ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮನುಷ್ಯಕುಲವೇ ತಲೆತಗ್ಗಿಸುವಂತಹ ದಾರುಣ ಘಟನೆಯೊಂದು ನಡೆದಿದೆ. ಆಟವಾಡಲು ಹೋದ ಅಸ್ಸಾಂ ಮೂಲದ ಪುಟ್ಟ ಬಾಲಕಿಯೊಬ್ಬಳು ಕಾಮುಕರ ವಿಕೃತಿಯಿಂದಾಗಿ ಹೆಣವಾಗಿ ಪತ್ತೆಯಾಗಿದ್ದಾಳೆ. ಕೇವಲ ಎರಡು ದಿನಗಳ ಹಿಂದೆ ಕಾಣೆಯಾಗಿದ್ದ ಮಗುವಿನ ಶವ ಶನಿವಾರ (ಮಾರ್ಚ್ 28) ಸಂಜೆ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದ್ದು, ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ.
ಅಸ್ಸಾಂ ಮೂಲದ ಈ ಬಾಲಕಿ ತನ್ನ ಪೋಷಕರ ಜೊತೆ ಎಲೆಕ್ಟ್ರಾನಿಕ್ ಸಿಟಿ ಸಮೀಪದ ವಿಟ್ಟಸಂದ್ರದ ಶೆಡ್ ಒಂದರಲ್ಲಿ ವಾಸವಾಗಿದ್ದಳು. ಕಳೆದ ಗುರುವಾರ ಸಂಜೆ ಎಂದಿನಂತೆ ಮನೆ ಮುಂದೆ ಆಟವಾಡುತ್ತಿದ್ದ ಮಗು ದಿಢೀರ್ ನಾಪತ್ತೆಯಾಗಿತ್ತು. ಗಾಬರಿಗೊಂಡ ಪೋಷಕರು ಅಕ್ಕಪಕ್ಕದ ಗಲ್ಲಿಗಳಲ್ಲಿ, ಪರಿಚಯಸ್ಥರ ಮನೆಗಳಲ್ಲಿ ಹುಡುಕಾಡಿದ್ದಾರೆ. ಆದರೆ ಎಲ್ಲಿಯೂ ಮಗು ಪತ್ತೆಯಾಗದಿದ್ದಾಗ, ಶುಕ್ರವಾರ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ 'ಮಿಸ್ಸಿಂಗ್' ದೂರು ದಾಖಲಿಸಿದ್ದರು.
ಪೊಲೀಸರು ತನಿಖೆ ಆರಂಭಿಸಿ ಹುಡುಕಾಟ ನಡೆಸುತ್ತಿದ್ದಾಗಲೇ ಶನಿವಾರ ಸಂಜೆ ಬೋಳುಗುಟ್ಟದ ನಿರ್ಜನ ಪ್ರದೇಶದ ನೀಲಗಿರಿ ತೋಪಿನಲ್ಲಿ ಬಾಲಕಿಯ ಮೃತದೇಹ ಸಿಕ್ಕಿದೆ.
ಸಿಕ್ಕಿರುವ ಮೃತದೇಹದ ಸ್ಥಿತಿ ನೋಡಿದರೆ ಎಂಥವರ ಕಣ್ಣಲ್ಲೂ ನೀರು ಬರುವಂತಿದೆ. ಬಾಲಕಿಯ ಶವ ಸಂಪೂರ್ಣ ನಗ್ನ ಸ್ಥಿತಿಯಲ್ಲಿತ್ತು. ದುರುಳರು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ (ಅತ್ಯಾಚಾರ) ಎಸಗಿ, ನಂತರ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಪೊಲೀಸರಿಗೆ ಮಗುವಿನ ಗುರುತು ಸಿಗಬಾರದು ಎಂಬ ಕ್ರೂರ ಉದ್ದೇಶದಿಂದ ಕಲ್ಲಿನಿಂದ ಮುಖವನ್ನೇ ಜಜ್ಜಿ ವಿಕೃತವಾಗಿ ಹತ್ಯೆ ಮಾಡಿದ್ದಾರೆ.
ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕೃತ್ಯ ಎಸಗಿದ ಕಿರಾತಕರು ಯಾರು? ಒಬ್ಬನೇ ಈ ಕೆಲಸ ಮಾಡಿದ್ದಾನಾ ಅಥವಾ ಗ್ಯಾಂಗ್ ಇದೆಯಾ? ಎಂಬ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಈಗಾಗಲೆ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿಗಳನ್ನು ಆದಷ್ಟು ಬೇಗ ಹಿಡಿಯಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಹಾಗೂ ಆ ಸಮಯದಲ್ಲಿ ಆ ಭಾಗದಲ್ಲಿ ಓಡಾಡಿದ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
ಬೆಂಗಳೂರಿನಂತಹ ಮಹಾನಗರದಲ್ಲಿ, ಅದರಲ್ಲೂ ಐಟಿ ಹಬ್ ಎನಿಸಿಕೊಂಡಿರುವ ಎಲೆಕ್ಟ್ರಾನಿಕ್ ಸಿಟಿ ಭಾಗದಲ್ಲಿ ಇಂತಹ ಘಟನೆ ನಡೆದಿರುವುದು ಪೋಷಕರಲ್ಲಿ ಭೀತಿ ಹುಟ್ಟಿಸಿದೆ. ಅಮಾಯಕ ಮಗುವಿನ ಮೇಲೆ ಇಂತಹ ಕ್ರೌರ್ಯ ಎಸಗಿದವರಿಗೆ ಕಠಿಣ ಶಿಕ್ಷೆಯಾಗಲಿ ಎಂಬುದು ಎಲ್ಲರ ಆಕ್ರೋಶದ ನುಡಿಯಾಗಿದೆ.