ಮಹಿಳೆಯರ ರಕ್ಷಣೆ ಮತ್ತು ಕಲ್ಯಾಣಕ್ಕಾಗಿ ಇರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲೇ ಮಹಿಳೆಯೊಬ್ಬರಿಗೆ ಭೀಕರ ಕಿರುಕುಳ ನೀಡಿರುವ ಘಟನೆ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ. ನಗರದ ನೆಹರು ನಗರದಲ್ಲಿರುವ ಸರ್ಕಾರಿ ಕಾರ್ಯನಿರತ ಮಹಿಳೆಯರ ಹಾಸ್ಟೆಲ್‌ನಲ್ಲಿ ವಾರ್ಡನ್ ಆಗಿ ಕೆಲಸ ಮಾಡುತ್ತಿದ್ದ 30 ವರ್ಷದ ಮಹಿಳೆಯ ಮೇಲೆ, ಅದೇ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಲೈಂ*ಗಿಕ ಕಿರುಕುಳ, ಮಾನಸಿಕ ಹಿಂಸೆ ಮತ್ತು ಜಾತಿ ಆಧಾರಿತ ದೌರ್ಜನ್ಯ ಎಸಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಸಂತ್ರಸ್ತೆ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯಕ್ಕೆ (DCRE) ದೂರು ನೀಡಿದ್ದಾರೆ.
ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಮತ್ತು ಎಂಬಿಎ ಪದವೀಧರೆಯಾಗಿರುವ ಪ್ರಿಯಾ (ಹೆಸರು ಬದಲಿಸಲಾಗಿದೆ), ಕಳೆದ ಆಗಸ್ಟ್ ತಿಂಗಳಿನಿಂದ ಹೊರಗುತ್ತಿಗೆ ಆಧಾರದ ಮೇಲೆ ವಾರ್ಡನ್ ಆಗಿ ಕೆಲಸ ಮಾಡುತ್ತಿದ್ದರು. ಅವರು ನೀಡಿದ ದೂರಿನ ಪ್ರಕಾರ, ಇಲಾಖೆಯ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ (CDPO) ಕೆಲಸಕ್ಕೆ ಸೇರಿದ ಮೊದಲ ದಿನದಿಂದಲೂ ಇವರಿಗೆ ಕಿರುಕುಳ ನೀಡುತ್ತಿದ್ದರು. ಹಾಸ್ಟೆಲ್‌ನ ಆದಾಯದಲ್ಲಿ ಪ್ರತಿ ತಿಂಗಳು ₹10,000 ಹಣವನ್ನು ತಮಗೆ ಲಂಚವಾಗಿ ನೀಡಬೇಕು, ಇಲ್ಲದಿದ್ದರೆ ಕೆಲಸದಿಂದ ತೆಗೆದುಹಾಕುವುದಾಗಿ ಅಧಿಕಾರಿ ಬೆದರಿಕೆ ಹಾಕುತ್ತಿದ್ದರು ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಅಧಿಕಾರಿಯ ಕಿರುಕುಳ ಕೇವಲ ಹಣಕ್ಕೆ ಸೀಮಿತವಾಗಿರಲಿಲ್ಲ. ಸಂತ್ರಸ್ತ ಮಹಿಳೆಯ ಜೊತೆ ಅಸಭ್ಯವಾಗಿ ಮಾತನಾಡುತ್ತಿದ್ದ ಅಧಿಕಾರಿ, ತನ್ನೊಂದಿಗೆ ನಗರದ ಹೊರವಲಯಕ್ಕೆ ಪ್ರವಾಸಕ್ಕೆ ಬರಬೇಕು ಮತ್ತು ಜೊತೆಯಾಗಿ ಮದ್ಯಪಾನ ಮಾಡಬೇಕು ಎಂದು ಒತ್ತಾಯಿಸುತ್ತಿದ್ದರು. ತಡರಾತ್ರಿಯಲ್ಲಿ ಮದ್ಯದ ಅಮಲಿನಲ್ಲಿ ಫೋನ್ ಕರೆ ಮಾಡಿ ಅಸಭ್ಯವಾಗಿ ಮಾತನಾಡುವುದು ಮತ್ತು ಲೈಂ*ಗಿಕವಾಗಿ ಸಹಕರಿಸುವಂತೆ ಪೀಡಿಸುತ್ತಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ. ಅಷ್ಟೇ ಅಲ್ಲದೆ, ಮಹಿಳೆ ಮತ್ತು ಆಕೆಯ ಪತಿಯ ನಡುವೆ ಸಂಶಯ ಮೂಡಿಸಿ ಸಂಸಾರದಲ್ಲಿ ಬಿರುಕು ತರಲು ಅಧಿಕಾರಿ ಪ್ರಯತ್ನಿಸಿದ್ದರು ಎಂಬ ಆಘಾತಕಾರಿ ಅಂಶ ಹೊರಬಂದಿದೆ.
ಅಧಿಕಾರಿಯು ಸಂತ್ರಸ್ತೆಯ ಜಾತಿಯ ಬಗ್ಗೆ ಕೀಳಾಗಿ ಮಾತನಾಡಿ ಅವಮಾನಿಸುತ್ತಿದ್ದರು. ಇದರಿಂದ ತೀವ್ರವಾಗಿ ನೊಂದ ಮಹಿಳೆ, ಆ ಅಧಿಕಾರಿಯ ಕಾಟ ತಾಳಲಾರದೆ ಕೆಲಸವನ್ನೇ ತೊರೆದಿದ್ದಾರೆ. ಕೇವಲ ಹಣದ ಆಸೆಗಾಗಿ ಮತ್ತು ಕಾಮದ ಹಸಿವಿಗಾಗಿ ಒಬ್ಬ ಹಿರಿಯ ಅಧಿಕಾರಿ ಮಹಿಳಾ ನೌಕರರಿಗೆ ನೀಡುತ್ತಿರುವ ಈ ಹಿಂಸೆಯು ಇಡೀ ಇಲಾಖೆಯನ್ನೇ ತಲೆತಗ್ಗಿಸುವಂತೆ ಮಾಡಿದೆ. ಮಹಿಳೆಯರಿಗೆ ರಕ್ಷಣೆ ನೀಡಬೇಕಾದವರೇ ಈ ರೀತಿ ಭಕ್ಷಕರಾದರೆ ಸಾಮಾನ್ಯರ ಗತಿಯೇನು ಎಂಬ ಪ್ರಶ್ನೆ ಈಗ ಮೂಡಿದೆ.
ಸಂತ್ರಸ್ತ ಮಹಿಳೆಯ ದೂರಿನ ಮೇರೆಗೆ ಡಿಸಿಆರ್‌ಇ (DCRE) ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಜಾತಿ ನಿಂದನೆ ತಡೆ ಕಾಯ್ದೆ ಮತ್ತು ಲೈಂ*ಗಿಕ ಕಿರುಕುಳದ ಅಡಿಯಲ್ಲಿ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಈ ಘಟನೆಯು ಬೆಳಗಾವಿಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಸಾರ್ವಜನಿಕರು ಆರೋಪಿ ಅಧಿಕಾರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸುತ್ತಿದ್ದಾರೆ.