ನಾನು ಸೋತಿದ್ದರೂ ಶಾಸಕನಷ್ಟೇ ಪವರ್ ಕೊಟ್ಟಿದ್ದರು - ಸಿದ್ದರಾಮಯ್ಯ ದೊಡ್ಡ ಗುಣ ಕೊಂಡಾಡಿದ ಬಿಜೆಪಿ ನಾಯಕ ಬಿ.ಸಿ.ಪಾಟೀಲ್!!

ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ಪರ್ವ ತೀವ್ರಗೊಳ್ಳುತ್ತಿದ್ದಂತೆ, ಹಾವೇರಿಯಲ್ಲಿ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಬಿ.ಸಿ.ಪಾಟೀಲ್ ಅವರು ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಅತ್ಯಂತ ಭಾವುಕರಾಗಿ ಮಾತನಾಡಿದ್ದಾರೆ. ರಾಜಕೀಯವಾಗಿ ವಿರೋಧಿ ಪಾಳಯದಲ್ಲಿದ್ದರೂ, ಸಿದ್ದರಾಮಯ್ಯ ಅವರೊಂದಿಗಿನ ತಮ್ಮ ಹಳೆಯ ಒಡನಾಟವನ್ನು ನೆನೆದು ಬಿ.ಸಿ.ಪಾಟೀಲ್ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.

ಸಿದ್ದರಾಮಯ್ಯ ರಾಜೀನಾಮೆಗೆ ಹಾವೇರಿಯಲ್ಲಿ ಬಿ.ಸಿ.ಪಾಟೀಲ್ ತೀವ್ರ ಭಾವುಕ!
ಸಿದ್ದರಾಮಯ್ಯ ರಾಜೀನಾಮೆಗೆ ಹಾವೇರಿಯಲ್ಲಿ ಬಿ.ಸಿ.ಪಾಟೀಲ್ ತೀವ್ರ ಭಾವುಕ!

"ಸಿದ್ದರಾಮಯ್ಯನವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು ಕೇಳಿ ನನ್ನ ಮನಸ್ಸಿಗೆ ತುಂಬಾ ನೋವಾಯ್ತು" ಎಂದು ಬಿ.ಸಿ.ಪಾಟೀಲ್ ಹಾವೇರಿಯಲ್ಲಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ.

"ನಾನು ಪೊಲೀಸ್ ಆಗಿದ್ದಾಗಿನಿಂದಲೂ ಅವರು ಗೊತ್ತು!"

ತಮ್ಮ ಮತ್ತು ಸಿದ್ದರಾಮಯ್ಯ ಅವರ ನಡುವಿನ ಸುದೀರ್ಘ ಸಂಬಂಧದ ದಿನಗಳನ್ನು ನೆನಪಿಸಿಕೊಂಡ ಬಿ.ಸಿ.ಪಾಟೀಲ್, "ನಾನು ಪೊಲೀಸ್ ಅಧಿಕಾರಿಯಾಗಿದ್ದ ಕಾಲದಿಂದಲೂ ಸಿದ್ದರಾಮಯ್ಯ ಅವರನ್ನು ಹತ್ತಿರದಿಂದ ನೋಡಿದ್ದೇನೆ. ಆಮೇಲೆ ನಾನು ಪೊಲೀಸ್ ಕೆಲಸ ಬಿಟ್ಟು, 2004ರಲ್ಲಿ ಜೆಡಿಎಸ್ ಸೇರಿದಾಗ ಅವರೂ ಅದೇ ಪಕ್ಷದಲ್ಲಿದ್ದರು. ಅದಾದ ಮೇಲೆ 2006ರಲ್ಲಿ ಅವರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿ ಚಾಮುಂಡೇಶ್ವರಿ ಉಪಚುನಾವಣೆಗೆ ನಿಂತಾಗ, ನಾನು ಅವರ ವಿರುದ್ಧ ಪ್ರಚಾರ ಮಾಡಿದ್ದೆ! ಆಗ ಅವರು ನನ್ನನ್ನು ನೋಡಿ, 'ಏನೋ ಬಿಸಿ... ನನ್ನ ವಿರುದ್ಧನೇ ಎಲೆಕ್ಷನ್ ಮಾಡೋಕೆ ಬಂದಿದ್ದೀಯಾ?' ಅಂತ ಪ್ರೀತಿಯಿಂದಲೇ ಕೇಳಿದ್ದರು" ಎಂದು ಹಳೇ ನೆನಪುಗಳನ್ನು ಹಂಚಿಕೊಂಡರು.

"ಸೋತರೂ ನನಗೆ ಶಾಸಕನಷ್ಟೇ ಪವರ್ ಕೊಟ್ಟಿದ್ದರು"

"ಬಳಿಕ ನಾನು ಕಾಂಗ್ರೆಸ್ ಸೇರಿದ ಮೇಲೆ, 2008, 2013 ಮತ್ತು 2018ರ ಚುನಾವಣೆಗಳಲ್ಲಿ ಸಿದ್ದರಾಮಯ್ಯ ಅವರು ಖುದ್ದಾಗಿ ನನ್ನ ಪರವಾಗಿ ಬಂದು ಭರ್ಜರಿ ಪ್ರಚಾರ ಮಾಡಿದ್ದರು. 2013ರ ಚುನಾವಣೆಯಲ್ಲಿ ನಾನು ಸೋತುಹೋದೆ. ಆದರೂ ಸಿದ್ದರಾಮಯ್ಯ ಅವರು ನನ್ನನ್ನು ಕೈಬಿಡಲಿಲ್ಲ. ನಾನು ಸೋತಿದ್ದರೂ ನನ್ನ ಕ್ಷೇತ್ರಕ್ಕೆ ಒಬ್ಬ ಶಾಸಕನಿಗೆ ಸಿಗುವಷ್ಟೇ ಪವರ್ ಕೊಟ್ಟಿದ್ದರು. ನೀರಾವರಿ, ರಸ್ತೆ ಅಭಿವೃದ್ಧಿ ಸೇರಿದಂತೆ ಎಲ್ಲದಕ್ಕೂ ಕೋಟಿ ಕೋಟಿ ಅನುದಾನ ನೀಡಿ ದೊಡ್ಡ ಹೃದಯವಂತಿಕೆ ಪ್ರದರ್ಶಿಸಿದ್ದರು," ಎಂದು ಸಿದ್ದರಾಮಯ್ಯ ಅವರ ಆಡಳಿತ ಶೈಲಿಯನ್ನು ಬಿ.ಸಿ.ಪಾಟೀಲ್ ಕೊಂಡಾಡಿದ್ದಾರೆ.

ಪಕ್ಷ ಬೇರೆಯಾದರೂ ಪ್ರೀತಿ ಕಮ್ಮಿ ಆಗಲಿಲ್ಲ!

"ಆಮೇಲೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ನಾನು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದೆ. ಬಿಜೆಪಿಯಲ್ಲಿ ನಾನು ಮಂತ್ರಿಯಾದ ಮೇಲೂ ಅವರು ನನ್ನ ಮೇಲೆ ಮುನಿಸಿಕೊಳ್ಳಲಿಲ್ಲ. 'ಯಾಕೆ ಹಂಗೆ ಮಾಡಿದೆ?' ಅಂತ ಒಂದೇ ಒಂದು ಮಾತು ಕೇಳಲಿಲ್ಲ. ಅವರು ನನ್ನನ್ನು ಯಾವತ್ತೂ 'ಬಿಸಿ' (B.C.) ಅಂತಲೇ ಪ್ರೀತಿಯಿಂದ ಕರೆಯುತ್ತಿದ್ದರು. ಕಳೆದ ವರ್ಷ ನಾನು ದೆಹಲಿಗೆ ಹೋಗಿದ್ದಾಗ ಆಕಸ್ಮಿಕವಾಗಿ ಅವರು ಸಿಕ್ಕಿದ್ದರು. ಗೌರವಪೂರ್ವಕವಾಗಿ ಅವರಿಗೆ ಶಾಲು ಹೊದಿಸಲು ಹೋದಾಗ, 'ನನಗ್ಯಾಕೋ ಈಗ ಶಾಲ್ ಹಾಕ್ತೀಯಾ?' ಅಂದು ನಗುತ್ತಾ ನನ್ನ ಬೆನ್ನು ಚಪ್ಪರಿಸಿ ಒಳ್ಳೆಯದಾಗಲಿ ಎಂದು ಹರಸಿದ್ದರು. ರಾಜಕೀಯ ಪಕ್ಷಗಳು ಬೇರೆಯಾಗಿದ್ದರೂ ಅವರು ನನ್ನ ಮೇಲಿಟ್ಟಿದ್ದ ವೈಯಕ್ತಿಕ ಗೌರವ, ಪ್ರೀತಿ ಯಾವತ್ತೂ ಕಡಿಮೆ ಆಗಲಿಲ್ಲ. ಅವರು ಒಬ್ಬ ಅದ್ಭುತ ಅರ್ಥಶಾಸ್ತ್ರಜ್ಞ ಮತ್ತು ಅಪ್ಪಟ ಹೃದಯವಂತ" ಎಂದು ಪಾಟೀಲ್ ಭಾವುಕರಾದರು.

"ಒಬಿಸಿ ಸಿಎಂಗೆ ಕಾಂಗ್ರೆಸ್‌ನವರು ಕೊಕ್ಕೆ ಹಾಕಿದರು!"

ಭಾವನಾತ್ಮಕ ವಿಚಾರಗಳ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಬಿ.ಸಿ.ಪಾಟೀಲ್ ತೀವ್ರ ರಾಜಕೀಯ ವಾಗ್ದಾಳಿ ನಡೆಸಿದರು.

ಬಿ.ಸಿ.ಪಾಟೀಲ್ ಆರೋಪ:

"ಸಿದ್ದರಾಮಯ್ಯ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳದೇ, ಬಹಳ ಹೀನಾಯವಾಗಿ ಅಧಿಕಾರದಿಂದ ಇಳಿಸಲಾಯಿತು ಎಂಬ ತಪ್ಪು ಭಾವನೆ ಇಡೀ ರಾಜ್ಯದ ಜನರಲ್ಲಿ ಮೂಡಿದೆ. ರಾಜ್ಯದಲ್ಲಿದ್ದ ಒಬ್ಬರೇ ಒಬ್ಬ ಪ್ರಭಾವಿ ಒಬಿಸಿ (ಹಿಂದೂಳಿದ ವರ್ಗದ) ಮುಖ್ಯಮಂತ್ರಿಗೆ ಕಾಂಗ್ರೆಸ್‌ನವರೇ ರಾಜಕೀಯವಾಗಿ ಕೊಕ್ಕೆ ಹಾಕಿದ್ದಾರೆ. ಹಿಂದುಳಿದ ವರ್ಗದ ನಾಯಕನನ್ನು ನಡೆಸಿಕೊಂಡ ರೀತಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ."

2028ರ ಚುನಾವಣೆಯಲ್ಲಿ ಬಿಜೆಪಿಗೆ ಮೆಜಾರಿಟಿ ಫಿಕ್ಸ್!

ಕಾಂಗ್ರೆಸ್‌ನಲ್ಲಿ ನಡೆದಿರುವ ಈ ಬೆಳವಣಿಗೆಗಳು ಬಿಜೆಪಿಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಲಿವೆ ಎಂದು ಬಿ.ಸಿ.ಪಾಟೀಲ್ ಭವಿಷ್ಯ ನುಡಿದ್ದಾರೆ. "ಈಗಾಗಲೇ ರಾಜ್ಯದಲ್ಲಿ ಎಸ್‌ಸಿ, ಎಸ್‌ಟಿ ನಿಗಮಗಳಲ್ಲಿ ಹಣವಿಲ್ಲದೇ ಖಾಲಿಯಾಗಿದೆ. ರೈತರಿಗಾಗಿ ಈ ಸರ್ಕಾರ ಯಾವುದೇ ಒಳ್ಳೆಯ ಯೋಜನೆಗಳನ್ನು ತರುತ್ತಿಲ್ಲ. ಇತ್ತೀಚಿನ ಬೆಳವಣಿಗೆಗಳಿಂದ ಕಾಂಗ್ರೆಸ್‌ನ ಅಸಲಿ ಮುಖ ಬಣ್ಣ ಜನರಿಗೆ ಸಂಪೂರ್ಣವಾಗಿ ಗೊತ್ತಾಗಿಹೋಗಿದೆ. ಮುಂದಿನ ದಿನಗಳಲ್ಲಿ ಜನ ಯಾರೂ ಕಾಂಗ್ರೆಸ್ ಅನ್ನು ನಂಬಲ್ಲ. ಇವರ ಒಳಜಗಳ ಮತ್ತು ಸಿದ್ದರಾಮಯ್ಯ ಅವರಿಗೆ ಮಾಡಿದ ಅನ್ಯಾಯ ನಮಗೆ ಬರುವ 2028ರ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಪ್ಲಸ್ ಆಗಲಿದ್ದು, ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ," ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Latest News