ಸಹಜೀವನ (Living Relationship) ನಡೆಸುತ್ತಿದ್ದ ಪ್ರಿಯತಮೆಯನ್ನು ಬಿಟ್ಟು ಬೇರೊಬ್ಬ ಯುವತಿಯೊಂದಿಗೆ ಮದುವೆಯಾಗಲು ಹೊರಟಿದ್ದನ್ನು ಪ್ರಶ್ನಿಸಿದ ಕಾರಣಕ್ಕೆ, ಪ್ರಿಯಕರನೇ ತನ್ನ ತಂದೆ ಮತ್ತು ಮಾವನ ಜೊತೆಗೂಡಿ ಪ್ರಿಯತಮೆಯನ್ನು ರಾಡ್‌ನಿಂದ ಹೊಡೆದು ಅತ್ಯಂತ ಭೀಕರವಾಗಿ ಕೊ*ಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಕೊ*ಲೆ ಮಾಡಿದ ಬಳಿಕ ಶವವನ್ನು ದಟ್ಟ ಕಾಡಿನ ಘಾಟ್ ಪ್ರದೇಶದಲ್ಲಿ ಎಸೆದು ಬಂದಿದ್ದ ಪ್ರಿಯಕರ ಹಾಗೂ ಆತನ ಗ್ಯಾಂಗ್ ಅನ್ನು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಅತ್ಯಂತ ಚಾಣಾಕ್ಷತನದಿಂದ ಬಂಧಿಸಿದ್ದಾರೆ.
ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದ ನಿವಾಸಿಯಾದ ಗಂಗವ್ವ ಹಂಚಿನಮನಿ (25) ಕೊಲೆಯಾದ ದುರ್ದೈವಿ ಮಹಿಳೆಯಾಗಿದ್ದಾರೆ. ಇನ್ನು ಪ್ರೀತಿ ನಂಬಿಸಿ ಜೀವ ತೆಗೆದ ಕಟುಕ ಪ್ರಿಯಕರನನ್ನು ಹುಕ್ಕೇರಿ ತಾಲೂಕಿನ ರಾಜನಕಟ್ಟಿ ಗ್ರಾಮದ ನಿವಾಸಿ, ಖಾಸಗಿ ಶಾಲೆಯೊಂದರ ಶಿಕ್ಷಕನಾಗಿರುವ ಬಸವರಾಜ್ ಕರ್ನಾವರ್ (33) ಎಂದು ಗುರುತಿಸಲಾಗಿದೆ. ಈ ಕ್ರೂರ ಕೃತ್ಯಕ್ಕೆ ಬಸವರಾಜ್‌ನ ತಂದೆ ಯಲ್ಲಪ್ಪ ಮತ್ತು ಆತನ ಮಾವ ಲಗಮಪ್ಪ ಕೂಡ ಸಾಥ್ ನೀಡಿದ್ದು, ಸದ್ಯ ಮೂವರೂ ಆರೋಪಿಗಳನ್ನು ಪೊಲೀಸರು ಕಂಬಿ ಹಿಂದೆ ತಳ್ಳಿದ್ದಾರೆ.
10 ವರ್ಷಗಳ ಒಡನಾಟ, ಮದುವೆ ಮುರಿದಿದ್ದಕ್ಕೆ ಕೊ*ಲೆ ಸ್ಕೇಚ್
ಪೊಲೀಸ್ ತನಿಖೆಯ ವೇಳೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಖಾಸಗಿ ಶಾಲಾ ಶಿಕ್ಷಕನಾಗಿದ್ದ ಬಸವರಾಜ್ ಹಾಗೂ ಗಂಗವ್ವ ಕಳೆದ 10 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಮದುವೆಯಾಗದೆಯೇ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ಆದರೆ, ಇತ್ತೀಚೆಗೆ ಬಸವರಾಜ್ ಪ್ರಿಯತಮೆ ಗಂಗವ್ವಳಿಗೆ ವಂಚಿಸಿ, ಆಕೆಯನ್ನು ಬಿಟ್ಟು ಬೇರೊಬ್ಬ ಯುವತಿಯ ಜೊತೆ ಮದುವೆಯಾಗಲು ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡು ಮದುವೆಗೆ ಮುಂದಾಗಿದ್ದನು.
ಈ ವಿಷಯ ತಿಳಿದ ಗಂಗವ್ವ ತಕ್ಷಣವೇ ಮಧ್ಯಪ್ರವೇಶಿಸಿ ಬಸವರಾಜ್ ಮಾಡುತ್ತಿದ್ದ ಎರಡನೇ ಮದುವೆಯನ್ನು ಸಾಕ್ಷ್ಯಾಧಾರಗಳ ಸಮೇತ ಮುರಿದು ಹಾಕಿದ್ದಳು. ಇದರಿಂದ ತೀವ್ರ ಆಕ್ರೋಶಗೊಂಡ ಬಸವರಾಜ್, "ಗಂಗವ್ವ ಜೀವಂತವಾಗಿದ್ದರೆ ತನಗೆ ಎಂದಿಗೂ ಮದುವೆಯಾಗಲು ಸಾಧ್ಯವಿಲ್ಲ, ಆಕೆ ತನ್ನ ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ಅಡ್ಡಿಯಾಗುತ್ತಾಳೆ" ಎಂದು ಭಾವಿಸಿ ಆಕೆಯನ್ನು ಈ ಪ್ರಪಂಚದಿಂದಲೇ ಇಲ್ಲದೂ ಮಾಡಲು ತನ್ನ ತಂದೆ ಹಾಗೂ ಮಾವನ ಜೊತೆಗೂಡಿ ಭೀಕರ ಕೊಲೆ ಸ್ಕೇಚ್ ಹಾಕಿದ್ದನು.
ಪ್ರವಾಸದ ನೆಪದಲ್ಲಿ ಕರೆದೊಯ್ದು ಘಾಟ್‌ನಲ್ಲಿ ಹತ್ಯೆ
ಯೋಜನೆಯ ಪ್ರಕಾರ, ಕಳೆದ ಮೇ ತಿಂಗಳಿನಲ್ಲಿ ಬಸವರಾಜ್ ತನ್ನ ಪ್ರಿಯತಮೆ ಗಂಗವ್ವಳನ್ನು ಸಮಾಧಾನಪಡಿಸುವ ನಾಟಕವಾಡಿದ್ದಾನೆ. "ನಾವಿಬ್ಬರೂ ಒಟ್ಟಿಗೆ ವಿಶಾಲಗಢಕ್ಕೆ ಪ್ರವಾಸ ಹೋಗಿ ಬರೋಣ" ಎಂದು ನಂಬಿಸಿ, ಆಕೆಯನ್ನು ಬೆಳಗಾವಿಯಿಂದ ಕಾರಿನಲ್ಲಿ ಕರೆದುಕೊಂಡು ಹೊರಟಿದ್ದಾನೆ. ಕಾರಿನಲ್ಲಿ ಬಸವರಾಜ್‌ನೊಂದಿಗೆ ಆತನ ತಂದೆ ಯಲ್ಲಪ್ಪ ಹಾಗೂ ಮಾವ ಲಗಮಪ್ಪ ಕೂಡ ಇದ್ದರು.
ಬೆಳಗಾವಿಯಿಂದ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಚಂದಗಡ ತಾಲೂಕಿನ ದಟ್ಟ ಅರಣ್ಯ ಪ್ರದೇಶವಾಗಿರುವ ತಿಲಾರಿ ಘಾಟ್ ತಲುಪುತ್ತಿದ್ದಂತೆ, ಮೂವರೂ ಸೇರಿ ಕಾರನ್ನು ಪಕ್ಕಕ್ಕೆ ನಿಲ್ಲಿಸಿದ್ದಾರೆ. ಬಳಿಕ ಗಂಗವ್ವಳೊಂದಿಗೆ ತೀವ್ರ ಜಗಳ ತೆಗೆದು, ಮುಂಚಿತವಾಗಿಯೇ ಕಾರಿನಲ್ಲಿ ತಂದಿದ್ದ ಕಬ್ಬಿಣದ ರಾಡ್‌ನಿಂದ ಆಕೆಯ ತಲೆಗೆ ಬಲವಾಗಿ ಜಜ್ಜಿದ್ದಾರೆ. ತಲೆಗೆ ಗಂಭೀರ ಪೆಟ್ಟಾಗಿ ರಕ್ತದ ಮಡುವಿನಲ್ಲಿ ಗಂಗವ್ವ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ. ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಹಂತಕರು ಆಕೆಯ ಜೀವರಹಿತ ಮೃತದೇಹವನ್ನು ತಿಲಾರಿ ಘಾಟ್‌ನ ಕಡಿದಾದ ಕಣಿವೆಯ ದಟ್ಟ ಕಾಡಿನೊಳಗೆ ಎಸೆದು ವಾಪಸ್ ಬೆಳಗಾವಿಗೆ ಪರಾರಿಯಾಗಿದ್ದರು.
ಸಿಸಿಟಿವಿ ಹಾಗೂ ಟೋಲ್ ಗೇಟ್ ಕಾರ್ ನಂಬರ್‌ನಿಂದ ಸಿಕ್ಕಿಬಿದ್ದ ಹಂತಕರು
ಕಳೆದ ಮೇ 29ರಂದು ಮಹಾರಾಷ್ಟ್ರದ ಚಂದಗಡ ತಾಲೂಕಿನ ತಿಲಾರಿ ಘಾಟ್‌ನ ಕಾಡಿನಲ್ಲಿ ಮಹಿಳೆಯೊಬ್ಬರ ಮೃತದೇಹ ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿ ಸ್ಥಳೀಯರಿಗೆ ಪತ್ತೆಯಾಗಿತ್ತು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಚಂದಗಡ ಠಾಣೆಯ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆ ನಡೆಸಿದ್ದರು. ಶವ ಯಾರದ್ದೆಂದು ಗುರುತು ಪತ್ತೆಯಾಗದ ಕಾರಣ, ಪೊಲೀಸರೇ ನಿಯಮಾನುಸಾರ ಅಂತ್ಯಸಂಸ್ಕಾರ ನೆರವೇರಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಮಹಿಳೆಯ ತಲೆಗೆ ಬಲವಾದ ವಸ್ತುವಿನಿಂದ ಹೊಡೆದು ಕೊಲೆ ಮಾಡಲಾಗಿರುವುದು ದೃಢಪಟ್ಟಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿದ ಮಹಾರಾಷ್ಟ್ರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಘಾಟ್ ರಸ್ತೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಹಾಗೂ ಹತ್ತಿರದ ಟೋಲ್ ಪ್ಲಾಜಾಗಳಲ್ಲಿ ಪಾಸ್ ಆಗಿದ್ದ ವಾಹನಗಳ ಡೇಟಾವನ್ನು ಸಂಪೂರ್ಣವಾಗಿ ಪರಿಶೀಲಿಸಿದಾಗ, ಶಂಕಿತ ಕರ್ನಾಟಕ ನೋಂದಣಿಯ ಕಾರೊಂದು ಘಟನೆಯ ದಿನದಂದು ಅನುಮಾನಾಸ್ಪದವಾಗಿ ಸಂಚರಿಸಿರುವುದು ಪತ್ತೆಯಾಯಿತು. ಆ ಕಾರಿನ ನಂಬರ್ ಆಧರಿಸಿ ತನಿಖೆ ನಡೆಸಿದಾಗ, ಗಂಗವ್ವ ಅದೇ ಕಾರಿನಲ್ಲಿ ಬೆಳಗಾವಿಯಿಂದ ಹೋದದ್ದು ಮತ್ತು ಆ ಕಾರು ಶಿಕ್ಷಕ ಬಸವರಾಜ್‌ಗೆ ಸೇರಿದ್ದು ಎಂಬ ಕರಾಳ ಸತ್ಯ ಹೊರಬಿದ್ದಿದೆ.
ಕಣ್ಣೀರಿಡುತ್ತಿರುವ ತಾಯಿ-ಸಹೋದರ; ಆರೋಪಿಗಳು ಜೈಲಿಗೆ
ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿ ಪ್ರಿಯಕರ ಬಸವರಾಜ್ ಹಾಗೂ ಆತನಿಗೆ ಸಾಥ್ ನೀಡಿದ ತಂದೆ ಮತ್ತು ಮಾವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮೂವರೂ ತಾವೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಹತ್ತು ವರ್ಷಗಳ ಕಾಲ ಪ್ರೀತಿಯ ನಾಟಕವಾಡಿ, ನಂಬಿಸಿ ಕಟುಕನಂತೆ ಮಗಳನ್ನು ಕೊಂದಿರುವ ವಿಷಯ ತಿಳಿದು ಗಂಗವ್ವನ ತಾಯಿ ಮತ್ತು ಸಹೋದರ ಕಣ್ಣೀರಿನ ಸಾಗರದಲ್ಲಿ ಮುಳುಗಿದ್ದಾರೆ. 10 ವರ್ಷ ಜೊತೆಯಲ್ಲಿದ್ದಾಕೆಯನ್ನು ಮದುವೆಗಾಗಿ ಇಷ್ಟು ಕ್ರೂರವಾಗಿ ಹತ್ಯೆ ಮಾಡಿದ ಶಿಕ್ಷಕನ ವಿಕೃತ ಬುದ್ಧಿಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸದ್ಯ ಮೂವರೂ ಆರೋಪಿಗಳನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.