May 2, 2026 Languages : ಕನ್ನಡ | English

ವರದಕ್ಷಿಣೆ ಎಂಬ ರಾಕ್ಷಸನಿಗೆ ಮತ್ತೊಂದು ಬಲಿ - ಬೆಂಗಳೂರಲ್ಲಿ 23 ವರ್ಷದ ಯುವತಿ ವಂದನಾ ಆ*ತ್ಮಹತ್ಯೆ!!

ಹಣದ ದಾಹಕ್ಕೆ ಮನುಷ್ಯ ಎಷ್ಟು ಕೆಳಮಟ್ಟಕ್ಕೆ ಇಳಿಯುತ್ತಾನೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಬೆಂಗಳೂರಿನ ಹುಳಿಮಾವಿನ ಹಳೆ ಪೋಸ್ಟ್ ಆಫೀಸ್ ಹತ್ತಿರದ ಮನೆಯಲ್ಲಿ ವಂದನಾ (23) ಎಂಬುವವರು ನೇಣಿಗೆ ಶರಣಾಗಿದ್ದಾರೆ. ಕೇವಲ ಮೂರು ತಿಂಗಳ ಮಗುವನ್ನು ಹೊಂದಿದ್ದ ಈ ತಾಯಿ, ಈ ನಿರ್ಧಾರಕ್ಕೆ ಬರಲು ಗಂಡನ ಮನೆಯವರು ನೀಡುತ್ತಿದ್ದ ಸತತ ಕಿರುಕುಳವೇ ಕಾರಣ ಎಂದು ಹೇಳಲಾಗುತ್ತಿದೆ.

ಹಣದ ದಾಹಕ್ಕೆ ಕೊನೆಯಾಯ್ತು ನವವಿವಾಹಿತೆಯ ಬದುಕು
ಹಣದ ದಾಹಕ್ಕೆ ಕೊನೆಯಾಯ್ತು ನವವಿವಾಹಿತೆಯ ಬದುಕು

ಸುಮಾರು ಮೂರು ವರ್ಷಗಳ ಹಿಂದೆ ವಿಕ್ರಂ ಶೇಷನ್ ಎಂಬಾತನ ಜೊತೆ ವಂದನಾ ಅವರ ವಿವಾಹ ಬಹಳ ಅದ್ದೂರಿಯಾಗಿ ನಡೆದಿತ್ತು. ಮಗಳ ಭವಿಷ್ಯ ಚೆನ್ನಾಗಿರಲಿ ಎಂಬ ಆಸೆಯಿಂದ ಪೋಷಕರು ಮದುವೆಯ ಸಮಯದಲ್ಲಿ ಸುಮಾರು ನಾಲ್ಕು ಲಕ್ಷ ರೂಪಾಯಿ ಮೌಲ್ಯದ ಗಾಡಿ ಮತ್ತು ಅಪಾರ ಪ್ರಮಾಣದ ಚಿನ್ನಾಭರಣಗಳನ್ನು ವರದಕ್ಷಿಣೆಯಾಗಿ ನೀಡಿದ್ದರು. ಅಷ್ಟೆಲ್ಲಾ ಕೊಟ್ಟಿದ್ದರೂ ವಿಕ್ರಂ ಶೇಷನ್ ಮತ್ತು ಆತನ ಮನೆಯವರ ಹಣದ ದಾಹ ಮಾತ್ರ ಕಡಿಮೆಯಾಗಿರಲಿಲ್ಲ.

ಮದುವೆಯಾದ ಕೆಲವೇ ದಿನಗಳಲ್ಲಿ ಪತಿ ವಿಕ್ರಂ, "ಇನ್ನೂ ಹೆಚ್ಚಿನ ವರದಕ್ಷಿಣೆ ತರಬೇಕು" ಎಂದು ಗಲಾಟೆ ಮಾಡಲು ಶುರು ಮಾಡಿದ್ದ. ಈ ವಿಚಾರವಾಗಿ ಹಲವು ಬಾರಿ ಮನೆಯಲ್ಲಿ ಜಗಳಗಳು ನಡೆದಿದ್ದವು. ದೊಡ್ಡವರು ಸೇರಿ ಬುದ್ಧಿ ಹೇಳಿ, ರಾಜಿ ಸಂಧಾನ ಕೂಡ ಮಾಡಿಸಿದ್ದರು. ವಂದನಾ ತನ್ನ ತವರು ಮನೆಯವರ ಬಳಿ "ಗಂಡನ ಮನೆಯಲ್ಲಿ ನನಗೆ ತುಂಬಾ ಕಿರುಕುಳ ನೀಡುತ್ತಿದ್ದಾರೆ" ಎಂದು ಅಳಲು ತೋಡಿಕೊಂಡಿದ್ದರು. ಆದರೆ, ಸಂಸಾರ ಸರಿಹೋಗಬಹುದು ಎಂಬ ಆಸೆಯಿಂದ ಎಲ್ಲವನ್ನೂ ಸಹಿಸಿಕೊಂಡು ಬಂದಿದ್ದರು.

ಆಸ್ಪತ್ರೆಗೆ ಸಾಗಿಸಿದರೂ ಉಳಿಯದ ಜೀವ

ಘಟನೆ ನಡೆದ ದಿನ ವಿಕ್ರಂ ತನ್ನ ಅತ್ತೆಗೆ ಫೋನ್ ಮಾಡಿ, "ನಿಮ್ಮ ಮಗಳು ನೇ*ಣು ಹಾಕಿಕೊಂಡಿದ್ದಾಳೆ" ಎಂದು ಕೂಲಾಗಿ ಮಾಹಿತಿ ನೀಡಿದ್ದಾನೆ. ಕೂಡಲೇ ಆಕೆಯನ್ನು ಬನ್ನೇರುಘಟ್ಟ ರಸ್ತೆಯ ಪೋರ್ಟಿಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲಾಗಲೇ ವಂದನಾ ಪ್ರಾಣಪಕ್ಷಿ ಹಾರಿಹೋಗಿತ್ತು. ಮನೆಯವರ ಆರೋಪದ ಪ್ರಕಾರ, ಇದು ಬರಿ ಆ*ತ್ಮಹತ್ಯೆಯಲ್ಲ, ಆಕೆಯನ್ನು ಹೊಡೆದು ಕೊಲೆ ಮಾಡಲಾಗಿದೆ ಎಂಬ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ.

ನಾಲ್ವರ ವಿರುದ್ಧ ಎಫ್‌ಐಆರ್ ದಾಖಲು

ಮೃತ ವಂದನಾ ಅವರ ಪೋಷಕರ ದೂರಿನ ಮೇರೆಗೆ ಹುಳಿಮಾವು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಪತಿ ವಿಕ್ರಂ ಶೇಷನ್
  • ಅತ್ತೆ ಅಮೃತ
  • ಮಾವ ಶ್ರೀನಿವಾಸ್
  • ಮೈದುನ ವಿನಿಷ್

ಈ ನಾಲ್ವರ ವಿರುದ್ಧ ಕಿರುಕುಳ ಮತ್ತು ಸಾವಿಗೆ ಪ್ರೇರಣೆ ನೀಡಿದ ಆರೋಪದಡಿ ಕೇಸ್ ದಾಖಲಾಗಿದೆ. ಮರಣೋತ್ತರ ಪರೀಕ್ಷೆ ಮುಗಿದ ನಂತರ ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ.

ಮೂರೇ ತಿಂಗಳ ಮಗು ಅನಾಥ

ಈ ಇಡೀ ಘಟನೆಯಲ್ಲಿ ಅತ್ಯಂತ ನೋವಿನ ಸಂಗತಿ ಎಂದರೆ, ತಾಯಿಯನ್ನು ಕಳೆದುಕೊಂಡ ಕೇವಲ ಮೂರು ತಿಂಗಳ ಹಸುಗೂಸು. ತಾಯಿ ಯಾಕಿಲ್ಲ ಎಂಬ ಅರಿವಿಲ್ಲದ ಮಗು ಈಗ ಅನಾಥವಾಗಿದೆ. ವರದಕ್ಷಿಣೆ ಎಂಬ ಪಿಡುಗಿನಿಂದ ಒಂದು ಸುಂದರ ಸಂಸಾರ ಹದಗೆಟ್ಟು, ಯುವತಿಯೊಬ್ಬಳು ಬಲಿಯಾಗಿದ್ದಾಳೆ.

Latest News