ಪ್ರೀತಿ ಮನುಷ್ಯನನ್ನು ಎಷ್ಟು ಕುರುಡನನ್ನಾಗಿ ಮಾಡುತ್ತೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ತನ್ನ ಮನೆಯ ಸಂಬಂಧಿಕ ಹುಡುಗಿಯನ್ನೇ ಕಿಡ್ನಾಪ್ ಮಾಡಲು ಹೋಗಿ, ಅದನ್ನು ತಡೆಯಲು ಬಂದ ಸ್ವಂತ ಅತ್ತೆಯನ್ನೇ ಚಾಕುವಿನಿಂದ ಇರಿದಿದ್ದ ಕಿರಾತಕ ಅಣ್ಣನ ಮಗನ ಕೃತ್ಯ ಈಗ ಕೊಲೆಯಲ್ಲಿ ಅಂತ್ಯವಾಗಿದೆ. ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಅತ್ತೆ ಮಾಗೇಶ್ವರಿ (55) ಅವರು ಚಿಕಿತ್ಸೆ ಫಲಿಸದೆ ನಿನ್ನೆ ಮಧ್ಯರಾತ್ರಿ ಕೊನೆಯುಸಿರೆಳೆದಿದ್ದಾರೆ.
ಈ ಘಟನೆ ನಡೆದಿದ್ದು ಮಾರ್ಚ್ 25ರಂದು ಬೆಂಗಳೂರಿನ ಆಡುಗೋಡಿಯಲ್ಲಿ. ಮೃತ ಮಾಗೇಶ್ವರಿ ಅವರ ಅಣ್ಣನ ಮಗ ಕಿರಣ್‌ಗೆ ಈಗಾಗಲೇ ಮದುವೆಯಾಗಿತ್ತು. ಆದರೂ ಕಿರಣ್‌ಗೆ ಮಾಗೇಶ್ವರಿ ಅವರ ಸಂಬಂಧಿ ಚಾರುಲತಾ ಎಂಬಾಕೆಯ ಮೇಲೆ ಕಣ್ಣಿತ್ತು. ಅವಳನ್ನು ಪ್ರೀತಿಸುತ್ತಿದ್ದೇನೆ ಎಂದು ಹಠ ಹಿಡಿದಿದ್ದ ಕಿರಣ್, ಈ ಹಿಂದೆ ಅವಳನ್ನು ತನ್ನ ಜೊತೆ ಕರೆದುಕೊಂಡು ಹೋಗಿದ್ದ. ಆದರೆ ಕಿರಣ್ ಜೊತೆ ಇರಲು ಇಷ್ಟವಿಲ್ಲದ ಚಾರುಲತಾ, ಕೆಲವು ದಿನಗಳ ಹಿಂದೆ ಅವನನ್ನು ಬಿಟ್ಟು ವಾಪಸ್ ಬಂದು ತನ್ನ ಅಜ್ಜಿಯ ಮನೆಯಲ್ಲಿ ವಾಸವಿದ್ದಳು.
ಮಾರ್ಚ್ 25ರಂದು ಕಿರಣ್ ಮತ್ತು ಆತನ ಫ್ಯಾಮಿಲಿ ಮೆಂಬರ್ಸ್ ಚಾರುಲತಾಳನ್ನು ಹುಡುಕಿಕೊಂಡು ಆಡುಗೋಡಿಯ ಮಾಗೇಶ್ವರಿ ಅವರ ಮನೆಗೆ ಬಂದಿದ್ದಾರೆ. ಹೇಗಾದರೂ ಮಾಡಿ ಆಕೆಯನ್ನು ಮತ್ತೆ ತನ್ನ ಜೊತೆ ಕರೆದುಕೊಂಡು ಹೋಗಬೇಕು ಎಂಬುದು ಕಿರಣ್ ಪ್ಲಾನ್ ಆಗಿತ್ತು. ಚಾರುಲತಾ ಬರಲು ಒಪ್ಪದಿದ್ದಾಗ, ಕಿರಣ್ ಮತ್ತು ಆತನ ತಂಡ ಆಕೆಯನ್ನು ಬಲವಂತವಾಗಿ ಕಿಡ್ನಾಪ್ ಮಾಡಿ ಎಳೆದೊಯ್ಯಲು ಮುಂದಾಗಿದ್ದಾರೆ.
ಈ ವೇಳೆ ಮಾಗೇಶ್ವರಿ ಅವರು ಅಡ್ಡ ಬಂದು, "ಇದು ತಪ್ಪು, ಹುಡುಗಿಯನ್ನು ಬಿಡು" ಎಂದು ಕಿರಣ್‌ನನ್ನು ತಡೆಯಲು ಯತ್ನಿಸಿದ್ದಾರೆ. ಇದರಿಂದ ಕೋಪಗೊಂಡ ಕಿರಣ್ ತನ್ನ ಬಳಿಯಿದ್ದ ಚಾಕುವಿನಿಂದ ಸ್ವಂತ ಅತ್ತೆ ಮಾಗೇಶ್ವರಿ ಅವರಿಗೆ ಮನಸೋಇಚ್ಛೆ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಮಾಗೇಶ್ವರಿ ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದರು.
ಆಸ್ಪತ್ರೆಯಲ್ಲಿ ದುರಂತ ಅಂತ್ಯ
ಗಾಯಗೊಂಡ ಮಾಗೇಶ್ವರಿ ಅವರನ್ನು ತಕ್ಷಣವೇ ಸೆಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಕಳೆದ ಹದಿನೈದು ದಿನಗಳಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಅವರು, ನಿನ್ನೆ ಮಧ್ಯರಾತ್ರಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಸದ್ಯ ಮಾಗೇಶ್ವರಿ ಅವರ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ನಾಲ್ವರು ಕಿಲಾಡಿಗಳ ಬಂಧನ
ಕಿಡ್ನಾಪ್ ಮತ್ತು ಹಲ್ಲೆ ನಡೆದ ತಕ್ಷಣ ಅಲರ್ಟ್ ಆದ ಆಡುಗೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಕಿರಣ್ ಸೇರಿದಂತೆ ನಾಲ್ವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರನ್ನು ಮನಿಕಿರಣ್, ಅಭಿಷೇಕ್, ಮನಿರಾಜ್ ಮತ್ತು ಮನಿವಣ್ಣನ್ ಎಂದು ಗುರುತಿಸಲಾಗಿದೆ. ಆರಂಭದಲ್ಲಿ ಇದು ಕಿಡ್ನಾಪ್ ಮತ್ತು ಹಲ್ಲೆ ಪ್ರಕರಣವಾಗಿದ್ದು, ಈಗ ಮಾಗೇಶ್ವರಿ ಅವರು ಮೃತಪಟ್ಟಿದ್ದರಿಂದ ಕೊಲೆ ಪ್ರಕರಣವಾಗಿ ಬದಲಾಗಿದೆ.
ಹಳೆ ಸಂಬಂಧ, ಮದುವೆಯಾಗಿದ್ದರೂ ಹಠಕ್ಕೆ ಬಿದ್ದು ಮಾಡಿದ ಈ ಪ್ರೇಮ ಪುರಾಣ ಈಗ ಒಂದು ಜೀವ ಬಲಿಪಡೆದಿದೆ. ಕಿರಣ್ ಮಾಡಿದ ಕೆಲಸಕ್ಕೆ ಈಗ ಇಡೀ ಕುಟುಂಬ ಜೈಲು ಪಾಲಾಗುವಂತಾಗಿದೆ.