'ಯಶು ಬೇಬಿ, ಮುದ್ದು ಬಂಗಾರ' - ಇನ್ಸ್‌ಪೆಕ್ಟರ್ ಪಾಪಣ್ಣನ ಅಸಭ್ಯ ವರ್ತನೆಗೆ ಸಾಕ್ಷಿ ಸಮೇತ ಯಶಶ್ವಿನಿ ದೂರು!!

ಬೆಂಗಳೂರಿನ ಪೊಲೀಸ್ ಇಲಾಖೆಯಲ್ಲಿ ಮತ್ತೆ ಭಾರಿ ವಿವಾದವೊಂದು ಸದ್ದು ಮಾಡುತ್ತಿದೆ. ಕೊನನಕುಂಟೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪಾಪಣ್ಣ ಅವರ ವಿರುದ್ಧ ರೌಡಿಶೀಟರ್ ಮಹಿಳೆಯೊಬ್ಬರು ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ. ಇನ್ಸ್‌ಪೆಕ್ಟರ್ ತನಗೆ ಪದೇ ಪದೆ ಫೋನ್ ಮಾಡಿ, ಮೆಸೇಜ್ ಕಳುಹಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಯಶಶ್ವಿನಿ ಎಂಬುವವರು ನೇರವಾಗಿ ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದಾರೆ.

ಇನ್ಸ್‌ಪೆಕ್ಟರ್ ಪಾಪಣ್ಣನಿಂದ ಮಹಿಳಾ ರೌಡಿಶೀಟರ್‌ಗೆ ಲೈಂಗಿಕ ಕಿರುಕುಳ ಆರೋಪ
ಇನ್ಸ್‌ಪೆಕ್ಟರ್ ಪಾಪಣ್ಣನಿಂದ ಮಹಿಳಾ ರೌಡಿಶೀಟರ್‌ಗೆ ಲೈಂಗಿಕ ಕಿರುಕುಳ ಆರೋಪ

ಯಶಶ್ವಿನಿ ನೀಡಿರುವ ದೂರಿನ ಪ್ರಕಾರ, ಇನ್ಸ್‌ಪೆಕ್ಟರ್ ಪಾಪಣ್ಣ ಅವರು ಕಳೆದ ಜನವರಿ 2026ರಿಂದ ತನಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ. ಕೆಲಸದ ನಿಮಿತ್ತ ಸಂಪರ್ಕದಲ್ಲಿದ್ದ ಇನ್ಸ್‌ಪೆಕ್ಟರ್, ನಂತರದ ದಿನಗಳಲ್ಲಿ ತಮ್ಮ ಮಿತಿ ಮೀರಿದ್ದಾರೆ ಎನ್ನಲಾಗಿದೆ. "ನನ್ನನ್ನು 'ಯಶು ಬೇಬಿ', 'ಮುದ್ದು ಬಂಗಾರ' ಎಂದು ಕರೆಯುತ್ತಿದ್ದರು. ಇನ್ಸ್‌ಪೆಕ್ಟರ್ ಎಂದು ಕರೆಯಬೇಡ, ಬದಲಿಗೆ 'ಪಪ್ಪು' ಎಂದು ಕರೆಯುವಂತೆ ಒತ್ತಾಯಿಸುತ್ತಿದ್ದರು" ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅಷ್ಟೇ ಅಲ್ಲದೆ, "ಒಂದು ನಗು ಬೀರು", "ಹಗ್ ಮಾಡು", "ಕಿಸ್ ಮಾಡು" ಎಂದು ಕೇಳುತ್ತಾ ಇನ್ಸ್‌ಪೆಕ್ಟರ್ ಅಸಭ್ಯವಾಗಿ ವರ್ತಿಸುತ್ತಿದ್ದರು ಎಂಬುದು ಮಹಿಳೆಯ ಆರೋಪ. ಅವರು ಮನೆಗೆ ಬರುವುದಾಗಿಯೂ ಪಟ್ಟು ಹಿಡಿದಿದ್ದರು ಎಂದು ಯಶಶ್ವಿನಿ ಅಳಲು ತೋಡಿಕೊಂಡಿದ್ದಾರೆ.

ತಮ್ಮ ವಿರುದ್ಧ ದೂರು ನೀಡಿದರೂ ಏನೂ ಆಗುವುದಿಲ್ಲ ಎಂಬರ್ಥದಲ್ಲಿ ಇನ್ಸ್‌ಪೆಕ್ಟರ್ ವರ್ತಿಸುತ್ತಿದ್ದರಂತೆ. ತಮ್ಮ ಹೆಂಡತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಬಂಧಿ ಎಂದು ಹೇಳಿಕೊಂಡು, ಅವರು ಪದೇ ಪದೆ ಹೆದರಿಸುತ್ತಿದ್ದರು ಎಂಬುದು ಮಹಿಳೆಯ ಆರೋಪ. ಯಶಶ್ವಿನಿ ಅವರ ನಂಬರ್ ಅನ್ನು ಬ್ಲಾಕ್ ಮಾಡಿದ್ದರೂ, ಬೇರೆ ಬೇರೆ ನಂಬರ್‌ಗಳಿಂದ ಕರೆ ಮಾಡಿ ಮತ್ತು ಮೆಸೇಜ್ ಕಳುಹಿಸಿ ಕಿರುಕುಳ ಮುಂದುವರಿಸಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.

ಈ ಕಿರುಕುಳದ ಮೂಲ ಇರುವುದು 2017ರಲ್ಲಿ. ಆಗ ಪಾಪಣ್ಣ ಅವರು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದರು. ಆಗ ಯಶಶ್ವಿನಿ ಅದೇ ಠಾಣೆಯ ರೌಡಿಶೀಟರ್ ಪಟ್ಟಿಯಲ್ಲಿದ್ದರು. ಆ ಸಮಯದಲ್ಲೇ ಇನ್ಸ್‌ಪೆಕ್ಟರ್ ಪಾಪಣ್ಣ ಅವರಿಗೆ ಯಶಶ್ವಿನಿ ಅವರ ನಂಬರ್ ಸಿಕ್ಕಿತ್ತು. ಅಂದಿನಿಂದಲೇ ಅವರು ಸಂಪರ್ಕದಲ್ಲಿದ್ದರು. ಕಳೆದ ಮೂರು ತಿಂಗಳಿನಿಂದ ಈ ಕಿರುಕುಳ ಮಿತಿ ಮೀರಿದ್ದು, ತಾಳಲಾರದೆ ಯಶಶ್ವಿನಿ ಈಗ ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದಾರೆ.

ಈ ಪ್ರಕರಣದಲ್ಲಿ ಕೇವಲ ಆರೋಪಗಳಷ್ಟೇ ಇಲ್ಲ, ಇನ್ಸ್‌ಪೆಕ್ಟರ್ ಕಳುಹಿಸಿರುವ ಆಡಿಯೋ ರೆಕಾರ್ಡಿಂಗ್‌ಗಳು ಮತ್ತು ವಾಟ್ಸಾಪ್ ಚಾಟ್ ಸ್ಕ್ರೀನ್‌ಶಾಟ್‌ಗಳನ್ನು ಯಶಶ್ವಿನಿ ಸಾಕ್ಷ್ಯವಾಗಿ ನೀಡಿದ್ದಾರೆ. ಇನ್ಸ್‌ಪೆಕ್ಟರ್‌ ಪಟಾಯಿಸಲು ನಡೆಸಿದ ಸಂಭಾಷಣೆಗಳು ಇದೀಗ ಪೊಲೀಸ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ. ಕಾನೂನು ಪಾಲಿಸಬೇಕಾದವರೇ ಈ ರೀತಿಯ ವರ್ತನೆ ತೋರಿರುವುದು ಇಲಾಖೆಯ ಘನತೆಗೆ ಧಕ್ಕೆ ತಂದಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಪ್ರಸ್ತುತ ಯಶಶ್ವಿನಿ ಮತ್ತು ಅವರ ಪತಿ ಮಹೇಶ್ ಇಬ್ಬರೂ ಕೊನನಕುಂಟೆ ಭಾಗದ ರೌಡಿಶೀಟರ್‌ಗಳಾಗಿದ್ದಾರೆ. ಕಿರುಕುಳದ ವಿರುದ್ಧ ಯಶಶ್ವಿನಿ ಕಾನೂನು ಹೋರಾಟಕ್ಕೆ ಇಳಿದಿದ್ದು, ಈಗ ಈ ಆಡಿಯೋ ಮತ್ತು ಮೆಸೇಜ್‌ಗಳು ಇನ್ಸ್‌ಪೆಕ್ಟರ್ ಪಾಪಣ್ಣ ಅವರನ್ನೇ ಇಕ್ಕಟ್ಟಿಗೆ ಸಿಲುಕಿಸುವುದು ಖಚಿತವಾಗಿದೆ. ಉನ್ನತ ಅಧಿಕಾರಿಗಳು ಈ ಪ್ರಕರಣವನ್ನು ಹೇಗೆ ನಿಭಾಯಿಸುತ್ತಾರೆ ಮತ್ತು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Latest News