ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್ ಕಿರಿಕಿರಿ ಮತ್ತು ವಾಯು ಮಾಲಿನ್ಯ ಜಾಸ್ತಿ ಆಗ್ತಾನೇ ಇದೆ. ಇದಕ್ಕೆ ಬ್ರೇಕ್ ಹಾಕೋಕೆ ಅಂತ ‘ಗ್ರೇಟರ್ ಬೆಂಗಳೂರು ಅಥಾರಿಟಿ’ (GBA) ಜೂನ್ ತಿಂಗಳಲ್ಲಿ ಒಂದು ಸೂಪರ್ ಪ್ಲಾನ್ ಮಾಡಿದೆ. ಅದೇ ‘#1KmChallenge’ ಅಭಿಯಾನ. 1 ಕಿಲೋಮೀಟರ್ ದೂರದ ಒಳಗಡೆ ಹೋಗೋದಿದ್ರೆ ದಯವಿಟ್ಟು ಗಾಡಿ ತಗೊಂಬೇಡಿ, ಆರಾಮಾಗಿ ನಡ್ಕೊಂಡು ಹೋಗಿ ಅಂತ ಜಿಬಿಎ ಜನರಲ್ಲಿ ರಿಕ್ವೆಸ್ಟ್ ಮಾಡ್ತಿದೆ. ಆದರೆ, ಸರ್ಕಾರದ ಈ ಪ್ಲಾನ್‌ಗೆ ಬೆಂಗಳೂರಿಗರು ಮಾತ್ರ ಫುಲ್ ಗರಂ ಆಗಿದ್ದಾರೆ! "ಅಯ್ಯೋ ಸ್ವಾಮಿ, ಮೊದಲು ರಸ್ತೆ ಪಕ್ಕ ಇರೋ ಫುಟ್‌ಪಾತ್ ಸರಿ ಮಾಡಿ, ಆಮೇಲೆ ನಮಗೆ ನಡೆಯೋಕೆ ಬುದ್ಧಿ ಹೇಳಿ" ಅಂತ ಜನ ಅಧಿಕಾರಿಗಳ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕ್ತಿದ್ದಾರೆ.
ಏನಿದು ‘#1KmChallenge’ ಪ್ಲಾನ್?
ಗ್ರೇಟರ್ ಬೆಂಗಳೂರು ಅಥಾರಿಟಿಯ ಹವಾಮಾನ ಕ್ರಿಯಾ ಕೋಶ (Climate Action Cell) ಈ ಇಂಟರೆಸ್ಟಿಂಗ್ ಅಭಿಯಾನವನ್ನು ಶುರು ಮಾಡಿದೆ. ಬೆಂಗಳೂರಲ್ಲಿ ಈಗಿನ ಟ್ರೆಂಡ್ ಹೇಗಿದೆ ಅಂದ್ರೆ, ಪಕ್ಕದ ಗಲ್ಲಿಯಲ್ಲಿರೋ ಅಂಗಡಿಗೆ ಹೋಗೋಕಾಗಲಿ, ಹತ್ತಿರದ ಮೆಟ್ರೋ ಸ್ಟೇಷನ್ ಅಥವಾ ಆಫೀಸ್‌ಗೆ ಹೋಗೋಕಾಗಲಿ ಜನ ಜಸ್ಟ್ ಅರ್ಧ ಕಿಲೋಮೀಟರ್ ಇದ್ರೂ ಬೈಕ್ ಇಲ್ಲವೇ ಕಾರು ಸ್ಟಾರ್ಟ್ ಮಾಡ್ತಾರೆ. ಇದರಿಂದ ರಸ್ತೆಯಲ್ಲಿ ವೆಹಿಕಲ್ಸ್ ಜಾಸ್ತಿಯಾಗಿ ಟ್ರಾಫಿಕ್ ಜ್ಯಾಮ್ ಆಗುತ್ತೆ, ಜೊತೆಗೆ ಹೊಗೆಯಿಂದ ಮಾಲಿನ್ಯನೂ ಹೆಚ್ಚಾಗುತ್ತೆ.
ಇದಕ್ಕೆ ಪರಿಹಾರವಾಗಿ, 1 ಕಿಲೋಮೀಟರ್ ಒಳಗಿನ ದೂರಕ್ಕೆ ಕೇವಲ 10 ನಿಮಿಷ ನಡ್ಕೊಂಡು ಹೋಗಿ ಅಂತ ಜಿಬಿಎ ಜಾಗೃತಿ ಮೂಡಿಸುತ್ತಿದೆ. ಈ ಚಾಲೆಂಜ್ ಸ್ವೀಕರಿಸಿ, ನಿಮ್ಮ ಫ್ರೆಂಡ್ಸ್ ಮತ್ತು ಫ್ಯಾಮಿಲಿಗೂ ಸವಾಲು ಹಾಕಿ ಅಂತ ಅಧಿಕಾರಿಗಳು ಕೇಳ್ಕೊಂಡಿದ್ದಾರೆ.
ಈ ಅಭಿಯಾನದ ಮೇನ್ ಉದ್ದೇಶಗಳೇನು?
ಮಾಲಿನ್ಯಕ್ಕೆ ಬ್ರೇಕ್: ಅನಗತ್ಯವಾಗಿ ಗಾಡಿಗಳನ್ನು ರಸ್ತೆಗೆ ಇಳಿಸುವುದನ್ನು ಕಡಿಮೆ ಮಾಡಿ, ಸಿಟಿಯ ಏರ್ ಕ್ವಾಲಿಟಿಯನ್ನು ಇಂಪ್ರೂವ್ ಮಾಡುವುದು.
ಆರೋಗ್ಯವೇ ಭಾಗ್ಯ: ಇತ್ತೀಚಿನ ಜಡ ಜೀವನಶೈಲಿಯನ್ನು ಬದಲಾಯಿಸಿ, ದಿನಾ ಸ್ವಲ್ಪ ದೂರ ನಡೆಯುವುದರಿಂದ ದೈಹಿಕ ಆರೋಗ್ಯ ಕಾಪಾಡಿಕೊಳ್ಳುವುದು.
ಟ್ರಾಫಿಕ್ ಮುಕ್ತಿ: ಶಾರ್ಟ್ ಡಿಸ್ಟೆನ್ಸ್ ಟ್ರಿಪ್ಸ್ ಕಮ್ಮಿಯಾದ್ರೆ, ರಸ್ತೆಗಳ ಮೇಲೆ ವಾಹನಗಳ ದಟ್ಟಣೆ ತಾನಾಗಿಯೇ ಗಣನೀಯವಾಗಿ ತಗ್ಗುತ್ತದೆ.
"ನಡೆಯೋಕೆ ಫುಟ್‌ಪಾತ್ ಎಲ್ಲಿದೆ ಪ್ರಭು?" – ಭುಗಿಲೆದ್ದ ಸಾರ್ವಜನಿಕರ ಆಕ್ರೋಶ!
ಜಿಬಿಎ ಈ ಐಡಿಯಾವನ್ನು ಅನೌನ್ಸ್ ಮಾಡಿದ್ದೇ ತಡ, ಟ್ವಿಟರ್ (X) ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಬೆಂಗಳೂರಿಗರು ಅಧಿಕಾರಿಗಳನ್ನು ತರಾಟೆಗೆ ತಗೋಳೋಕೆ ಶುರು ಮಾಡಿದ್ದಾರೆ. "ಅಭಿಯಾನದ ಕಾನ್ಸೆಪ್ಟ್ ಏನೋ ಚೆನ್ನಾಗಿದೆ, ಆದ್ರೆ ಬೆಂಗಳೂರಲ್ಲಿ ಜೀವ ಕೈಯಲ್ಲಿ ಹಿಡ್ಕೊಂಡು ರಸ್ತೆ ಮೇಲೆ ನಡಿಬೇಕಾದ ಪರಿಸ್ಥಿತಿ ಇದೆ, ಇದು ನಿಮಗೇನಾದ್ರೂ ಗೊತ್ತಿದೆಯಾ?" ಅಂತ ನೆಟ್ಟಿಗರು ಕ್ಲಾಸ್ ತಗೋಳ್ತಿದ್ದಾರೆ.
ನಗರದ ವಾಸ್ತವ ಸ್ಥಿತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿರುವ ಸಾರ್ವಜನಿಕರು, ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ಫುಟ್‌ಪಾಟ್‌ಗಳೇ ಇಲ್ಲ. ಎಲ್ಲೋ ಒಂದು ಕಡೆ ಇದ್ರೂ ಅವುಗಳು ಧ್ವಂಸವಾಗಿವೆ ಅಥವಾ ಅಲ್ಲಿ ಕಸದ ರಾಶಿ ಬಿದ್ದಿರುತ್ತೆ. ಇನ್ನೂ ಕೆಲವು ಕಡೆ ಫುಟ್‌ಪಾತ್ ಮೇಲೆ ರಾಜಾರೋಷವಾಗಿ ಬೈಕ್‌ಗಳನ್ನು ಓಡಿಸ್ತಾರೆ. ಇನ್ನು ರಸ್ತೆಗಳ ಕಥೆಯಂತೂ ಹೇಳ ತೀರದು; ಎಲ್ಲೆಂದರಲ್ಲಿ ತೆರೆದ ಚರಂಡಿಗಳು, ಕತ್ತಲಲ್ಲಿ ಕಣ್ಣಿಗೆ ಕಾಣದ ದೊಡ್ಡ ದೊಡ್ಡ ಗುಂಡಿಗಳಿಂದಾಗಿ ನಡೆದುಕೊಂಡು ಹೋಗೋದು ದೊಡ್ಡ ಸಾಹಸದ ಕೆಲಸವೇ ಆಗಿದೆ.
ನಾಗರಿಕರ ನೇರ ಪ್ರಶ್ನೆ:
"ಮೊದಲು ಪಾದಚಾರಿಗಳಿಗೆ ಸುರಕ್ಷಿತವಾದ, ವಿಶಾಲವಾದ ಮತ್ತು ಯಾವುದೇ ಅಡೆತಡೆ ಇಲ್ಲದ ಕ್ಲೀನ್ ಫುಟ್‌ಪಾತ್‌ಗಳನ್ನು ಮಾಡಿಕೊಡಿ. ಆಮೇಲೆ ಇಂತಹ ಚಾಲೆಂಜ್‌ಗಳನ್ನು ಕೊಡಿ. ನಮಗೆ ನಡಿಯೋಕೆ ಖುಷಿನೇ, ಆದ್ರೆ ರಸ್ತೆಯಲ್ಲಿ ನಡೀಬೇಕಾದ್ರೆ ಗಾಡಿಗಳು ಬಂದು ಗುದ್ದಿಬಿಡ್ತಾವೋ ಅನ್ನೋ ಭಯ ಇರುತ್ತೆ" ಅಂತ ಬಿಬಿಎಂಪಿ ಮತ್ತು ಜಿಬಿಎ ಅಧಿಕಾರಿಗಳಿಗೆ ಸಾರ್ವಜನಿಕರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಅಧಿಕಾರಿಗಳ ಗಮನಕ್ಕೆ ಬರಬೇಕಾದ ಸತ್ಯ
ಒಟ್ಟಿನಲ್ಲಿ ಪರಿಸರ ಉಳಿಸಬೇಕು, ಮಾಲಿನ್ಯ ಕಡಿಮೆ ಮಾಡಬೇಕು ಅನ್ನೋ ಸರ್ಕಾರದ ಪ್ಲಾನ್ ತುಂಬಾನೇ ಒಳ್ಳೆಯದು. ಆದ್ರೆ ಯಾವುದೇ ಒಂದು ನಿಯಮ ಅಥವಾ ಅಭಿಯಾನ ಯಶಸ್ವಿ ಆಗಬೇಕು ಅಂದ್ರೆ ಅದಕ್ಕೆ ತಕ್ಕ ಹಾಗೆ ಇನ್ಫ್ರಾಸ್ಟ್ರಕ್ಚರ್ ಇರಬೇಕು. ಬೆಂಗಳೂರಿನಲ್ಲಿ ಪಾದಚಾರಿಗಳಿಗೆ ಮೊದಲ ಆದ್ಯತೆ ಸಿಗಬೇಕು. ರಸ್ತೆಗಳು ಮತ್ತು ಫುಟ್‌ಪಾತ್‌ಗಳು ಚೆನ್ನಾಗಿದ್ದರೆ ಜನ ಯಾವುದೇ ಚಾಲೆಂಜ್ ಇಲ್ಲದೆಯೂ ಆರಾಮಾಗಿ ನಡೆದುಕೊಂಡೇ ಹೋಗ್ತಾರೆ ಅನ್ನೋದು ಸಾರ್ವಜನಿಕರ ಸ್ಪಷ್ಟ ಅನಿಸಿಕೆ. ಈಗಲಾದರೂ ಜಿಬಿಎ ಮತ್ತು ಬಿಬಿಎಂಪಿ ಎಚ್ಚೆತ್ತುಕೊಂಡು ಮೊದಲು ಸಿಟಿಯ ಫುಟ್‌ಪಾತ್‌ಗಳನ್ನು ರಿಪೇರಿ ಮಾಡುತ್ತಾ ಅನ್ನೋದನ್ನ ಕಾದು ನೋಡಬೇಕು.