪಡಿಸಿದ್ದೇವೆ. ರೈಲ್ವೆ ಇಲಾಖೆ ಅನುಮೋದನೆ ನೀಡಲು ವಿಳಂಬ ಮಾಡುತ್ತಿದೆ. 2026ರ ಜನವರಿಯಲ್ಲೂ ನಮಗೆ ಸಿಕ್ಕಿರುವುದು ಕೇವಲ 'ತಾತ್ವಿಕ' ಒಪ್ಪಿಗೆ ಮಾತ್ರ. ಅಂತಿಮ ಅನುಮೋದನೆ ಸಿಕ್ಕ ಮೇಲಷ್ಟೇ ನಾವು ಕೆಲಸ ಮುಂದುವರಿಸಲು ಸಾಧ್ಯ."

ರೈಲ್ವೆ ಇಲಾಖೆ ಪ್ರತ್ಯುತ್ತರ: "ತಪ್ಪು ನಮ್ಮದಲ್ಲ, NHAI ಅವರದ್ದು. ಸೇತುವೆ ಕೆಲಸ ಮಾಡುವ ಜಾಗ ಇನ್ನೂ ರೆಡಿ ಇಲ್ಲ. ತಾಂತ್ರಿಕ ನಕ್ಷೆಗಳನ್ನು ಇತ್ತೀಚೆಗಷ್ಟೇ ಸಲ್ಲಿಸಿದ್ದಾರೆ. ಅಲ್ಲದೆ, ಗರ್ಡರ್ ಜೋಡಿಸುವ ಕೆಲಸವೂ ಪೂರ್ಣಗೊಂಡಿಲ್ಲ," ಎಂದು ರೈಲ್ವೆ ಅಧಿಕಾರಿಗಳು ತಿರುಗೇಟು ನೀಡಿದ್ದಾರೆ.

ಈ ರಸ್ತೆ ಉದ್ಘಾಟನೆಯಾಗಿದ್ದರೆ ಹೊಸೂರು ರಸ್ತೆ ಮತ್ತು ತುಮಕೂರು ರಸ್ತೆಯಲ್ಲಿ ಹೋಗುವ ಭಾರಿ ಟ್ರಕ್‌ಗಳು ನಗರದ ಒಳಗೆ ಬರದೇ ನೇರವಾಗಿ ಹೊರವಲಯದಲ್ಲೇ ಸಾಗಬಹುದಿತ್ತು. ಈಗ ಈ 21 ಕಿ.ಮೀ ರಸ್ತೆ ಬಂದ್ ಇರುವುದರಿಂದ ಅನಿವಾರ್ಯವಾಗಿ ಸಾವಿರಾರು ಲಾರಿಗಳು ನಗರದ ರಸ್ತೆಗಳ ಮೂಲಕವೇ ಸಂಚರಿಸುತ್ತಿವೆ. ಇದು ಬೆಂಗಳೂರಿನ ಟ್ರಾಫಿಕ್ ದಟ್ಟಣೆಯನ್ನು ಮತ್ತಷ್ಟು ಹೆಚ್ಚು ಮಾಡುತ್ತಿದೆ.

ಒಂದೆಡೆ ಈ ಭಾಗದ ಕೆಲಸ ಕುಂಟುತ್ತಿದ್ದರೆ, ಇನ್ನೊಂದೆಡೆ ಸ್ಯಾಟಲೈಟ್ ರಿಂಗ್ ರೋಡ್‌ನ ಪಶ್ಚಿಮ ಭಾಗದ (STRR-West) ಕಾಮಗಾರಿಯೂ ಅನಿಶ್ಚಿತತೆಯಲ್ಲಿದೆ. ಕೇಂದ್ರ ಸರ್ಕಾರದ 'ಭಾರತ್‌ಮಾಲಾ' ಯೋಜನೆಯಡಿ ವೆಚ್ಚ ಹೆಚ್ಚಳದ ಕಾರಣ ನೀಡಿ ಕೆಲವು ಟೆಂಡರ್‌ಗಳನ್ನು ರದ್ದುಗೊಳಿಸಲಾಗಿದೆ. 4,750 ಕೋಟಿ ರೂಪಾಯಿಗಳ ಟೆಂಡರ್ ರದ್ದಾಗಿ ಹೊಸದಾಗಿ ಬಿಡ್ ಕರೆಯಲಾಗಿದ್ದರೂ, ಕೆಲಸ ಮಾತ್ರ ಶುರುವಾಗಿಲ್ಲ.

280 ಕಿ.ಮೀ ಉದ್ದದ ಈ STRR ಯೋಜನೆ ಬೆಂಗಳೂರಿನ ಸುತ್ತಮುತ್ತಲಿನ 12 ಪ್ರಮುಖ ಪಟ್ಟಣಗಳನ್ನು (ದೊಡ್ಡಬಳ್ಳಾಪುರ, ದೇವನಹಳ್ಳಿ, ಕನಕಪುರ, ರಾಮನಗರ ಇತ್ಯಾದಿ) ಸಂಪರ್ಕಿಸುವ ಬೃಹತ್ ಯೋಜನೆಯಾಗಿದೆ. 2005ರಲ್ಲಿ ಅಡಿಪಾಯ ಹಾಕಿದ ಈ ಯೋಜನೆಗೆ 2022ರಲ್ಲಿ ಪ್ರಧಾನಿ ಮೋದಿ ಚಾಲನೆ ನೀಡಿದ್ದರು.

ಈಗಿನ ಪರಿಸ್ಥಿತಿ ನೋಡಿದರೆ ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ಈ ಹೈವೇ ಯಾವಾಗ ಸಂಚಾರಕ್ಕೆ ಮುಕ್ತವಾಗುತ್ತದೋ ಆ ದೇವರಿಗೇ ಗೊತ್ತು! ಒಂದು ಸಣ್ಣ 54 ಮೀಟರ್ ಸೇತುವೆಗಾಗಿ 21 ಕಿಲೋಮೀಟರ್ ರಸ್ತೆ ವ್ಯರ್ಥವಾಗುತ್ತಿರುವುದು ಮಾತ್ರ ದುರಂತ.