ಸಿಲಿಕಾನ್ ಸಿಟಿಯಲ್ಲಿ ಘೋರ ದುರಂತ - ಕೌಟುಂಬಿಕ ಕಲಹಕ್ಕೆ 4 ತಿಂಗಳ ಗರ್ಭಿಣಿ ಪತ್ನಿಯ ಕೊ*ಲೆ ಮಾಡಿ ಪತಿ ಆ*ತ್ಮಹತ್ಯೆ!!

ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಕರುಳು ಹಿಂಡುವ ಘಟನೆ ಬೆಳಕಿಗೆ ಬಂದಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗರ್ಭಿಣಿ ಪತ್ನಿಯನ್ನು ಕ್ರೂರವಾಗಿ ಕೊ*ಲೆ ಮಾಡಿ, ಪತಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಭೀಕರ ಘಟನೆ ಬೆಂಗಳೂರಿನ ದಕ್ಷಿಣ ವಿಭಾಗದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಜಗಳದ ವಿಕೋಪಕ್ಕೆ ನಾಯಿಯ ಬೆಲ್ಟ್‌ನಿಂದ ಹೆಂಡತಿಯ ಕುತ್ತಿಗೆ ಬಿಗಿದು ಕೊಂದ ಗಂಡ
ಜಗಳದ ವಿಕೋಪಕ್ಕೆ ನಾಯಿಯ ಬೆಲ್ಟ್‌ನಿಂದ ಹೆಂಡತಿಯ ಕುತ್ತಿಗೆ ಬಿಗಿದು ಕೊಂದ ಗಂಡ

ಮೃತರನ್ನು ಮನೋಜ್ ಮತ್ತು ಸ್ವಪ್ನ ಎಂದು ಗುರುತಿಸಲಾಗಿದೆ. ಮೃತ ಸ್ವಪ್ನ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರು ಎನ್ನಲಾಗಿದ್ದು, ಈ ದಂಪತಿಯ ಸಾ*ವು ಇಡೀ ಕುಟುಂಬವನ್ನು ಕಣ್ಣೀರಿನಲ್ಲಿ ಮುಳುಗಿಸಿದೆ. ಘಟನಾ ಸ್ಥಳಕ್ಕೆ ದಕ್ಷಿಣ ವಿಭಾಗದ ಡಿಸಿಪಿ ವಂಶಿ ಕೃಷ್ಣ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಮನೋಜ್ ಮತ್ತು ಸ್ವಪ್ನ ಅವರ ವಿವಾಹ ಸುಮಾರು ಮೂರು ವರ್ಷಗಳ ಹಿಂದೆ ನಡೆದಿತ್ತು. ಮನೋಜ್ ಹುಟ್ಟಿನಿಂದಲೇ ಬೆಂಗಳೂರಿನಲ್ಲಿ ನೆಲೆಸಿದ್ದು, ವೃತ್ತಿಯಲ್ಲಿ ಕಾರ್ಪೆಂಟರ್ (ಮರಗೆಲಸ) ಆಗಿ ಕೆಲಸ ಮಾಡುತ್ತಿದ್ದ. ಇಬ್ಬರೂ ಮನೋಜ್ ಅವರ ತಂದೆ-ತಾಯಿಯ ಜೊತೆಯಲ್ಲಿ ಒಂದೇ ಮನೆಯಲ್ಲಿ ಜಂಟಿ ಕುಟುಂಬವಾಗಿ ವಾಸಿಸುತ್ತಿದ್ದರು. ಆರಂಭದಲ್ಲಿ ದಂಪತಿಗಳ ಜೀವನ ಸುಗಮವಾಗಿಯೇ ಸಾಗುತ್ತಿತ್ತು. ಇತ್ತೀಚೆಗೆ ಸ್ವಪ್ನ ಗರ್ಭಿಣಿಯಾಗಿದ್ದರಿಂದ ಕುಟುಂಬದಲ್ಲಿ ಸಂತೋಷದ ವಾತಾವರಣವೂ ಇತ್ತು. ಆದರೆ ವಿಧಿಯ ಆಟ ಬೇರೆಯೇ ಆಗಿತ್ತು.

ಕಳೆದ ನಾಲ್ಕೈದು ದಿನಗಳಿಂದ ಮನೋಜ್ ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಉಳಿದುಕೊಂಡಿದ್ದ ಎನ್ನಲಾಗಿದೆ. ಈ ಅವಧಿಯಲ್ಲಿ ಪತಿ-ಪತ್ನಿ ನಡುವೆ ಸಣ್ಣಪುಟ್ಟ ವಿಷಯಗಳಿಗೆ ಜಗಳಗಳು ಆರಂಭವಾಗಿದ್ದವು. ಮಾನಸಿಕ ಅಸಮಾಧಾನ ಅಥವಾ ಕೌಟುಂಬಿಕ ಒತ್ತಡದ ಕಾರಣದಿಂದ ಮನೋಜ್ ಮನೆಯಲ್ಲಿ ಪದೇ ಪದೇ ಹೆಂಡತಿಯೊಂದಿಗೆ ಗಲಾಟೆ ಮಾಡಿಕೊಳ್ಳುತ್ತಿದ್ದ ಎಂದು ತಿಳಿದುಬಂದಿದೆ. ಇಂದು ಮಧ್ಯಾಹ್ನವೂ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ.

ಇಂದು ಮಧ್ಯಾಹ್ನ ಸುಮಾರು 12:30 ರಿಂದ 1:00 ಗಂಟೆಯ ಅವಧಿಯಲ್ಲಿ ಮನೆಯಲ್ಲಿ ದಂಪತಿಗಳ ನಡುವೆ ಜೋರಾಗಿ ಗಲಾಟೆ ನಡೆದಿದೆ. ಇದೇ ಸಮಯದಲ್ಲಿ ಮನೋಜ್ ಅವರ ತಾಯಿ ಮನೆಯ ಮಹಡಿಯ (ಟೆರೇಸ್) ಮೇಲೆ ಬಟ್ಟೆ ಒಣಗಾಕಲು ಹೋಗಿದ್ದರು. ತಾಯಿ ಮೇಲೆ ಹೋದದ್ದನ್ನೇ ಕಾಯುತ್ತಿದ್ದ ಮನೋಜ್, ಕೋಪದ ಉದ್ವೇಗದಲ್ಲಿ ಕೊಠಡಿಯ ಬಾಗಿಲನ್ನು ಒಳಗಿನಿಂದ ಹಾಕಿಕೊಂಡಿದ್ದಾನೆ.

ರೂಮ್ ಒಳಗಡೆ ಗಲಾಟೆ ವಿಕೋಪಕ್ಕೆ ತಿರುಗಿದಾಗ, ಮನೋಜ್ ಮನೆಯಲ್ಲಿದ್ದ ನಾಯಿಯ ನೈಲಾನ್ ಬೆಲ್ಟ್ (ಹಗ್ಗ) ತೆಗೆದುಕೊಂಡು ಪತ್ನಿ ಸ್ವಪ್ನಳ ಕುತ್ತಿಗೆಯನ್ನು ಬಲವಾಗಿ ಬಿಗಿದಿದ್ದಾನೆ. ಗರ್ಭಿಣಿಯಾಗಿದ್ದ ಸ್ವಪ್ನ ಪತಿಯ ಕ್ರೌರ್ಯಕ್ಕೆ ಪ್ರತಿರೋಧ ಒಡ್ಡಲಾಗದೆ ಸ್ಥಳದಲ್ಲೇ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ.

ಪತ್ನಿ ಸಾವನ್ನಪ್ಪಿದ್ದಾಳೆ ಎಂದು ಖಚಿತವಾಗುತ್ತಿದ್ದಂತೆಯೇ ಆತಂಕ ಹಾಗೂ ಪಶ್ಚಾತ್ತಾಪಕ್ಕೊಳಗಾದ ಮನೋಜ್, ತಾನೂ ಬದುಕಿ ಉಳಿಯಬಾರದೆಂದು ನಿರ್ಧರಿಸಿದ್ದಾನೆ. ಪತ್ನಿಯನ್ನು ಕೊಲ್ಲಲು ಬಳಸಿದ್ದ ಅದೇ ನಾಯಿಯ ನೈಲಾನ್ ಬೆಲ್ಟ್ ಅನ್ನು ರೂಮಿನ ಸೀಲಿಂಗ್ ಫ್ಯಾನ್‌ಗೆ ಕಟ್ಟಿ, ಅದಕ್ಕೆ ತಾನೂ ನೇಣು ಬಿಗಿದುಕೊಂಡು ಆ*ತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸ್ವಲ್ಪ ಸಮಯದ ನಂತರ ತಾಯಿ ಮಹಡಿಯಿಂದ ಕೆಳಗೆ ಬಂದು ನೋಡಿದಾಗ ಕೊಠಡಿಯ ಬಾಗಿಲು ಮುಚ್ಚಿರುವುದು ಕಂಡುಬಂದಿದೆ. ಎಷ್ಟೇ ಕರೆದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಸಂಶಯಗೊಂಡು ಬಾಗಿಲು ಒಡೆದು ನೋಡಿದ್ದಾರೆ. ಈ ವೇಳೆ ಇಬ್ಬರೂ ಶವವಾಗಿ ಬಿದ್ದಿರುವುದನ್ನು ಕಂಡು ಕುಟುಂಬಸ್ಥರು ದಿಕ್ಕೆಟ್ಟಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ದಕ್ಷಿಣ ವಿಭಾಗದ ಡಿಸಿಪಿ ವಂಶಿ ಕೃಷ್ಣ ಅವರು ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಶ್ವಾನ ದಳ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ (FSL) ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಸಾಕ್ಷ್ಯಗಳನ್ನು ಕಲೆಹಾಕಿದ್ದಾರೆ.

"ದಂಪತಿಗಳ ನಡುವಿನ ಗಲಾಟೆಯೇ ಈ ಘಟನೆಗೆ ಪ್ರಾಥಮಿಕ ಕಾರಣ ಎಂದು ತಿಳಿದುಬಂದಿದೆ. ನಾಯಿಯ ಬೆಲ್ಟ್ ಬಳಸಿ ಪತ್ನಿಯನ್ನು ಕೊಲೆ ಮಾಡಿ, ನಂತರ ಪತಿ ಅದೇ ಹಗ್ಗದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಲಾಗುತ್ತಿದೆ," ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಹೆಂಡತಿಯನ್ನು ಕೊಂದ ಮನೋಜ್‌ನ ಈ ಹಠಾತ್ ನಿರ್ಧಾರಕ್ಕೆ ನಿಖರವಾದ ಕಾರಣವೇನು? ದಂಪತಿಗಳ ನಡುವೆ ಇದ್ದ ಅಸಲಿ ಸಮಸ್ಯೆಯಾದರೂ ಏನು? ಎಂಬ ಬಗ್ಗೆ ಪೊಲೀಸರು ಕುಟುಂಬಸ್ಥರ ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ.

ಒಂದೇ ಮನೆಯಲ್ಲಿದ್ದ ದಂಪತಿಗಳು ಹೀಗೆ ದುರಂತ ಅಂತ್ಯ ಕಂಡಿರುವುದು ಇಡೀ ನಗರವನ್ನು ಕಂಗೆಡಿಸಿದೆ. ತಂದೆ-ತಾಯಿಯ ಕಣ್ಣೆದುರೇ ಮಗ ಮತ್ತು ಸೊಸೆ ಹೆಣವಾಗಿ ಬಿದ್ದಿರುವುದು ಹೆತ್ತವರ ಒಡಲನ್ನು ಸೀಳುವಂತೆ ಮಾಡಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Latest News